TCS: ಟಿಸಿಎಸ್ಗೆ ಮೊದಲ ಕ್ವಾರ್ಟರ್ನಲ್ಲಿ ನಿರೀಕ್ಷೆಮೀರಿದ ಲಾಭ; ಷೇರಿಗೆ 9 ರೂ ಡಿವಿಡೆಂಡ್ ಘೋಷಣೆ
Q1 Results and Dividend Announcement: ಟಾಟಾ ಕನ್ಸಲ್ಟನ್ಸಿ ಸರ್ವಿಸಸ್ ಸಂಸ್ಥೆ 2023ರ ಏಪ್ರಿಲ್ನಿಂದ ಜೂನ್ ಕ್ವಾರ್ಟರ್ನಲ್ಲಿ 11,074 ಕೋಟಿ ರೂ ನಿವ್ವಳ ಆದಾಯ ತೋರಿಸಿದೆ. ಇದರ ಬೆನ್ನಲ್ಲೇ ಷೇರಿಗೆ 9 ರೂನಂತೆ ಲಾಭಾಂಶ ಘೋಷಣೆಯನ್ನೂ ಮಾಡಿದೆ.
ನವದೆಹಲಿ: ದೇಶದ ಅತಿದೊಡ್ಡ ಐಟಿ ಕಂಪನಿ ಎನಿಸಿದ ಟಾಟಾ ಕನ್ಸಲ್ಟನ್ಸಿ ಸರ್ವಿಸ್ (TCS- Tata Consultancy Services) ಸಂಸ್ಥೆಯ ತ್ರೈಮಾಸಿಕ ಹಣಕಾಸು ವರದಿ ಪ್ರಕಟವಾಗಿದ್ದು, ನಿರೀಕ್ಷೆಮೀರಿದ ಲಾಭ ಗಳಿಸಿದೆ. ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಟಿಸಿಎಸ್ನ ನಿವ್ವಳ ಲಾಭ (Net Profit) 11,074 ಕೋಟಿ ರೂ ಎಂದು ಘೋಷಿಸಲಾಗಿದೆ. ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭದಲ್ಲಿ ಶೇ. 2.79ರಷ್ಟು ಕಡಿಮೆ ಆಗಿದೆ. ಆದರೆ, ಹಿಂದಿನ ವರ್ಷದ ಇದೇ ಅವಧಿಗೆ (2022ರ ಏಪ್ರಿಲ್ನಿಂದ ಜೂನ್) ಹೋಲಿಸಿದರೆ ನಿವ್ವಳ ಲಾಭದಲ್ಲಿ ಶೇ. 16.8ರಷ್ಟು ಹೆಚ್ಚಾಗಿದೆ. ಟಿಸಿಎಸ್ನ ನಿವ್ವಳ ಲಾಭ ಈ ಬಾರಿ 11,000 ಕೋಟಿ ರೂ ಗಡಿ ದಾಟಬಹುದು ಎಂದು ಯಾರೂ ಎಣಿಸಿರಲಿಲ್ಲ. ಕೆಲ ಹಣಕಾಸು ಸಂಶೋಧನಾ ಸಂಸ್ಥೆಗಳು ಟಿಸಿಎಸ್ಗೆ ಈ ಬಾರಿ ಸಿಗುವ ನಿವ್ವಳ ಲಾಭ 10,800ರಿಂದ 10,900 ರೂ ಇರಬಹುದು ಎಂದು ಅಂದಾಜು ಮಾಡಿದ್ದವು. ನಿರೀಕ್ಷೆಗಿಂತ ತುಸು ಹೆಚ್ಚೇ ಲಾಭ ಬಂದಿದೆ.
ಆರೋಗ್ಯ ಕ್ಷೇತ್ರದಲ್ಲಿ ಟಿಸಿಎಸ್ ಹೆಚ್ಚು ವೃದ್ಧಿ
ಟಿಸಿಎಸ್ ಸಂಸ್ಥೆ ವಿಶ್ವದ ಹಲವು ದೇಶಗಳ ಪ್ರಮುಖ ಕಂಪನಿಗಳಿಗೆ ಟೈಲರ್ಮೇಡ್ ತಂತ್ರಾಂಶವನ್ನೂ ಒಳಗೊಂಡಂತೆ ವಿವಿಧ ರೀತಿಯ ಐಟಿ ಸಪೋರ್ಟ್ ಒದಗಿಸುತ್ತದೆ. ಯಾವುದೇ ಕ್ಷೇತ್ರದ ಕಂಪನಿಯಾದರೂ ಐಟಿ ಸೇವೆ ಅವಶ್ಯಕತೆ ಇರುತ್ತದೆ. ಹೆಚ್ಚಿನ ಕಂಪನಿಗಳು ಇಂಥ ಐಟಿ ಸೇವೆಗಳನ್ನು ಹೊರಗುತ್ತಿಗೆಗೆ ಕೊಡುತ್ತವೆ. ಟಿಸಿಎಸ್, ಇನ್ಫೋಸಿಸ್ ಇತ್ಯಾದಿ ಭಾರತೀಯ ಐಟಿ ಕಂಪನಿಗಳು ಈ ಗುತ್ತಿಗೆ ಪಡೆಯುತ್ತವೆ.
