ಭಾರತದ ಮೊಬೈಲ್ ರಫ್ತು ಕಡಿಮೆ ಆಗಿಲ್ಲ; ಆಗಸ್ಟ್ನಲ್ಲಿ ಗಣನೀಯ ಏರಿಕೆ: ಐಸಿಇಎ ದತ್ತಾಂಶ ಬಿಡುಗಡೆ
Smartphone exports from India in 2025 August: ಭಾರತದಿಂದ ಸ್ಮಾರ್ಟ್ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗುತ್ತಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಪ್ರಕಟವಾಗಿದ್ದವು. ಆದರೆ, ವಾಸ್ತವವಾಗಿ ಆಗಸ್ಟ್ ತಿಂಗಳಲ್ಲಿ ಸ್ಮಾರ್ಟ್ಫೋನ್ ರಫ್ತು ಶೇ. 39ರಷ್ಟು ಹೆಚ್ಚಾಗಿದೆ. 2024ರ ಆಗಸ್ಟ್ನನಲ್ಲಿ 1.09 ಬಿಲಿಯನ್ ಡಾಲರ್ನಷ್ಟು ಫೋನ್ ರಫ್ತಾಗಿದ್ದರೆ, 2025ರ ಆಗಸ್ಟ್ನಲ್ಲಿ ಈ ಸಂಖ್ಯೆ 1.53 ಬಿಲಿಯನ್ ಡಾಲರ್ಗೆ ಏರಿದೆ.

ನವದೆಹಲಿ, ಸೆಪ್ಟೆಂಬರ್ 25: ಆಗಸ್ಟ್ ತಿಂಗಳಲ್ಲಿ ಭಾರತದಿಂದ 1.53 ಬಿಲಿಯನ್ ಡಾಲರ್ ಮೊತ್ತದಷ್ಟು ಸ್ಮಾರ್ಟ್ಫೋನ್ ರಫ್ತು ಆಗಿದೆ ಎಂದು ಇಂಡಿಯಾ ಸೆಲೂಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ICEA) ಹೇಳಿದೆ. ಕಳೆದ ವರ್ಷದ ಆಗಸ್ಟ್ನಲ್ಲಿ (2024) ಆದ ರಫ್ತು 1.09 ಬಿಲಿಯನ್ ಡಾಲರ್ನಷ್ಟು ಇತ್ತು. ಅದಕ್ಕೆ ಹೋಲಿಸಿದರೆ ಈ ಬಾರಿ ಶೇ. 39ರಷ್ಟು ಹೆಚ್ಚಾಗಿದೆ.
ಭಾರತದ ಸ್ಮಾರ್ಟ್ಫೋನ್ ರಫ್ತು ಗಣನೀಯವಾಗಿ ಇಳಿಕೆ ಆಗಿದೆ ಎಂಬಂತಹ ಸುದ್ದಿಗಳು ಇತ್ತೀಚೆಗೆ ಕೇಳಿಬಂದಿದ್ದವು. ಈಗ ಐಸಿಇಎ ಬಿಡುಗಡೆ ಮಾಡಿರುವ ದತ್ತಾಂಶವು ಈ ವರದಿಯ ಅಂಶಗಳನ್ನು ಅಲ್ಲಗಳೆದಿದೆ. ಆಗಸ್ಟ್ ತಿಂಗಳ ರಫ್ತು ದತ್ತಾಂಶವನ್ನು ಹಿಂದಿನ ವರ್ಷದ ಆಗಸ್ಟ್ ತಿಂಗಳಿಗೆ ಹೋಲಿಸಬೇಕು. ಹಿಂದಿನ ತಿಂಗಳುಗಳ ದತ್ತಾಂಶಕ್ಕೆ ಹೋಲಿಸಿದರೆ ಸಾಕಷ್ಟು ವ್ಯತ್ಯಾಸ ಕಂಡುಬರುತ್ತದೆ. ರಫ್ತು ಕಡಿಮೆ ಆಗಿದೆ ಎನ್ನುವ ವರದಿಗಳಲ್ಲೂ ಈ ತಪ್ಪು ಆಗಿದ್ದಿರಬಹುದು.
ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ವಿವಿಧ ಸ್ಮಾರ್ಟ್ಫೋನ್ ಕಂಪನಿಗಳ ಹೊಸ ಉತ್ಪನ್ನಗಳ ಬಿಡುಗಡೆ ಇರುತ್ತವೆ. ಹಬ್ಬದ ಸೇಲ್ ಸೀಸನ್ ಕಾರಣ ಈ ಎರಡು ಮೂರು ತಿಂಗಳು ಸ್ಥಳೀಯವಾಗಿ ಸ್ಮಾರ್ಟ್ಫೋನ್ಗಳಿಗೆ ಬೇಡಿಕೆ ಇರುತ್ತದೆ. ಹೀಗಾಗಿ, ಯಾವುದೇ ವರ್ಷದಲ್ಲೂ ಈ ಕೆಲ ತಿಂಗಳು ಸ್ಮಾರ್ಟ್ಫೋನ್ ರಫ್ತು ಕಡಿಮೆಯೇ ಇರುತ್ತದೆ ಎಂದು ಹೇಳಲಾಗುತ್ತದೆ.
