ನವದೆಹಲಿ, ಏಪ್ರಿಲ್ 3: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರೀಕ್ಷೆಯಂತೆ ಪ್ರತಿಸುಂಕ (US Reciprocal tax) ವಿಧಿಸುವ ಕ್ರಮ ಜಾರಿಗೆ ತಂದಿದ್ದಾರೆ. ಭಾರತವೂ ಸೇರಿದಂತೆ ಬರೋಬ್ಬರಿ 180 ದೇಶಗಳಿಗೆ ಅವರು ಟ್ಯಾರಿಫ್ ಹೇರಿಕೆ ಮಾಡಿದ್ದಾರೆ. ಎಲ್ಲಾ ದೇಶಗಳಿಗೂ ಸಮಾನವಾದ ಸುಂಕ ವಿಧಿಸುವ ಬದಲು ಪ್ರತ್ಯೇಕ ದರಗಳನ್ನು ನಿಗದಿ ಮಾಡಿದ್ದಾರೆ. ಭಾರತದ ಸರಕುಗಳ ಮೇಲೆ ಶೇ. 26ರಷ್ಟು ಟ್ಯಾರಿಫ್ ವಿಧಿಸಿದ್ದಾರೆ. ಬೇರೆ ಹೆಚ್ಚಿನ ದೇಶಗಳಿಗೆ ಹೋಲಿಸಿದರೆ ಭಾರತಕ್ಕೆ ಹಾಕಿರುವ ಸುಂಕ ತುಸು ಕಡಿಮೆ ಇದ್ದಂತಿದೆ. ಇದೇ ವೇಳೆ, ಕೆಲ ವಸ್ತುಗಳ ಮೇಲೆ ಟ್ರಂಪ್ ಸರ್ಕಾರ ಟ್ಯಾರಿಫ್ನಿಂದ ವಿನಾಯಿತಿಯನ್ನೂ ನೀಡಿದೆ. ಬಹಳ ಅವಶ್ಯಕ ಎನಿಸುವ ವಸ್ತುಗಳು ಹೆಚ್ಚಾಗಿ ಈ ವಿನಾಯಿತಿ ಪಟ್ಟಿಯಲ್ಲಿವೆ.
ಫಾರ್ಮಾ ಉತ್ಪನ್ನಗಳಿಂದ ಹಿಡಿದು ಸೆಮಿಕಂಡಕ್ಟರ್ವರೆಗೆ ಕೆಲ ವಸ್ತುಗಳಿಗೆ ಅಮೆರಿಕ ಸರ್ಕಾರ ಆಮದು ಸುಂಕ ವಿಧಿಸದಿರಲು ನಿರ್ಧರಿಸಿದೆ. ಭಾರತದ ಫಾರ್ಮಾ ವಲಯ ಸಮಾಧಾನದಿಂದ ಉಸಿರು ಬಿಡುವಂತಾಗಿದೆ.
ಹಾಗೆಯೇ, ಆಟೊಮೊಬೈಲ್ ಮತ್ತು ವಾಹನ ಬಿಡಿಭಾಗಗಳನ್ನು ಸುಂಕ ವ್ಯಾಪ್ತಿಯಿಂದ ಹೊರಗಿಟ್ಟಿದೆ ಸರ್ಕಾರ. ಬಹಳ ಅಗತ್ಯ ಎನಿಸಿರುವ ಜಿಂಕ್ ಇತ್ಯಾದಿ ಕೆಲ ಖನಿಜ ಮತ್ತು ರಾಸಾಯನಿಕಗಳಿಗೂ ವಿನಾಯಿತಿ ಕೊಡಲಾಗಿದೆ. 50ಕ್ಕೂ ಹೆಚ್ಚು ವಸ್ತುಗಳ ಮೇಲೆ ಎಕ್ಸೆಂಪ್ಷನ್ ಕೊಡಲಾಗಿದೆ.
ಇದನ್ನೂ ಓದಿ: ಡೊನಾಲ್ಡ್ ಟ್ರಂಪ್ ವಿಧಿಸಿರುವ ಪ್ರತಿ ಸುಂಕ ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತೆ?
