ಮಾಯಾಂಗಿಣಿಯಾದ ಮೌನಿಕ: ಹಳೇ ಲವ್ವರ್‌ ಭೇಟಿಗೆ ಕರೆದರೆ ಹುಷಾರ್!

ಹಳೆ ಲವರ್ ಫೋನ್ ಮಾಡಿ ಬಾ ಮೀಟ್ ಆಗೋಣ ಅಂದ್ರೆ ಯಾವುದಕ್ಕೂ ಒಮ್ಮೆ ಯೋಚನೆ ಮಾಡುವುದು ಒಳ್ಳೆಯರು. ಯಾಕಂದ್ರೆ, ಭೇಟಿ ಹಿಂದೆ ಸುಲಿಗೆ ಮಾಡುವ ಪ್ಲ್ಯಾನ್ ಇರುತ್ತೆ. ಇದಕ್ಕೆ ಪೂರಕವೆಂಬಂತೆ ಹಳೆ ಪ್ರೇಯಸಿ ಭೇಟಿಗೆ ಕರೆದಿದ್ದಾಳೆಂದು ಓಡೋಡಿ ಒಂದಿದ್ದ ವ್ಯಕ್ತಿಯನ್ನು ಆಂಧ್ರ ಪ್ರದೇಶದಿಂದ ಅಪಹರಿಸಿ ಪಾವಗಡಕ್ಕೆ ಕರೆತಂದು ಹಲ್ಲೆ ಮಾಡಿ ಸುಲಿಗೆ ಮಾಡಿರುವ ಘಟನೆ ನಡೆದಿದೆ.

ಮಾಯಾಂಗಿಣಿಯಾದ ಮೌನಿಕ: ಹಳೇ ಲವ್ವರ್‌ ಭೇಟಿಗೆ ಕರೆದರೆ ಹುಷಾರ್!
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Nov 24, 2024 | 5:19 PM

ಬೆಂಗಳೂರು, (ನವೆಂಬರ್ 24): ಈಗಿನ ಕಾಲದಲ್ಲಿ ಯಾರನ್ನು ನಂಬಬೇಕು ಯಾರನ್ನು ನಂಬಬಾರದು ಎನ್ನುವುದೇ ತಿಳಿಯದಂತಾಗಿದೆ. ಯಾಕಂದ್ರೆ, ಭೇಟಿಯಾಗೋಣ ಬಾ ಎಂದು ಮಾಜಿ ಪ್ರೇಯಸಿ ಮಾತಿಗೆ ಮರುಳಾಗಿ ಮೀಟ್ ಮಾಡಲು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಘಟನೆ ಬೆಂಗಳೂರಿನ ಕೋರಮಂಗಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಟಿಎಂ ಬಳಿ ನಡೆಯುತ್ತಿದ್ದ ಜಗಳನ್ನು ಗಮನಿಸಿದ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ ಬೆಂಗಳೂರಿನ ಕೋರಮಂಗಲ ಪೊಲೀಸರಿಂದ ಖತರ್ನಾಕ್ ಹನಿಗ್ಯಾಂಗ್​ ಬಂಧನವಾಗಿದೆ.ಆಂಧ್ರದ ನೆಲ್ಲೂರು ಮೂಲದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಆಂಧ್ರದಲ್ಲಿ ಕಿಡ್ನಾಪ್ ಮಾಡಿ ಪಾವಗಡ ಹಾಗೂ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ್ದಾರೆ. ಮೋನಿಕಾ, ಹರೀಶ್, ಹರಿಕೃಷ್ಣ, ನರೇಶ್, ರಾಜ್ ಕುಮಾರ್, ನರಸಿಂಹ, ಅಂಜನೀಲ್ ಬಂಧಿತ ಆರೋಪಿಗಳು.

ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಆಂಧ್ರದ ನೆಲ್ಲರೂರಿನ ಶಿವ ಎಂಬ ವ್ಯಕ್ತಿ ಮೆಡಿಕಲ್ ಶಾಪ್ ಇಟ್ಟುಕೊಂಡಿದ್ದ. ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಕೆಲ ಕಾರಣಾಂತರಗಳಿಂದ ಒಂದು ವರ್ಷದ ಹಿಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17 ರಂದು ಏಕಾಏಕಿ ಶಿವನಿಗೆ ಕರೆ ಮಾಡಿ ಭೇಟಿ​ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟೇ ಅಲ್ಲದೇ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಹೇಳಿದ್ದಾಳೆ.

