Crime News: ಗೂಡ್ಸ್ ಲಾರಿಗಳು ಮುಖಾಮುಖಿ; ಇಬ್ಬರು ಸ್ಥಳದಲ್ಲೇ ಸಾವು, ಓರ್ವನ ಸ್ಥಿತಿ ಗಂಭೀರ
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮರೆನಡು ಗ್ರಾಮದ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 65 ವರ್ಷದ ಅಪರಿಚಿತ ವೃದ್ದನ ಶವ ಇದಾಗಿದ್ದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ.
ಧಾರವಾಡ: ಗೂಡ್ಸ್ ಲಾರಿಗಳು ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮೃತಪಟ್ಟ ಘಟನೆ ಧಾರವಾಡ ತಾಲೂಕಿನ ಹಾರೋಬೆಳವಡಿ ಗ್ರಾಮದ ಬಳಿ ನಡೆದಿದೆ. ಮತ್ತೋರ್ವನ ಸ್ಥಿತಿ ಗಂಭೀರವಾಗಿದ್ದು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಧಾರವಾಡ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆ ಗೋಡೆ ಕುಸಿದು ಕಾರ್ಮಿಕ ದುರ್ಮರಣ ಬೆಳಗಾವಿಯ ಮಾರುತಿಬೀದಿ ಮಹಾದೇವ ದೇಗುಲ ಬಳಿ ನಿನ್ನೆ ಸಂಜೆ ಕಟ್ಟಡ ಕಾಮಗಾರಿ ವೇಳೆ ಪಕ್ಕದ ಮನೆ ಗೋಡೆ ಕುಸಿದು ಕಾರ್ಮಿಕ ಮೃತಪಟ್ಟಿದ್ದಾರೆ. ಹಾಗೂ ಅಗ್ನಿಶಾಮಕ ಸಿಬ್ಬಂದಿ, SDRF ತಂಡ ಮಣ್ಣಿನಡಿ ಸಿಲುಕಿದ್ದ ಮೂವರು ಕಾರ್ಮಿಕರನ್ನು ರಕ್ಷಿಸಿದೆ. ಮೂವರು ಕಾರ್ಮಿಕರಿಗೆ ಗಾಯಗಳಾಗಿದ್ದು ಬೆಳಗಾವಿ ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. 60 ವರ್ಷದ ಕಲ್ಲಪ್ಪ ಕರಿಯಪ್ಪ ಮಾದರ ಮೃತ ಕಾರ್ಮಿಕ. ಅರ್ಜುನ ಮಾದರ, ಮಹೇಂದ್ರ ಮಾದರ, ನಾಗರಾಜ ಮಾದರರಿಗೆ ಗಾಯಗಳಾಗಿವೆ. ಅವೈಜ್ಞಾನಿಕವಾಗಿ ಕಟ್ಟಡ ನಿರ್ಮಾಣ ಕಾಮಗಾರಿ ಆರೋಪ ಕೇಳಿ ಬಂದಿದ್ದು ಪಕ್ಕದಲ್ಲಿ ಹಳೆಯ ಮನೆ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಲಾಗಿದೆ. ಹೀಗಾಗಿ ಈ ಸಾವು ಸಂಭವಿಸಿದೆ ಎಂದು ಕಟ್ಟಡ ನಿರ್ಮಾಣಕ್ಕೆ ಪರವಾನಿಗೆ ನೀಡಿದ ಅಧಿಕಾರಿಗಳ ವಿರುದ್ಧ ಜನರು, ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಭಾರಿ ಮಳೆಗೆ ಧರೆಗುರುಳಿದ ಮರಗಳು ಹಾವೇರಿ ಜಿಲ್ಲೆಯಲ್ಲಿ ರಾತ್ರಿ ಸುರಿದ ಭಾರಿ ಮಳೆಗೆ ಹಲವೆಡೆ ಮರಗಳು ಧರೆಗುರುಳಿವೆ. ಶಾಲೆ, ಮನೆಯ ಮೇಲ್ಛಾವಣಿಗಳು ಹಾರಿ ಹೋಗಿವೆ. ಹಾವೇರಿ ತಾಲೂಕಿನ ಹೊಸಕಿತ್ತೂರು ಗ್ರಾಮದಲ್ಲಿ ನಿನ್ನೆ ರಾತ್ರಿ ಗುಡುಗು, ಸಿಡಿಲು ಮತ್ತು ಗಾಳಿಯೊಂದಿಗೆ ಸುರಿದ ಮಳೆಯಿಂದಾಗಿ ಶಿವಶರಣ ಹರಳಯ್ಯನವರ ಅನುದಾನಿತ ಪ್ರೌಢಶಾಲೆಯ ಮೇಲ್ಛಾವಣಿ ಹಾರಿ ಹೋಗಿದೆ. ಮಳೆರಾಯನ ಆರ್ಭಟಕ್ಕೆ ಜನರು ಕಂಗಾಲಾಗಿದ್ದಾರೆ.