ಇದನ್ನೂ ಓದಿ: ಉದ್ಯೋಗಸೃಷ್ಟಿಯಲ್ಲಿ ಹಿನ್ನಡೆ ಇಲ್ಲ; ಜುಲೈನಲ್ಲಿ 21 ಲಕ್ಷ ಹೊಸ ಇಪಿಎಫ್ ಸದಸ್ಯರ ಸೇರ್ಪಡೆ
ಅಮೆರಿಕಕ್ಕೆ ಸ್ಮಾರ್ಟ್ಫೋನ್ ರಫ್ತು ಎರಡು ಪಟ್ಟು ಹೆಚ್ಚಳ
ಇನ್ನು, ಅಮೆರಿಕಕ್ಕೆ ಭಾರತದಿಂದ ಆದ ಸ್ಮಾರ್ಟ್ಫೋನ್ ರಫ್ತಿನಲ್ಲೂ ಯಾವುದೇ ಇಳಿಕೆ ಆಗಿಲ್ಲ. ತದ್ವಿರುದ್ಧವಾಗಿ, ಅಮೆರಿಕಕ್ಕೆ ರಫ್ತು ಎರಡು ಪಟ್ಟು ಹೆಚ್ಚಾಗಿದೆ. 2024ರ ಆಗಸ್ಟ್ನಲ್ಲಿ 388 ಮಿಲಿಯನ್ ಡಾಲರ್ನಷ್ಟು ಸ್ಮಾರ್ಟ್ಫೋನ್ ರಫ್ತಾಗಿತ್ತು. 2025ರ ಆಗಸ್ಟ್ನಲ್ಲಿ ಇದು 965 ಮಿಲಿಯನ್ ಡಾಲರ್ಗೆ ಏರಿದೆ. ಅಂದರೆ, ಅಮೆರಿಕಕ್ಕೆ ಮಾಡಲಾದ ರಫ್ತು ಶೇ. 148ರಷ್ಟು ಹೆಚ್ಚಳ ಆಗಿದೆ.
ಈ ಹಣಕಾಸು ವರ್ಷದಲ್ಲಿ (2025ರ ಏಪ್ರಿಲ್ ನಂತರ) ಮೊದಲ ಐದು ತಿಂಗಳು ಭಾರತದ ಒಟ್ಟಾರೆ ಸ್ಮಾರ್ಟ್ಫೋನ್ ರಫ್ತು ಒಂದು ಲಕ್ಷ ರುಪಾಯಿ (11.7 ಬಿಲಿಯನ್ ಡಾಲರ್) ಮುಟ್ಟಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 7.6 ಬಿಲಿಯನ್ ಡಾಲರ್ನಷ್ಟು ಸ್ಮಾರ್ಟ್ಫೋನ್ ರಫ್ತಾಗಿತ್ತು. ಅಂದರೆ, ಈ ಬಾರಿ ಶೇ. 55ರಷ್ಟು ರಫ್ತು ಹೆಚ್ಚಿದೆ.
ಇದನ್ನೂ ಓದಿ: ಹೊಸ ತಲೆಮಾರಿನ ಯುದ್ಧವಿಮಾನ ನಿರ್ಮಾಣಕ್ಕೆ ಜೊತೆಯಾದ ಬಿಇಎಲ್ ಮತ್ತು ಎಲ್ ಅಂಡ್ ಟಿ
ಸ್ಮಾರ್ಟ್ಫೋನ್ ರಫ್ತು ಬಿದ್ದಿದ್ದು ಸರ್ಕಾರದ ಪಿಎಲ್ಐ ಸ್ಕೀಮ್ ವಿಫಲವಾಗಿದೆ ಎಂದೂ ಇತ್ತೀಚಿನ ವರದಿಗಳಲ್ಲಿ ಹೇಳಲಾಗಿತ್ತು. ಆದರೆ, ಐಸಿಇಎ ದತ್ತಾಂಶದ ಪ್ರಕಾರ ಪಿಎಲ್ಐ ಸ್ಕೀಮ್ ಅಡಿಯಲ್ಲಿ ಕಳೆದ ಐದು ವರ್ಷಗಳಿಂದ ಭಾರತಕ್ಕೆ ಅತಿಹೆಚ್ಚು ರಫ್ತು ತಂದುಕೊಟ್ಟಿರುವುದು ಸ್ಮಾರ್ಟ್ಫೋನ್ಗಳೇ.
ಒಂದು ಕಾಲದಲ್ಲಿ ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್ಫೋನ್ಗಳು ಸರಬರಾಜಾಗುತ್ತಿದ್ದುದು ಚೀನಾದಿಂದಲೇ. ಇದೀಗ ಭಾರತವು ಚೀನಾವನ್ನು ಈ ವಿಚಾರದಲ್ಲಿ ಹಿಂದಿಕ್ಕಿದೆ. ಅಮೆರಿಕಕ್ಕೆ ಅತಿಹೆಚ್ಚು ಸ್ಮಾರ್ಟ್ಫೋನ್ ರಫ್ತು ಮಾಡುತ್ತಿರುವುದು ಭಾರತವೇ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




