Job Cuts: ಕುಸಿಯುತ್ತಿವೆ ಅಮೆರಿಕ ಮಾಧ್ಯಮ ಸಂಸ್ಥೆಗಳು; ವ್ಯಾಪಕ ಉದ್ಯೋಗ ಕಡಿತ, ಹೊಸ ನೇಮಕಾತಿಗೆ ಹಿಂಜರಿಕೆ

Recession: ಆರ್ಥಿಕ ಹಿಂಜರಿತ ಎದುರಾಗಬಹುದು ಎಂಬ ಭೀತಿಯಿಂದಾಗಿ ಹಲವು ಕಂಪನಿಗಳು ಉದ್ಯೋಗ ಕಡಿತ ಹಾಗೂ ನೇಮಕಾತಿ ಸ್ಥಗಿತ ಮಾಡುವುದಾಗಿ ಘೋಷಿಸಿವೆ

Job Cuts: ಕುಸಿಯುತ್ತಿವೆ ಅಮೆರಿಕ ಮಾಧ್ಯಮ ಸಂಸ್ಥೆಗಳು; ವ್ಯಾಪಕ ಉದ್ಯೋಗ ಕಡಿತ, ಹೊಸ ನೇಮಕಾತಿಗೆ ಹಿಂಜರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Jan 22, 2023 | 11:19 AM

ನ್ಯೂಯಾರ್ಕ್: ಅಮೆರಿಕದ ಘಟಾನುಘಟಿ ಮಾಧ್ಯಮ ಸಂಸ್ಥೆಗಳಲ್ಲಿ (US Media Companies) ಉದ್ಯೋಗ ಕಡಿತ ಮುಂದುವರಿದಿದೆ. ಪ್ರಭಾವಿ ಮಾಧ್ಯಮ ಕಂಪನಿಗಳಾದ ಸಿಎನ್​ಎನ್​ ನಿಂದ ವಾಷಿಂಗ್​ಟನ್​ಪೋಸ್ಟ್​ವರೆಗೆ ಬಹುತೇಕ ಕಂಪನಿಗಳು ಆರ್ಥಿಕ ಸಂಕಷ್ಟ (Financial Distress) ಅನುಭವಿಸುತ್ತಿವೆ. ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿಕೆ (Economic Recession) ಎದುರಾಗಬಹುದು ಎಂಬ ಭೀತಿಯಿಂದಾಗಿ ಹಲವು ಕಂಪನಿಗಳು ಹೊಸದಾಗಿ ಉದ್ಯೋಗ ಕಡಿತ (Job Cuts) ಘೋಷಿಸಿವೆ. ಜನಪ್ರಿಯ ವೋಕ್ಸ್ ಹಾಗೂ ದಿ ವರ್ಜ್ ವೆಬ್​ಸೈಟ್​ಗಳ ಮಾಲೀಕತ್ವ ಹೊಂದಿರುವ ‘ವೋಕ್ಸ್ ಮೀಡಿಯಾ’, ವಿಶ್ವದಾದ್ಯಂತ ಓದುಗರನ್ನು ಹೊಂದಿರುವ ‘ನ್ಯೂಯಾರ್ಕ್ ಮ್ಯಾಗಜೀನ್’ ಮತ್ತು ಅದರ ಆನ್​ಲೈನ್ ವೇದಿಕೆಗಳು ಶುಕ್ರವಾರ ಶೇ 7ರಷ್ಟು ಉದ್ಯೋಗಿಗಳಿಗೆ ಸೋಡಾಚೀಟಿ ಕೊಡುವುದಾಗಿ ಘೋಷಿಸಿವೆ. ಸಿಎನ್​ಎಸ್​, ಎನ್​ಬಿಸಿ, ಎಂಎಸ್​ಎನ್​ಬಿಸಿ, ಬಜ್​ಫೀಡ್ ಮತ್ತು ಇತರ ಮಾಧ್ಯಮ ಸಂಸ್ಥೆಗಳಿಂದ ಇಂಥದ್ದೇ ಹೇಳಿಕೆಗಳು ಪ್ರಕಟವಾಗಿವೆ.