ತುಮಕೂರಿನಲ್ಲಿ ಅಪರಿಚಿತ ಶವ ಪತ್ತೆ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಮರೆನಡು ಗ್ರಾಮದ ಬಳಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 65 ವರ್ಷದ ಅಪರಿಚಿತ ವೃದ್ದನ ಶವ ಇದಾಗಿದ್ದು ಕೊಳೆತ ಸ್ಥಿತಿಯಲ್ಲಿ ಶವ ಸಿಕ್ಕಿದೆ. ಘಟನೆ ಕಾರಣ ತಿಳಿದುಬಂದಿಲ್ಲ. ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಈಜಲು ತೆರಳಿದ್ದ ಯುವಕ ಸಾವು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಚೋಳೇನಹಳ್ಳಿ ಗ್ರಾಮದ ಕೆರೆಯಲ್ಲಿ ಈಜಲು ತೆರಳಿದ್ದ ಯುವಕ ನೀರು ಪಾಲಾಗಿದ್ದಾನೆ. ಕೆರಗಳಪಾಳ್ಯ ಗ್ರಾಮದ ಶಂಕರ್ 22 ಮೃತ ದುರ್ದೈವಿ. ಮದುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಚಿನ್ನದ ಸರ ಕಿತ್ತು ಕಳ್ಳ ಪರಾರಿ ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಮಾರ್ಕೋನಹಳ್ಳಿ ಗ್ರಾಮದ ಬಳಿ ಚಿನ್ನದ ಸರ ಕಿತ್ತು ಕೊಂಡು ಕಳ್ಳ ಪರಾರಿಯಾದ ಘಟನೆ ನಡೆದಿದೆ. ಗ್ರಾಮದ ತಿಮ್ಮಮ್ಮ ಎಂಬುವವರಿಗೆ ಸೇರಿದ ಚಿನ್ನದ ಸರ ಇದಾಗಿದ್ದು ಬೈಕ್ನಲ್ಲಿ ಬಂದ ಅಪರಿಚಿತ ವ್ಯಕ್ತಿ ಕುಡಿಯಲು ನೀರು ಕೇಳುವ ನೆಪದಲ್ಲಿ ಸರ ಕದ್ದಿದ್ದಾನೆ. ಸುಮಾರು 30 ಗ್ರಾಮ್ ಚಿನ್ನದ ಸರ ಕದ್ದು ಪರಾರಿಯಾಗಿದ್ದಾನೆ. ಅಮೃತೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆ ಬೀಗ ಮುರಿದು ಮನೆಗಳ್ಳತನ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಸುಬ್ರಹ್ಮಣ್ಯ ನಗರದಲ್ಲಿ ಮನೆ ಬೀಗ ಮುರಿದು ಮನೆಗಳ್ಳತನ ಮಾಡಲಾಗಿದೆ. ಚಿಕ್ಕಹನುಮಯ್ಯ ಅವರಿಗೆ ಸೇರಿದ ಮನೆಯ ಬೀರುವಿನಲ್ಲಿಟ್ಟಿದ್ದ ಒಂದೂವರೆ ಲಕ್ಷ ಮೌಲ್ಯದ ಚಿನ್ನಾಭರಣ ಜೊತೆಗೆ 30ಸಾವಿರ ನಗದು ಕಳ್ಳತನ ಮಾಡಲಾಗಿದೆ. ತ್ಯಾಮಗೊಂಡ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಗ್ರಾಮದ ಜನರ ನಿದ್ದೆಗೆಡಿಸಿದೆ ಈ ಮಂಗ; 10 ಕ್ಕೂ ಹೆಚ್ಚು ಜನರ ಮೇಲೆ ದಾಳಿ, ಕೋತಿ ಓಡಿಸಲು ಹರ ಸಾಹಸಪಡುತ್ತಿರುವ ಇಡೀ ಊರು
Published On - 8:54 am, Fri, 29 April 22