ಬಾಗಲಕೋಟೆ: ವಾತಾವರಣ ವೈಪರೀತ್ಯದಿಂದ ಬೆಳೆಗಳಿಗೆ ಕೀಟಗಳ ಕಾಟ; ರೈತರ ಅಳಲು
ಯಾವುದೇ ಒಂದು ಬೆಳೆ ಬೆಳೆಯಬೇಕಾದರೇ ಕಾಲಕ್ಕೆ ತಕ್ಕಂತೆ ಮಳೆಯಾಗುವುದು ಬಹಳ ಮುಖ್ಯ. ಇದರಿಂದ ಬಿತ್ತಿದ ಬೆಳೆಯು ಸಮೃದ್ಧವಾಗಿ ಬೆಳೆಯುವುದು. ಆದರೆ, ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ಅದೆಷ್ಟೋ ರೈತರು ಬಿತ್ತನೆಯನ್ನೇ ಮಾಡದೆ ಸುಮ್ಮನೆ ಕೂತರೆ, ಕೆಲ ರೈತರು ಬಿತ್ತಿದ ಬೆಳೆಗೆ ಕಾಯಿಲೆ ಕಾಟ ಶುರುವಾಗಿದೆ.

ಬಾಗಲಕೋಟೆ, ಜು.23: ತಾಲೂಕಿನ ಕೆರಕಲಮಟ್ಟಿ ಗ್ರಾಮ ಹಾಗೂ ಸುತ್ತಮುತ್ತಲಿನ ಗ್ರಾಮದ ಹೊಲಗಳಲ್ಲಿ ಮೋಡ ಮುಸುಕಿದ ವಾತಾವರಣ, ನಿರಂತರವಾಗಿ ಸುರಿಯುತ್ತಿರುವ ಮಳೆ. ವಾತಾವರಣ ವೈಪರೀತ್ಯ ಹಾಗೂ ತಂಪಾದ ವಾತಾವರಣದಿಂದ ಹೊಲದಲ್ಲಿನ ಬೆಳೆಗಳಿಗೆ ಕೀಟಗಳ ಕಾಟ ಎದುರಾಗಿದ್ದು, ಹೆಸರು ಬೆಳೆ ಹಳದಿ ಬಣ್ಣಕ್ಕೆ ತಿರುಗಿದೆ. ಪರಿಣಾಮ ಇದೀಗ ರೈತರು ಬೆಳೆಗಳಿಗೆ ಕ್ರಿಮಿನಾಷಕ ಸಿಂಪಡಿಸುತ್ತಿದ್ದಾರೆ. ಹೌದು, ಬಾಗಲಕೋಟೆ(Bagalakote) ಜಿಲ್ಲೆಯಲ್ಲಿ ಪ್ರಮುಖವಾಗಿ ಮುಂಗಾರು ಅವಧಿಯಲ್ಲಿ ಬೆಳೆಯಬೇಕಿದ್ದ ಹೆಸರು ಬೆಳೆ ಬಿತ್ತನೆ ಕಾಲದಲ್ಲಿ ಮಳೆ ಆಗದ ಕಾರಣ ಬಹುತೇಕ ರೈತರು ಹೆಸರು ಬಿತ್ತದೆ ಹಾಗೆ ಬಿಟ್ಟಿದ್ದಾರೆ.
ಹೆಸರು ಬೆಳೆಗೆ ಹಳದಿ ರೋಗ, ಜೋಳಕ್ಕೆ ಕೀಟಬಾಧೆ
ಇನ್ನು ಕೆಲವೇ ಕೆಲ ರೈತರು ಬೆಳೆದ ಹೆಸರಿಗೆ ಹಳದಿ ರೋಗ ಶುರುವಾಗಿದೆ. ಕೆಲ ರೈತರು ಹೆಸರು ಬಿತ್ತನೆ ಮಾಡಬೇಕಾದಂತಹ ಪ್ರದೇಶದಲ್ಲಿ ಗೋವಿನ ಜೋಳವನ್ನು ಬೆಳೆದಿದ್ದು, ಗೋವಿನ ಜೋಳಕ್ಕೆ ಈಗ ಕೀಟಗಳ ಬಾದೆ ಶುರುವಾಗಿದೆ. ಹೊಲದಲ್ಲಿ ನೋಡೋಕೆ ಸಾಲು ಸಾಲಾಗಿ ಹಚ್ಚಹಸಿರಾಗಿ ಸಮೃದ್ಧವಾಗಿ ಬೆಳೆದ ರೀತಿಯಲ್ಲಿ ಗೋವಿನ ಜೋಳ ಕಂಡುಬಂದರೂ ಕೂಡ, ಕೀಟಗಳು ಗೋವಿನ ಜೋಳದ ಸುಳಿಯನ್ನು ಕತ್ತರಿಸಿ ಹಾಕುತ್ತಿವೆ. ಇದರಿಂದ ರೈತರಿಗೆ ಭಾರಿ ಪ್ರಮಾಣದಲ್ಲಿ ನಷ್ಟ ಉಂಟು ಮಾಡುತ್ತಿವೆ. ಹೀಗಾಗಿ ರೈತರು ಗೋವಿನ ಜೋಳಕ್ಕೆ ಕ್ರಿಮಿನಾಶಕ ಸಿಂಪಡಿಸುವಲ್ಲಿ ನಿರತರಾಗಿದ್ದಾರೆ. ಸಮಯಕ್ಕೆ ತಕ್ಕಂತೆ ಸುರಿಯದ ಮಳೆ ಒಂದು ಪರಿಣಾಮ ಆದರೆ, ಇನ್ನೊಂದು ಕಡೆ ನಿರಂತರವಾಗಿ ಸುಳಿಯುತ್ತಿರುವ ಮಳೆಮೋಡದ ವಾತಾವರಣದಿಂದ ಕೀಟಬಾಧೆ ಶುರುವಾಗಿದೆಯೆಂದು ರೈತರು ಹೇಳುತ್ತಿದ್ದಾರೆ.