ತಮ್ಮೆಲ್ಲ ಸಿಬ್ಬಂದಿಗೆ ಈ ಕುರಿತು ಶುಕ್ರವಾರ ವೊಕ್ಸ್ ಮೀಡಿಯಾದ ಸಿಇಒ ಜಿಮ್ ಬ್ಯಾಂಕ್​ಆಫ್ ನೆನಪೋಲೆ ಕಳಿಸಿದ್ದಾರೆ. ‘ನನ್ನ ವ್ಯವಹಾರ ಮತ್ತು ಉದ್ಯಮಗಳ ಎದುರು ಬೃಹತ್ ಆರ್ಥಿಕ ಸವಾಲುಗಳಿವೆ. ಹೀಗಾಗಿ ಅನಿವಾರ್ಯವಾಗಿ ಶೇ 7ರಷ್ಟು ಸಿಬ್ಬಂದಿ ಕಡಿತಗೊಳಿಸುವ ನಿರ್ಧಾರ ತೆಗೆದುಕೊಳ್ಳಬೇಕಾಯಿತು. ಸಂಸ್ಥೆಯ ಎಲ್ಲ ವಿಭಾಗಗಳಲ್ಲಿಯೂ ಉದ್ಯೋಗ ಕಡಿತ ಮಾಡುತ್ತಿದ್ದೇವೆ’ ಎಂದು ಪತ್ರದಲ್ಲಿ ತಿಳಿಸಿದ್ದಾರೆ. ವೊಕ್ಸ್ ಮೀಡಿಯಾದಲ್ಲಿ ಸುಮಾರು 1,900 ಮಂದಿ ಕೆಲಸ ಮಾಡುತ್ತಿದ್ದಾರೆ. ಈ ಪೈಕಿ 130 ಜನರು ತಕ್ಷಣ ಕೆಲಸ ಕಳೆದುಕೊಳ್ಳಲಿದ್ದಾರೆ ಎಂದು ಎಎಫ್​ಪಿ ವರದಿ ಮಾಡಿದೆ.

ವೊಕ್ಸ್ ಮೀಡಿಯಾದ ಮಾಲೀಕತ್ವದ ಆಹಾರ ಮಾಹಿತಿ ಜಾಲತಾಣ ಈಟರ್​ನಲ್ಲಿ ಕೆಲಸ ಮಾಡುತ್ತಿದ್ದ ಜನಪ್ರಿಯ ಪತ್ರಕರ್ತೆ ಮೆಗಾನ್ ಮೆಕ್​ಕೆರಾನ್ ತಾವೂ ಕೆಲಸ ಕಳೆದುಕೊಳ್ಳುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ‘ನಾನೀಗ ಗರ್ಭಿಣಿ. ಇಂಥ ಕಟು ಸತ್ಯ ಅರಗಿಸಿಕೊಳ್ಳಲು ತುಂಬಾ ಕಷ್ಟವಾಗುತ್ತಿದೆ. ಮುಂದಿನ ದಿನಗಳು ಹೇಗಿರಲಿವೆ ಎಂಬ ಬಗ್ಗೆ ಗೊಂದಲಗಳೇ ತುಂಬಿವೆ’ ಎಂದು ಟ್ವೀಟ್​ನಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಎಎಫ್​ಪಿ ಪ್ರತಿನಿಧಿಗೆ ಪ್ರತಿಕ್ರಿಯಿಸಿರುವ ವೊಕ್ಸ್ ಕಂಪನಿಯ ವಕ್ತಾರ, ‘ಯಾವುದೇ ನಿರ್ದಿಷ್ಟ ಪ್ರಕರಣದ ಬಗ್ಗೆ ಉತ್ತರಿಸಲು ಆಗುವುದಿಲ್ಲ. ಆದರೆ ಕೆಲಸ ಕಳೆದುಕೊಳ್ಳುವ ಎಲ್ಲರಿಗೂ ಕಾನೂನು ಪ್ರಕಾರ ಪರಿಹಾರ ಸಿಗಲಿದೆ. ಪೋಷಕರಾಗುತ್ತಿರುವವರಿಗೆ ಅದಕ್ಕೆ ಸಂಬಂಧಿಸಿದ ಹೆಚ್ಚುವರಿ ಪರಿಹಾರ ದೊರೆಯಲಿದೆ’ ಎಂದು ಹೇಳಿದ್ದಾರೆ.

