ಮೆಸೇಜ್ ಟ್ರೇಸ್ ಮಾಡೋಕ್ಕಾಗಲ್ಲ; ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಬೆದರಿಕೆ

Whatsapp Threatens to Shut Down Its Services In India: ವಾಟ್ಸಾಪ್ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಆಗುವುದಿಲ್ಲ. ಆ ರೀತಿ ಟ್ರೇಸ್ ಮಾಡಲಾಗುವಂತೆ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ಬಳಕೆದಾರರ ಗೌಪ್ಯತೆಗೆ ಧಕ್ಕೆಯಾಗುತ್ತದೆ. ಮೆಸೇಜ್ ಟ್ರೇಸಿಂಗ್​ಗೆ ಬಲವಂತ ಪಡಿಸಿದರೆ ಭಾರತದಿಂದ ತನ್ನ ವ್ಯವಹಾರಗಳನ್ನು ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸಾಪ್ ಸಂಸ್ಥೆ ಹೇಳಿದೆ. ಫೇಸ್​ಬುಕ್​ನ ಸೋದರಸಂಸ್ಥೆಯಾದ ವಾಟ್ಸಾಪ್ ಇತ್ತೀಚೆಗೆ ದೆಹಲಿ ಹೈಕೋರ್ಟ್ ವಿಚಾರಣೆಯಲ್ಲಿ ಈ ವಿಚಾರದಲ್ಲಿ ತನ್ನ ಅಭಿಪ್ರಾಯಗಳನ್ನು ತಿಳಿಸಿದೆ.

ಮೆಸೇಜ್ ಟ್ರೇಸ್ ಮಾಡೋಕ್ಕಾಗಲ್ಲ; ಬಲವಂತಪಡಿಸಿದರೆ ಭಾರತವನ್ನೇ ತೊರೆಯಬೇಕಾಗುತ್ತೆ: ವಾಟ್ಸಾಪ್ ಬೆದರಿಕೆ
ವಾಟ್ಸಾಪ್

Updated on: Apr 26, 2024 | 3:29 PM

ನವದೆಹಲಿ, ಏಪ್ರಿಲ್ 26: ಬಳಕೆದಾರರ ಗೌಪ್ಯತೆ (users privacy) ವಿಚಾರದಲ್ಲಿ ಆ್ಯಪಲ್ ಸಂಸ್ಥೆ ಬಹಳ ಕಟ್ಟುನಿಟ್ಟು. ವಾಟ್ಸಾಪ್ ಕೂಡ ಅದೇ ಪ್ರವೃತ್ತಿ ತೋರುತ್ತಿದೆ. ತನ್ನ ಪ್ಲಾಟ್​ಫಾರ್ಮ್​ನಲ್ಲಿ ಮೆಸೇಜ್​ಗಳನ್ನು ಟ್ರೇಸ್ ಮಾಡಲು ಬಲವಂತಪಡಿಸಿದರೆ ಭಾರತದಲ್ಲಿ ಸೇವೆ ನಿಲ್ಲಿಸಬೇಕಾಗುತ್ತದೆ ಎಂದು ವಾಟ್ಸಾಪ್ (Whatsapp) ಎಚ್ಚರಿಕೆ ನೀಡಿದೆ. ಮೊನ್ನೆಮೊನ್ನೆ ದೆಹಲಿ ಹೈಕೋರ್ಟ್​ನಲ್ಲಿ ನಡೆದ ವಿಚಾರಣೆಯಲ್ಲಿ ತನ್ನ ನಿಲುವನ್ನು ವಾಟ್ಸಾಪ್ ನಿವೇದಿಸಿಕೊಂಡಿದೆ. ವಾಟ್ಸಾಪ್ ಬಳಕೆದಾರರಿಗೆ ತಮ್ಮ ಗೌಪ್ಯತೆ ಬಗ್ಗೆ ಭದ್ರತಾ ಭಾವನೆ ಇದೆ. ಅದರಲ್ಲಿರುವ ಎನ್​ಕ್ರಿಪ್ಷನ್​ಗಳು ಬಳಕೆದಾರರ ಸಂದೇಶದ ಗೌಪ್ಯತೆಗೆ ಕಾರಣವಾಗಿದೆ. ಈ ಎನ್​ಕ್ರಿಪ್ಷನ್ ವ್ಯವಸ್ಥೆಯನ್ನು ಸಡಿಲಗೊಳಿಸಿದರೆ ವಾಟ್ಸಾಪ್​ನ ವಿಶ್ವಾಸಾರ್ಹತೆ ಕಡಿಮೆ ಆಗುತ್ತದೆ ಎಂದು ವಾಟ್ಸಾನ್ ನ್ಯಾಯಾಲಯದ ಮುಂದೆ ವಿವರಣೆ ನೀಡಿದೆ.

