Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ…ಚುಚ್ಚಿ ಕೊಂದ

ಇಬ್ಬರು ಒಂದೇ ಕಡೆ ಕೆಲಸ ಮಾಡುತ್ತಿದ್ದರು. ಹೀಗಾಗಿ ಮೋಹನ್ ರಾಜು ಎನ್ನುವಾತ ತನಗೆ ಮದ್ವೆಯಾಗಿದ್ದರೂ ಸಹ ಗೆಳೆಯನಿಗೆ ವಾಸಿಸಲು ತನ್ನ ಮನೆಯಲ್ಲೇ ನೆಲೆ ಕೊಟ್ಟಿದ್ದ. ಬಳಿಕ ಮೋಹನ್ ರಾಜು ಹೆಂಡ್ತಿ ಹಾಗೂ ಸ್ನೇಹಿತನ ನಡುವೆ ಲವ್ವಿಡವ್ವಿ ಶುರುವಾಗಿದೆ. ಈ ವಿಚಾರ ಮೋಹನ್ ರಾಜುಗೆ ಗೊತ್ತಾಗಿ ಪತ್ನಿ ಜತೆ ಗಲಾಟೆ ಮಾಡಿದ್ದಾನೆ. ಬಳಿಕ ಸಂಸಾರದಲ್ಲಿ ವಿರಸ ಉಂಟಾಗಿ ಇಬ್ಬರು ದೂರವಾಗಿದ್ದಾರೆ. ಕೊನೆಗೆ ಮೋಹನ್ ರಾಜು ಪತ್ನಿಯನ್ನು ಭೀಕರವಾಗಿ ಹತ್ಯೆ ಮಾಡಿ ಕೋಪ ತಣಿಸಿಕೊಂಡಿದ್ದಾನೆ.

ಸ್ನೇಹಿತನೊಂದಿಗೆ ಸರಸ, ಸಂಸಾರದಲ್ಲಿ ವಿರಸ: ಪತ್ನಿಯನ್ನ ಏಳೆಂಟು ಬಾರಿ ಚುಚ್ಚಿ...ಚುಚ್ಚಿ ಕೊಂದ
Hebbagodi Murder
Follow us
ರಾಮು, ಆನೇಕಲ್​
| Updated By: ರಮೇಶ್ ಬಿ. ಜವಳಗೇರಾ

Updated on: Feb 05, 2025 | 3:07 PM

ಆನೇಕಲ್ (ಬೆಂಗಳೂರು ಗ್ರಾಮಾಂತರ), ಫೆಬ್ರವರಿ 05): ನಡುರಸ್ತೆಯಲ್ಲಿ ಪತಿಯೊಬ್ಬ ತನ್ನ ಪತ್ನಿಗೆ ಏಳೆಂಟು ಬಾರಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಂದಿರುವ ಅಮಾನುಷ ಘಟನೆ ಬೆಂಗಳೂರಿನ ಹೆಬ್ಬಗೋಡಿಯ ವಿನಾಯಕನಗರದಲ್ಲಿ ನಡೆದಿದೆ. 6 ವರ್ಷದ ಮಗುವನ್ನ ಶಾಲೆಗೆ ಬಿಡಲು ಹೋಗುತ್ತಿದ್ದ ಹೆಂಡತಿಯನ್ನು ಅಡ್ಡಗಟ್ಟಿ ಚಾಕುವಿನಿಂದ ಚುಚ್ಚಿ, ಚುಚ್ಚಿ ಕ್ರೌರ್ಯ ಮೆರೆದಿದ್ದಾನೆ. ತನ್ನ ಸ್ನೇಹಿತನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆಂದು ಪತಿ ಈ ಕೃತ್ಯ ಎಸಗಿದ್ದಾನೆ. ಶ್ರೀಗಂಗಾ (29) ಕೊಲೆಯಾದ ಮಹಿಳೆ. ಮೋಹನ್ ರಾಜು (32) ಪತ್ನಿಯನ್ನು ಕೊಲೆಗೈದ ಪತಿ ಮಹಾಶಯ.

ಬೆಂಗಳೂರು ಹೊರವಲಯದ ಹೆಬ್ಬಗೋಡಿಯ ತಿರುಪಾಳ್ಯ ನಿವಾಸಿಗಳಾಗಿರುವ ಶ್ರೀಗಂಗಾ ಹಾಗೂ ಮೋಹನ್ ರಾಜು ಮದುವೆಯಾಗಿ 7 ವರ್ಷಗಳಾಗಿದ್ದು, 6 ವರ್ಷದ ಮಗನಿದ್ದಾನೆ. ಆದ್ರೆ, ಮೋಹನ್ ರಾಜ್ ಸ್ನೇಹಿತನ ಜೊತೆಗೆ ಶ್ರೀಗಂಗಾ ಅಕ್ರಮ ಸಂಬಂಧ ಹೊಂದಿದ್ದಾಳೆಂಬ ಅನುಮಾನ ಇತ್ತು. ಈ ಸಂಬಂಧ ಎರಡ್ಮೂರು ವರ್ಷದಿಂದ ಮೋಹನ್ ರಾಜ್‌ ಪತ್ನಿ ಶೀಲ ಶಂಕಿಸಿ ಗಲಾಟೆ ಮಾಡುತ್ತಿದ್ದ.