ಇತರ ಸಂಸ್ಥೆಗಳಿಂದ ಇತ್ತೀಚೆಗೆ ವಜಾಗೊಂಡ ಹಲವು ಪತ್ರಕರ್ತರು ಟ್ವಿಟರ್​ನಲ್ಲಿ ಆಕ್ರೋಶ ತೋಡಿಕೊಂಡಿದ್ದಾರೆ. ಆದರೆ ಹೊಸ ಕೆಲಸಗಳು ಇಂಥವರಿಗೆ ಸುಲಭವಾಗಿ ಸಿಗುತ್ತಿಲ್ಲ. ‘ನನ್ನ ಮುಂದಿನ ಹೆಜ್ಜೆ ಹೇಗಿರಬೇಕೆಂಬುದನ್ನು ನಾನು ಯೋಚಿಸುತ್ತಿದ್ದೇನೆ. ನಾನು ಡೇಟಾ ಜರ್ನಲಿಸ್ಟ್ ಆಗಿ ಕೆಲಸ ಮಾಡುತ್ತಿದ್ದೆ. ಬರವಣಿಗೆ ಮತ್ತು ಕಾರ್ಯಕ್ರಮಗಳ ನಿರ್ಮಾಣದ ಅನುಭವವೂ ನನಗಿದೆ’ ಎಂದು ಎನ್​ಬಿಸಿ ಸಂಸ್ಥೆಯಲ್ಲಿ ತನಿಖಾ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದ ಎಮಿಲಿ ಸೀಗೆಲ್ ಹೇಳಿಕೊಂಡಿದ್ದಾರೆ. ‘ನನಗೆ ಪತ್ರಕರ್ತೆಯಾಗಿ ಮುಂದುವರಿಯುವ ಆಸೆಯಿದೆ. ಅವಕಾಶಗಳು ಇದ್ದರೆ ಡೈರೆಕ್ಟ್ ಮೆಸೇಜ್ ಮೂಲಕ ತಿಳಿಸಿ’ ಎಂದು ಕೋರಿದ್ದಾರೆ.

ಹಲವು ವರ್ಷಗಳ ಒತ್ತಡ

ಮೈಕ್ರೋಸಾಫ್ಟ್ ಮತ್ತು ಗೂಗಲ್​ನಂಥ ದೈತ್ಯ ಟೆಕ್ ಕಂಪನಿಗಳಂತೆ ಮಾಧ್ಯಮ ಸಂಸ್ಥೆಗಳ ಉದ್ಯೋಗ ಕಡಿತ ದೊಡ್ಡಮಟ್ಟದ ಸುದ್ದಿಯಾಗುತ್ತಿಲ್ಲ. ಮುಂದಿನ ದಿನಗಳಲ್ಲಿ ಜಾಹೀರಾತು ಆದಾಯ ಕುಸಿಯಬಹುದು, ಆರ್ಥಿಕ ವಿದ್ಯಮಾನ ಹದಗೆಡಬಹುದು ಎನ್ನುವ ಕಾರಣಕ್ಕೆ ಈ ಎರಡೂ ಕಂಪನಿಗಳು ತಲಾ ಸುಮಾರು 12,000 ಉದ್ಯೋಗ ಕಡಿತ ಮಾಡುವ ನಿರ್ಧಾರ ಪ್ರಕಟಿಸಿದ್ದವು.

