AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಎಸ್ಆರ್​ಟಿಸಿ ಸಿಬ್ಬಂದಿ ಹತ್ಯೆ; ನಾಲ್ಕು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ

ಇದು ಸಿನಿಮಾ ಮಾದರಿಯ ಮರ್ಡರ್ ಸ್ಟೋರಿ. ಕೆಲಸಕ್ಕೆಂದು ಹೊರಟಿದ್ದ ಕೆಎಸ್ಆರ್​ಟಿಸಿ ಸಿಬ್ಬಂದಿಯೊಬ್ಬರನ್ನು ವ್ಯಕ್ತಿಯೊಬ್ಬ ಸ್ನೇಹಿತನ ಜೊತೆ ಸೇರಿ ಕೊಲೆ ಮಾಡಿದ್ದನು. ಆದರೆ, ಕೊಲೆ ಯಾಕೆ ನಡೆದಿತ್ತು. ಎನ್ನುವುದು ಮಾತ್ರ ಸಾಕಷ್ಟು ನಿಗೂಢತೆಯಿಂದ ಕೂಡಿತ್ತು. ನಾಲ್ಕು ತಿಂಗಳ ಬಳಿಕ ದೊರೆತ ಸಣ್ಣ ಸುಳಿವಿನಿಂದ ಆರೋಪಿಗಳಿಬ್ಬರನ್ನು ಬಂಧಿಸುವಲ್ಲಿ ಬಳ್ಳಾರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕೆಎಸ್ಆರ್​ಟಿಸಿ ಸಿಬ್ಬಂದಿ ಹತ್ಯೆ; ನಾಲ್ಕು ತಿಂಗಳ ಬಳಿಕ ಕೊಲೆ ಆರೋಪಿಗಳ ಬಂಧನ
ಮೃತ ವ್ಯಕ್ತಿ
Follow us
ವಿನಾಯಕ ಬಡಿಗೇರ್​, ಉತ್ತರ ಕನ್ನಡ
| Updated By: ಕಿರಣ್ ಹನುಮಂತ್​ ಮಾದಾರ್

Updated on: Dec 09, 2023 | 7:36 PM

ಬಳ್ಳಾರಿ, ಡಿ.09: ಕೆಎಸ್ಆರ್​ಟಿಸಿ(KSRTC) ಡಿಪೋದಲ್ಲಿ ಕೆಲಸ ಮಾಡುತ್ತಿದ್ದ ಹುಸೇನಪ್ಪ ಎಂಬಾತ ಎಂದಿನಂತೆ ಆಗಸ್ಟ್ ಆರನೇ ತಾರಿಖು ಮನೆಯಿಂದ ಕೆಲಸಕ್ಕೆಂದು ಹೊರಟಿದ್ದ. ಈ ವೇಳೆ ಬಳ್ಳಾರಿ(Ballari) ಜೈಲು ಪಕ್ಕದ ರಸ್ತೆಯಲ್ಲಿ ಬಂದ ಇಬ್ಬರು, ಹುಸೇನಪ್ಪನ ಗಾಡಿಗೆ ಡಿಕ್ಕಿ ಹೊಡೆಯುತ್ತಾರೆ. ಕೆಳಗೆ ಬಿದ್ದ ಹುಸೇನಪ್ಪನ ಮೇಲೆ ರಾಡ್​ನಿಂದ ಹೊಡೆದು ಕೊಲೆ ಮಾಡುತ್ತಾರೆ. ಕೊಲೆಯ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾದ್ರೂ ಅಸ್ಟಷ್ಟ ಮಾಹಿತಿ ಹಿನ್ನೆಲೆ ಕೊಲೆಗಾರರನ್ನು ಪತ್ತೆ ಮಾಡುವುದು ಪೊಲೀಸರಿಗೆ ದೊಡ್ಡ ಹರಸಾಹಸವಾಗಿತ್ತು. ಇಬ್ಬರು ಹೆಂಡತಿಯರನ್ನು ಹೊಂದಿದ್ದ ಹಿನ್ನೆಲೆ ಹುಸೇನಪ್ಪ ಸಾವಿನ ಬಗ್ಗೆ ಆಸ್ತಿಯ ವಿವಾದದ ಹಿನ್ನೆಲೆ ನಡೆದಿರಬಹುದೆಂದು ಅನುಮಾನ ವ್ಯಕ್ತವಾಗಿತ್ತಾದ್ರೂ ಕೊಲೆಗೆ ಮತ್ತೊಂದೇ ಕಾರಣ ಎನ್ನುವುದು ಇದೀಗ ಬಹಿರಂಗವಾಗಿದೆ. ಆದರೆ ಮನೆಯವರು ಮಾತ್ರ ಕೊಲೆಗೆ ಯಾರ ಮೇಲೂ ಅನುಮಾನವಿಲ್ಲ ಎನ್ನುತ್ತಿದ್ದರು.

ಹಣಕಾಸು ವ್ಯವಹಾರಕ್ಕೆ ಸಂಬಂಧಿಯಿಂದಲೇ ನಡೆಯಿತಾ ಕೊಲೆ?

