ನಕಲಿ ಪೊಲೀಸರಿಂದ ವಂಚನೆ, ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿ, ವಕೀಲೆ ಕೊಲೆ
ಕಾರು ಸುಮಾರು ಒಂದು ಕಿಲೋಮೀಟರ್ ಹೋಗುತ್ತಿದ್ದಂತೆ ಪ್ರತ್ಯಕ್ಷವಾದ ಪೊಲೀಸ್ ವೇಷ ಧರಿಸಿದ್ದ ದುಷ್ಕರ್ಮಿಗಳು ರಸ್ತೆ ಮಧ್ಯೆ ಕಾರ್ ಅಡ್ಡಗಟ್ಟಿ ಥಳಿಸಿದರು.
ಬೆಂಗಳೂರು: ಸೆಕೆಂಡ್ ಹ್ಯಾಂಡ್ ಕಂಟೇನರ್ ಕೊಡಿಸುವ ಆಮಿಷವೊಡ್ಡಿ ಲಕ್ಷಲಕ್ಷ ದರೋಡೆ ಮಾಡಿದ್ದ ಗ್ಯಾಂಗ್ ಒಂದನ್ನು ಬೆಂಗಳೂರಿನ ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದರು. ನಟರಾಜನ್, ಸದಾಶಿವ ನಾಯಕ, ಶಿವರಾಜ್, ದಿಲ್ಲುಬೋನ್, ನಿರ್ಮಲಾ ಬಂಧಿತರು. ರಂಗಸ್ವಾಮಯ್ಯ ಎಂಬುವವರಿಗೆ ಸೆಕೆಂಡ್ ಹ್ಯಾಂಡ್ ಕಂಟೇನರ್ ಕೊಡಿಸುವುದಾಗಿ ನಂಬಿಸಿದ್ದರು. ಕಂಟೇನರ್ ಖರೀದಿಗಾಗಿ ₹ 8 ಲಕ್ಷ ತನ್ನಿ ಎಂದು ಎಚ್ಬಿಆರ್ ಲೇಔಟ್ಗೆ ಕರೆಸಿಕೊಂಡಿದ್ದರು. ಬಳಿಕ ರಂಗಸ್ವಾಮಯ್ಯ ಅವರನ್ನು ಕಾರಿಗೆ ಹತ್ತಿಸಿಕೊಂಡು ತುಸು ದೂರು ಸಂಚರಿಸಿದ್ದರು. ಕಾರು ಸುಮಾರು ಒಂದು ಕಿಲೋಮೀಟರ್ ಹೋಗುತ್ತಿದ್ದಂತೆ ಪ್ರತ್ಯಕ್ಷವಾದ ಪೊಲೀಸ್ ವೇಷ ಧರಿಸಿದ್ದ ದುಷ್ಕರ್ಮಿಗಳು ರಸ್ತೆ ಮಧ್ಯೆ ಕಾರ್ ಅಡ್ಡಗಟ್ಟಿ ಥಳಿಸಿದರು. ಬಳಿಕ ರಂಗಸ್ವಾಮಯ್ಯ ಅವರನ್ನು ಕಾರಿನಿಂದ ಕೆಳಗೆ ಇಳಿಸಿ, ಹಣವಿದ್ದ ಕಾರಿನ ಸಮೇತ ಎಸ್ಕೇಪ್ ಆಗಿದ್ದರು. ಈ ಕುರಿತು ಕೆಜಿ ಹಳ್ಳಿ ಠಾಣೆಗೆ ರಂಗಸ್ವಾಮಿ ದೂರು ನೀಡಿದ್ದರು.
ಪೊಲೀಸರ ಮೇಲೆ ಹಲ್ಲೆ: ಆರೋಪಿ ಪರಾರಿ
ಬೆಂಗಳೂರಿನಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದಾರೆ. ಹಲ್ಲೆ ನಡೆದು ಒಂದು ವಾರ ಕಳೆದರೂ ದುಷ್ಕರ್ಮಿಗಳು ಪತ್ತೆಯಾಗಿಲ್ಲ. ಆಟೊದಲ್ಲಿ ಬಂದ ದುಷ್ಕರ್ಮಿಗಳು ಬೀಟ್ನಲ್ಲಿದ್ದ ಕಾನ್ಸ್ಟೆಬಲ್ಗಳಾದ ಬಸವರಾಜು, ಮುಝಾಫರ್ ಅವರ ಮೇಲೆ ಹಲ್ಲೆ ನಡೆಸಿದ್ದರು. ತಡರಾತ್ರಿ ಬೀಟ್ ವೇಳೆ ಅನುಮಾನದ ಮೇಲೆ ಬೀಟ್ನಲ್ಲಿದ್ದ ಕಾನ್ಸ್ಟೆಬಲ್ಗಳು ವಿಚಾರಣೆ ನಡೆಸಿದ್ದರು. ಈ ವೇಳೆ ಪೊಲೀಸರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳು ಪರಾರಿಯಾಗಿದ್ದರು. ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿ ವಾರವಾದರೂ ದುಷ್ಕರ್ಮಿಗಳು ಪತ್ತೆಯಾಗಿಲ್ಲ.