ಮಾಧ್ಯಮಗಳ ಸಂಸ್ಥೆಗಳ ಈ ದುರವಸ್ಥೆಗೆ ತಪ್ಪು ಲೆಕ್ಕಾಚಾರ ಮುಖ್ಯ ಕಾರಣ ಎನ್ನುತ್ತಾರೆ ಕ್ವಿನಿಪಿಯಕ್ ವಿವಿಯ ಡೀನ್ ಕ್ರಿಸ್ ರೌಶ್. ‘ಮುಂದಿನ ದಿನಗಳಲ್ಲಿ ಬೆಳೆಯಬಹುದು, ಓದುಗರ-ನೋಡುಗರ ಸಂಖ್ಯೆ ಹೆಚ್ಚಬಹುದು ಎನ್ನುವ ನಿರೀಕ್ಷೆಯಲ್ಲಿ ಹಲವು ಕಂಪನಿಗಳು ವಿಸ್ತರಣೆಗೆ ಮುಂದಾಗಿದ್ದವು. ಆದರೆ ಅದು ಸಾಧ್ಯವಾಗಲಿಲ್ಲ. ಮತ್ತೊಂದೆಡೆ ಮುಂದಿನ ದಿನಗಳಲ್ಲಿ ಆರ್ಥಿಕ ಹಿಂಜರಿತವಾಗಬಹುದು ಎಂಬ ಭೀತಿ ಕಾಣಿಸಿಕೊಂಡಿದೆ. ಹೀಗಾಗಿ ಉದ್ಯೋಗ ಕಡಿತಕ್ಕೆ ಇಂಥ ಕಂಪನಿಗಳು ಮುಂದಾಗಿವೆ’ ಎಂದು ಅಭಿಪ್ರಾಯಪಡುತ್ತಾರೆ ಅವರು.

ಪತ್ರಕರ್ತರ ಸಂಖ್ಯೆಯಲ್ಲಿ ಸತತ ಕುಸಿತ

ಅಮೆರಿಕ ಸುದ್ದಿಮನೆಗಳಲ್ಲಿ ಉದ್ಯೋಗಿಗಳ ಸಂಖ್ಯೆ ಒಂದೇ ಸಮನೆ ಕುಸಿಯುತ್ತಿದೆ. 2008ರಲ್ಲಿ 1,14,000 ಮಂದಿ ಸುದ್ದಿಮನೆಗಳಲ್ಲಿ ಕೆಲಸ ಮಾಡುತ್ತಿದ್ದರು. 2020ರಲ್ಲಿ ಈ ಪ್ರಮಾಣ 85,000ಕ್ಕೆ ಇಳಿದಿತ್ತು ಎಂದು ಪ್ಯೂ ರಿಸರ್ಚ್ ಸೆಂಟರ್ ವರದಿ ತಿಳಿಸಿದೆ. ಬೃಹತ್ ಕಂಪನಿಗಳಿಗಿಂತಲೂ ಸ್ಥಳೀಯ ಮಾಧ್ಯಮಗಳಲ್ಲಿ ಉದ್ಯೋಗ ಕಡಿತದ ತೀವ್ರತೆ ಹೆಚ್ಚಾಗಿದೆ.

ಮಾಧ್ಯಮ ಸಂಸ್ಥೆಗಳಲ್ಲಿ ಉದ್ಯೋಗ ಕಡಿತ ನಿರ್ಧಾರವನ್ನು ಅಮೆರಿಕದ ಬರಹಗಾರರ ಒಕ್ಕೂಟ (Writers Guild of America) ಖಂಡಿಸಿದೆ. ‘ಹಲವು ವರ್ಷಗಳಿಂದ ಪತ್ರಿಕೋದ್ಯಮದ ಮೇಲೆ ಸಾಕಷ್ಟು ಒತ್ತಡವಿದೆ. ಹಲವು ಕಂಪನಿಗಳು ಈ ಬಿಕ್ಕಟ್ಟಿನ ಸಮಯವನ್ನು ಉದ್ಯೋಗ ಕಡಿತಕ್ಕೆ ಬಳಸಿಕೊಳ್ಳುತ್ತಿವೆ. ಇದರಿಂದ ಪತ್ರಕರ್ತರು ಮತ್ತು ಪತ್ರಿಕೋದ್ಯಮ ಎರಡೂ ಅಪಾಯದಲ್ಲಿವೆ’ ಎಂದು ಒಕ್ಕೂಟವು ಆಕ್ರೋಶ ವ್ಯಕ್ತಪಡಿಸಿದೆ.

ಇದನ್ನೂ ಓದಿ: Joe Biden: ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮನೆ ಮೇಲೆ ಎಫ್​ಬಿಐ ದಾಳಿ; ಮಹತ್ವದ ದಾಖಲೆಗಳು ವಶ

Published On - 11:19 am, Sun, 22 January 23

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್