‘ವಾರ್ 2’ ಅಖಾಡಕ್ಕೆ ಬಾಬಿ ಡಿಯೋಲ್ ಎಂಟ್ರಿ; ಮುಖ್ಯ ವಿಲನ್ ಇವರೇನಾ?
‘ವಾರ್ 2’ ಸಿನಿಮಾದಲ್ಲಿ ಶಾರುಖ್ ಖಾನ್, ಸಲ್ಮಾನ್ ಖಾನ್ ಅತಿಥಿ ಪಾತ್ರ ಮಾಡಿರಬಹುದು ಎಂಬ ಊಹೆ ಇತ್ತು. ಆದರೆ ಅದು ನಿಜವಲ್ಲ ಎನ್ನುತ್ತಿವೆ ಮೂಲಗಳು. ಬದಲಿಗೆ, ನಟ ಬಾಬಿ ಡಿಯೋಲ್ ಅವರ ಎಂಟ್ರಿ ಆಗಿದೆ. ಆ ಮೂಲಕ ಪಾತ್ರವರ್ಗ ಹಿರಿದಾಗಿದೆ. ‘ವಾರ್ 2’ ಸಿನಿಮಾ ಆಗಸ್ಟ್ 14ಕ್ಕೆ ವಿಶ್ವಾದ್ಯಂತ ರಿಲೀಸ್ ಆಗಲಿದೆ.

400 ಕೋಟಿ ರೂಪಾಯಿಗೂ ಅಧಿಕ ಬಜೆಟ್ನಲ್ಲಿ ನಿರ್ಮಾಣ ಆಗಿರುವ ‘ವಾರ್ 2’ ಸಿನಿಮಾ (War 2 Movie) ಬಗ್ಗೆ ಅಭಿಮಾನಿಗಳಿಗೆ ಸಖತ್ ನಿರೀಕ್ಷೆ ಇದೆ. ಈ ಚಿತ್ರದ ಮೂಲಕ ಜೂನಿಯರ್ ಎನ್ಟಿಆರ್ ಅವರು ಬಾಲಿವುಡ್ಗೆ ಎಂಟ್ರಿ ನೀಡುತ್ತಿದ್ದಾರೆ. ಹೃತಿಕ್ ರೋಷನ್ ಜೊತೆ ಜೂನಿಯರ್ ಎನ್ಟಿಆರ್ (Jr NTR) ಅವರು ತೆರೆ ಹಂಚಿಕೊಂಡಿದ್ದಾರೆ. ಈ ಸಿನಿಮಾದಲ್ಲಿ ಒಬ್ಬರಿಗೆ ನೆಗೆಟಿವ್ ಶೇಡ್ ಇರುವ ಪಾತ್ರ ಇರಲಿದೆ ಎಂದು ಹೇಳಲಾಗುತ್ತಿದೆ. ಆದರೆ ಆ ಬಗ್ಗೆ ಚಿತ್ರತಂಡ ಏನನ್ನೂ ಸ್ಪಷ್ಟಪಡಿಸಿಲ್ಲ. ಹೀಗಿರುವಾಗಲೇ ‘ವಾರ್ 2’ ಬಳಗಕ್ಕೆ ಇನ್ನೋರ್ವ ಸ್ಟಾರ್ ಕಲಾವಿದನ ಎಂಟ್ರಿ ಆಗಿದೆ. ಹೌದು, ಈ ಸಿನಿಮಾದಲ್ಲಿ ಬಾಬಿ ಡಿಯೋಲ್ (Bobby Deol) ಕೂಡ ನಟಿಸಿದ್ದಾರೆ ಎಂಬುದು ಈಗ ಗೊತ್ತಾಗಿದೆ.
‘ಅನಿಮಲ್’ ಸಿನಿಮಾ ಸಿನಿಮಾದಲ್ಲಿ ವಿಲನ್ ಪಾತ್ರ ಮಾಡಿದ ಬಳಿಕ ಬಾಬಿ ಡಿಯೋಲ್ ಅವರ ಬೇಡಿಕೆ ಹೆಚ್ಚಾಯಿತು. ಹಲವು ಸಿನಿಮಾಗಳಲ್ಲಿ ಅವರಿಗೆ ವಿಲನ್ ಪಾತ್ರಕ್ಕೆ ಆಫರ್ ಬರುತ್ತಿದೆ. ‘ವಾರ್ 2’ ಸಿನಿಮಾದಲ್ಲಿ ಕೂಡ ಅವರು ಮುಖ್ಯ ವಿಲನ್ ಆಗಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ಆ್ಯಕ್ಷನ್ ಅವತಾರದಲ್ಲಿ ನೋಡಲು ಫ್ಯಾನ್ಸ್ ಕಾದಿದ್ದಾರೆ.
