ಸೆನ್ಸೇಷನಲ್ ಕ್ರೈಮ್ ಕತೆಗಳು: ಪಾಲ್ಘರ್ ಹತ್ಯಾಕಾಂಡ ತಮ್ಮೆದುರು ನಡೆಯುತ್ತಿದ್ದರೂ ಪೊಲೀಸರು ನಿಷ್ಕ್ರಿಯರಾಗಿದ್ದರು!
ಜನರ ಗುಂಪು ಸಾಧುಗಳ ಮೇಲೆ ನಿರ್ದಯತೆಯಿಂದ ಹಲ್ಲೆ ನಡೆಸುತ್ತಿದ್ದಾಗ ಸ್ಥಳಕ್ಕೆ ಪೊಲೀಸರು ಧಾವಿಸುತ್ತಾರೆ. ಅವರನ್ನು ನೋಡಿದಾಕ್ಷಣ ಸಾಧುಗಳಲ್ಲಿ ಬದುಕುಳಿಯುವ ಆಶಾಭಾವನೆ ಹುಟ್ಟುತ್ತದೆ. ಆದರೆ, ಖದ್ದು ಪೊಲೀಸರೇ ಅವರನ್ನು ಗುಂಪಿಗೆ ಒಪ್ಪಿಸಿದಾಗ ಅವರ ಸಾವು ನಿಶ್ಚಿತವಾಗುತ್ತದೆ.
ಸೆನ್ಸೇಷನಲ್ ಕ್ರೈಮ್ ಕತೆಗಳ ಸರಣಿಯಲ್ಲಿ ನಾವಿಂದು ಮಹಾರಾಷ್ಟ್ರದ ಪಾಲ್ಘರ್ ಜಿಲ್ಲೆ ಗಡಚಿಂಚಲೆ ಹೆಸರಿನ ಗ್ರಾಮದ ನಿವಾಸಿಗಳ ಪೈಕಿ 500 ಕ್ಕೂ ಹೆಚ್ಚು ಜನ ಗುಂಪುಗೂಡಿ ಇಬ್ಬರು ಸಾಧುಗಳು-ಕಲ್ಪವೃಕ್ಷ ಗಿರಿ ಮಹಾರಾಜ (Kalpavriksha Giri Maharaj) (70 ವರ್ಷ), 35-ವರ್ಷ-ವಯಸ್ಸಿನ ಸುಶೀಲ್ ಗಿರಿ ಮಹಾರಾಜ (Sushil Giri Maharaj) ಮತ್ತು 30ರ ಪ್ರಾಯದವನಾಗಿದ್ದ ಅವರ ಕಾರು ಚಾಲಕ ನೀಲೇಶ್ ತಲ್ಗಾಡೆಯನ್ನು (Nilesh Talgade) ಏಪ್ರಿಲ್ 16, 2020 ರಂದು ನಿರ್ದಯತೆ ಮತ್ತು ಬಹಳ ಕ್ರೂರವಾಗಿ ಹತ್ಯೆಗೈದ ಕತೆಯನ್ನು ಹೇಳುತ್ತಿದ್ದೇವೆ. ಅವತ್ತು ಭೀಕರ ಹತ್ಯೆಗಳನ್ನು ಕಂಡ ಗಡಚಿಂಚಲೆ ಗ್ರಾಮ ಮುಂಬೈ ಮಹಾನಗರದಿಂದ ಸುಮಾರು 120 ಕಿಮೀ ದೂರದಲ್ಲಿದೆ.
ಉನ್ನತಶ್ರೇಣಿಯ ಸಾಧುಗಳು
ಹತ್ಯೆಗೊಳಗಾದ ಸಾಧುಗಳು ನಾಸಿಕ್ ನಗರದವರು ಮತ್ತು ಸಾಧುಗಳ ಶ್ರೇಣಿಯಲ್ಲಿ ಅತ್ಯುನ್ನತವಾದದ್ದು ಎಂದು ಪರಿಗಣಿಸಲಾಗುವ ಶ್ರೀ ಪಂಚ್ ದರ್ಶನಂ ಜುನಾ ಆಖಾರಾಗೆ ಸೇರಿದವರಾಗಿದ್ದರು. ವಾರಣಾಸಿ ಜುನಾ ಅಖಾರಾದ ಕೇಂದ್ರಸ್ಥಳವಾಗಿದೆ. ಹತ್ಯೆಗಳು ನಡೆಯುವ ಮೊದಲು ಕಿಡ್ನಿಗಳನ್ನು ಅದರಲ್ಲೂ ವಿಶೇಷವಾಗಿ ಮಕ್ಕಳ ಮೂತ್ರಪಿಂಡಗಳನ್ನು ಕಳುವು ಮಾಡುವ ಕಿರಾತಕರು ಹೊಂಚು ಹಾಕುತ್ತಾ ಗ್ರಾಮದಲ್ಲಿ ಓಡಾಡುತ್ತಿದ್ದಾರೆ ಅಂತ ಗಾಳಿಸುದ್ದಿ ಹರಡಿತ್ತು. ಇದೇ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸರತಿಯ ಮೇಲೆ ಗ್ರಾಮವನ್ನು ಹಗಲು ರಾತ್ರಿ ಕಾವಲು ಕಾಯಲಾರಂಭಿಸಿದ್ದರು.
