
ಇಂದಿನ ದಿನಗಳಲ್ಲಿ ಸ್ಮಾರ್ಟ್‌ಫೋನ್ (Smartphone) ಮತ್ತು ಟ್ಯಾಬ್ಲೆಟ್‌ಗಳು ಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ. ಕಚೇರಿ ಕೆಲಸದಿಂದ ಹಿಡಿದು ಆತ್ಮೀಯರೊಂದಿಗೆ ಸಂಪರ್ಕದಲ್ಲಿರುವವರೆಗೆ ಪ್ರತಿಯೊಂದು ಸಣ್ಣಪುಟ್ಟ ಕೆಲಸಕ್ಕೂ ಜನರು ಮೊಬೈಲ್‌ಗಳನ್ನೇ ಅವಲಂಬಿಸಿದ್ದಾರೆ. ಹೀಗಾಗಿ ಸಾಧನವನ್ನು ಸರಿಯಾಗಿ ಮತ್ತು ಸುರಕ್ಷಿತವಾಗಿ ಬಳಸಲು ಕಾಲಕಾಲಕ್ಕೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡುವುದು ಬಹಳ ಮುಖ್ಯ.
ಸಾಮಾನ್ಯವಾಗಿ ಹೊಸ ಸಿಸ್ಟಮ್ ಅಪ್‌ಡೇಟ್ ಬಿಡುಗಡೆಯಾದಾಗ ಫೋನ್ ಅದನ್ನು ಡೌನ್‌ಲೋಡ್ ಮಾಡಿಕೊಂಡು ಇನ್‌ಸ್ಟಾಲ್ ಮಾಡುತ್ತದೆ. ಕೆಲವೊಮ್ಮೆ ಈ ಪ್ರಕ್ರಿಯೆ ಹಿನ್ನೆಲೆಯಲ್ಲಿಯೇ ಸ್ವಯಂಚಾಲಿತವಾಗಿ ನಡೆಯುತ್ತದೆ. ಅಪ್‌ಡೇಟ್ ಪೂರ್ಣಗೊಂಡ ಬಳಿಕ ಫೋನ್ ತಾನಾಗಿಯೇ ರೀಸ್ಟಾರ್ಟ್ ಕೂಡ ಆಗುತ್ತದೆ.
ಆದರೆ ಅಪ್‌ಡೇಟ್ ಪೂರ್ಣಗೊಂಡ ನಂತರ ನಿಮ್ಮ ಫೋನ್ ಸ್ವಯಂಚಾಲಿತವಾಗಿ ರೀಸ್ಟಾರ್ಟ್ ಆಗದಿದ್ದರೆ, ನೀವೇ ಅದನ್ನು ರೀಸ್ಟಾರ್ಟ್ ಮಾಡಬೇಕೇ ಎಂಬ ಪ್ರಶ್ನೆ ಮೂಡಬಹುದು. ಫೋನ್ ರೀಸ್ಟಾರ್ಟ್ ಮಾಡುವುದರಿಂದ ಅದರ ವೇಗ ಸುಧಾರಿಸುವುದಲ್ಲದೆ, ಕೆಲವು ಸಣ್ಣಪುಟ್ಟ ತಾಂತ್ರಿಕ ಸಮಸ್ಯೆಗಳು ಮತ್ತು ಹ್ಯಾಂಗ್ ಆಗುವ ತೊಂದರೆಗಳೂ ನಿವಾರಣೆಯಾಗಬಹುದು. ಈ ಕುರಿತು ವಿವರವಾಗಿ ತಿಳಿಯೋಣ.
ಫೋನ್ ಅನ್ನು ರೀಬೂಟ್ ಮಾಡಿದಾಗ ಅದರ ತಾತ್ಕಾಲಿಕ ಫೈಲ್‌ಗಳನ್ನು ತೆರವುಗೊಳಿಸಲು ಸಹಾಯವಾಗುತ್ತದೆ. ಅಲ್ಲದೆ, ರ್ಯಾಮ್ (RAM) ಬಳಕೆಯಲ್ಲಿರುವ ತಾತ್ಕಾಲಿಕ ಮಾಹಿತಿಯನ್ನು ಬಿಡುಗಡೆ ಮಾಡುತ್ತದೆ. ಇದರಿಂದ ಫೋನ್‌ನ ಪ್ರೊಸೆಸರ್ ಹೊಸದಾಗಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ.
ತಜ್ಞರ ಪ್ರಕಾರ, ದೊಡ್ಡ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದ ನಂತರ ಮಾತ್ರವಲ್ಲದೆ, ವಾರಕ್ಕೊಮ್ಮೆಯಾದರೂ ಫೋನ್ ಅನ್ನು ರೀಸ್ಟಾರ್ಟ್ ಮಾಡುವುದು ಉತ್ತಮ.
