ಪ್ರತ್ಯೇಕ ಘಟನೆ: ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದ ಆಸಾಮಿ, ಕನ್ನಡ ಹಾಡುಗಾಗಿ ಪಬ್ನಲ್ಲಿ ಫೈಟ್
ಆಟೋ ಚಾಲನೆ ಮಾಡಿಕೊಂಡು ಜೀವನ ನಡೆಸುತ್ತಿದ್ದ ವ್ಯಕ್ತಿ ಆನ್ಲೈನ್ ಬೆಟ್ಟಿಂಗ್ ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡಿಕೊಂಡಿದ್ದಾನೆ. ಈ ಸಾಲ ತೀರಿಸಲು ಆಟೋ ಚಾಲಕ ಅಡ್ಡ ದಾರಿ ಹಿಡಿದಿದ್ದಾನೆ. ಮತ್ತೊಂದು ಘಟನೆಯಲ್ಲಿ ಪಬ್ನಲ್ಲಿ ಕನ್ನಡ ಹಾಡಿಗಾಗಿ ಗ್ರಾಹಕರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ನಡೆದಿದೆ.
ಬೆಂಗಳೂರು, ಆಗಸ್ಟ್ 25: ಆನ್ಲೈನ್ ಬೆಟ್ಟಿಂಗ್ (Online Betting) ಹುಚ್ಚಾಟಕ್ಕೆ ಬಿದ್ದು ಮೈತುಂಬ ಸಾಲ ಮಾಡಿಕೊಂಡು ಸಾಲ ತೀರಿಸಲು ಸರಗಳ್ಳತನಕ್ಕೆ ಇಳಿದಿದ್ದ ಆರೋಪಿಯನ್ನು ಪೊಲೀಸರು (Police) ಬಂಧಿಸಿದ್ದಾರೆ. ಬೆಂಗಳೂರಿನ (Bengaluru) ಕತ್ರಿಗುಪ್ಪೆ ನಿವಾಸಿ ಸುರೇಶ್ ಬಂಧಿತ ಆರೋಪಿ. ಸುರೇಶ್ ಆನ್ಲೈನ್ನಲ್ಲಿ ಬೆಟ್ಟಿಂಗ್ ಗೇಮ್ ಆಡುತಿದ್ದನು. ಈ ವೇಳೆ ಸುರೇಶ್ ಸಾಕಷ್ಟು ಹಣ ಕಳೆದುಕೊಂಡಿದ್ದನು. ಅಲ್ಲದೇ, ಬೆಟ್ಟಿಂಗ್ ಗೇಮ್ಗಾಗಿ ಐದು ಲಕ್ಷ ಸಾಲ ಮಾಡಿಕೊಂಡಿದ್ದನು. ಆರೋಪಿ ಸುರೇಶ್ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದನು. ಮಾಡಿದ ಸಾಲ ತೀರಿಸಲು ಆಟೋ ಸಹ ಅಡವಿಟ್ಟಿದ್ದನು. ಆದರೂ, ಸಾಲ ತೀರಿರಲಿಲ್ಲ.
ಹೀಗಾಗಿ, ಸಾಲ ತೀರಿಸಲು ದಾರಿ ಕಾಣದೆ ಸರಗಳ್ಳತನಕ್ಕಿಳಿದಿದ್ದನು. ಸುರೇಶ್ ಗಿರಿನಗರದ ಬೈರಪ್ಪ ಲೇಔಟ್ನಲ್ಲಿ ವಿಳಾಸ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳ್ಳತನ ಮಾಡಿದ್ದನು. ಪ್ರಕರಣ ದಾಖಲಿಸಿಕೊಂಡಿದ್ದ ಗಿರಿನಗರ ಪೊಲೀಸರು ತನಿಖೆ ನಡೆಸಿ, ಆರೋಪಿ ಸುರೇಶ್ನನ್ನು ಬಂಧಿಸಿದ್ದಾರೆ. ಗಿರಿನಗರ ಪೊಲೀಸರಿಂದ ತನಿಖೆ ಮುಂದುವರೆದಿದೆ.
