ಕಮರ್ಷಿಯಲ್ ಗ್ಯಾಸ್, ಎಟಿಎಫ್ ಇಂಧನಗಳ ಬೆಲೆಯಲ್ಲಿ ಅಲ್ಪ ಏರಿಕೆ; ಗೃಹಬಳಕೆ ಎಲ್ಪಿಜಿ ದರದಲ್ಲಿ ಇಲ್ಲ ಬದಲಾವಣೆ
ವಿಮಾನ ಇಂಧನವಾದ ಏವಿಯೇಷನ್ ಟರ್ಬೈನ್ ಫುಯೆಲ್ ದರವನ್ನು ಇಂದು 1.36 ರೂಗಳಷ್ಟು ಏರಿಸಲಾಗಿದೆ. 19 ಕಿಲೋ ಕಮರ್ಷಿಯಲ್ ಎಲ್ಪಜಿ ದರವನ್ನು 10 ರೂ ಹೆಚ್ಚಿಸಲಾಗಿದೆ. ಸರ್ಕಾರಿ ಸ್ವಾಮ್ಯದ ತೈಲ ಮಾರುಕಟ್ಟೆ ಕಂಪನಿಗಳು ನವೆಂಬರ್ 1ರಂದು ದರ ಪರಿಷ್ಕರಣೆ ಮಾಡಿವೆ. 19 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ ಬೆಂಗಳೂರಿನಲ್ಲಿ 2,898 ರೂಗೆ ಏರಿದೆ.

ನವದೆಹಲಿ, ನವೆಂಬರ್ 1: ಸರ್ಕಾರಿ ಸ್ವಾಮ್ಯದ ಮೂರು ತೈಲ ಮಾರುಕಟ್ಟೆ ಕಂಪನಿಗಳಾದ ಇಂಡಿಯನ್ ಆಯಿಲ್, ಹಿಂದೂಸ್ತಾನ್ ಪೆಟ್ರೋಲಿಯಂ ಮತ್ತು ಭಾರತ್ ಪೆಟ್ರೋಲಿಯಂ ಸಂಸ್ಥೆಗಳು ಇಂದು ಇಂಧನ ದರಗಳನ್ನು ಪರಿಷ್ಕರಿಸಿವೆ. ವಿಮಾನ ಇಂಧನವಾದ ಎಟಿಎಫ್ ಮತ್ತು ಕಮರ್ಷಿಯಲ್ ಎಲ್ಪಿಜಿ ದರಗಳನ್ನು ಸ್ವಲ್ಪ ಹೆಚ್ಚಿಸಿವೆ. ಜೆಟ್ ಫುಯೆಲ್ ಅಥವಾ ಎಟಿಎಫ್ ದರಗಳನ್ನು ಒಂದು ಲೀಟರ್ಗೆ 1.36 ರೂನಷ್ಟು ಏರಿಸಲಾಗಿದೆ. ಇನ್ನು, ವಾಣಿಜ್ಯಾತ್ಮಕ ಎಲ್ಪಿಜಿ ದರ, 19 ಕಿಲೋ ಸಿಲಿಂಡರ್ಗೆ 10 ರೂ ಬೆಲೆ ಹೆಚ್ಚಳವಾಗಿದೆ.
ವಿಮಾನ ಇಂಧನದ ಬೆಲೆ ಒಂದು ಲೀಟರ್ಗೆ 137.12 ರೂ ಇತ್ತು. ಅದನ್ನು 138.50 ರೂಗೆ ಏರಿಸಲಾಗಿದೆ. ತೈಲ ಮಾರುಕಟ್ಟೆ ಸಂಸ್ಥೆಗಳು ಪ್ರತೀ ತಿಂಗಳ ಮೊದಲ ದಿನದಂದು ಈ ದರ ಪರಿಷ್ಕರಣೆ ಮಾಡುತ್ತವೆ. ಎಟಿಎಫ್ ಬೆಲೆಗಳು ಕಳೆದ ನಾಲ್ಕು ತಿಂಗಳಿಂದ ಸತತವಾಗಿ ಏರಿಕೆ ಆಗಿವೆ. ಕಳೆದ ತಿಂಗಳು (ಅ. 1) ಒಂದು ಲೀಟರ್ಗೆ ಬರೋಬ್ಬರಿ 16 ರೂಗಳಷ್ಟು ದೊಡ್ಡ ಪ್ರಮಾಣದಲ್ಲಿ ಬೆಲೆ ಏರಿಸಲಾಗಿತ್ತು.