ಇದನ್ನೂ ಓದಿ: ಪ್ರೊಫೆಸರ್‌ಗೆ ಖಾಸಗಿ ಫೋಟೋ ಗುಮ್ಮ: ಜಿಮ್‌ನಲ್ಲಿ ಕಸರತ್ತು ಮಾಡಲು ಬಂದ ಲೇಡಿ ಮಾಡಿದ್ದೇನು?

ಮಾಜಿ ಪ್ರೇಯಸಿಯ ಮಾತನ್ನು ನಂಬಿದ ಶಿವ, ತನ್ನ ಬಳಿ ಇದ್ದ ಚಿನ್ನಾಭರಣದೊಂದಿಗೆ ಹೊರಟಿದ್ದಾನೆ. ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಫಿಕ್ಸ್ ಆಗಿದೆ. ಪಾವಡಗಡದಲ್ಲಿ ಚಿನ್ನಾಭರಣದೊಂದಿಗೆ ಬಸ್​ನಲ್ಲಿ ಬಂದಿಳಿದ ಶಿವ ಮೌನಿಕಳನ್ನ ಭೇಟಿಯಾಗಿದ್ದ. ಇಬ್ಬರು ಪಾವಗಡದಲ್ಲಿ ಸುತ್ತಾಡುವಾಗ ಕಾರ್​ನಲ್ಲಿ ಬಂದ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿ ಶಿವನ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಇದೆಲ್ಲ ತನಗೆ ಸಂಬಂಧವೇ ಇಲ್ಲದಂತೆ ಮೌನವಾಗಿದ್ದ ಮೌನಿಕಳನ್ನು ಆ ಮನೆಯಿಂದ ಕಳುಹಿಸಿದ್ದಾರೆ.

ಹಣಕ್ಕಾಗಿ ಜಗಳ ಮಾಡಿಕೊಂಡು ಸಿಕ್ಕಿಬಿದ್ದ ಆರೋಪಿಗಳು

ಇದಾದ ಬಳಿಕ ಆರೋಪಿಗಳು ಶಿವನಿಗೆ ಮತ್ತೆ 10 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಕೊನೆಗೆ 5 ಲಕ್ಷ ರೂ. ನೀಡಲು ಒಪ್ಪಿದ ಶಿವ, ಸ್ನೇಹಿತರಿಂದ ಅಕೌಂಟ್​ಗೆ ಹಣ ಹಾಕಿಸಿಕೊಂಡಿದ್ದಾನೆ . ಆದ್ರೆ ಆತನ ಬಳಿ ಎಟಿಎಂ ಕಾರ್ಡ್ ಇಲ್ಲದಿದ್ದರಿಂದ ಕಾರ್ಡ್ ಕೊರಿಯರ್ ಮಾಡಿಸಿಕೊಂಡಿದ್ದ. ಬೆಂಗಳೂರಿನ ಮೆಜೆಸ್ಟಿಕ್ ಅಡ್ರೆಸ್​ಗೆ 4 ರಿಂದ 5 ಎಟಿಎಂ ಕಾರ್ಡ್​ಗಳನ್ನ ಕೊರಿಯರ್ ಮಾಡಿಸಿಕೊಂಡಿದ್ದರು ಆರೋಪಿಗಳು, ಎ1 ಆರೋಪಿ ಹರೀಶ್​ಗೆ ಬೆಂಗಳೂರು ಪರಿಚಯ ಇದ್ದಿದ್ದರಿಂದ ಸಿಕ್ಕಿ ಬೀಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ. ಬಳಿಕ ನವೆಂಬರ್ 21 ರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಮತ್ತು ಶಿವ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು. ಆದರೆ ಈ ವೇಳೆ ಇಬ್ಬರು ಆರೋಪಿಗಳ ಮಧ್ಯೆ ಹಣದ ವಿಚಾರಕ್ಕೆ ಜಗಳ ಆಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಶಿವ ಜೋರಾಗಿ ಕಿರುಚಿಕೊಂಡು ಸ್ಥಳದಲ್ಲಿದ್ದ ಜನರನ್ನು ಸೇರಿಸಿದ್ದಾನೆ.

