ವಾಟ್ಸ್ಆ್ಯಪ್ ಪಿಂಕ್ ಅಪಾಯಕಾರಿ: ಕರ್ನಾಟಕ ಪೊಲೀಸರಿಂದ ಎಚ್ಚರಿಕೆ, ಕಾರಣ ಇಲ್ಲಿದೆ
ವಾಟ್ಸ್ಆ್ಯಪ್ ಪಿಂಕ್ ಮೋಹಕ್ಕೆ ಬಿದ್ದು ಅದನ್ನು ನಿಮ್ಮ ಮೊಬೈಲ್ನಲ್ಲಿ ಡೌನ್‌ಲೋಡ್ ಮತ್ತು ಇನ್ಸ್ಟಾಲ್ ಮಾಡಿದ್ದೀರಾ? ಅಥವಾ ಮಾಡಲು ಮುಂದಾಗುತ್ತಿದ್ದೀರಾ? ಹಾಗೆ ಮಾಡಿದರೆ ನಿಮಗೆ ಅಪಾಯ ಕಟ್ಟಿಟ್ಟ ಬುತ್ತಿ. ವಾಟ್ಸ್ಆ್ಯಪ್ ಪಿಂಕ್ ಕರಾಳ ಮುಖದ ಬಗ್ಗೆ ಕರ್ನಾಟಕ ಪೊಲೀಸರು ನೀಡಿರುವ ಎಚ್ಚರಿಕೆ ಇಲ್ಲಿದೆ ನೋಡಿ.
ಬೆಂಗಳೂರು, ಜನವರಿ 24: ಸೈಬರ್ ವಂಚನೆಯ (Cyber Crime) ಮತ್ತೊಂದು ಮುಖವನ್ನು ಕರ್ನಾಟಕ ಪೊಲೀಸರು (Karnataka Police) ಪತ್ತೆಹಚ್ಚಿದ್ದು, ಯಾವುದೇ ಕಾರಣಕ್ಕೂ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಥವಾ ವಾಟ್ಸ್ಆ್ಯಪ್ ಪಿಂಕ್ (Whatsapp Pink) ಅನ್ನು ಇನ್ಸ್ಟಾಲ್ ಮಾಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಎಚ್ಚರಿಕೆ ಸಂದೇಶ ಪ್ರಕಟಿಸಿರುವ ಕರ್ನಾಟಕ ಪೊಲೀಸ್, ಗುಲಾಬಿ ಬಣ್ಣದ ವಾಟ್ಸ್ಆ್ಯಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ. ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಆ್ಯಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ ಆ್ಯಂಡ್ರಾಯ್ಡ್ ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ. ಜಾಗೃತೆಯಿಂದಿರಿ ಎಂದು ಉಲ್ಲೇಖಿಸಿದೆ.
ನೀವು ಒಂದು ವೇಳೆ ವಾಟ್ಸ್ಆ್ಯಪ್ ಪಿಂಕ್ ಇನ್ಸ್ಟಾಲ್ ಮಾಡಿದ್ದೇ ಆದಲ್ಲಿ ಹ್ಯಾಕರ್ಗಳು ನಿಮ್ಮ ಫೋಟೊ, ಕಾಂಟ್ಯಕ್ಟ್, ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ಗಳು, ಎಸ್ಎಂಎಸ್ಗಳನ್ನು ಹ್ಯಾಕ್ ಮಾಡಲಿದ್ದಾರೆ ಎಂದು ಕರ್ನಾಟಕ ಪೊಲೀಸ್ ಎಚ್ಚರಿಕೆ ನೀಡಿದೆ.
ಗುಲಾಬಿ ಬಣ್ಣದ ವಾಟ್ಸ್ ಆಪ್ ಅಪಾಯಕಾರಿ ಎಚ್ಚರಿಕೆಯಿಂದಿರಿ.
ಆಕರ್ಷಣೆಯ ಗುಲಾಬಿ ಬಣ್ಣದ ವಾಟ್ಸ್ಅಪ್ (Apk) ಬಳಸುವವರನ್ನು ಗುರಿಯಾಗಿಸಿ ಮೋಸಗಾರರು ಡೇಟಾ ಕದಿಯಲು ಇಲ್ಲವೇ Android ಮೊಬೈಲ್ ಹ್ಯಾಕ್ ಮಾಡಲು ಬಳಸಿಕೊಳ್ಳುತ್ತಾರೆ.