ಇದರ ಜೊತೆಗೆ, ಅಪ್‌ಡೇಟ್ ಯಶಸ್ವಿಯಾಗಿ ಪೂರ್ಣಗೊಂಡ ನಂತರ ಕ್ಯಾಶ್ ಮೆಮೊರಿಯನ್ನು ತೆರವುಗೊಳಿಸುವುದು ಮತ್ತು ನೆಟ್‌ವರ್ಕ್ ಸೆಟ್ಟಿಂಗ್‌ಗಳಂತಹ ಕೆಲವು ಪ್ರಮುಖ ಆಯ್ಕೆಗಳನ್ನು ಪರಿಶೀಲಿಸುವುದೂ ಪ್ರಯೋಜನಕಾರಿಯಾಗಿದೆ.
ಸಾಧನವನ್ನು ರೀಸ್ಟಾರ್ಟ್ ಮಾಡುವುದರಿಂದ ಬಳಕೆಯ ಅನುಭವ ಸುಧಾರಿಸಬಹುದು ಮತ್ತು ಸಿಸ್ಟಮ್‌ನ ಕಾರ್ಯಕ್ಷಮತೆಯೂ ಉತ್ತಮಗೊಳ್ಳಬಹುದು. ಇದು ಆಂಡ್ರಾಯ್ಡ್ ಮತ್ತು ಐಫೋನ್ ಎರಡಕ್ಕೂ ಅನ್ವಯಿಸುತ್ತದೆ. ಅಷ್ಟೇ ಅಲ್ಲದೆ, ಹ್ಯಾಂಡ್‌ಹೆಲ್ಡ್ ಗೇಮಿಂಗ್ ಕನ್ಸೋಲ್‌ಗಳು, ಲ್ಯಾಪ್‌ಟಾಪ್‌ಗಳು, ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್ ಟಿವಿಗಳಿಗೂ ರೀಸ್ಟಾರ್ಟ್ ಮಾಡುವುದು ಪ್ರಯೋಜನಕಾರಿಯಾಗಿದೆ.
ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಮತ್ತೆ ಆನ್ ಮಾಡುವುದರಿಂದ ಅದರ ವೇಗ ಹೆಚ್ಚಾಗುವುದು ಅಥವಾ ಬ್ಯಾಟರಿ ನಿರ್ವಹಣೆ ಸುಧಾರಿಸುವುದು ಮಾತ್ರವಲ್ಲ, ಸಾಧನದ ಸುರಕ್ಷತೆಯನ್ನೂ ಹೆಚ್ಚಿಸಲು ಸಹಾಯವಾಗುತ್ತದೆ.
ಫೋನ್ ರೀಸ್ಟಾರ್ಟ್ ಮಾಡುವುದರಿಂದ ಆಗುವ ಪ್ರಯೋಜನಗಳನ್ನು ಗಮನಿಸಿದರೆ, ವಾರಕ್ಕೊಮ್ಮೆಯಾದರೂ ಈ ಅಭ್ಯಾಸ ಬೆಳೆಸಿಕೊಳ್ಳುವುದು ಉತ್ತಮ. BGR ವರದಿಯ ಪ್ರಕಾರ, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ (NSA) ಕೂಡ ವೈಯಕ್ತಿಕ ಅಥವಾ ಕಚೇರಿ ಬಳಕೆಯ ಫೋನ್‌ಗಳನ್ನು ವಾರಕ್ಕೊಮ್ಮೆಯಾದರೂ ರೀಸ್ಟಾರ್ಟ್ ಮಾಡುವಂತೆ ಸಲಹೆ ನೀಡಿದೆ.
ಫೋನ್ ಅನ್ನು ಸ್ವಿಚ್ ಆಫ್ ಮಾಡಿ ಮತ್ತೆ ಆನ್ ಮಾಡುವುದರಿಂದ ಹಿನ್ನೆಲೆಯಲ್ಲಿರುವ ಕೆಲವು ಅಪಾಯಕಾರಿ ಆ್ಯಪ್‌ಗಳು ಮತ್ತು ಸ್ಪೈವೇರ್‌ಗಳ ಕಾರ್ಯಾಚರಣೆ ತಾತ್ಕಾಲಿಕವಾಗಿ ಸ್ಥಗಿತಗೊಳ್ಳಬಹುದು. ಇದರಿಂದ ಸಾಧನದ ಸುರಕ್ಷತೆಗೆ ನೆರವಾಗಬಹುದು.
ಹೀಗಾಗಿ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಿದ ಬಳಿಕ ಫೋನ್ ಸ್ವಯಂಚಾಲಿತವಾಗಿ ರೀಸ್ಟಾರ್ಟ್ ಆಗದಿದ್ದರೆ, ನೀವೇ ಒಮ್ಮೆ ರೀಸ್ಟಾರ್ಟ್ ಮಾಡುವುದು ಉತ್ತಮ. ಅಲ್ಲದೆ, ವಾರಕ್ಕೊಮ್ಮೆಯಾದರೂ ಈ ಅಭ್ಯಾಸವನ್ನು ರೂಢಿಸಿಕೊಳ್ಳುವುದರಿಂದ ಫೋನ್‌ನ ಕಾರ್ಯಕ್ಷಮತೆ ಮತ್ತು ಸುರಕ್ಷತೆಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