ಇದನ್ನೂ ಓದಿ: ESI: ಇಎಸ್ಐ ಯೋಜನೆ, ಯಾರು ಪಡೆಯಬಹುದು ಈ ಸ್ಕೀಮ್? ಏನಿದರ ವಿಶೇಷತೆಗಳು?
ಟಿಸಿಎಸ್ ಸಂಸ್ಥೆಗೆ ಲೈಫ್ ಸೈನ್ಸಸ್ ಮತ್ತು ಹೆಲ್ತ್ ಕೇರ್ ಕ್ಷೇತ್ರದಲ್ಲಿ ಆಗುವ ಬ್ಯುಸಿನೆಸ್ ಶೇ. 10.1ರಷ್ಟು ಬೆಳೆದಿದೆ. ಮ್ಯಾನುಫ್ಯಾಕ್ಚರಿಂಗ್ ವಲಯದ ಕಂಪನಿಗಳಿಂದ ಸಿಗುವ ಬ್ಯುಸಿನೆಸ್ ಶೇ. 9.4ರಷ್ಟು ಹೆಚ್ಚಾಗಿದೆ.
ಇನ್ನು ಬ್ರಿಟನ್ ರಾಷ್ಟ್ರದ ಮಾರುಕಟ್ಟೆಯಲ್ಲಿ ಟಿಸಿಎಸ್ ಶೇ. 16.1ರಷ್ಟು ವೃದ್ಧಿಸಿರುವುದು ವಿಶೇಷ. ಅಂದರೆ ಅಮೆರಿಕಕ್ಕಿಂತ ಯೂರೋಪ್ ಖಂಡದಲ್ಲಿ ಟಿಸಿಎಸ್ಗೆ ವ್ಯವಹಾರ ಹೆಚ್ಚಳವಾಗಿದೆ.
ಇದನ್ನೂ ಓದಿ: Dunzo: ಬೆಂಗಳೂರಿನ ಡುಂಜೋದಿಂದ ವಿಭಿನ್ನ ರೀತಿಯಲ್ಲಿ ಸ್ಯಾಲರಿ ಕಟ್; ಸಂಬಳ ಮಿತಿ 75,000 ರೂ
ಮಧ್ಯಂತರ ಲಾಭಾಂಶ ಘೋಷಿಸಿದ ಟಿಸಿಎಸ್
ಈ ಹಣಕಾಸು ವರ್ಷದ ಮೊದಲ ತ್ರೈಮಾಸಿಕ ಅವಧಿಯಲ್ಲಿ ನಿರೀಕ್ಷೆಮೀರಿ ಲಾಭ ಬಂದ ಬೆನ್ನಲ್ಲೇ ಟಿಸಿಎಸ್ ಸಂಸ್ಥೆ ಭರ್ಜರಿ ಡಿವಿಡೆಂಡ್ ಘೋಷಿಸಿದೆ. 2022-23ರ ಹಣಕಾಸು ವರ್ಷಕ್ಕೆ ಶೇ 900ರಷ್ಟು ಮಧ್ಯಂತರ ಲಾಭಾಂಶ ಘೋಷಿಸಿದೆ. ಅಂದರೆ ಪ್ರತೀ ಷೇರಿಗೆ 9 ರೂನಷ್ಟು ಡಿವಿಡೆಂಡ್ ಸಿಗುತ್ತದೆ. ಟಿಸಿಎಸ್ನ ಇವತ್ತಿನ ಷೇರುಬೆಲೆ 3,260 ರೂ ಇದೆ.
ಡಿವಿಡೆಂಡ್ ಹಂಚಿಕೆಗಾಗಿ ಟಿಸಿಎಸ್ ಜುಲೈ 20 ಅನ್ನು ರೆಕಾರ್ಡ್ ಡೇಟ್ ಎಂದು ನಿಗದಿ ಮಾಡಿದೆ. ಅಂದರೆ ಜುಲೈ 20ಕ್ಕೆ ಟಿಸಿಎಸ್ ತನ್ನೆಲ್ಲಾ ಷೇರುದಾರರ ಪಟ್ಟಿ ಮಾಡುತ್ತದೆ. ಆಗಸ್ಟ್ 7ಕ್ಕೆ ಡಿವಿಡೆಂಡ್ ವಿತರಣೆ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