ಪಬ್ನಲ್ಲಿ ಕನ್ನಡ ಹಾಡುಗಳಿಗಾಗಿ ಫೈಟ್
ದಕ್ಷಿಣ ಭಾರತದ ಹಾಡುಗಳನ್ನು ಹಾಕಲು ಹಿಂದೇಟು ಹಾಕಿದ್ದಕ್ಕೆ ಪಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲಕಾಲ ವಾಗ್ವಾದ ನಡೆಯಿತು. ಕೋರಮಂಗಲದ ಪಬ್ವೊಂದರಲ್ಲಿ ಬರೀ ಇಂಗ್ಲೀಷ್ ಹಾಡುಗಳನ್ನು ಹಾಕಲಾಗುತ್ತಿತ್ತು. ಇದನ್ನು ಪ್ರಶ್ನಿಸಿದ ಗ್ರಾಹಕರು, ದಕ್ಷಿಣ ಭಾರತದ ಹಾಡುಗಳನ್ನು ಹಾಕುವಂತೆ ಹೇಳಿದ್ದಾರೆ. ಇದಕ್ಕೆ ಪಬ್ ಸಿಬ್ಬಂದಿ ನಾವು ಬರೀ ಇಂಗ್ಲೀಷ್ ಹಾಡುಗಳನ್ನ ಮಾತ್ರ ಹಾಕುತ್ತೇವೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಇಬ್ಬರು ಹೆಣ್ಣುಮಕ್ಕಳನ್ನ ಕೊಚ್ಚಿ ಕೊಂದ ಮಲತಂದೆ
ಇದರಿಂದ ಪಬ್ ಸಿಬ್ಬಂದಿ ಮತ್ತು ಗ್ರಾಹಕರ ನಡುವೆ ಕೆಲ ಕಾಲ ವಾಗ್ವಾದ ನಡೆಯಿರತು. ಕೊನೆಗೆ ಪಬ್ ಸಿಬಂದಿ ಕನ್ನಡ ಹಾಡು ಮಾತ್ರ ಹಾಕುತ್ತೇವೆ, ಆದರೆ ತೆಲುಗು, ತಮಿಳು ಹಾಡುಗಳನ್ನು ಹಾಕುವುದಿಲ್ಲ ಎಂದಿದ್ದಾರೆ. ಘಟನೆಯ ವಿಡಿಯೋವನ್ನು ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹರಿಬಿಡಲಾಗಿದೆ.
ಹಾಡಹಗಲೆ ಸರಗಳ್ಳತನಕ್ಕೆ ಯತ್ನಿಸಿದ ವ್ಯಕ್ತಿಗೆ ಬಿತ್ತು ಗೂಸಾ
ಮಂಡ್ಯ: ಮಹಿಳೆಯ ಸರಗಳ್ಳತನಕ್ಕೆ ಯತ್ನಿಸಿದ್ದ ವ್ಯಕ್ತಿಗೆ ಸಾರ್ವಜನಿಕರು ಧರ್ಮದೇಟು ನೀಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ಪಟ್ಟಣದಲ್ಲಿ ಘಟನೆ ನಡೆದಿದೆ. ಕೃಷ್ಣಾಪುರದ ಶ್ರೀನಿವಾಸ್ ಸರಗಳ್ಳತನಕ್ಕೆ ಯತ್ನಿಸಿದ ಆರೋಪಿ.
ಕೆ.ಆರ್.ಪೇಟೆ ಪಟ್ಟಣದ ಶ್ರೀನಿವಾಸ್ ಹೇಮಗಿರಿ ರಸ್ತೆಯ ಕಿರಾಣಿ ಅಂಗಡಿಯೊಂದಕ್ಕೆ ಬೈಕ್ನಲ್ಲಿ ಬಂದಿದ್ದನು. ಸಿಗರೇಟ್ ಕೇಳುವ ನೆಪದಲ್ಲಿ ಅಂಗಡಿಯಲ್ಲಿದ್ದ ಮಹಿಳೆ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಚಿನ್ನದ ಸರ ಕೀಳಲು ಮುಂದಾದಾಗ ಮಹಿಳೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ. ಅಂಗಡಿಯಲ್ಲಿದ್ದ ಮಚ್ಚಿನಿಂದ ಸರಗಳ್ಳನ ಮೇಲೆ ಮಹಿಳೆ ಹಲ್ಲೆ ಮಾಡಲು ಯತ್ನಿಸಿದ್ದಾಳೆ. ಶ್ರೀನಿವಾಸ್ ತಕ್ಷಣ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಸರಗಳ್ಳನನ್ನು ಹಿಂಬಾಲಿಸಿ, ಹಿಡಿದು ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕೆ.ಆರ್.ಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