ಡಿವೈಡರ್ಗೆ ಲಾರಿ ಡಿಕ್ಕಿ
ಆನೇಕಲ್: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಕಂಟೇನರ್ ಲಾರಿ ಡಿಕ್ಕಿ ಹೊಡೆಡಿದ್ದು, ಚಾಲಕನಿಗೆ ಗಂಭೀರ ಗಾಯಗಳಾಗಿವೆ. ಬೆಂಗಳೂರು ಹೊರವಲಯದ ಹೊಸೂರು ಮುಖ್ಯರಸ್ತೆ ಯಡವನಹಳ್ಳಿ ಗೇಟ್ ಬಳಿ ಘಟನೆ ನಡೆದಿದೆ. ಬೆಂಗಳೂರು ಕಡೆಯಿಂದ ಹೊಸೂರು ಕಡೆ ಹೊರಟಿದ್ದ ಲಾರಿ ಡಿಕ್ಕಿ ಹೊಡೆದ ರಭಸಕ್ಕೆ ಚಾಲಕನ ಕಾಲುಗಳು ಲಾರಿಯಲ್ಲಿಯೇ ಸಿಲುಕಿಕೊಂಡಿವೆ. ಬೇರೆ ವಾಹನದ ನೆರವಿನಿಂದ ಚಾಲಕನನ್ನು ಪೊಲೀಸರು ಹೊರಗೆಳೆದ ಆಸ್ಪತ್ರೆಗೆ ದಾಖಲು ಮಾಡಿದರು. ಅತ್ತಿಬೆಲೆ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲಿಸಿದರು.
ರೈತ ಆತ್ಮಹತ್ಯೆ
ಮೈಸೂರು: ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೆ.ಆರ್.ನಗರ ತಾಲ್ಲೂಕು ಕರ್ತಾಳು ಗ್ರಾಮದಲ್ಲಿ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ರೈತನನ್ನು ಕೆ.ಎಂ.ವಿಶ್ವೇಶ್ವರಯ್ಯ (89) ಎಂದು ಗುರುತಿಸಲಾಗಿದೆ. 10 ಎಕರೆ ಜಮೀನು ಹೊಂದಿದ್ದ ರೈತ ಶುಂಠಿ, ಭತ್ತ, ರಾಗಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯುತ್ತಿದ್ದರು. ಸೊಸೈಟಿ ಹಾಗೂ ಬ್ಯಾಂಕ್‌ನಲ್ಲಿ ₹ 5 ಲಕ್ಷ ಸಾಲ ಪಡೆದಿದ್ದರು. ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದ ರೈತನನ್ನು ಕೆ.ಆರ್.ಆಸ್ಪತ್ರೆಗೆ ದಾಖಲಿಸಲಾಯಿತು. ಚಿಕಿತ್ಸೆ ಫಲಕಾರಿಯಾಗದೆ ರೈತ ವಿಶ್ವೇಶ್ವರಯ್ಯ ಸಾವನ್ನಪ್ಪಿದರು. ಕೆ..ಆರ್.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಕೀಲೆ ಅನುಮಾನಾಸ್ಪದ ಸಾವು
ಮೈಸೂರು: ವಕೀಲೆಯೊಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮೈಸೂರಿನ ರಾಮಕೃಷ್ಣನಗರ ನಿವಾಸಿ ಚಂದ್ರಕಲಾ (32) ಮೃತರು. ನೇಣು ಬಿಗಿದ ಸ್ಥಿತಿಯಲ್ಲಿ ಚಂದ್ರಕಲಾ ಶವ ಪತ್ತೆಯಾಗಿದೆ. 2019ರಲ್ಲಿ ರಾಮಕೃಷ್ಣ ನಗರ ನಿವಾಸಿ ವಿಚ್ಛೇದಿತ ಪ್ರದೀಪ್ ಜೊತೆ ಚಂದ್ರಕಲಾ ಅವರದು ಪ್ರೇಮ ವಿವಾಹವಾಗಿತ್ತು. ಶನಿವಾರ (ಮಾರ್ಚ್ 12) ಬೆಳಿಗ್ಗೆ ಚಂದ್ರಕಲಾ ಪೋಷಕರಿಗೆ ಕರೆ ಮಾಡಿದ್ದ ಪ್ರದೀಪ್ ಖಾಸಗಿ ಆಸ್ಪತ್ರೆಯ ಬಳಿಗೆ ಬರಲು ಹೇಳಿದ್ದರು. ಮಗಳ ಸಾವಿನಿಂದ ಅನುಮಾನಗೊಂಡಿರುವ ಮೃತ ಚಂದ್ರಕಲಾ ಪೋಷಕರು, ‘ಇದು ಆತ್ಮಹತ್ಯೆಯಲ್ಲ. ಪತಿ-ಅತ್ತೆ ಮಾವ ಸೇರಿ ವರದಕ್ಷಿಣೆಗಾಗಿ ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ, ಕುವೆಂಪು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಇದನ್ನೂ ಓದಿ: Crime News: ಮೂರು ತಿಂಗಳ ಗರ್ಭಿಣಿ ಪತ್ನಿಗೆ ಡೀಸೆಲ್ ಸುರಿದು ಕೊಲೆಯತ್ನ, ಪುಟ್ಟ ಮಗಳಿಗೂ ಕಿರುಕುಳ; ಆರೋಪಿ ಬಾಬು ಅರೆಸ್ಟ್
ಇದನ್ನೂ ಓದಿ: Crime News: ಬೆಂಗಳೂರಿನಲ್ಲಿ ಮುಂಬೈನ ಗ್ಯಾಂಗ್ಸ್ಟರ್ ಬಂಧನ, ಮೈಸೂರು ದೇವು ಹತ್ಯೆ ಪ್ರಕರಣದ 11 ಆರೋಪಿಗಳಿಗೆ ಜೀವಾವಧಿ ಶಿಕ್ಷೆ
Published On - 11:26 am, Sat, 12 March 22