ಮಹಿಳೆಯರ ಚಪ್ಪಲಿ ಇರುವ ಮನೆಗಳೇ ಟಾರ್ಗೆಟ್: ಯೂಟ್ಯೂಬ್ ನೋಡಿ ಕಳ್ಳತನ ಮಾಡ್ತಿದ್ದವ ಸಿಕ್ಕಿಬಿದ್ದ
ಮಡಿವಾಳ ಠಾಣಾ ಪೊಲೀಸರು ನಕಲಿ ಕೀಗಳನ್ನು ಬಳಸಿ ಕಳ್ಳತನ ಮಾಡುತ್ತಿದ್ದ ಪ್ರಕಾಶ್ ಅಲಿಯಾಸ್ ಬಾಲಾಜಿ ಎಂಬಾತನನ್ನು ಬಂಧಿಸಿದ್ದಾರೆ. ಆರೋಪಿಯ ವಿರುದ್ಧ 140 ಪ್ರಕರಣಗಳು ದಾಖಲಾಗಿವೆ. ಪ್ರಕಾಶ್ ಆನ್‌ಲೈನ್‌ನಲ್ಲಿ ಕೀ ಮಾಡುವ ಯಂತ್ರವನ್ನು ಖರೀದಿಸಿ ನಕಲಿ ಕೀಗಳನ್ನು ತಯಾರಿಸಿ ಕಳ್ಳತನ ಮಾಡುತ್ತಿದ್ದನು. ಪೊಲೀಸರು 130 ನಕಲಿ ಕೀಗಳು, ಎರಡು ಬೈಕ್‌ಗಳು ಮತ್ತು ಕಳ್ಳತನ ಮಾಡಿದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು, ಜುಲೈ 01: ನಕಲಿ ಕೀ ಬಳಸಿ ಕಳ್ಳತನ ಮಾಡುತ್ತಿದ್ದವನನ್ನು ಮಡಿವಾಳ ಠಾಣೆ ಪೊಲೀಸರು (Madiwala Police Station) ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಉತ್ತರಹಳ್ಳಿಯ ಪ್ರಕಾಶ್ ಅಲಿಯಾಸ್ ಬಾಲಾಜಿ (43) ಬಂಧಿತ ಆರೋಪಿ. ಆರೋಪಿ ವಿರುದ್ಧ ಈವರೆಗೆ ಬರೋಬ್ಬರಿ 140 ಪ್ರಕರಣ ದಾಖಲಾಗಿವೆ. ಬಂಧಿತ ಆರೋಪಿಯಿಂದ 80 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿ ಪ್ರಕಾಶ್ ಕೀ ಮಾಡುವ ಮಷಿನ್ ಆನ್‌ಲೈನ್‌ನಲ್ಲಿ ಖರೀದಿಸಿದ್ದನು. ಅಪಾರ್ಟ್ಮೆಂಟ್ ಖರೀದಿದಾರನ ರೀತಿ ಹೋಗಿ ಕೀ ಮಾಡ್ಯೂಲ್ ಪಡೆದು, ನಕಲಿ ಕೀ ಮಾಡಿಕೊಂಡು ಕಳ್ಳತನ ಮಾಡುತ್ತಿದ್ದನು. ಆರೋಪಿ ಕಳ್ಳತನ ಮಾಡಲು ಮಹಿಳೆಯರ ಚಪ್ಪಲಿ ಇರುವ ಮನೆಗಳನ್ನೇ ಟಾರ್ಗೆಟ್ ಮಾಡುತ್ತಿದ್ದನು. ಕದ್ದ ವಸ್ತುಗಳನ್ನು ಸ್ವಿಗ್ಗಿ, ಜೊಮ್ಯಾಟೋ ಬ್ಯಾಗ್ನಲ್ಲಿ ಹಾಕಿಕೊಂಡು ಡೆಲಿವರಿ ಬಾಯ್ನಂತೆ ಪೊಲೀಸರ ಕಣ್ತಪ್ಪಿಸಿ ಪರಾರಿಯಾಗುತ್ತಿದ್ದನು.
ಆರೋಪಿ ಪ್ರಕಾಶ್ ಉತ್ತರಹಳ್ಳಿಯಲ್ಲಿ ತನ್ನ ಪತ್ನಿ ಜೊತೆಗೆ ವಾಸವಾಗಿದ್ದನು. ಯೂಟ್ಯೂಬ್ನಲ್ಲಿ ಕಳ್ಳತನದ ವಿಡಿಯೋ ನೋಡಿ ಹೊಸ ಹೊಸ ಮಾದರಿಯಲ್ಲಿ ಕಳ್ಳತನ ಮಾಡುತ್ತಿದ್ದನು. ಕದ್ದ ಚಿನ್ನಾಭರಣವನ್ನು ರಾಜೀವ್ ಎಂಬಾತನಿಂದ ಮಾರಾಟ ಮಾಡಿಸುತ್ತಿದ್ದನು.
