ಅಪ್ರಾಪ್ತರಿಗೆ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆಯದಂತೆ ವ್ಯವಸ್ಥೆ ಮಾಡಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂಕೋರ್ಟ್

18 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಖಾತೆ ತೆರೆಯುವುದನ್ನು ತಡೆಯಲು ಸೂಕ್ತ ನಿಯಮ ರೂಪಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಸೂಚಿಸಿದೆ. ಈ ಸಂಬಂಧ ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಿಗೆ ನಿರ್ದೇಶನ ನೀಡುವಂತೆ ಕೇಂದ್ರಕ್ಕೆ ಕೋರ್ಟ್ ಹೇಳಿದೆ. ಮಕ್ಕಳ ಮಾನಸಿಕ ಆರೋಗ್ಯ ಮತ್ತು ಸುರಕ್ಷತೆಯ ಕುರಿತ ಈ ಮಹತ್ವದ ಆದೇಶದ ವಿವರ ಇಲ್ಲಿದೆ.

ಅಪ್ರಾಪ್ತರಿಗೆ ಸೋಷಿಯಲ್ ಮೀಡಿಯಾ ಅಕೌಂಟ್ ತೆರೆಯದಂತೆ ವ್ಯವಸ್ಥೆ ಮಾಡಿ: ಕೇಂದ್ರಕ್ಕೆ ಸೂಚಿಸಿದ ಸುಪ್ರೀಂಕೋರ್ಟ್
ಸೋಷಿಯಲ್ ಮೀಡಿಯಾ
Image Credit source: Jan Woitas/picture alliance via Getty Images

Updated on: Sep 28, 2026 | 4:34 PM

ನವದೆಹಲಿ, ಸೆಪ್ಟೆಂಬರ್ 28: ಸಾಮಾಜಿಕ ಜಾಲತಾಣಗಳಿಂದ ಅಪ್ರಾಪ್ತ ವಯಸ್ಕರ ಮೇಲಾಗುತ್ತಿರುವ ಧನಾತ್ಮಕ ಮತ್ತು ಋಣಾತ್ಮಕ ಪರಿಣಾಮಗಳನ್ನು ಗಮನದಲ್ಲಿಟ್ಟುಕೊಂಡು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸೋಶಿಯಲ್ ಮೀಡಿಯಾ ಖಾತೆಗಳನ್ನು ತೆರೆಯುವುದನ್ನು ತಡೆಯಲು ಸೂಕ್ತ ವ್ಯವಸ್ಥೆ ಅಥವಾ ನಿಯಮಾವಳಿಗಳನ್ನು ರೂಪಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.

ಅಪ್ರಾಪ್ತ ವಯಸ್ಕರು ಸಾಮಾಜಿಕ ಜಾಲತಾಣಗಳಿಗೆ ದಾಸರಾಗುತ್ತಿರುವುದು, ಸೈಬರ್ ಬುಲ್ಲಿಯಿಂಗ್, ಅಶ್ಲೀಲ ವಿಷಯಗಳಿಗೆ ಒಡ್ಡಿಕೊಳ್ಳುತ್ತಿರುವುದು ಮತ್ತು ಮಾನಸಿಕ ಆರೋಗ್ಯದ ಮೇಲೆ ಉಂಟಾಗುತ್ತಿರುವ ತೀವ್ರ ಪರಿಣಾಮಗಳ ಕುರಿತು ನ್ಯಾಯಪೀಠ ತೀವ್ರ ಕಳವಳ ವ್ಯಕ್ತಪಡಿಸಿದೆ.

‘ಜಸ್ಟ್ ರೈಟ್ಸ್ ಆಫ್ ಚಿಲ್ಡ್ರನ್ ಅಲಾಯನ್ಸ್’ ಸಂಘಟನೆ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಈ ನಿಲುವು ತಳೆದಿದೆ. ಸೋಷಿಯಲ್ ಮೀಡಿಯಾ ಪ್ಲಾಟ್​ಫಾರ್ಮ್​ಗಳಲ್ಲಿನ ನಿಯಮಗಳನ್ನು ಒಪ್ಪಿ ಅಕೌಂಟ್ ತೆರೆಯಬೇಕಾಗುತ್ತದೆ. 18 ವರ್ಷದೊಳಗಿನ ವಯಸ್ಸಿನ ಮಕ್ಕಳು ಸ್ವಂತವಾಗಿ ಯಾವುದೇ ವಿಧದ ಒಪ್ಪಂದಕ್ಕೆ ಒಳಪಡಲು ಆಗುವುದಿಲ್ಲ ಎಂಬುದು ಅರ್ಜಿದಾರರ ವಾದವಾಗಿದೆ. ಅರ್ಜಿದಾರರ ಪರವಾಗಿ ಹಿರಿಯ ವಕೀಲ ಎಚ್ ಎಸ್ ಫೂಲ್ಕ ವಾದಿಸಿದರು.