ಇನ್ನು ಕೊಲೆಯಾದ ಹುಸೇನಪ್ಪ, ತನ್ನ ಅಳಿಯ ಹೊನ್ನೂರು ಸ್ವಾಮಿ ಮೂಲಕ ದೂರದ ಸಂಬಂಧಿಯಾಗಿರುವ ಆರೋಪಿ ಕಟ್ಟೆಸ್ವಾಮಿ ಬಳಿ ಎರಡುವರೆ ಲಕ್ಷ ರೂಪಾಯಿ ಸಾಲ ಪಡೆದಿದ್ದನು. ಇದನ್ನು ವಾಪಸ್ ಕೇಳಿದಾಗ ಹುಸೇನಪ್ಪ ಕೊಟ್ಟಿರಲಿಲ್ಲ. ಹಣ ವಾಪಸ್ ನೀಡದಿರೋದ್ರ ಜೊತೆ ಕಟ್ಟೆಸ್ವಾಮಿಯವರ ತಾಯಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದನಂತೆ ಮೃತ ಹುಸೇನಪ್ಪ. ಈ ಹಿನ್ನೆಲೆ ಕಟ್ಟೆಸ್ವಾಮಿ ಪ್ಲ್ಯಾನ್​ ಮಾಡಿ ತನ್ನ ಸ್ನೇಹಿತ ಮಾನಪ್ಪ ಜೊತೆ ಸೇರಿ ಯಾವುದೇ ಸಾಕ್ಷಿ ಕುರುಹು ಇಲ್ಲದೇ ಹುಸೇನಪ್ಪ ಅವರನ್ನು ಕೊಂದಿದ್ದಾನೆ.

ಇದನ್ನೂ ಓದಿ:ಅಕ್ಕನ ಮಗಳನ್ನು ಪ್ರೀತಿಸಿದ ಜಿದ್ದಿಗೆ ಯುವಕನ ಕೊಲೆ; ಪ್ರಕರಣ ಭೇದಿಸಿದ ಬಾಗೇಪಲ್ಲಿ ಪೊಲೀಸರು

ಸ್ಥಗಿತಗೊಂಡ ಹೆಚ್ಚುವರಿ ಸೀಮ್ ಮೂಲಕ ಆರೋಪಿ ಸೆರೆ

ಆದರೆ ಕೊಲೆ ಮಾಡುವ ದಿನ ಮಾತ್ರ ಕಟ್ಟೆಸ್ವಾಮಿ ಅವರಿಗೆ ಹುಸೇನಪ್ಪ ಅವರ ಅಳಿಯ ಹೊನ್ನರು ಸ್ವಾಮಿ ಮನೆಯಲ್ಲಿರುವ ಸ್ಥಗಿತಗೊಂಡ ಹೆಚ್ಚುವರಿ ಸೀಮ್ ಜೊತೆ ಮಾತನಾಡಿದ್ದರು. ಮನೆಯಲ್ಲಿದ್ದ ಹೆಚ್ಚುವರಿ ಸೀಮ್ ಅಷ್ಟಾಗಿ ಬಳಕೆ ಮಾಡುತ್ತಿರಲಿಲ್ಲ. ಆದರೆ, ಅವತ್ತು ಆ ಸೀಮ್ ಯಾಕೆ ಬಳಕೆಯಾಯ್ತು. ಅದರ ಹಿಂದೆ ಹೋದ ಪೊಲೀಸರಿಗೆ ಸತ್ಯಾಂಶ ಗೊತ್ತಾಗಿದೆ. ಕೊಲೆಯಾದ ದಿನ ಆ ಬಳಕೆಯಾದ ಸೀಮ್ ನಿಂದ ಕಟ್ಟೆಸ್ವಾಮಿ ಮೊಬೈಲ್​ಗೆ ಹದಿನಾಲ್ಕು ಬಾರಿ ಕಾಲ್ ಮಾಡಲಾಗಿತ್ತು. ಅದರ ಆಧಾರದಲ್ಲಿ ಕುಟುಂಬದ ಜೊತೆಗಿದ್ದ ಕಟ್ಟೆಸ್ವಾಮಿ ವಿಚಾರಣೆ ಮಾಡಿದಾಗ ಸತ್ಯಾಸತ್ಯತೆ ಗೊತ್ತಾಗಿದೆ.

ಹಣದ ವ್ಯವಹಾರ, ತಾಯಿ, ಮಕ್ಕಳು ಮತ್ತು ಅಣ್ಣತಮ್ಮಂದಿರನ್ನು ಬೇರೆ ಮಾಡುತ್ತದೆ ಎನ್ನುವ ಮಾತಿಗೆ ಈ ಪ್ರಕರಣ ಮತ್ತೊಮ್ಮೆ ಸಾಕ್ಷಿಯಾಗಿದೆ. ಕರಾಟೆ ಪಟುವಾಗಿ ಸಮಾಜದಲ್ಲಿ ಒಳ್ಳೆಯ ಹೆಸರು ಮಾಡಿದ್ದ ಆರೋಪಿ ಕಟ್ಟೆಸ್ವಾಮಿ ಇದೀಗ ಹಣ ವಾಪಸ್ ನೀಡದ ಹಿನ್ನೆಲೆ ಹುಸೇನಪ್ಪ ಅವರನ್ನು ಕೊಲೆ ಮಾಡಿ ಜೈಲು ಸೇರಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