ಜಮೀನಿಗೆ ನೀರು ಹಾಯಿಸುವ ಗಲಾಟೆ ಅಣ್ಣನ ಕೊಲೆಯಲ್ಲಿ ಅಂತ್ಯ, 60 ವರ್ಷದ ಸಂಬಂಧಕ್ಕೆ ದಾರುಣ ಅಂತ್ಯ
ಜಮೀನಿಗೆ ನೀರು ಹಾಯಿಸುವ ವಿಚಾರದಲ್ಲಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದಲ್ಲಿ ಮಾರಕ ಗಲಾಟೆ ನಡೆದಿದ್ದು, ಅದು ಕೊಲೆಯಲ್ಲಿ ಅಂತ್ಯವಾಗಿದೆ. ತಮ್ಮನೇ ಅಣ್ಣನ ಹತ್ಯೆ ಮಾಡಿದ್ದಾನೆ, 60 ವರ್ಷದ ಸಂಬಂಧಕ್ಕೆ ದಾರುಣ ಅಂತ್ಯವಾಗಿದೆ ಎಂದು ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಟ್ಟುತ್ತಾ ಅಣ್ಣತಮ್ಮಂದಿರು ಬೆಳೆಯುತ್ತಾ ದಾಯಾದಿಗಳು ಅನ್ನುವ ಗಾದೆ ಮಾತು ಅಕ್ಷರಶಃ ನಿಜ ನೋಡಿ, ಒಂದೇ ತಾಯಿಯ ಎದೆ ಹಾಲು ಕುಡಿದರೂ ದೊಡ್ಡವರಾದ ಮೇಲೆ ಆಸ್ತಿಗಾಗಿ ಗುದ್ದಾಡುತ್ತಾರೆ. ಇದೇ ರೀತಿ ಹಾವೇರಿಯಲ್ಲಿ ಅಣ್ಣ ತಮ್ಮಂದಿರು ಜಮೀನಿಗೆ ನೀರು ಹಾಯಿಸುವ ವಿಚಾರದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ
ಹೌದು ಒಂದು ಕ್ಷಣದ ಸಿಟ್ಟು ಅದೆಂಹತ ಅನಾಹುತಕ್ಕೆ ಸಾಕ್ಷಿಯಾಗುತ್ತೆ ಅನ್ನುವುದಕ್ಕೆ ಈ ಘಟನೆ ಸಾಕ್ಷಿ. ಇಲ್ಲಿ ಹೆಣವಾದ ವ್ಯಕ್ತಿಯ ಹೆಸರು ನಾಗಪ್ಪ ಬೆನಕನಹಳ್ಳಿ. ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಯಲವಿಗಿ ಗ್ರಾಮದ ನಿವಾಸಿ. ಇವರು ಐದು ಜನ ಅಣ್ಣ ತಮ್ಮಂದಿರು ಎಲ್ಲರೂ ಬೇರೆ ಬೇರೆಯಾಗಿ ಜೀವನ ನಡೆಸುತ್ತಿದ್ದರು. ಎಲ್ಲರಿಗೂ ಮೂರು ಎಕರೆ ಜಮೀನು ಬಂದಿತ್ತು. ಅದರಲ್ಲಿ ಎಲ್ಲರೂ ಒಂದೊಂದು ಕೊಳವೆ ಬಾವಿ ಕೊರೆಸಿಕೊಂಡು ಜಮೀನು ಉಳುಮೆ ಮಾಡುತ್ತಿದ್ದರು.
ಆದರೆ ಫೋಟೋದಲ್ಲಿ ಕಾಣುತ್ತಿರುವ ವ್ಯಕ್ತಿ ಮೃತ ನಾಗಪ್ಪನ ತಮ್ಮ ಯಲ್ಲಪ್ಪ ತನ್ನ ಕೊಳವೆ ಬಾವಿಯಲ್ಲಿ ನೀರು ಕಡಿಮೇ ಆಗಿದಕ್ಕೆ ಅಣ್ಣನ ಜಮೀನಲ್ಲಿದ್ದ ನೀರು ಕದ್ದುಮುಚ್ಚಿ ಹಾಯಿಸಿಕೊಳ್ಳುತ್ತಿದ್ದನಂತೆ. ಇದನ್ನು ಪ್ರಶ್ನೆ ಮಾಡಿದ ಅಣ್ಣನನ್ನ ಕಟ್ಟಿಗೆಯಿಂದ ಕೊಡೆದು ಕೊಲೆ ಮಾಡಿದ್ದಾನೆ ಎಂದು ಮೃತನ ಹೆಂಡತಿ ಆರೋಪ ಮಾಡುತ್ತಿದ್ದಾರೆ.
