ಭಾರತದ ಸರಕುಗಳಿಗೆ ಅಮೆರಿಕ ಶೇ. 20ರಷ್ಟು ಸುಂಕ ವಿಧಿಸಿದರೆ ಆರ್ಥಿಕತೆಗೆ ಎಷ್ಟು ನಷ್ಟವಾಗುತ್ತೆ? ಇಲ್ಲಿದೆ ಡೀಟೇಲ್ಸ್
What happens if USA impose flat 20% tariffs on India: ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 20ರಷ್ಟು ಆಮದು ಸುಂಕ ವಿಧಿಸಿದರೆ ಏನಾಗುತ್ತದೆ? ಎಸ್ಬಿಐ ವರದಿಯೊಂದು ಸಿಮುಲೇಶನ್ ಮೂಲಕ ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ಯತ್ನಿಸಿದೆ. ಅಕಸ್ಮಾತ್ ಶೇ. 20ರಷ್ಟು ಸುಂಕ ಹಾಕಿದ್ದೇ ಆದಲ್ಲಿ ಭಾರತದ ಜಿಡಿಪಿ ಬೆಳವಣಿಗೆಗೆ 50 ಮೂಲಾಂಕಗಳಷ್ಟು ಹಿನ್ನಡೆಯಾಗಬಹುದು ಎಂದು ಅದು ಅಂದಾಜಿಸಿದೆ.

ನವದೆಹಲಿ, ಫೆಬ್ರುವರಿ 18: ಡೊನಾಲ್ಡ್ ಟ್ರಂಪ್ ಅವರು ಎಲ್ಲಾ ದೇಶಗಳಿಗೆ ಟ್ಯಾರಿಫ್ ಎಚ್ಚರಿಕೆಗಳನ್ನು ನೀಡುತ್ತಿದ್ದಾರೆ. ಚೀನಾ, ಕೆನಡಾ, ಮೆಕ್ಸಿಕೋ ಮೊದಲಾದ ಕೆಲ ದೇಶಗಳಿಗೆ ಆಮದು ಸುಂಕ ಹೆಚ್ಚಿಸಿದ್ದಾರೆ. ಭಾರತಕ್ಕೂ ಸುಂಕ ಹೆಚ್ಚಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಭಾರತದ ಎದುರು ಅಮೆರಿಕ ಸುಮಾರು 50 ಬಿಲಿಯನ್ ಡಾಲರ್ನಷ್ಟು ಟ್ರೇಡ್ ಡೆಫಿಸಿಟ್ ಹೊಂದಿದೆ. ಅಮೆರಿಕವೇನಾದರೂ ಭಾರತದ ಸರಕುಗಳ ಮೇಲೆ ಶೇ. 20ರಷ್ಟು ಸುಂಕ ವಿಧಿಸಿದ್ದೇ ಆದಲ್ಲಿ ತೀರಾ ದೊಡ್ಡ ಹಿನ್ನಡೆಯಾಗುವುದಿಲ್ಲ. ಎಸ್ಬಿಐ ವರದಿಯೊಂದರ ಪ್ರಕಾರ ಭಾರತದ ಜಿಡಿಪಿ ಬೆಳವಣಿಗೆಯಲ್ಲಿ 50 ಮೂಲಾಂಕಗಳಷ್ಟು ಹಿನ್ನಡೆಯಾಗಬಹುದು. ಅಂದರೆ, ಶೇ. 6.5ರಷ್ಟು ಆಗಬಹುದಿದ್ದ ಆರ್ಥಿಕತೆಯ ಬೆಳವಣಿಗೆ ಶೇ. 6ಕ್ಕೆ ನಿಲ್ಲಬಹುದು. ಅಥವಾ ಶೇ. 8ರಷ್ಟು ಇರಬೇಕಿದ್ದ ಆರ್ಥಿಕ ಬೆಳವಣಿಗೆ ಶೇ. 7.5ಕ್ಕೆ ಮೊಟಕುಗೊಳ್ಳಬಹುದು.