ಜಿಲ್ಲೆಯಲ್ಲಿ 20,250 ಹೆಕ್ಟೇರ್ ಪ್ರದೇಶದಲ್ಲಿ ಹೆಸರು, 42,000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬೆಳೆಯುವ ಗುರಿ
ಬಾಗಲಕೋಟೆ ಜಿಲ್ಲೆಯಲ್ಲಿ ಮುಂಗಾರು ಅವಧಿಯಲ್ಲಿ ಒಟ್ಟು 2,65,000 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗುತ್ತದೆ. ಅದರಲ್ಲಿ ಪ್ರಮುಖವಾಗಿ 20,250 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬೆಳೆಯುವ ಗುರಿಯನ್ನು ಹೊಂದಲಾಗಿತ್ತು. ಆದರೆ, ಇದುವರೆಗೂ ಕೇವಲ 6809 ಹೆಕ್ಟೇರ್ ಮಾತ್ರ ಹೆಸರು ಬಿತ್ತನೆಯಾಗಿದೆ. ಇನ್ನು ಜಿಲ್ಲೆಯಲ್ಲಿ ಒಟ್ಟು 42,000 ಹೆಕ್ಟೇರ್ ಪ್ರದೇಶದಲ್ಲಿ ಗೋವಿನ ಜೋಳ ಬಿತ್ತನೆಯ ಗುರಿಯನ್ನು ಮುಂಗಾರು ಅವಧಿಯಲ್ಲಿ ಹೊಂದಲಾಗಿತ್ತು. ಆದರೆ, ಇದುವರೆಗೂ ಬಿತ್ತನೆಯಾಗಿದ್ದು ಕೇವಲ 19,100 ಹೆಕ್ಟೇರ್ ಮಾತ್ರ, ಇದೀಗ ಬಿತ್ತಿದಂತಹ ಗೋವಿನ ಜೋಳ ಬೆಳೆಗೂ ಕೂಡ ಕೀಟಗಳ ಬಾದೆ ಶುರುವಾಗಿದ್ದು, ಸುಳಿಯನ್ನು ಕತ್ತರಿಸಿ ಹಾಕುತ್ತಿವೆ.
ಇನ್ನು ಧಾರಾಕಾರ ಮಳೆ ಸುರಿದು ಬಿಸಿಲು ಬಿದ್ದರೆ ಕೀಟಗಳ ಬಾಧೆ ಇರುವುದಿಲ್ಲ. ಆದರೆ, ಇಂತಹ ಮಳೆಯಿಂದ ಬೆಳೆಗೆ ಕಾಯಿಲೆ ಕಾಟ ಶುರುವಾಗಿದ್ದು, ಕೃಷಿ ಅಧಿಕಾರಿಗಳು ಸ್ಥಳಕ್ಕ ಭೇಟಿ ನೀಡಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು ಎಂದು ರೈತರು ಕೇಳಿಕೊಳ್ಳುತ್ತಿದ್ದಾರೆ. ಒಂದು ಕಡೆ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದ ಎಲ್ಲ ನದಿಗಳು ತುಂಬಿ ತುಳುಕುತ್ತಿವೆ. ಆದರೆ, ವಾತಾವರಣ ವೈಫರೀತ್ಯದಿಂದ ರೈತರ ಪ್ರಮುಖ ಬೆಳೆ ಹಾಳಾಗುತ್ತಿರೋದು ರೈತರ ನೆಮ್ಮದಿ ಕೆಡುವಂತಾಗಿದೆ.
ಇನ್ನಷ್ಟು ರಾಜ್ಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:59 am, Sun, 23 July 23