ಇದೇ ಸಮಯದಲ್ಲಿ ಸಮೀಪದಲ್ಲಿಯೇ ಡ್ಯೂಟಿಯಲ್ಲಿದ್ದ ಪಿಎಸ್​ಐ ಮಾದೇಶ್ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಶಿವನ ಮಾತು ಕೇಳಿ ಅನುಮಾನ ಬಂದು ಮೂವರನ್ನು ಸ್ಟೇಷನ್​ಗೆ ಕರೆತಂದಿದ್ದಾರೆ. ಆರೋಪಿಗಳು ಮತ್ತು ಶಿವನನ್ನು ವಿಚಾರಿಸಿದಾಗ ಕಿಡ್ನಾಪ್ ಮತ್ತು ಸುಲಿಗೆಯ ಕಥೆ ಬಯಲಿಗೆ ಬಂದಿದೆ. ಈ ವಿಚಾರ ಕೇಳಿ ತಕ್ಷಣ FIR ದಾಖಲಿಸಿ ತನಿಖೆಗೆ ಸೂಚಿಸಿದ್ದ ಡಿಸಿಪಿ ಸಾರಾ ಫಾತೀಮಾ, ಶಿವನಿಂದ ದೂರು ಪಡೆದು ಪಾವಗಡದಲ್ಲಿದ್ದ ಮೌನಿಕ‌ ಸೇರಿದಂತೆ ಇನ್ನಿತರ ಆರೋಪಿಗಳನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಎಲ್ಲವನ್ನು ಬಾಯ್ಬಿಟ್ಟಿದ್ದಾರೆ. ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.

ಹನಿಟ್ರ್ಯಾಪ್​ಗೆ ಪ್ಲ್ಯಾನ್ ಮಾಡಿದ್ದ ಗ್ಯಾಂಗ್

ಆರೋಪಿಗಳಲ್ಲಿ ಒಬ್ಬನಾದ ಅಂಜನೀಲ್ ಆಂಧ್ರದಲ್ಲಿ ತನ್ನದೇ ಆದ ಟಾಪ್ -9 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇದೇ ಸಂಸ್ಥೆಯಲ್ಲಿ ಮೌನಿಕ ಕೂಡ ಕೆಲಸ ಮಾಡುತ್ತಿದ್ದಳು, ಇಬ್ಬರಿಗೂ ಗೆಳೆತನ ಇತ್ತು. ಈ ವೇಳೆ ಮೌನಿಕಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಅಂಜನೀಲ್ ಬಳಿ ಹೇಳಿಕೊಂಡಿದ್ದಳು. ಜೊತೆಗೆ ಶಿವನ ಬಗ್ಗೆಯೂ ಹೇಳಿದ್ದಳು. ಇದನ್ನು ಅರಿತ ಅಂಜನೀಲ್ ತನ್ನ ಸ್ನೇಹಿತ ಹರೀಶ್ ಜೊತೆ ಸೇರಿ ಈ ಹನಿಟ್ರ್ಯಾಪ್​ಗೆ ಪ್ಲ್ಯಾನ್ ಮಾಡಿದ್ದ. ಈ ಮೊದಲೇ ಹರೀಶ್ ಕ್ರಿಮಿನಲ್ ಬ್ಯಾಕ್​ಗ್ರೌಂಡ್ ಇರೋ ವ್ಯಕ್ತಿಯಾಗಿದ್ದ. ಹೀಗಾಗಿಯೇ ತನ್ನ ಸ್ನೇಹಿತರ ಜೊತೆ ಸೇರಿ ಮೌನಿಕಗಳನ್ನು ಮುಂದೆ ಬಿಟ್ಟು ಶಿವನನ್ನು ಕಿಡ್ನಾಪ್ ಮಾಡುವ ಪ್ಲ್ಯಾನ್ ಮಾಡಿದ್ದ.ಆದರೆ ಎಲ್ಲಾ ಅಂದುಕೊಂಡಂತೆ ನಡೆದು ಹಣ ಕೈಗೆ ಬರೋ ವೇಳೆ ಕೈಕೊಟ್ಟ ನಸೀಬು ಇವರೆಲ್ಲರನ್ನೂ ಕಂಬಿ ಹಿಂದೆ ಹೋಗುವಂತೆ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವರದಿ: ಪ್ರದೀಪ್ ಚಿಕ್ಕಾಟಿ ಬೆಂಗಳೂರು

Published On - 4:38 pm, Sun, 24 November 24