ಭಾರತ-ಅಮೆರಿಕದಿಂದ ಸದ್ಯದಲ್ಲೇ ದೊಡ್ಡ ನಡೆ..? ಚೀನಾ ಸ್ಥಾನಕ್ಕೆ ಭಾರತವನ್ನು ಕೂರಿಸುವ ಪ್ರಯತ್ನವಾ?
India-USA bilateral trade: ಅಮೆರಿಕ ಮತ್ತು ಚೀನಾ ನಡುವೆ ದ್ವಿಪಕ್ಷೀಯ ವ್ಯಾಪಾರ ಮೊತ್ತ 750 ಬಿಲಿಯನ್ ಡಾಲರ್ ಇದೆ. ಇದರಲ್ಲಿ ಅಮೆರಿಕದ ರಫ್ತು 250 ಬಿಲಿಯನ್ ಡಾಲರ್ನಷ್ಟಿರಬಹುದು. ಭಾರತ ಮತ್ತು ಅಮೆರಿಕ ನಡುವೆ ದ್ವಿಪಕ್ಷೀಯ ವ್ಯಾಪಾರ ಸುಮಾರು 200 ಬಿಲಿಯನ್ ಡಾಲರ್ನಷ್ಟಿದೆ. ಈಗ ಇದನ್ನು 500 ಬಿಲಿಯನ್ ಡಾಲರ್ಗೆ ಏರಿಸುವ ಗುರಿ ಇಡಲಾಗಿದೆ. ಈ ನಿಟ್ಟಿನಲ್ಲಿ ಸದ್ಯದಲ್ಲೇ ಮಹತ್ವದ ಹೆಜ್ಜೆ ಇಡುವ ನಿರೀಕ್ಷೆ ಇದೆ.

ನವದೆಹಲಿ, ಫೆಬ್ರುವರಿ 18: ನರೇಂದ್ರ ಮೋದಿ ಅವರ ಅಮೆರಿಕ ಭೇಟಿ ಬಳಿಕ ಭಾರತೀಯ ಉದ್ಯಮ ವಲಯಕ್ಕೆ ಹೊಸ ನಿರೀಕ್ಷೆ ಹುಟ್ಟಿದೆ. ಆ ಭೇಟಿ ವೇಳೆ ವ್ಯಕ್ತವಾದ ಪ್ರಮುಖ ಅಂಶಗಳಲ್ಲಿ ದ್ವಿಪಕ್ಷೀಯ ವ್ಯಾಪಾರ ಪ್ರಧಾನವಾಗಿದೆ. 2030ರೊಳಗೆ ದ್ವಿಪಕ್ಷೀಯ ವ್ಯಾಪಾರ ಪ್ರಮಾಣ 500 ಬಿಲಿಯನ್ ಡಾಲರ್ಗೆ ಏರಿಸಬೇಕು ಎಂದು ಗುರಿ ನಿಶ್ಚಿಯಿಸಲಾಗಿದೆ. ಈ ನಿಟ್ಟಿನಲ್ಲಿ ಮುಂದಿನ ಏಳೆಂಟು ತಿಂಗಳಲ್ಲಿ ಎರಡೂ ದೇಶಗಳ ಮಧ್ಯೆ ಬಹಳ ಮಹತ್ವದ್ದಾದ ವ್ಯಾಪಾರ ಒಪ್ಪಂದ ಏರ್ಪಡಬಹುದು ಎಂದು ಹೇಳಲಾಗುತ್ತಿದೆ. ಕೇಂದ್ರ ಉದ್ಯಮ ಸಚಿವ ಪೀಯೂಶ್ ಗೋಯಲ್ ಅವರು ಈ ಬಗ್ಗೆ ಸಣ್ಣ ಸುಳಿವು ನೀಡಿದ್ದಾರೆ.
ಸದ್ಯ ಭಾರತ ಮತ್ತು ಅಮೆರಿಕ ನಡುವಿನ ದ್ವಿಪಕ್ಷೀಯ ವ್ಯಾಪಾರದ ಪ್ರಮಾಣವು ಸುಮಾರು 150ರಿಂದ 200 ಬಿಲಿಯನ್ ಡಾಲರ್ ಆಸುಪಾಸಿನಲ್ಲಿದೆ. ಇದನ್ನು ಎರಡರಿಂದ ಎರಡೂವರೆ ಪಟ್ಟು ಹೆಚ್ಚಿಸುವುದು ಸದ್ಯದ ಟಾರ್ಗೆಟ್. ಈ ಗುರಿಯಲ್ಲಿ ಮೊದಲ ಹೆಜ್ಜೆಯಾಗಿ ಎರಡೂ ದೇಶಗಳಿಗೂ ಅನುಕೂಲವಾಗುವ ರೀತಿಯಲ್ಲಿ ಬಹು ಕ್ಷೇತ್ರಗಳ ದ್ವಿಪಕ್ಷೀಯ ವ್ಯಾಪಾರ ಒಪ್ಪಂದ ಜಾರಿಯಾಗಬಹುದು. ಈ ಒಪ್ಪಂದ ಕುದುರಿಸಲು ಈ ವರ್ಷೊಳಗೆಯೇ ಸಂಧಾನಗಳು ನಡೆಯಲಿವೆ.