ಇದನ್ನೂ ಓದಿ: ಯುಪಿಐ ಪೇಮೆಂಟ್​ಗೆ ಎಂಡಿಆರ್ ಶುಲ್ಕ; ತಡೆ ನೀಡಲು ಸುಪ್ರೀಂಕೋರ್ಟ್ ನಕಾರ; ವಿವರಣೆ ಕೋರಿ ಸರ್ಕಾರಕ್ಕೆ ನೋಟೀಸ್

ವಕೀಲರಾದ ಸಾಕ್ಷಂ ಮಹೇಶ್ವರಿ ಅವರು ಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇಂಡಿಯನ್ ಕಾಂಟ್ರಾಕ್ಟ್ ಆ್ಯಕ್ಟ್​ನ ಸೆಕ್ಷನ್ 11ರ ಅಡಿಯಲ್ಲಿ ಅಪ್ರಾಪ್ತ ಮಕ್ಕಳು ಯಾವುದೇ ಕಾಂಟ್ರಾಕ್ಟ್​ಗೆ ಒಳಪಡುವಂತಿಲ್ಲ. ಆದರೂ ಕೂಡ 13 ವರ್ಷ ವಯಸ್ಸಿನ ಮಕ್ಕಳು ಸ್ವತಂತ್ರವಾಗಿ ಸೋಷಿಯಲ್ ಮೀಡಿಯಾ ಅಕೌಂಟ್​ಗಳನ್ನು ರಚಿಸುವ ಅವಕಾಶ ಸದ್ಯಕ್ಕೆ ಇದೆ. ಈ ಅವಕಾಶ ತಪ್ಪಿಸಬೇಕು. ಅಪ್ರಾಪ್ತರು ತಮ್ಮ ಪೋಷಕರ ಅನುಮತಿಯೊಂದಿಗೆ ಸೀಮಿತ ಮಟ್ಟದ ಸೋಷಿಯಲ್ ಮೀಡಿಯಾ ಪ್ರವೇಶ ಹೊಂದುವಂತಹ ನಿಯಮಗಳನ್ನು ರೂಪಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು.

ವಯಸ್ಸಿನ ಪರಿಶೀಲನೆಗೆ ಸೂಚನೆ

ಸಾಮಾಜಿಕ ಜಾಲತಾಣ ಸಂಸ್ಥೆಗಳು ಖಾತೆ ತೆರೆಯುವ ಸಮಯದಲ್ಲಿ ಬಳಕೆದಾರರ ವಯಸ್ಸನ್ನು ಕಡ್ಡಾಯವಾಗಿ ಪರಿಶೀಲಿಸುವ (Age Verification Mechanism) ತಾಂತ್ರಿಕ ನಿಯಮಗಳನ್ನು ಜಾರಿಗೆ ತರಬೇಕು ಎಂದು ಪೀಠ ಅಭಿಪ್ರಾಯಪಟ್ಟಿದೆ.

ಮಕ್ಕಳ ಸುರಕ್ಷತೆ ಮತ್ತು ಡಿಜಿಟಲ್ ಭದ್ರತೆಯನ್ನು ಕಾಯ್ದುಕೊಳ್ಳಲು ಕೇಂದ್ರ ಸರ್ಕಾರವು ಟೆಕ್ ಸಂಸ್ಥೆಗಳು ಮತ್ತು ಸಾಮಾಜಿಕ ಜಾಲತಾಣ ವೇದಿಕೆಗಳ ಜೊತೆ ಚರ್ಚಿಸಿ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರ್ಟ್ ನಿರ್ದೇಶಿಸಿದೆ.

ಇದನ್ನೂ ಓದಿ: 28 ದಿನ ಅಲ್ಲ, ಪೂರ್ಣ ತಿಂಗಳ ರೀಚಾರ್ಜ್ ಪ್ಲಾನ್: ಟೆಲಿಕಾಂ ಕಂಪನಿಗಳಿಗೆ ಟ್ರಾಯ್ ನಿರ್ದೇಶನ

ಪೋಷಕರ ಮತ್ತು ಶಿಕ್ಷಣ ಸಂಸ್ಥೆಗಳ ಪಾತ್ರ

ಕೇವಲ ಕಾನೂನು ನಿಯಮಗಳಿಂದ ಮಾತ್ರ ಇದನ್ನು ತಡೆಯಲು ಸಾಧ್ಯವಿಲ್ಲ. ಪೋಷಕರು ಮತ್ತು ಶಿಕ್ಷಣ ಸಂಸ್ಥೆಗಳು ಸಹ ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ಕಣ್ಣಿಡಬೇಕು ಮತ್ತು ಸೈಬರ್ ಭದ್ರತೆಯ ಕುರಿತು ಜಾಗೃತಿ ಮೂಡಿಸಬೇಕು ಎಂದು ವಿಚಾರಣೆ ವೇಳೆ ಪ್ರಸ್ತಾಪಿಸಲಾಯಿತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us