ವಾಟ್ಸಾಪ್ ಅನ್ನು ಸೈಬರ್ ಕ್ರೈಮ್​ಗಳಿಗೆ ಬಳಸಲಾಗುತ್ತಿದೆ. ಸಮಾಜ ಘಾತುಕ ಶಕ್ತಿಗಳು ಪ್ರಚೋದನಕಾರಿ ಸಂಗತಿಗಳನ್ನು ವಾಟ್ಸಾಪ್ ಮೂಲಕ ಹಂಚಿಕೊಳ್ಳುತ್ತಿವೆ. ಹೀಗಾಗಿ, ಇಂಥ ಸಂದೇಶಗಳ ಮೂಲವನ್ನು ಪತ್ತೆ ಹಚ್ಚಲು ವಾಟ್ಸಾಪ್ ಸೇರಿದಂತೆ ಇತರ ಮೆಸೇಜಿಂಗ್ ಅಪ್ಲಿಕೇಶನ್​ಗಳು ನೆರವಾಗಬೇಕು ಎಂದು ಭಾರತ ಸರ್ಕಾರ ಹಲವು ಬಾರಿ ಒತ್ತಾಯ ಹಾಕುತ್ತಿದೆ. ವಾಟ್ಸಾಪ್​ನಲ್ಲಿ ಪೋಸ್ಟ್ ಆಗುವ ಪ್ರತಿಯೊಂದು ಚ್ಯಾಟ್ ಎನ್​ಕ್ರಿಪ್ಟ್ ಆಗಿರುತ್ತದೆ. ಇದರ ಕೀ ವಾಟ್ಸಾಪ್​ಗೂ ಗೊತ್ತಿರುವುದಿಲ್ಲ. ಈ ವ್ಯವಸ್ಥೆಯನ್ನು ಸಡಿಲಗೊಳಿಸುವುದೆಂದರೆ ಬಳಕೆದಾರರಿಗೆ ವಾಟ್ಸಾಪ್ ಮೇಲಿನ ವಿಶ್ವಾಸ ಹೋಗಬಹುದು. ಭಾರತದ ಸಂವಿಧಾನದತ್ತವಾಗಿ ಸಿಗುವ ಗೌಪ್ಯತೆಯ ಉಲ್ಲಂಘನೆಯೂ ಆದಂತಾಗುತ್ತದೆ. ಈ ವಾದವನ್ನು ಮುಂದಿಟ್ಟುಕೊಂಡು ಭಾರತದ ಐಟಿ ನಿಯಮಗಳ ವಿರುದ್ಧ ನಿಲ್ಲಲು ವಾಟ್ಸಾಪ್ ನಿರ್ಧರಿಸಿದೆ.

ಇದನ್ನೂ ಓದಿ: ವಾಟ್ಸಾಪ್​ನಲ್ಲಿ ಇಂಟರ್ನೆಟ್ ಇಲ್ಲದೆಯೂ ಫೋಟೋ, ವಿಡಿಯೋ ಷೇರ್ ಮಾಡಬಹುದು; ಬರಲಿದೆ ಹೊಸ ಫೀಚರ್

ಭಾರತದಿಂದ ನಿರ್ಗಮಿಸುತ್ತದಾ ವಾಟ್ಸಾಪ್?

ಭಾರತದಲ್ಲಿ 40 ಕೋಟಿ ಸಕ್ರಿಯ ವಾಟ್ಸಾಪ್ ಬಳಕೆದಾರರಿದ್ದಾರೆ. ಜಾಗತಿಕವಾಗಿ ಇರುವ ವಾಟ್ಸಾಪ್ ಬಳಕೆದಾರರಲ್ಲಿ ಹೆಚ್ಚಿನವರು ಭಾರತೀಯರಿದ್ದಾರೆ. ಅಲ್ಲದೇ ಭಾರತದಲ್ಲಿ ವಾಟ್ಸಾಪ್​ನಲ್ಲಿ ಯುಪಿಐ ಪೇಮೆಂಟ್ ಫೀಚರ್ ಕೂಡ ಇದೆ. ಅಷ್ಟು ಸುಲಭಕ್ಕೆ ವಾಟ್ಸಾಪ್ ಭಾರತದ ವ್ಯವಹಾರವನ್ನು ಬಂದ್ ಮಾಡುವುದಿಲ್ಲ.

ಭಾರತದಲ್ಲಿ ಮಾತ್ರವಲ್ಲ ಬೇರೆ ದೇಶಗಳಲ್ಲೂ ವಾಟ್ಸಾಪ್ ಈ ರೀತಿಯಾಗಿ ಮೆಸೇಜ್ ಟ್ರೇಸಿಂಗ್​ಗೆ ಒತ್ತಡಗಳನ್ನು ಎದುರಿಸುತ್ತಿದೆ. ಹಾಗೂ ಹೀಗೂ ಆ ಕಾನೂನುಗಳಿಗೆ ವಾಟ್ಸಾಪ್ ಪ್ರತಿರೋಧ ತೋರುತ್ತಾ ತನ್ನ ಗೌಪ್ಯತಾ ನೀತಿಯನ್ನು ಉಳಿಸಿಕೊಂಡು ಬರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 3:28 pm, Fri, 26 April 24

Vijaya Sarathy SN

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Follow Us