ವಿವಿಧ ವೈಟಮಿನ್ ಕಚ್ಛಾ ವಸ್ತುಗಳು, ಫೋಲಿಕ್ ಆ್ಯಸಿಡ್ ಇತ್ಯಾದಿ ಅವಶ್ಯಕ ವಸ್ತುಗಳಿಗೆ ವಿನಾಯಿತಿ ಇದೆ. ಶಾಲಾ ನೋಟ್ಬುಕ್ಗಳು, ಪ್ರಿಂಟೆಡ್ ಬುಕ್ಗಳು, ಬ್ರೋಷರ್ಗಳು, ಮುದ್ರಿತ ನಿಘಂಟು, ಎನ್ಸೈಕ್ಲೋಪೀಡಿಯಾ ಇತ್ಯಾದಿ ವಸ್ತುಗಳಿಗೂ ವಿನಾಯಿತಿ ಇದೆ.
ಭಾರತದ ಐಟಿ ಸೆಕ್ಟರ್ ಒಂದು ವರ್ಷದಲ್ಲಿ 130-140 ಬಿಲಿಯನ್ ಡಾಲರ್ನಷ್ಟು ರಫ್ತು ಮಾಡುತ್ತದೆ. ಇದರಲ್ಲಿ ಅಮೆರಿಕದ ಮಾರುಕಟ್ಟೆಗೆ ಶೇ. 60-65ರಷ್ಟು ಹೋಗುತ್ತದೆ. ಟ್ರಂಪ್ ಅವರು ಸದ್ಯ ಐಟಿ ಸರ್ವಿಸ್ಗಳಿಗೆ ನೇರ ಸುಂಕ ವಿಧಿಸಿಲ್ಲ. ಹೀಗಾಗಿ, ಭಾರತದ ಐಟಿ ಸೆಕ್ಟರ್ ಮೇಲೆ ನೇರ ಪರಿಣಾಮ ಇರುವುದಿಲ್ಲ. ಆದಾಗ್ಯೂ, ಪರೋಕ್ಷ ಪರಿಣಾಮಗಳು ಇಲ್ಲದೇ ಇಲ್ಲ.
ಇದನ್ನೂ ಓದಿ: ಭಾರತದ ಮೇಲೆ ಶೇ.26ರಷ್ಟು ಪ್ರತಿ ಸುಂಕ ವಿಧಿಸಿದ ಡೊನಾಲ್ಡ್ ಟ್ರಂಪ್
ಪರೋಕ್ಷ ಪರಿಣಾಮ ಎಂದರೆ, ಈಗ ಟ್ರಂಪ್ ಸುಂಕ ಕ್ರಮದಿಂದ ಅಮೆರಿಕದ ವಿವಿಧ ಉದ್ದಿಮೆಗಳ ಬಜೆಟ್ ಮೊಟಕುಗೊಳ್ಳುವ ಸಾಧ್ಯತೆ ಇರುತ್ತದೆ. ಹೀಗಾದಲ್ಲಿ, ಆ ಕಂಪನಿಗಳು ಐಟಿ ಸರ್ವಿಸ್ ಮತ್ತಿತರ ವೆಚ್ಚವನ್ನು ಕಡಿಮೆ ಮಾಡಲು ಮುಂದಾಗಬಹುದು. ಇದರಿಂದ ಭಾರತದ ಐಟಿ ಕಂಪನಿಗಳಿಗೆ ಬಿಸಿನೆಸ್ ಸ್ವಲ್ಪ ಕಡಿಮೆ ಆಗುವ ಸಾಧ್ಯತೆ ಇದೆ. ಒಟ್ಟಾರೆ, ಇನ್ಫೋಸಿಸ್, ಟಿಸಿಎಸ್ ಇತ್ಯಾದಿ ಭಾರತೀಯ ಐಟಿ ಕಂಪನಿಗಳಿಗೆ ಸದ್ಯ ಹೆಚ್ಚು ಕಳವಳಕಾರಿ ಅಂಶ ಇಲ್ಲ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