ಇದನ್ನೂ ಓದಿ: MAGA=VB; 1+1=11; ಟ್ರಂಪ್-ಮೋದಿ ಭೇಟಿಯ ಹೈಲೈಟ್ಸ್; ಅಮೆರಿಕದ ಟ್ಯಾರಿಫ್ಗಳಿಂದ ಭಾರತಕ್ಕೇನೂ ಹಿನ್ನಡೆ ಇಲ್ಲವಾ?
ಚೀನಾ ಸ್ಥಾನಕ್ಕೆ ಭಾರತ…?
ಚೀನಾದ ಒಟ್ಟು ರಫ್ತು 3-4 ಟ್ರಿಲಿಯನ್ ಡಾಲರ್ನಷ್ಟಿದೆ. ಇದರಲ್ಲಿ ಅಮೆರಿಕದ ಪಾಲು ಅತಿ ಹೆಚ್ಚು. 500 ಬಿಲಿಯನ್ ಡಾಲರ್ಗೂ ಅಧಿಕ ಮೊತ್ತದ ಚೀನಾ ಸರಕುಗಳು ಅಮೆರಿಕಕ್ಕೆ ಸಾಗಿ ಹೋಗುತ್ತವೆ. ಚೀನಾ ಮತ್ತು ಅಮೆರಿಕದ ದ್ವಿಪಕ್ಷೀಯ ವ್ಯಾಪಾರ ಮೊತ್ತ ಸುಮಾರು 750 ಬಿಲಿಯನ್ ಡಾಲರ್ನಷ್ಟಿದೆ.
ಇದೇ ವೇಳೆ, ಅಮೆರಿಕ ಮತ್ತು ಭಾರತದ ನಡುವಿನ ದ್ವಿಪಕ್ಷೀಯ ವ್ಯಾಪಾರ ಮೊತ್ತ 150ರಿಂದ 200 ಬಿಲಿಯನ್ ಡಾಲರ್ನಷ್ಟಿದೆ. ಇದನ್ನು 500 ಬಿಲಿಯನ್ ಡಾಲರ್ಗೆ ಹೆಚ್ಚಿಸಬೇಕೆಂದರೆ ಅಮೆರಿಕವು ಚೀನಾ ಸರಕುಗಳ ಆಮದನ್ನು ಕಡಿಮೆ ಮಾಡಿ ಭಾರತದೊಂದಿಗೆ ವ್ಯಾಪಾರ ವಹಿವಾಟು ಹೆಚ್ಚಿಸುವುದು ಅನಿವಾರ್ಯ. ಹಾಗೆಯೇ, ಭಾರತದೊಂದಿಗೆ ಅಮೆರಿಕ ಟ್ರೇಡ್ ಡೆಫಿಸಿಟ್ ಹೊಂದಿದೆ. ಅಂದರೆ, ರಫ್ತಿಗಿಂತ ಆಮದು ಹೆಚ್ಚಿದೆ. ಈ ಕೊರತೆಯನ್ನು ನೀಗಿಸಿ ಭಾರತಕ್ಕೆ ರಫ್ತು ಹೆಚ್ಚಿಸುವ ಇರಾದೆಯೂ ಅಮೆರಿಕಕ್ಕೆ ಇಲ್ಲದಿಲ್ಲ. ಚೀನಾಗೆ ಅಮೆರಿಕ ಸುಮಾರು 250 ಬಿಲಿಯನ್ ಡಾಲರ್ನಷ್ಟು ಸರಕುಗಳನ್ನು ರಫ್ತು ಮಾಡುತ್ತದೆ. ಆ ಸರಕುಗಳಿಗೆ ಭಾರತ ಒಂದು ಪರ್ಯಾಯ ಮಾರುಕಟ್ಟೆಯಾದರೂ ಅಚ್ಚರಿ ಇಲ್ಲ.
ಇದನ್ನೂ ಓದಿ: ಹಾರುವ ಆಂಬುಲೆನ್ಸ್; 788 ಇ-ವಿಮಾನಗಳ ಸರಬರಾಜು ಮಾಡಲಿರುವ ಇಪ್ಲೇನ್ ಕಂಪನಿ
ದ್ವಿಪಕ್ಷೀಯ ವ್ಯಾಪಾರವನ್ನು ಗಣನೀಯವಾಗಿ ಹೆಚ್ಚಿಸಲು ಪ್ರಮುಖ ಮಾರ್ಗ ಮುಕ್ತ ವ್ಯಾಪಾರ ಒಪ್ಪಂದ. ಇದರಲ್ಲಿ ಎರಡೂ ದೇಶಗಳ ನಡುವೆ ನಡೆಯುವ ವ್ಯಾಪಾರದಲ್ಲಿ ಸುಂಕ ಇರುವುದಿಲ್ಲ. ಇದ್ದರೂ ಬಹಳ ಕನಿಷ್ಠ ಮಟ್ಟದಲ್ಲಿ ಸುಂಕ ಇರುತ್ತದೆ. ಇದರಿಂದ ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಸರಕುಗಳು ಮುಕ್ತವಾಗಿ ಹೋಗುವುದು ಹೆಚ್ಚು ಸುಲಭವಾಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




