ಅಮೆರಿಕದಲ್ಲಿ ಹಣದುಬ್ಬರ ಇಳಿಕೆ ಮಧ್ಯೆ ಜಿಡಿಪಿ ಬೆಳವಣಿಗೆ; ಉತ್ತಮವಾಗಿದೆ ವಿಶ್ವದ ದೊಡ್ಡಣ್ಣನ ಆರ್ಥಿಕ ಆರೋಗ್ಯ
US economy expands at 3pc annual rate in 2024 April to June quarter: ಏಪ್ರಿಲ್ನಿಂದ ಜೂನ್ವರೆಗಿನ ತ್ರೈಮಾಸ ಅವಧಿಯಲ್ಲಿ ಅಮೆರಿಕದ ಆರ್ಥಿಕತೆ ಶೇ. 3ರ ವಾರ್ಷಿಕ ದರದಲ್ಲಿ ಬೆಳೆದಿರಬಹುದು ಎಂದು ಅಲ್ಲಿನ ವಾಣಿಜ್ಯ ಇಲಾಖೆ ಮಾಹಿತಿ ನೀಡಿದೆ. ಜುಲೈನಿಂದ ಸೆಪ್ಟೆಂಬರ್ವರೆಗಿನ ಅವಧಿಯಲ್ಲಿ ಜಿಡಿಪಿ ಶೇ. 2.9ರಷ್ಟು ಹೆಚ್ಚುವ ನಿರೀಕ್ಷೆ ಇದೆ. ಅಮೆರಿಕ ಆರ್ಥಿಕ ಹಿಂಜರಿತಕ್ಕೆ ಸಿಲುಕಬಹುದು ಎನ್ನುವ ಭಯ ಹೋಗಲಾಡಿಸುವಂತಿದೆ ಈ ಜಿಡಿಪಿ ದತ್ತಾಂಶ.
ವಾಷಿಂಗ್ಟನ್, ಸೆಪ್ಟೆಂಬರ್ 27: ಅಮೆರಿಕದ ಆರ್ಥಿಕತೆ ಎಪ್ರಿಲ್ನಿಂದ ಜೂನ್ವರೆಗಿನ ಕ್ವಾರ್ಟರ್ನಲ್ಲಿ ಶೇ. 3ರಷ್ಟು ಬೆಳವಣಿಗೆ ಸಾಧಿಸಿದೆ. ಇಲ್ಲಿಯ ವಾಣಿಜ್ಯ ಇಲಾಖೆ ಬಿಡುಗಡೆ ಮಾಡಿದ ದತ್ತಾಂಶದ ಪ್ರಕಾರ ಗ್ರಾಹಕ ವೆಚ್ಚ ಮತ್ತು ಔದ್ಯಮಿಕ ಹೂಡಿಕೆ ಉತ್ತಮವಾಗಿದ್ದ ಕಾರಣ ಈ ಮೂರು ತಿಂಗಳಲ್ಲಿ ವಿಶ್ವದ ದೊಡ್ಡಣ್ಣನ ಆರ್ಥಿಕತೆ ನಿರೀಕ್ಷೆಮೀರಿದ ಶಕ್ತಿ ಪಡೆದುಕೊಂಡಿದೆ. ಬಹಳ ಪಾಸಿಟಿವ್ ಎನಿಸಿರುವ ಜಿಡಿಪಿ ಹೆಚ್ಚಳ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ, ಅಮೆರಿಕದಲ್ಲಿ ಆರ್ಥಿಕ ಹಿಂಜರಿತದ ಭಯ ಕಡಿಮೆ ಆಗಿದೆ. ಅಮೆರಿಕದಲ್ಲಿ ಈಗ ಹಣದುಬ್ಬರ ಕಡಿಮೆ ಆಗಿದೆ, ಬಡ್ಡಿದರವೂ ಕಡಿಮೆ ಮಾಡಲಾಗುತ್ತಿದೆ. ನಿರುದ್ಯೋಗ ದರ ಕೈಮೀರುವಷ್ಟು ಇಲ್ಲ. ಇಂಥ ಹೊತ್ತಲ್ಲೇ ಆರ್ಥಿಕತೆಯೂ ಬೆಳವಣಿಗೆ ಹೊಂದಿರುವುದು ಆ ದೇಶಕ್ಕೆ ಶುಭ ಸೂಚಕವಾಗಿದೆ.
ಒಂದು ಹಂತದಲ್ಲಿ ಅಮೆರಿಕದಲ್ಲಿ ಕಳೆದ ನಾಲ್ಕು ದಶಕದಲ್ಲೇ ಅತೀ ಹೀನ ಎನಿಸಿದ ಹಣದುಬ್ಬರ ಸ್ಥಿತಿ ಇತ್ತು. ಬೆಲೆ ಏರಿಕೆ ಶೇ. 7ರ ದರಕ್ಕಿಂತ ಹೆಚ್ಚೇ ಇತ್ತು. ಹಣದುಬ್ಬರ ನಿಯಂತ್ರಿಸಲು ಸತತ 11 ಬಾರಿ ಬಡ್ಡಿದರ ಹೆಚ್ಚಿಸಲಾಗಿತ್ತು. ಹಲವು ದಶಕಗಳಲ್ಲೇ ಅತ್ಯಧಿಕ ಬಡ್ಡಿದರ ಅಮೆರಿಕದಲ್ಲಿ ಇತ್ತು. ಅಂಥ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ಜಿಡಿಪಿ ಶೇ. 3ರ ವಾರ್ಷಿಕ ದರದಲ್ಲಿ ಬೆಳವಣಿಗೆ ಹೊಂದಿರುವುದು ನೋಡಿದರೆ ಆರ್ಥಿಕತೆಯ ಪ್ರತಿರೋಧ ಶಕ್ತಿ ಉತ್ತಮವಿದ್ದಂತಿದೆ. ಹಿಂದಿನ ಕ್ವಾರ್ಟರ್ನಲ್ಲಿ ಜಿಡಿಪಿ ಕೇವಲ 1.6 ಪ್ರತಿಶತದಷ್ಟು ಮಾತ್ರವೇ ಬೆಳೆದಿತ್ತು.