ಇದನ್ನೂ ಓದಿ: ಪ್ರೀತಿಸಿ ಮದ್ವೆಯಾಗಿದ್ದ ಜೋಡಿ ಬಾಳಲ್ಲಿ ಅನುಮಾನದ ಬಿರುಗಾಳಿ, ಪ್ರಿಯಕರನಿಗೆ ಹೇಳಿ ಗಂಡನ ಕೊಲ್ಲಿಸಿದ ಪತ್ನಿ!

ಕೊನೆಗೆ ಗಲಾಟೆ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಕಳೆದ 8 ತಿಂಗಳಿನಿಂದ ಮೋಹನ್ ರಾಜ್ ಹಾಗೂ ಶ್ರೀಗಂಗಾ ದೂರವಾಗಿದ್ದರು. ಆದ್ರೆ, ನಿನ್ನೆ(ಫೆಬ್ರವರಿ 04) ರಾತ್ರಿ ಮೋಹನ್ ರಾಜ್‌ ತನ್ನ ಮಗುವನ್ನ ನೋಡಲು ಶ್ರೀಗಂಗಾಳ ಮನೆಗೆ ತೆಳಿದ್ದ. ಆ ವೇಳೆ ಇಬ್ಬರ ನಡುವೆ ಮತ್ತೆ ಜಗಳವಾಗಿದೆ.

ಇದರಿಂದ ಕೋಪಗೊಂಡಿದ್ದ ಮೋಹನ್ ರಾಜ್, ಶ್ರೀಗಂಗಾಳನ್ನು ಕೊಲೆ ಮಾಡಬೇಕೆಂದು ನಿರ್ಧಾರಕ್ಕೆ ಬಂದಿದ್ದಾನೆ. ಅದರಂತೆ ಇಂದು (ಫೆಬ್ರವರಿ 05) ಬೆಳಗ್ಗೆ ಶ್ರೀಗಂಗಾ ಮಗುವನ್ನ ಶಾಲೆಗೆ ಬಿಡಲು ಬೈಕ್‌ನಲ್ಲಿ ಬಂದಿದ್ದಳು. ಈ ವೇಳೆ ಕಾದು ಕುಳಿತಿದ್ದ ಪತಿ ಮೋಹನ್ ರಾಜ್‌ ಪತ್ನಿ ಶ್ರೀಗಂಗಾ ಮೇಲೆ ಅಟ್ಯಾಕ್ ಮಾಡಿದ್ದು, ಏಳೆಂಟು ಬಾರಿ ಚಾಕುವಿನಿಂದ ಇರಿದು ತನ್ನ ಸಿಟ್ಟು ತೀರಿಸಿಕೊಂಡಿದ್ದಾನೆ

ಇನ್ನು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಕುಸಿದು ಬಿದ್ದಿದ್ದ ಶ್ರೀಗಂಗಾಳನ್ನು ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ರೀಗಂಗಾ ಸಾವನ್ನಪ್ಪಿದ್ದಾರೆ. ಈ ಸಂಬಂಧ ಹೆಬ್ಬಗೋಡಿ ಪೊಲೀಸರು ಆರೋಪಿ ಮೋಹನ್ ರಾಜ್ ಅವರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಹೇಳಿದ್ದಿಷ್ಟು

ಇನ್ನು ಈ ಪ್ರಕರಣದ ಬ್ಗಗೆ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ.ಬಾಬಾ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಬೆಳಗ್ಗೆ ಹೆಬ್ಬಗೋಡಿಯಲ್ಲಿ ಶಾಲೆಗೆ ಮಗುವನ್ನ ಬಿಡಲಿಕ್ಕೆ ತಾಯಿ ಬಂದಾಗ ಘಟನೆ ನಡೆದಿದೆ. ಅವರ ಪತಿ ಶಾಲೆಯ ಕಾಂಪೌಂಡ್ ಬಳಿ ಬಂದು ಚಾಕುವಿನಿಂದ ಇರಿದಿದ್ದಾನೆ. ಮಾಹಿತಿ ಬಂದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಆಸ್ಪತ್ರೆಯಲ್ಲಿ ಗಾಯಾಳು ಮೃತಪಟ್ಟಿದ್ದಾರೆ. ಈ ಬ್ಗಗೆ ಹೆಬ್ಬಗೋಡಿ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು, ಕೊಲೆ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ. ಪತಿ ಹಾಗೂ ಆತನ ಸ್ನೇಹಿತ ಒಂದೇ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದರು. ಹೀಗಾಗಿ ಈ ಹಿಂದೆ ಪತಿಯ ಸ್ನೇಹಿತನನ್ನ ಮನೆಯಲ್ಲಿ ಇರಿಸಿಕೊಂಡಿದ್ದರು. ಈ ವೇಳೆ ಪತಿಯ ಸ್ನೇಹಿತ ಹಾಗೂ ಮೃತಳ ನಡುವೆ ಸಂಬಂಧ ಇದೆ ಎಂದು ಗಲಾಟೆ ಆಗಿದೆ. ನಂತರ ಪತಿ ಪತ್ನಿ ದೂರವಾಗಿದ್ದರು. ಕಳೆದ ರಾತ್ರಿ ಮಗುವನ್ನ ನೋಡಲು ಬಂದಾಗ ಇಬ್ಬರ ಮಧ್ಯೆ ಗಲಾಟೆಯಾಗಿದೆ. ಇದರಿಂದ ಕೋಪಗೊಂಡು ಇಂದು ಬೆಳಿಗ್ಗೆ ಚಾಕು ಇರಿದು ಕೊಂದಿದ್ದಾನೆ ಎಂದು ಮಾಹಿತಿ ನೀಡಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