ಗ್ರಾಮದ ಮೂಲಕ ಕಾರಿನಲ್ಲಿ ಹಾದುಹೋಗುತ್ತಿದ್ದ ಸಾಧುಗಳನ್ನು ಕಿಡ್ನಿಕಳ್ಳರೆಂದು ಭಾವಿಸಿದ ಸುಮಾರು 500 ಜನರನ್ನೊಳಗೊಂಡ ಗ್ರಾಮಸ್ಥರ ಗುಂಪು ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿತ್ತು. ಮಹಾರಾಷ್ಟ್ರದ ಅಪರಾಧ ತನಿಖಾ ವಿಭಾಗ (ಸಿಐಡಿ) ಪ್ರಕರಣವನ್ನು ಕೈಗೆತ್ತಿಕೊಂಡು ತನಿಖೆ ಆರಂಭಿಸಿತು. ಸಿಐಡಿ ಮತ್ತು ಪಾಲ್ಗಾರ್ ಪೊಲೀಸರು ಒಟ್ಟು 251 ಶಂಕಿತರನ್ನು ವಶಕ್ಕೆ ತೆಗೆದುಕೊಂಡರು. ಅವರಲ್ಲಿ 13 ಜನ ಬಾಲಾಪರಾಧಿಗಳು.
ಆರೋಪಿತರಲ್ಲಿ ಸುಮಾರು 70 ಜನ ಈಗಲೂ ಬಂಧಿಖಾನೆಯಲ್ಲಿದ್ದಾರೆ. ಘಟನೆ ನಡೆದ ಕೂಡಲೇ ಅಗ ಮಹಾರಾಷ್ಟ್ರ ವಿಧಾನ ಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ದೇವೇಂದ್ರ ಫಡ್ನಾವಿಸ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉನ್ನತಮಟ್ಟದ ತನಿಖೆಗಾಗಿ ಆಗ್ರಹಿಸಿದರು. ಹತ್ಯೆ ನಡೆದಾಗ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದ ಮಹಾ ವಿಕಾಸ ಅಗಾಧಿ ಸಮ್ಮಿಶ್ರ ಸರ್ಕಾರ ಬಿಜೆಪಿ ಕೋಮುವಾದಿ ರಾಜಕಾರಣ ಮಾಡುತ್ತಿದೆ ಎಂದು ಹೇಳಿತು. ಮಹಾರಾಷ್ಟ್ರದಲ್ಲಿ ಕೊವಿಡ್-19 ಪ್ರಕರಣಗಳು ದಿನೇದಿನೆ ಹೆಚ್ಚುತ್ತಿದ್ದ ಸಮಯ ಅದಾಗಿತ್ತು.
ಗುಂಪು ಹತ್ಯೆ ನ್ಯಾಯಾಂಗ ವ್ಯವಸ್ಥೆಗೆ ಕಳಂಕ
ಒಬ್ಬ ವ್ಯಕ್ತಿ ಅಪರಾಧ ಮಾಡಿದ್ದಾನೆ ಅಥವಾ ಮಾಡಲಿದ್ದಾನೆ ಭಾವಿಸುವ ಜನರ ಗುಂಪು ತಾನೇ ಕಾನೂನನ್ನು ಕೈಗೆತ್ತಿಕೊಂಡು ಅವನನ್ನು ಕೊಲ್ಲುವುದು ಗುಂಪು ಹತ್ಯೆ ಎನಿಸಿಕೊಳ್ಳುತ್ತದೆ ಮತ್ತು ನ್ಯಾಯಾಂಗ ವ್ಯವಸ್ಥೆಗೆ ಇದು ಕಳಂಕ ಅಂತ ಪರಿಗಣಿಸಲಾಗುತ್ತದೆ. ಇಂಥ ಗುಂಪುಗಳಿಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇರುವುದಿಲ್ಲ ಮತ್ತು ಅದರ ಸದಸ್ಯರು ತಾವು ಕಾನೂನುಗಿಂತ ಹೆಚ್ಚು ಅಂತ ಭಾವಿಸುತ್ತಾರೆ. ತಾವು ತಪ್ಪಿತಸ್ಥರೆಂದು ಭಾವಿಸುವವರನ್ನು ತಮಗೆ ಸರಿಯೆನಿಸಿದ ಶಿಕ್ಷೆ ನೀಡಿ ಇಡೀ ನ್ಯಾಯಾಂಗ ವ್ಯವಸ್ಥೆ ದುರ್ಬಲ ಮತ್ತು ನಿಷ್ಪ್ರಯೋಜಕ ಅಂತ ಕಾಣುವ ಸ್ಥಿತಿ ನಿರ್ಮಿಸುತ್ತಾರೆ.
