ಜಮೀರ್ ಅಹ್ಮದ್ ಸಂಧಾನಕ್ಕೂ ಬಗ್ಗದ ರೌಡಿಗಳು: ಫೇಸ್ಬುಕ್ನಲ್ಲಿ ಬೆದರಿಕೆ ಹಾಕಿದ್ದವನಿಂದ ನಡೆಯಿತು ಭೀಕರ ಕೊಲೆ
ಬೆಂಗಳೂರಿನಲ್ಲಿ ರೌಡಿಶೀಟರ್ ನಾಗನ ಕೊಲೆಯಾಗಿದೆ. ಈ ಕೊಲೆ ಮಾಡಿದ ಆರೋಪಿ ವೆಂಕಟೇಶ್ 8 ತಿಂಗಳ ಹಿಂದೆಯೇ ನಿನ್ನನ್ನು ಕೊಲೆ ಮಾಡುತ್ತೇನೆ ಅಂತ ನಾಗ ಫೇಸ್ಬುಕ್ ಲೈವ್ನಲ್ಲಿ ಬೆದರಿಕೆ ಹಾಕಿದ್ದನು. ಬೆದರಿಕೆ ಬಳಿಕ ಸಚಿವ ಜಮೀರ್ ಅಹ್ಮದ್ ನಾಗ ಮತ್ತು ವೆಂಕಟೇಶ್ನನ್ನು ಕರೆಸಿ ಸಂಧಾನ ಮಾಡಿದ್ದರು. ಆದರೂ ಕೂಡ ಕೊಲೆ ನಡೆದಿದೆ.
ಬೆಂಗಳೂರು, ಜೂನ್ 14: ನಗರದಲ್ಲಿ (Bengaluru) ರೌಡಿಗಳ ಅಟ್ಟಹಾಸ ಮಿತಿ ಮೀರಿದೆ. ಪೊಲೀಸರು ಕಣ್ಮುಚ್ಚಿ ಕುಳತಿದ್ದಾರೆ ಎಂಬ ಅನುಮಾನ ಶುರುವಾಗಿದೆ. ಓರ್ವ ರೌಡಿ ಫೇಸ್ಬುಕ್ ಲೈವ್ನಲ್ಲಿ (Facebook Live) ಕೊಲೆ ಬೆದರಿಕೆ ಹಾಕಿದ 8 ತಿಂಗಳಲ್ಲಿ ಹತ್ಯೆ ಮಾಡಿದ್ದಾನೆ. ಫೇಸ್ಬುಕ್ ಲೈವ್ ಅಲ್ಲಿ ಕೊಲೆ ಬೆದರಿಕೆ ಹಾಕಿದ್ದ ರೌಡಿ ನಾಗನನ್ನು ರೌಡಿ ವೆಂಕಟೇಶ್ ಹತ್ಯೆ ಮಾಡಿದ್ದಾನೆ. ಗುರುವಾರ (ಜೂ.13) ರಂದು ಜ್ಞಾನ ಭಾರತಿ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಹಳೇ ವೈಷಮ್ಯ ಹಿನ್ನೆಲೆಯಲ್ಲಿ ಕೊಲೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
ರೌಡಿ ನಾಗ ಬೈಕ್ ಚಾಲನೆ ಮಾಡುತ್ತ ಫೇಸ್ಬುಕ್ ಲೈವ್ನಲ್ಲಿ “ನಿನ್ನೂ ಕೊಲೆ ಮಾಡುವೆ ಇದ್ನ ಸೇವ್ ಮಾಡಕೊ ಶಿಷ್ಯ. ಬದುಕಬೇಕೆಂದರೆ ಕ್ಷಮೆ ಕೇಳು. ಇಲ್ಲವಾದರೆ ಕೊಲೆ ಮಾಡುವೆ” ಎಂದು ರೌಡಿ ನಾಗ ವೆಂಕಟೇಶ್ಗೆ ಬೆದರಿಕೆ ಹಾಕಿದ್ದನು. ಇದಾದ ಬಳಿಕ ಸಚಿವ ಜಮೀರ್ ಅಹ್ಮದ್ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಸಚಿವರ ಬಳಿ ರೌಡಿಗಳ ಸಂಧಾನ ನಡೆದ ಬಳಿಕ ಪೊಲೀಸರು ಸೈಲೆಂಟ್ ಆಗಿದ್ದರು. ಆದರೆ, ಗುರುವಾರ ರೌಡಿ ವೆಂಕಟೇಶ್ ಏಕಾಏಕಿ ಗ್ಯಾಂಗ್ ಕಟ್ಟಿಕೊಂಡು ಹೋಗಿ ಅಟ್ಯಾಕ್ ಮಾಡಿ ನಾಗ್ನನ್ನು ಕೊಲೆ ಮಾಡಿದ್ದಾನೆ.
ಓರ್ವ ರೌಡಿ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿದ್ದರೂ, ಪೊಲೀಸರು ಮಾತ್ರ ಕಂಡು ಕಾಣದಂತೆ ಕೂತಿದ್ದು ಮಾತ್ರ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೆ, ನಗರದಲ್ಲಿನ ಕಾನೂನು ಸುವ್ಯವಸ್ಥೆ ಬಗ್ಗೆ ಅನುಮಾನ ಹುಟ್ಟುವಂತೆ ಮಾಡಿದೆ. ಪೊಲೀಸರ ನಿರ್ಲಕ್ಷ್ಯವೆ ರೌಡಿಶೀಟರ್ ನಾಗನ ಬರ್ಬರವಾಗಿ ಹತ್ಯೆಯಾಗಲು ಕಾರಣವಾಯಿತೇ ಎಂಬ ಪ್ರಶ್ನೆ ಮೂಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:58 pm, Fri, 14 June 24