ಒಟಿಟಿಗೆ ಯಾವಾಗ ಬರಲಿದೆ ಸೂಪರ್ ಹಿಟ್ ‘ಸೈಯಾರ’ ಸಿನಿಮಾ?
ಲವ್ ಸ್ಟೋರಿ ಇಷ್ಟಪಡುವ ಪ್ರೇಕ್ಷಕರು ಚಿತ್ರಮಂದಿರದಲ್ಲಿ ‘ಸೈಯಾರ’ ಸಿನಿಮಾ ನೋಡಿ ಮೆಚ್ಚಿದ್ದಾರೆ. ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ಮಿಸ್ ಮಾಡಿಕೊಂಡವರು ಒಟಿಟಿ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ಸೂಪರ್ ಹಿಟ್ ‘ಸೈಯಾರ’ ಚಿತ್ರ ಯಾವ ಒಟಿಟಿಯಲ್ಲಿ, ಯಾವ ದಿನಾಂಕದಲ್ಲಿ ಬರಲಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ..

ಈ ವರ್ಷದ ಸೂಪರ್ ಹಿಟ್ ಸಿನಿಮಾಗಳ ಪಟ್ಟಿಯಲ್ಲಿ ‘ಸೈಯಾರ’ ಸಿನಿಮಾ (Saiyaara) ಸ್ಥಾನ ಪಡೆದುಕೊಂಡಿದೆ. ಜುಲೈ 18ರಂದು ಬಿಡುಗಡೆ ಆದ ಈ ಸಿನಿಮಾ ಇಂದಿಗೂ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಈ ಸಿನಿಮಾಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ. ಹೊಸ ಕಲಾವಿದರು ನಟಿಸಿದ್ದರೂ ಕೂಡ ಮೊದಲ ದಿನವೇ ‘ಸೈಯಾರ’ ಸಿನಿಮಾಗೆ ಭರ್ಜರಿ ಓಪನಿಂಗ್ ಸಿಕ್ಕಿತ್ತು. ಈ ಚಿತ್ರದ ಒಟ್ಟಾರೆ ಕಲೆಕ್ಷನ್ 325 ಕೋಟಿ ರೂಪಾಯಿ ಮೀರಿದೆ. ಹಾಗಾದರೆ ‘ಸೈಯಾರ’ ಸಿನಿಮಾದ ಒಟಿಟಿ ರಿಲೀಸ್ (Saiyaara OTT Release) ಯಾವಾಗ ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಚಿತ್ರಮಂದಿರದಲ್ಲಿ ‘ಸೈಯಾರ’ ಸಿನಿಮಾ ಈಗಲೂ ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವುದರಿಂದ ಸದ್ಯಕ್ಕಂತೂ ಒಟಿಟಿಗೆ ಬರುವುದು ಸಾಧ್ಯವಿಲ್ಲ. ಅದಕ್ಕೆ ಸ್ವಲ್ಪ ಸಮಯ ಹಿಡಿಯಲಿದೆ. ಚಿತ್ರದ ಕಲಾವಿದರಾಗಲೀ, ನಿರ್ಮಾಣ ಸಂಸ್ಥೆಯಾಗಲಿ, ಒಟಿಟಿ ಸಂಸ್ಥೆಯಾಗಲಿ ಒಟಿಟಿ ಬಿಡುಗಡೆಯ ಅಧಿಕೃತ ದಿನಾಂಕವನ್ನು ತಿಳಿಸಿಲ್ಲ. ಹಾಗಿದ್ದರೂ ಕೂಡ ಒಂದು ಹಿಂಟ್ ಸಿಕ್ಕಿದೆ.
ಸೆಪ್ಟೆಂಬರ್ 12ರಂದು ನೆಟ್ಫ್ಲಿಕ್ಸ್ನಲ್ಲಿ ‘ಸೈಯಾರ’ ಸಿನಿಮಾ ಬಿಡುಗಡೆ ಆಗಲಿದೆ ಎಂದು ಸೋಶಿಯಲ್ ಮೀಡಿಯಾ ಖಾತೆಯೊಂದರಲ್ಲಿ ಪೋಸ್ಟ್ ಮಾಡಲಾಗಿದೆ. ಚಿತ್ರತಂಡದ ಭಾಗವಾಗಿರುವ ಶಾನೋ ಶರ್ಮಾ ಅವರು ಇದನ್ನು ರೀ-ಶೇರ್ ಮಾಡಿದ್ದಾರೆ. ಹಾಗಾಗಿ ಇದು ಖಚಿತ ಇರಬಹುದು ಎಂದು ಅಭಿಮಾನಿಗಳು ನಂಬಿದ್ದಾರೆ. ಹಲವು ರೀತಿಯಲ್ಲಿ ಕಮೆಂಟ್ ಮಾಡಲಾಗುತ್ತಿದೆ.
‘ಸೈಯಾರ’ ಸಿನಿಮಾಗೆ ಮೋಹಿತ್ ಸೂರಿ ಅವರು ನಿರ್ದೇಶನ ಮಾಡಿದ್ದಾರೆ. ಹೊಸ ಕಲಾವಿದರಾದ ಅಹಾನ್ ಪಾಂಡೆ ಮತ್ತು ಅನೀತ್ ಪಡ್ಡ ಅವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ. ಸ್ಟಾರ್ ಹೀರೋಗಳು ಇಲ್ಲದ ಈ ಸಿನಿಮಾಗೆ ಪ್ರೇಕ್ಷಕರಿಂದ ಭರಪೂರ ಮೆಚ್ಚುಗೆ ಸಿಕ್ಕಿದೆ. ಚಿತ್ರಮಂದಿರದಲ್ಲಿ ನೋಡಿ ಇಷ್ಟಪಟ್ಟವರು ಮನೆಯಲ್ಲೇ ಕುಳಿತು ಮತ್ತೆ ಮತ್ತೆ ಈ ಸಿನಿಮಾ ನೋಡಬೇಕು ಎಂದು ಕಾಯುತ್ತಿದ್ದಾರೆ.
ಇದನ್ನೂ ಓದಿ: ‘ಸೈಯಾರ’ ನೋಡಿದ ಬಳಿಕ ಗೆಳತಿಯರಿಗಾಗಿ ಥಿಯೇಟರ್ನಲ್ಲೇ ಹೊಡೆದಾಡಿಕೊಂಡ ಯುವಕರು
ಮೊದಲ ದಿನ ‘ಸೈಯಾರ’ ಸಿನಿಮಾಗೆ ಬರೋಬ್ಬರಿ 22 ಕೋಟಿ ರೂಪಾಯಿ ಕಲೆಕ್ಷನ್ ಆಯಿತು. 2ನೇ ದಿನ 26 ಕೋಟಿ, 3ನೇ ದಿನ 36 ಕೋಟಿ ರೂಪಾಯಿ ಗಳಿಸಿ ಈ ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿತು. ಭಾರತದ ಬಾಕ್ಸ್ ಆಫೀಸ್ನಲ್ಲಿ ಈ ಚಿತ್ರದ ಒಟ್ಟು ಕಲೆಕ್ಷನ್ 325 ಕೋಟಿ ರೂಪಾಯಿ ದಾಟಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