ತಮ್ಮ ಭಾವನೆಗಳ ಆಧಾರದ ಮೇಲೆ ವ್ಯಕ್ತಿಯೊಬ್ಬನನ್ನು ಅಪರಾಧಿ ಅಂತ ಪರಿಗಣಿಸಿ ಅವನನ್ನು ಶಿಕ್ಷಿಸುವ ಅಧಿಕಾರ ತನಗಿದೆ ಅಂತ ಒಂದು ಗುಂಪು ಭಾವಿಸುವುದಾದರೆ ಅದನ್ನ ಸಹಿಸಿಕೊಳ್ಳುವುದು ಸಾಧ್ಯವಿಲ್ಲ. ಹಾಗೆ ಭಾವಿಸುವವರಿಗೆ ಕಾನೂನಿನ ಪ್ರಕಾರ ಮತ್ತು ಅದರ ಅಡಿಯಲ್ಲಿ ಶಿಕ್ಷೆಯಾಗುತ್ತದೆ. ಇದು, ದೇಶದ ಪ್ರತಿಯೊಬ್ಬ ವ್ಯಕ್ತಿಗೆ ಬದುಕುವ ಹಾಗೂ ಸ್ವಾತಂತ್ರ್ಯವನ್ನು ಕಲ್ಪಿಸುವ ಭಾರತೀಯ ಸಂವಿಧಾನದ 21ನೇ ಕಲಮ್ಮಿನ ಉಲ್ಲಂಘನೆಯಾಗಿದೆ. ಗುಂಪು ಹತ್ಯೆಯಿಂದ ರಕ್ಷಣೆ ಕಾಯ್ದೆ 2017 ಜಾರಿಯಲ್ಲಿದ್ದರೂ ಸಾಧುಗಳ ಹತ್ಯೆ ಸೇರಿದಂತೆ ಅಂಥ ಬೇರೆ ಹತ್ಯೆಗಳೂ ನಮ್ಮ ದೇಶದಲ್ಲಿ ನಡೆದಿವೆ.
ಹತ್ಯೆ ನಡೆಯುವಾಗ ಪೊಲೀಸರು ಮಾಡಿದ್ದೇನು?
ಜನರ ಗುಂಪು ಸಾಧುಗಳ ಮೇಲೆ ನಿರ್ದಯತೆಯಿಂದ ಹಲ್ಲೆ ನಡೆಸುತ್ತಿದ್ದಾಗ ಸ್ಥಳಕ್ಕೆ ಪೊಲೀಸರು ಧಾವಿಸುತ್ತಾರೆ. ಅವರನ್ನು ನೋಡಿದಾಕ್ಷಣ ಸಾಧುಗಳಲ್ಲಿ ಬದುಕುಳಿಯುವ ಆಶಾಭಾವನೆ ಹುಟ್ಟುತ್ತದೆ. ಆದರೆ, ಖದ್ದು ಪೊಲೀಸರೇ ಅವರನ್ನು ಗುಂಪಿಗೆ ಒಪ್ಪಿಸಿದಾಗ ಅವರ ಸಾವು ನಿಶ್ಚಿತವಾಗುತ್ತದೆ. ಈ ದೃಶ್ಯಾವಳಿಯನ್ನು ತೋರಿಸುವ ವಿಡಿಯೋಗಳು ವೈರಲ್ ಆಗಿದ್ದವು.
ಪೊಲೀಸರು ಸಾಧುಗಳು ಮತ್ತು ಅವರ ಡ್ರೈವರ್ ನನ್ನು ರಕ್ಷಿಸುವ ಬದಲು ಅವರನ್ನು ಗುಂಪಿಗೆ ಒಪ್ಪಿಸಿಕೊಟ್ಟು ದೂರ ಸರಿಯುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಾಣುತ್ತದೆ. ಇಂಡಿಯನ್ ಪೀನಲ್ ಕೋಡ್ 1860 ಮತ್ತು ಸೆಕ್ಷನ್ 141 ಅಡಿಯಲ್ಲಿ ಜನ ಗುಂಪುಗೂಡಿದ್ದು ಕಾನೂನುಬಾಹಿರ ಮತ್ತು ಅಪರಾಧ ದಂಡಸಂಹಿತೆ ಸೆಕ್ಷನ್ 129 ಅಡಿಯಲ್ಲಿ ಗುಂಪನ್ನು ಚದುರಿಸುವ ಅಧಿಕಾರ ತಮಗಿದ್ದರೂ ಪೊಲೀಸರು ತೆಪ್ಪಗಿರುತ್ತಾರೆ. ಸಾಧುಗಳನ್ನು ರಕ್ಷಿಸುವ, ಭದ್ರತೆ ಒದಗಿಸಿ ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯುವ ಯಾವುದೇ ಪ್ರಯತ್ನ ಅವರು ಮಾಡುವುದಿಲ್ಲ.