ಜಾಗೃತೆಯಿಂದಿರಿ..#CyberSecurity #KSP_ಸುವರ್ಣಸಂಭ್ರಮ #GoldenJubileeOf_KSP pic.twitter.com/AgdjRLXnNf
— ಕರ್ನಾಟಕ ರಾಜ್ಯ ಪೊಲೀಸ್ Karnataka State Police (@KarnatakaCops) January 23, 2024
ವಂಚಕರು ನಿಮ್ಮ ಮೊಬೈಲ್ನ ಸಂಪೂರ್ಣ ದತ್ತಾಂಶಕ್ಕೆ ಕನ್ನ ಹಾಕುವ ಸಾಧ್ಯತೆ ಇದೆ. ಹೀಗಾಗಿ ಯಾರೂ ಕೂಡ ವಾಟ್ಸ್ಆ್ಯಪ್ ಪಿಂಕ್ ಬಳಸಬೇಡಿ. ಒಂದು ವೇಳೆ ಯಾವುದೇ ರೀತಿಯ ಸೈಬರ್ ವಂಚನೆಗೆ ಒಳಗಾದರೆ 1930 ಗೆ ಕರೆ ಮಾಡಿ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಏನಿದು ವಾಟ್ಸ್ಆ್ಯಪ್ ಪಿಂಕ್?
ವಾಟ್ಸ್ಆ್ಯಪ್ ಪಿಂಕ್ ವಾಟ್ಸ್ಆ್ಯಪ್ನ ಹೊಸ ಆವೃತ್ತಿ ಅಥವಾ ವಾಟ್ಸ್ಆ್ಯಪ್ ಅಧಿಕೃತ ಬಿಡುಗಡೆ ಅಲ್ಲ. ಬದಲಿಗೆ, ಇದು ಬಳಕೆದಾರರನ್ನು ವಂಚಿಸುವ, ಮೋಸಗೊಳಿಸುವ ದೊಡ್ಡ ಹಗರಣವಾಗಿದೆ. ಇದರ ಲಿಂಕ್ ಇರುವ ಸಂದೇಶಗಳನ್ನು ಸಾಮಾನ್ಯವಾಗಿ ಸ್ಪ್ಯಾಮ್ ಮೆಸೇಜ್ಗಳ ಮೂಲಕ ಹರಡಲಾಗುತ್ತದೆ.
ಇದನ್ನೂ ಓದಿ: ಅಕ್ಕ ಅಕ್ಕ ಎನ್ನುತ್ತಲೇ ದೀಪಿಕಾಳನ್ನು ಕೊಂದು ಬಿಟ್ನಾ ಯುವಕ? ಹಲವು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ ಶಿಕ್ಷಕಿ ಸಾವು
ಸಂದೇಶಗಳ ಜತೆ ಲಿಂಕ್ ಲಗತ್ತಿಸಿ ಅದನ್ನು ಕ್ಲಿಕ್ ಮಾಡುವಂತೆ ಸೂಚಿಸಿರಲಾಗುತ್ತದೆ. ಲಿಂಕ್ ಕ್ಲಿಕ್ ಮಾಡಿದರೆ ಬಳಕೆದಾರರನ್ನು ವೆಬ್‌ಸೈಟ್‌ಗೆ ಮರುನಿರ್ದೇಶಿಸಲಾಗುತ್ತದೆ. ಅಲ್ಲಿ ಅವರು ವಾಟ್ಸ್ಆ್ಯಪ್ ಪಿಂಕ್ ಅನ್ನು ಡೌನ್‌ಲೋಡ್ ಮಾಡಲು ಸೂಚಿಸಲಾಗುತ್ತದೆ. ಆದಾಗ್ಯೂ, ಹೊಸ ವೈಶಿಷ್ಟ್ಯಗಳು ಅಥವಾ ಥೀಮ್‌ಗಳನ್ನು ಸ್ವೀಕರಿಸುವ ಬದಲು, ಬಳಕೆದಾರರ ಮೊಬೈಲ್ಗಳಲ್ಲಿ ಅವರ ಅರಿವಿಗೇ ಬಾರದಂತೆ ದುರುದ್ದೇಶಪೂರಿತ ಸಾಫ್ಟ್‌ವೇರ್ ಡೌನ್‌ಲೋಡ್ ಆಗುತ್ತದೆ. ಈ ಸಾಫ್ಟ್‌ವೇರ್ ಮೂಲಕ ದತ್ತಾಂಶಗಳಿಗೆ ಕನ್ನ ಹಾಕಲಾಗುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:20 am, Wed, 24 January 24