ಭಾರತದಿಂದ ಅಮೆರಿಕಕ್ಕೆ ಆಗುವ ರಫ್ತಿನಲ್ಲಿ ಹೆಚ್ಚಿನಂಶ ಸರ್ವಿಸ್ ಸೆಕ್ಟರ್ನದ್ದು. ಅಮೆರಿಕ ಆಮದು ಸುಂಕ ವಿಧಿಸಿದಲ್ಲಿ ಅತಿಹೆಚ್ಚು ಬಾಧಿತವಾಗುವ ಕ್ಷೇತ್ರಗಳೆಂದರೆ ಕೃಷಿ, ಅರಣ್ಯಗಾರಿಕೆ, ಮೀನುಗಾರಿಕೆ. ಈ ಕ್ಷೇತ್ರಗಳಲ್ಲಿ 1,543 ಮಿಲಿಯನ್ ಡಾಲರ್ನಷ್ಟು ನಷ್ಟ ಆಗಬಹುದು ಎಂದು ಎಸ್ಬಿಐ ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: GDP growth: ಅಕ್ಟೋಬರ್ನಿಂದ ಡಿಸೆಂಬರ್ವರೆಗಿನ ತ್ರೈಮಾಸಿಕದಲ್ಲಿ ಜಿಡಿಪಿ ಶೇ. 6.4ಕ್ಕೆ ಹೆಚ್ಚಬಹುದು: ಐಸಿಆರ್ಎ ನಿರೀಕ್ಷೆ
ಹಣಕಾಸು ಸೇವಾ ಕ್ಷೇತ್ರಕ್ಕೆ 1,426 ಮಿಲಿಯನ್ ಡಾಲರ್, ರಾಸಾಯನಿಕ ಕ್ಷೇತ್ರಕ್ಕೆ 1,106 ಮಿಲಿಯನ್ ಡಾಲರ್, ಜವಳಿ ಕ್ಷೇತ್ರಕ್ಕೆ 1,076 ಮಿಲಿಯನ್ ಡಾಲರ್ನಷ್ಟು ನಷ್ಟ ಆಗಬಹುದು ಎಂದು ಈ ವರದಿಯಲ್ಲಿ ಅಂದಾಜಿಸಲಾಗಿದೆ.
ಆದರೆ, ಅಮೆರಿಕವು ಭಾರತದ ಸರಕುಗಳ ಮೇಲೆ ಇಷ್ಟು ದೊಡ್ಡ ಪ್ರಮಾಣದಲ್ಲಿ ಟ್ಯಾರಿಫ್ ಹಾಕುವ ಸಾಧ್ಯತೆ ಬಹಳ ಕಡಿಎ ಎಂದೂ ಎಸ್ಬಿಐನ ವರದಿಯಲ್ಲಿ ಹೇಳಲಾಗಿದೆ. ಅಕಸ್ಮಾತ್ ಆಗಿ ಅಮೆರಿಕ ಹಠಕ್ಕೆ ಬಿದ್ದು ಆಮದು ಸುಂಕ ಹೇರಿದರೆ ಭಾರತಕ್ಕೆ ಎಷ್ಟು ನಷ್ಟ ಆಗಬಹುದು ಎನ್ನುವ ಅಂದಾಜನ್ನು ಈ ವರದಿಯಲ್ಲಿ ಮಾಡಲಾಗಿದೆ.
ಇದನ್ನೂ ಓದಿ: ಭಾರತ-ಅಮೆರಿಕದಿಂದ ಸದ್ಯದಲ್ಲೇ ದೊಡ್ಡ ನಡೆ..? ಚೀನಾ ಸ್ಥಾನಕ್ಕೆ ಭಾರತವನ್ನು ಕೂರಿಸುವ ಪ್ರಯತ್ನವಾ?
ಸದ್ಯ, ಭಾರತ ಮತ್ತು ಅಮೆರಿಕ ದ್ವಿಪಕ್ಷೀಯ ವ್ಯಾಪಾರದಲ್ಲಿ ಆಮದು ಸುಂಕ ಒಂದೇ ತೆರನಾಗಿಲ್ಲ. ಅಮೆರಿಕಕ್ಕಿಂತ ಭಾರತವೇ ಹೆಚ್ಚು ಸುಂಕ ವಿಧಿಸುತ್ತದೆ. 2018ರಲ್ಲಿ ಭಾರತದ ಸರಕುಗಳ ಮೇಲೆ ಅಮೆರಿಕ ಶೇ. 2.72ರಷ್ಟು ಆಮದು ಸುಂಕ ಹೇರುತ್ತಿತ್ತು. 2022ರಲ್ಲಿ ಇದು ಶೇ. 3.83ಕ್ಕೆ ಏರಿದೆ. ಇನ್ನೊಂದೆಡೆ, ಅಮೆರಿಕದ ಸರಕುಗಳಿಗೆ ಭಾರತ 2018ರಲ್ಲಿ ಶೇ. 11.59ರಷ್ಟಿತ್ತು. ಇದು 2022ರಲ್ಲಿ ಶೇ. 15.30ಕ್ಕೆ ಏರಿದೆ ಎಂದು ಎಸ್ಬಿಐ ರಿಸರ್ಚ್ನ ವರದಿ ಎತ್ತಿ ತೋರಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