ಇದನ್ನೂ ಓದಿ: ಬಿನಾನ್ಸ್ ಕ್ರಿಪ್ಟೋ ಕನ್ನ; ಉತ್ತರಕೊರಿಯನ್ ತಂಡದ ಮೇಲೆ ಶಂಕೆ; ಹ್ಯಾಕರ್ಗಳಿಂದ ಬಹಳ ಸಂಯೋಜಿತ ದಾಳಿ ಸಾಧ್ಯವಾಗಿದ್ದು ಹೀಗೆ…
ಆಗಸ್ಟ್ನಿಂದ ಈಚೆಗೆ ಎಟಿಎಫ್ ಇಂಧನಗಳ ಬೆಲೆ ಲೀಟರ್ಗೆ 28.65 ರೂಗಳಷ್ಟು ಹೆಚ್ಚಳವಾಗಿದೆ. ವಿಮಾನಗಳನ್ನು ಓಡಿಸಲು ಆಗುವ ಕಾರ್ಯಾಚರಣೆಯ ವೆಚ್ಚದಲ್ಲಿ ಶೇ. 40ರಷ್ಟು ಹಣವು ಈ ಎಟಿಎಫ್ ಇಂಧನಕ್ಕೆ ಹೋಗುತ್ತದೆ. ಈಗ ಬೆಲೆ ಏರಿಸಿರುವುದರಿಂದ ಏರ್ಲೈನ್ಸ್ ಆಪರೇಟರ್ಗಳ ಮೇಲೆ ಒತ್ತಡ ಹೆಚ್ಚುವ ನಿರೀಕ್ಷೆ ಇದೆ.
ಕಮರ್ಷಿಯಲ್ ಗ್ಯಾಸ್ ಸಿಲಿಂಡರ್ ಬೆಲೆ ಹೆಚ್ಚಳ
ಹೋಟೆಲ್ಗಳು, ರೆಸ್ಟೋರೆಂಟ್ಗಳಲ್ಲಿ ಬಳಸುವ ಕಮರ್ಷಿಯಲ್ ಎಲ್ಪಿಜಿ ಗ್ಯಾಸ್ ಸಿಲಿಂಡರ್ಗಳ ಬೆಲೆಯಲ್ಲೂ ಅಲ್ಪ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ 19 ಕಿಲೋ ಎಲ್ಪಿಜಿ ಸಿಲಿಂಡರ್ ಬೆಲೆ 2,888 ರೂನಿಂದ 2,898 ರೂಗೆ ಏರಿದೆ.
ಇದನ್ನೂ ಓದಿ: Gold Rates 01 November: ಹತ್ತು ಗ್ರಾಮ್ ಚಿನ್ನದ ಬೆಲೆ 2 ದಿನದಲ್ಲಿ 4,650 ರೂ ಕುಸಿತ
ಆದರೆ, ಗೃಹಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. ಬೆಂಗಳೂರಿನಲ್ಲಿ 14.2 ಕಿಲೋ ಎಲ್ಪಿಜಿ ಗ್ಯಾಸ್ ಬೆಲೆ 944.50 ರೂ ಇದೆ. 5 ಕಿಲೋ ಸಿಲಿಂಡರ್ ಬೆಲೆ 350.50 ರೂ ಇದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