ಆಗಸ್ಟ್ 14ರಂದು ‘ವಾರ್ 2’ ಸಿನಿಮಾ ಬಿಡುಗಡೆ ಆಗಲಿದೆ. ಈಗಾಗಲೇ ಭರ್ಜರಿಯಾಗಿ ಟಿಕೆಟ್ ಬುಕಿಂಗ್ ಆಗುತ್ತಿದೆ. ಸ್ವಾತಂತ್ರ್ಯ ದಿನಾಚರಣೆಗೂ ಒಂದಿನ ಮುಂಚೆ ತೆರೆಕಾಣುತ್ತಿರುವ ಈ ಸಿನಿಮಾಗೆ ಒಂದು ವೇಳೆ ಉತ್ತಮ ವಿಮರ್ಶೆ ಸಿಕ್ಕರೆ ವೀಕೆಂಡ್ನಲ್ಲಿ ಸಖತ್ ಕಲೆಕ್ಷನ್ ಆಗಲಿದೆ. ತೆಲುಗು ಮತ್ತು ತಮಿಳಿಗೂ ಡಬ್ ಆಗಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ.
‘ವಾರ್ 2’ ಸಿನಿಮಾದಲ್ಲಿ ಜೂನಿಯರ್ ಎನ್ಟಿಆರ್ ಅವರು ನೆಗೆಟಿವ್ ಶೇಡ್ ಇರುವ ಪಾತ್ರ ಮಾಡಿರುವ ಸಾಧ್ಯತೆ ಇದೆ ಎಂಬುದು ಕೆಲವರ ಊಹೆ. ಆದು ನಿಜವೋ ಅಲ್ಲವೋ ಎಂಬುದು ಸಿನಿಮಾ ತೆರೆಕಂಡ ನಂತರವೇ ತಿಳಿಯಲಿದೆ. ಈ ಸಿನಿಮಾ ಮೇಲೆ ಜೂನಿಯರ್ ಎನ್ಟಿಆರ್ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಇದೆ. ಈಗಾಗಲೇ ‘ಜನಾಬ್-ಏ-ಆಲಿ’ ಹಾಡಿನ ಪ್ರೋಮೋ ಸಖತ್ ವೈರಲ್ ಆಗಿದೆ.
ಇದನ್ನೂ ಓದಿ: ‘ವಾರ್ 2’ ಹೊಸ ಹಾಡಿನಲ್ಲಿ ಧೂಳೆಬ್ಬಿಸಿದ ಜೂ. ಎನ್ಟಿಆರ್, ಹೃತಿಕ್ ರೋಷನ್
‘ಯಶ್ ರಾಜ್ ಫಿಲ್ಮ್ಸ್’ ಸಂಸ್ಥೆಯು ‘ವಾರ್ 2’ ಸಿನಿಮಾವನ್ನು ನಿರ್ಮಾಣ ಮಾಡಿದೆ. ಅಯಾನ್ ಮುಖರ್ಜಿ ಅವರು ನಿರ್ದೇಶನ ಮಾಡಿದ್ದಾರೆ. ‘ವೈಆರ್ಎಫ್ ಸ್ಪೈ ಯೂನಿವರ್ಸ್ನಲ್ಲಿ ಇರುವ ಟೈಗರ್ (ಸಲ್ಮಾನ್ ಖಾನ್), ಪಠಾಣ್ (ಶಾರುಖ್ ಖಾನ್) ಪಾತ್ರಗಳು ‘ವಾರ್ 2’ ಚಿತ್ರದಲ್ಲಿ ಕಾಣಿಸಿಕೊಳ್ಳಬಹುದು ಎಂಬ ಅನುಮಾನ ಕೆಲವರಿಗೆ ಇದೆ. ಎಲ್ಲದಕ್ಕೂ ಆಗಸ್ಟ್ 14ರಂದು ಉತ್ತರ ಸಿಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








