
ಬೆಂಗಳೂರು, ನವೆಂಬರ್ 27: ಸ್ವಿಗ್ಗಿ ಸಂಸ್ಥೆಯ ಕ್ವಿಕ್ ಕಾಮರ್ಸ್ ವಿಭಾಗವಾದ ಇನ್ಸ್ಟಮಾರ್ಟ್ನಿಂದ 340 ಉದ್ಯೋಗಿಗಳನ್ನು ಲೇ ಆಫ್ ಮಾಡಲಾಗಬಹುದು ಎಂದು ಮನಿಕಂಟ್ರೋಲ್ ವೆಬ್ಸೈಟ್ ವರದಿ ಮಾಡಿದೆ. ಸ್ವಿಗ್ಗಿ ಮತ್ತು ಇನ್ಸ್ಟಾಮಾರ್ಟ್ನಾದ್ಯಂತ ಎಐ ಅಳವಡಿಕೆ ಆಗುತ್ತಿರುವುದು ಹಣಕಾಸು ಸಂಕಷ್ಟ ಹೆಚ್ಚುವಂತೆ ಮಾಡಿದೆ. ಜೊತೆಗೆ, ಇನ್ಸ್ಟಮಾರ್ಟ್ನ ಬ್ಯುಸಿನೆಸ್ ಕೂಡ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದೂ ಈ ಲೇ ಆಫ್ ನಿರ್ಧಾರಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ಕ್ವಿಕ್ ಕಾಮರ್ಸ್ ಸೆಕ್ಷನ್ನಲ್ಲಿ ಇನ್ಸ್ಟಮಾರ್ಟ್ ತೀವ್ರ ಪೈಪೋಟಿ ಎದುರಿಸುತ್ತಿದೆ. ಬ್ಲಿಂಕಿಟ್, ಝೆಪ್ಟೋ ಸ್ಪರ್ಧೆಯನ್ನು ಸಮರ್ಥವಾಗಿ ಎದುರಿಸಲು ಇನ್ಸ್ಟಮಾರ್ಟ್ಗೆ ಸಾಧ್ಯವಾಗಿಲ್ಲ. ಫ್ಲಿಪ್ಕಾರ್ಟ್ ಮತ್ತು ಅಮೇಜಾನ್ ಸಂಸ್ಥೆಗಳೂ ಕ್ವಿಕ್ ಕಾಮರ್ಸ್ ಕ್ಷೇತ್ರಕ್ಕೆ ಕಾಲಿಡುತ್ತಿರುವುದು ಇನ್ಸ್ಟಮಾರ್ಟ್ ಹಾದಿಗೆ ಇನ್ನಷ್ಟು ತೊಡರು ಉಂಟಾದಂತಾಗಿದೆ.
ಹಲವು ಕ್ವಾರ್ಟರ್ಗಳಿಂದ ಸ್ವಿಗ್ಗಿ ಅನುಭವಿಸುತ್ತಿರುವ ನಷ್ಟ ಕಡಿಮೆ ಆಗುವುದರ ಬದಲು ಹೆಚ್ಚುತ್ತಿದೆ. ಇನ್ಸ್ಟಮಾರ್ಟ್ ಮೇಲೆ ಹೆಚ್ಚಿನ ವೆಚ್ಚ ಮಾಡಿದ್ದುದು ಈ ನಷ್ಟಕ್ಕೆ ಕಾರಣ. ಸ್ಪರ್ಧೆಯಲ್ಲಿ ಉಳಿಯಲು ಇನ್ಸ್ಟಮಾರ್ಟ್ಗೆ ತನ್ನ ವೆಚ್ಚ ಕಡಿಮೆ ಮಾಡುವುದು ಅನಿವಾರ್ಯವಾಗಿದೆ. ಹೀಗಾಗಿ, ಉದ್ಯೋಗಿಗಳ ಲೇ ಆಫ್ ಕ್ರಮ ಯೋಜಿಸಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಇದನ್ನೂ ಓದಿ: ಸ್ಯಾಪ್ ಲೇ ಆಫ್ ಶಾಕ್; 10,000 ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುತ್ತಿರುವ ಸಾಫ್ಟ್ವೇರ್ ಕಂಪನಿ
ಅಪಾರ ನಷ್ಟದ ಹೊರತಾಗಿಯೂ ಸ್ವಿಗ್ಗಿ ಸಂಸ್ಥೆಯಲ್ಲಿ 13,500 ಕೋಟಿ ರೂ ಕ್ಯಾಷ್ ಬಂಡವಾಳ ಇದೆ. ಇದು ತಕ್ಕಮಟ್ಟಿಗೆ ಉತ್ತಮ ಬಂಡವಾಳ ಎನಿಸಿದೆ. ಇನ್ಸ್ಟಮಾರ್ಟ್ಗೆ ಚೇತರಿಕೆ ನೀಡಲು ಇದರಲ್ಲಿ ಒಂದಷ್ಟು ಭಾಗವನ್ನು ಉಪಯೋಗಿಸಬಹುದು. ಮೇಲಾಗಿ ಇನ್ಸ್ಟಮಾರ್ಟ್ಗೆ ನಂದಿತಾ ಸಿನ್ಹಾ ಅವರು ನೂತನ ಸಿಇಒ ಆಗಿದ್ದಾರೆ. ಅವರು ವಿನೂತನ ಬ್ಯುಸಿನೆಸ್ ಸ್ಟ್ರಾಟಿಜಿ ರೂಪಿಸಲು ಹೊರಟಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