ನವದೆಹಲಿ, ಡಿಸೆಂಬರ್ 17: ಭಾರತದಿಂದ ಸ್ಮಾರ್ಟ್ಫೋನ್ಗಳ ರಫ್ತು ನಿರಂತರವಾಗಿ ಏರುತ್ತಿದೆ. ನವೆಂಬರ್ ತಿಂಗಳಲ್ಲಿ ಶೇ. 92ರಷ್ಟು ರಫ್ತು ಹೆಚ್ಚಳವಾಗಿದೆ. ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಯಲ್ಲಿ ಬಂದ ವರದಿ ಪ್ರಕಾರ ನವೆಂಬರ್ನಲ್ಲಿ 20,000 ಕೋಟಿ ರೂ ಮೌಲ್ಯದ ಮೊಬೈಲ್ ಫೋನ್ಗಳು ರಫ್ತಾಗಿವೆ. ಕಳೆದ ವರ್ಷದ ಇದೇ ನವೆಂಬರ್ ತಿಂಗಳಲ್ಲಿ 10,634 ಕೋಟಿ ರೂ ಮೌಲ್ಯದ ಸ್ಮಾರ್ಟ್ಫೋನ್ಗಳು ರಫ್ತಾಗಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ಬಹುತೇಕ ಎರಡು ಪಟ್ಟು ರಫ್ತು ಏರಿದೆ. ಉದ್ಯಮ ಸಂಘಟನೆಗಳು ಮತ್ತು ಕಂಪನಿಗಳ ಹೇಳಿಕೆ ಇತ್ಯಾದಿ ವತಿಯಿಂದ ಕಲೆಹಾಕಲಾದ ಮಾಹಿತಿ ಆಧರಿಸಿ ಈ ಅಂಕಿ ಅಂಶವನ್ನು ನೀಡಲಾಗಿದೆ.
ನವೆಂಬರ್ನಲ್ಲಿ ಸ್ಮಾರ್ಟ್ಫೋನ್ ರಫ್ತು ಅತೀವವಾಗಿ ಹೆಚ್ಚುವುದರಲ್ಲಿ ಆ್ಯಪಲ್ನ ಪಾತ್ರ ದೊಡ್ಡದು. ಬರೋಬ್ಬರಿ 14,000 ಕೋಟಿ ರೂ ಮೌಲ್ಯದ ಆ್ಯಪ್ ಐಫೋನ್ಗಳನ್ನು ನವೆಂಬರ್ನಲ್ಲಿ ರಫ್ತು ಮಾಡಲಾಗಿರುವುದು ಗೊತ್ತಾಗಿದೆ. ಇದು ಭಾರತದಿಂದ ಈವರೆಗೂ ಯಾವುದೇ ತಿಂಗಳಲ್ಲಿ ಆದ ಗರಿಷ್ಠ ರಫ್ತಾಗಿದೆ. ಹಿಂದಿನ ತಿಂಗಳಲ್ಲಿ (ಅಕ್ಟೋಬರ್) 12,000 ಕೋಟಿ ರೂ ಮೌಲ್ಯದ ಐಫೋನ್ಗಳನ್ನು ರಫ್ತು ಮಾಡಲಾಗಿದ್ದು ದಾಖಲೆಯಾಗಿತ್ತು. ನವೆಂಬರ್ನಲ್ಲಿ ಆ ದಾಖಲೆ ಮುರಿಯಲಾಗಿದೆ.
ಆ್ಯಪಲ್ ಪರವಾಗಿ ಭಾರತದಲ್ಲಿ ಫಾಕ್ಸ್ಕಾನ್, ಪೆಗಾಟ್ರಾನ್ ಮತ್ತು ಟಾಟಾ ಎಲೆಕ್ಟ್ರಾನಿಕ್ಸ್ ಸಂಸ್ಥೆಗಳು ಐಫೋನ್ಗಳನ್ನು ಅಸೆಂಬ್ಲಿಂಗ್ ಮಾಡುತ್ತವೆ. ಅದರಲ್ಲೂ ಫಾಕ್ಸ್ಕಾನ್ನ ತಮಿಳುನಾಡು ಘಟಕದಲ್ಲಿ ಅತಿಹೆಚ್ಚು ಉತ್ಪಾದನೆ ಆಗುತ್ತದೆ.
ಇದನ್ನೂ ಓದಿ: ಪಿಎಂ ಸೂರ್ಯಘರ್ ಉಚಿತ ವಿದ್ಯುತ್ ಯೋಜನೆ ಯಶಸ್ಸು; ಒಂದು ದಶಕದ ಸಾಧನೆ ಒಂದೇ ವರ್ಷದಲ್ಲಿ…
ಐಫೋನ್ ನಂತರ ಅತಿಹೆಚ್ಚು ಸ್ಮಾರ್ಟ್ಫೋನ್ ರಫ್ತಾಗಿರುವುದು ಸ್ಯಾಮ್ಸಂಗ್ ವತಿಯಿಂದ. ನವೆಂಬರ್ನಲ್ಲಿ ಆದ ಹೆಚ್ಚಿನ ಸ್ಮಾರ್ಟ್ಫೋನ್ ರಫ್ತಿನಲ್ಲಿ ಆ್ಯಪಲ್ ನಂತರ ಸ್ಯಾಮ್ಸುಂಗ್ ಪಾಲು ಹೆಚ್ಚು.
ಭಾರತದಲ್ಲಿ ಸ್ಮಾರ್ಟ್ಫೋನ್ ತಯಾರಿಕೆ ಮತ್ತು ರಫ್ತು ಹೆಚ್ಚಲು ಕಾರಣವಾಗಿರುವುದು ಪಿಎಲ್ಐ ಸ್ಕೀಮ್. ಉತ್ಪಾದನೆಯ ಪ್ರಮಾಣ ಆಧಾರಿತವಾಗಿ ಸರ್ಕಾರದಿಂದ ಧನಸಹಾಯ ನೀಡಲಾಗುವ ಈ ಪಿಎಲ್ಐ ಸ್ಕೀಮ್ ಸ್ಮಾರ್ಟ್ಫೋನ್ ಕ್ಷೇತ್ರಕ್ಕೆ ವರದಾನವಾದಂತಿದೆ. ಆ್ಯಪಲ್ ಮತ್ತು ಸ್ಯಾಮ್ಸುಂಗ್ ಸಂಸ್ಥೆಗಳು ಈ ಸ್ಕೀಮ್ ಅನ್ನು ಚೆನ್ನಾಗಿ ಬಳಸಿಕೊಳ್ಳುತ್ತಿವೆ. ಅಸೆಂಬ್ಲಿಂಗ್ ಮಾತ್ರವಲ್ಲದೇ ಸ್ಮಾರ್ಟ್ಫೋನ್ ಬಿಡಿಭಾಗಗಳ ಉತ್ಪಾದಿಸುವ ಕಂಪನಿಗಳೂ ಕೂಡ ಭಾರತದಲ್ಲಿ ನೆಲೆ ಸ್ಥಾಪಿಸುವ ದಾರಿಯಲ್ಲಿವೆ. ಇವೆಲ್ಲವೂ ಕೂಡ ಮುಂದಿನ ದಿನಗಳಲ್ಲಿ ಭಾರತದ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಕ್ಕೆ ಇನ್ನಷ್ಟು ಬಲ ತುಂಬುವ ನಿರೀಕ್ಷೆ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