ಒಂದಡೆ ಬರಗಾಲ, ಮತ್ತೊಂದೆಡೆ ವಿದ್ಯುತ್ ಕಣ್ಣಾಮುಚ್ಚಾಲೆ ಆಟ. ಹೀಗಾಗಿ ರೈತರು ತಮ್ಮ ಜಮೀನಿನಲ್ಲಿ ಬೆಳದ ಬೆಳೆ ಉಳಿಸಿಕೊಳ್ಳಲು ಹರಸಾಹಸ ಪಡುತ್ತಾರೆ. ನಿನ್ನೆ ಸೋಮವಾರ ಸಂಜೆ ಯಲ್ಲಪ್ಪನನ್ನು ಅಣ್ಣ ನಾಗಪ್ಪ ಪ್ರಶ್ನೆ ಮಾಡಿದ್ದಾನೆ. ಅದಕ್ಕೆ ಸಬೂಬು ನೀಡಿ ಸಮಾಧಾನ ಮಾಡಬೇಕಾಗಿದ್ದ ತಮ್ಮ, ಅಣ್ಣನಿಗೆ ಕಟ್ಟಿಗೆಯಿಂದ ಎದೆಗೆ ಹೊಡೆದಿದ್ದಾನೆ.
Also Read: Agricultural Credit – ಕೃಷಿ ಸಾಲದ ಗುರಿಯನ್ನು 22ರಿಂದ 25 ಲಕ್ಷ ಕೋಟಿ ರೂಗೆ ಹೆಚ್ಚಿಸುವ ಸಾಧ್ಯತೆ
ಹೊಡೆದ ರಭಸಕ್ಕೆ 62 ವರ್ಷದ ನಾಗಪ್ಪ ಸ್ಥಳದಲ್ಲೇ ಕುಸಿದು ಬಿದ್ದಿದ್ದಾನೆ. ಆ ಕೂಡಲೇ ಆಸ್ಪತ್ರೆಗೆ ರವಾನಿಸಿದರೂ ಮಾರ್ಗ ಮಧ್ಯದಲ್ಲೆ ಸಾವನಪ್ಪಿದ್ದಾನೆ. ಇತ್ತ ಕೊಲೆ ಆರೋಪಿ ಯಲ್ಲಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಕೊಲೆ ಆರೋಪಿಗೆ ಶಿಕ್ಷೆಯಾಗಬೇಕು ಎಂದು ಸಂಬಂಧಿಕರು ಒತ್ತಾಯಿಸುತ್ತಿದ್ದಾರೆ.
ಒಟ್ಟಾರೆ ಸಿಟ್ಟಿನ ಕೈಗೆ ಬುದ್ದಿ ಕೊಟ್ಟು ಸ್ಮಶಾನ ಹಾದಿ ತುಳಿಯುವಂತಾಗಿದೆ ಈಸ ಘಟನೆ. ಒಂದಲ್ಲಾ ಒಂದು ವಿಚಾರಕ್ಕೆ ಪದೇ ಪದೇ ಗಲಾಟೆ ಮಾಡಿಕೊಳ್ಳುತ್ತಿದ್ದ ಅಣ್ಣತಮ್ಮಂದಿರ ಭ್ರಾತೃತ್ವ ಈಗ ಕೊಲೆಯಲ್ಲಿ ಅಂತ್ಯವಾಗಿದೆ
(ವರದಿ: ಅಣ್ಣಪ್ಪ ಬಾರ್ಕಿ, ಟಿವಿ 9, ಹಾವೇರಿ)
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