ಆರೋಪಿ ಪ್ರಕಾಶ್ ಅಪ್ರಾಪ್ತನಾಗಿದ್ದಾಗಲೇ ಕಳ್ಳತನಕ್ಕಿಳಿದಿದ್ದನು. ಆರೋಪಿ ಪ್ರಕಾಶ್ ಬಾಲ್ಯದಲ್ಲೇ ತಂದೆ, ತಾಯಿಯನ್ನು ಕಳೆದುಕೊಂಡು ಚಿಕ್ಕಮ್ಮನ ಪೋಷಣೆಯಲ್ಲಿ ಬೆಳೆದಿದ್ದಾನೆ. ಚಿಂದಿ ಆಯುವ ಕೆಲಸ ಮಾಡುತ್ತಾ ಕಳ್ಳತನಕ್ಕೆ ಇಳಿದಿದ್ದನು. ಆರೋಪಿ ಪ್ರಕಾಶ್ಗೆ ಬೆಟ್ಟಿಂಗ್, ಮದ್ಯಪಾನ, ಗಾಂಜಾ, ಹುಡುಗಿಯರ ಶೋಕಿ ಇತ್ತು. ಕಳೆದ ವರ್ಷ ಮೇ 16 ರಂದು ಸಿಸಿಬಿ ಪೊಲೀಸರು ಆರೋಪಿ ಪ್ರಕಾಶ್ನನ್ನು ಬಂಧಿಸಿದ್ದರು. ಬಿಡುಗಡೆಯಾಗಿ ಬಂದ ಬಳಿಕ ಮತ್ತೆ 13 ಮನೆಗಳಲ್ಲಿ ಕಳ್ಳತನ ಮಾಡಿದ್ದನು. ಆರೋಪಿ ಪ್ರಕಾಶ್ ಬಂಧನಕ್ಕೆ ನಗರದ ವಿವಿಧ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಪೊಲೀಸರ ಕಣ್ತಪ್ಪಿಸಿಕೊಳ್ಳಲು ಆರೋಪಿ ಪ್ರಕಾಶ್ ಮೊಬೈಲ್ ಬಳಕೆ ಮಾಡುತ್ತಿರಲಿಲ್ಲ. ಹೀಗಾಗಿ, ಮಡಿವಾಳ ಠಾಣೆ ಪೊಲೀಸರು ಆರೋಪಿ ಪ್ರಕಾಶ್ನ ಪತ್ನಿ ಮತ್ತು ಕುಟುಂಬಸ್ಥರ ಫೋನ್ ಟ್ರ್ಯಾಕ್ ಮಾಡಿದ್ದರು. ಆಗ, ಪೊಲೀಸರಿಗೆ ಆರೋಪಿ ಪ್ರಕಾಶ್ ಅತ್ತಿಬೆಲೆಯಲ್ಲಿರುವ ಮನೆಯೊಂದರಲ್ಲಿ ವಾಸವಾಗಿರುವುದು ಗೊತ್ತಾಗಿದೆ. ಕೂಡಲೇ ಸ್ಥಳಕ್ಕೆ ತೆರಳಿದ ಪೊಲೀಸರು ಆರೋಪಿ ಪ್ರಕಾಶ್ನನ್ನು ಬಂಧಿಸಿದ್ದಾರೆ. ಆರೋಪಿ ಪ್ರಕಾಶ್ ಮುಂಚೆ ಉತ್ತರಹಳ್ಳಿಯಲ್ಲಿ ವಾಸವಾಗಿದ್ದನು.
ಇದನ್ನೂ ಓದಿ: ರಾಜಕಾರಣಿಗಳು, ಸಹಚರರ ಜೊತೆ ಮಲಗು ಎಂದು ಪೀಡಿಸುವ ಗಂಡ
ಆರೋಪಿಯನ್ನು ಬಂಧಸಿದ ಬಳಿಕ, ನಗರದ ವಿವಿಧೆಡೆ ಕಳ್ಳತನ ಮಾಡಿದ್ದು ಬೆಳಕಿಗೆ ಬಂದಿದೆ. ಮಡಿವಾಳದಲ್ಲಿ ಮತ್ತು ಹುಳಿಮಾವುನಲ್ಲಿ ತಲಾ ಮೂರು ಕಡೆ ಕಳ್ಳತನ ಮಾಡಿದ್ದಾನೆ. ಮೈಕೋಲೇಔಟ್, ಬಂಡೆಪಾಳ್ಯ, RR ನಗರ, ಸುಬ್ರಹ್ಮಣ್ಯಪುರ, ಹೆಚ್ಎಸ್ಆರ್ ಲೇಔಟ್, ಬೇಗೂರು ಈ ಎಲ್ಲ ನಗರಗಳಲ್ಲಿ ಆರೋಪಿ ಪ್ರಕಾಶ್ ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಬಂಧಿತ ಆರೋಪಿಯಿಂದ 80 ಲಕ್ಷ ಮೌಲ್ಯದ 779 ಗ್ರಾಂ ಚಿನ್ನಾಭರಣ ಮತ್ತು ಎರಡು ಬೈಕ್‌ಗಳು, ಕೃತ್ಯಕ್ಕೆ ಬಳಸಿದ್ದ 130 ನಕಲಿ ಕೀಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪ್ರಕಾಶ್ ಮತ್ತು ರಾಜೀವ್ ವಿರುದ್ಧ ಮಡಿವಾಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 3:01 pm, Tue, 1 July 25