ಇದನ್ನೂ ಓದಿ: Asia Power Index: ಏಷ್ಯಾದಲ್ಲಿ ಅತಿಪ್ರಭಾವಶಾಲಿ ದೇಶಗಳು: ಅಮೆರಿಕ, ಚೀನಾ ನಂತರದ ಸ್ಥಾನ ಭಾರತಕ್ಕೆ
ವರ್ಷದ ಎರಡನೇ ಕ್ವಾರ್ಟರ್ ಆಗಿರುವ ಏಪ್ರಿಲ್ನಿಂದ ಜೂನ್ವರೆಗಿನ ಅವಧಿಯಲ್ಲಿ ಆರ್ಥಿಕತೆಯ ಎಂಜಿನ್ ಎಂದು ಪರಿಗಣಿಸಲಾದ ಗ್ರಾಹಕ ಬಳಕೆ ವೆಚ್ಚ ಶೇ. 2.8ರ ದರದಲ್ಲಿ ಬೆಳೆದಿದೆ. ಸರ್ಕಾರ 2.9 ಪ್ರತಿಶತ ಹೆಚ್ಚಳ ನಿರೀಕ್ಷಿಸಿತ್ತಾದರೂ, ಅದರ ಸಮೀಪದಲ್ಲೇ ಇದು ಇದೆ. ಇನ್ನು, ಬಿಸಿನೆಸ್ ಇನ್ವೆಸ್ಟ್ಮೆಂಟ್ ಶೇ. 8.3ರ ದರದಲ್ಲಿ ಹೆಚ್ಚಿದೆ. ಅದರಲ್ಲೂ ಉಪಕರಣಗಳ ಮೇಲಿನ ಹೂಡಿಕೆಯು 9.8 ಪ್ರತಿಶತದಷ್ಟು ಹೆಚ್ಚಳ ಕಂಡಿದೆ.
ಸದ್ಯ ಅಮೆರಿಕದಲ್ಲಿ ಉದ್ಯೋಗಸೃಷ್ಟಿ ಉತ್ತಮ ರೀತಿಯಲ್ಲಿ ಆಗುತ್ತಿದೆಯಾದರೂ ಒಟ್ಟಾರೆ ನಿರುದ್ಯೋಗದರದಲ್ಲಿ ಅಲ್ಪ ಹೆಚ್ಚಳ ಆಗಿದೆ. ಇನ್ನು, ಹಣದುಬ್ಬರ ಶೇ. 2ರ ಸಮೀಪಕ್ಕೆ ಇಳಿದಿದೆಯಾದರೂ ಹೆಚ್ಚು ಜನಬಳಕೆಯ ದಿನಸಿ, ಗ್ಯಾಸ್, ಬಾಡಿಗೆ ಇತ್ಯಾದಿ ಅಗತ್ಯ ವಸ್ತು ಮತ್ತು ಸೇವೆಗಳ ಬೆಲೆ ಇನ್ನೂ ಅಧಿಕ ಮಟ್ಟದಲ್ಲಿ ಇದೆ. ಆದಾಗ್ಯೂ ಕೂಡ ಅಮೆರಿಕದ ಆರ್ಥಿಕತೆಯ ಇತರ ಸ್ವರೂಪಗಳು ಆರೋಗ್ಯಯುತವಾಗಿ ತೋರುತ್ತಿವೆ.
ಇದನ್ನೂ ಓದಿ: Thinking Hats IPO: ಬಂಡವಾಳ ಕೇಳಿದ್ದು 15 ಕೋಟಿ ರೂ , ಬಿಡ್ ಸಲ್ಲಿಕೆಯಾಗಿದ್ದು ಎರಡೂವರೆ ಸಾವಿರ ಕೋಟಿಗೂ ಹೆಚ್ಚು
ಜುಲೈನಿಂದ ಸೆಪ್ಟೆಂಬರ್ವರೆಗಿನ ಕ್ವಾರ್ಟರ್ನಲ್ಲಿ ಅಮೆರಿಕದ ಆರ್ಥಿಕತೆ ಶೇ. 2.9ರಷ್ಟು ಹೆಚ್ಚಾಗಬಹುದು ಎಂದು ಫೆಡರಲ್ ರಿಸರ್ವ್ ಬ್ಯಾಂಕ್ ಆಫ್ ಅಟ್ಲಾಂಟಾ ಅಂದಾಜು ಮಾಡಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