ಚಿಕ್ಕಮಗಳೂರು: ತರಕಾರಿ ಅಂಗಡಿಯಿಂದ 40 ಕೆಜಿ ಟೊಮೆಟೊ ಕಳ್ಳತನ
ಕೆಂಪು ಸುಂದರಿ ಟೊಮೆಟೊ ಬೆಲೆ ಗಗನಕ್ಕೇರುತ್ತಿದ್ದಂತೆ ಅಲ್ಲಲ್ಲಿ ಟೊಮೆಟೊ ಕಳ್ಳತನ ಪ್ರಕರಣ ನಡೆಯಲು ಆರಂಭವಾಗಿದೆ. ಇದೀಗ ಚಿಕ್ಕಮಗಳೂರಿನಲ್ಲೂ ಟೊಮೆಟೊ ಕಳ್ಳತನ ಪ್ರಕರಣ ನಡೆದಿದೆ.
ಚಿಕ್ಕಮಗಳೂರು: ಮಳೆ ಅಭಾವದಿಂದ ಕೃಷಿ ಕೈಗೊಟ್ಟಿರುವ ಹಿನ್ನೆಲೆ ಮಾರುಕಟ್ಟೆಗಳಲ್ಲಿ ತರಕಾರಿಗಳ ಕೊರತೆ ಎದುರಾಗಿ ಬೆಲೆಗಳು ಗಗನಮುಖಿಯಾಗಿವೆ. ಅದರಲ್ಲೂ ಕೆಂಪು ಸುಂದರಿ ಟೊಮೆಟೊ ಬೆಲೆಯಲ್ಲಿ (Tomato Price) ಭಾರೀ ಏರಿಕೆ ಕಂಡಿದೆ. ಈ ನಡುವೆ ತರಕಾರಿ ಅಂಗಡಿಗಳ ಮೇಲೆ ಕಳ್ಳರ ಕಣ್ಣು ಬಿದ್ದಿದ್ದು, ಟೊಮೆಟೊಗಳನ್ನು ಕಳವು ಮಾಡಲಾಗುತ್ತಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ನಡೆದ ಪ್ರಕರಣ ಇದೀಗ ಚಿಕ್ಕಮಗಳೂರಿನಲ್ಲೂ ನಡೆದಿದೆ. ತರಕಾರಿ ಅಂಗಡಿಯಿಂದ ಸುಮಾರು 40 ಕೆಜಿ ಟೊಮೆಟೊ ಕಳ್ಳತನ (Tomato Theft) ಮಾಡಲಾಗಿದೆ.
ಚಿಕ್ಕಮಗಳೂರು ಜಿಲ್ಲಾದ್ಯಂತ ಟೊಮೆಟೊ ಬೆಲೆ 100 ರೂಪಾಯಿಯಿಂದ 150 ರೂಪಾಯಿ ವರೆಗೆ ಇದೆ. ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆಯ ಬಳಿ ಇರುವ ತರಕಾರಿ ಅಂಗಡಿಯಲ್ಲಿ ಈ ಕಳ್ಳತನ ಪ್ರಕರಣ ನಡೆದಿದ್ದು, ಸುಮಾರು 40 ಕೆಜಿಯಷ್ಟು ಟೊಮ್ಯಾಟೊ ಕದ್ದು ಪರಾರಿಯಾಗಿದ್ದಾರೆ. ಘಟನೆ ಸಂಭಂಧ ತರಕಾರಿ ಅಂಗಡಿ ಮಾಲೀಕ ನದೀಮ್ ಎಂಬವರು ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಬೆಂಗಳೂರಿನ ಯಶವಂತಪುರದಲ್ಲಿ 200ಕ್ಕೂ ಅಧಿಕ ಟೊಮೆಟೊ ಟ್ರೇಗಳಿದ್ದ ಗಾಡಿಯನ್ನೇ ಕಳ್ಳತನ ಮಾಡಿದ್ದ ಪ್ರಕರಣ ನಡೆದಿತ್ತು. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕೋಲಾರಕ್ಕೆ ಟೊಮೆಟೊ ಸಾಗಿಸುತ್ತಿದ್ದಾಗ ಮಧ್ಯರಾತ್ರಿ ರಿಂಗ್ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಈ ವೇಳೆ ವಾಹನದಿಂದ ಕೆಳಗಿಳಿಯುತ್ತಿದ್ದಂತೆ ಜಗಳಕ್ಕೆ ನಿಂತ ಕಾರಿನಲ್ಲಿದ್ದ ನಾಲ್ವರು ಹಣಕ್ಕೆ ಬೇಡಿಕೆ ಇಟ್ಟಿದ್ದರು. ಅಷ್ಟೊಂದು ಹಣ ಇಲ್ಲ ಎಂದಾಗ ಟೊಮೆಟೊ ಸಾಗಿಸುತ್ತಿದ್ದ ಇಬ್ಬರನ್ನು ಅದೇ ಗಾಡಿಯಲ್ಲಿ ಕೂರಿಸಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಇಬ್ಬರನ್ನು ಇಳಿಸಿ ಗಾಡಿಯನ್ನು ಕೊಂಡೊಯ್ದಿದ್ದರು.
ಇದನ್ನೂ ಓದಿ: ಸಧ್ಯಕ್ಕೆ ಕಡಿಮೆಯಾಗೋದಿಲ್ಲ ಟೊಮೆಟೊ ಬೆಲೆ; ಇನ್ನೂ 2 ತಿಂಗಳ ಕಾಲ ಶತಕ ಬಾರಿಸಲಿದೆ
ಇದಕ್ಕೂ ಮುನ್ನ, ಹಾಸನದ ಸೋಮನಹಳ್ಳಿಯಲ್ಲಿ ರೈತ ತನ್ನ ಜಮೀನಿನಲ್ಲಿ ಬೆಳೆದಿದ್ದ ಸುಮಾರು ಎರಡೂವರೆ ಲಕ್ಷ ಮೌಲ್ಯದ ಟೊಮೆಟೊಗಳನ್ನು ಕದ್ದೊಯ್ದಿದ್ದರು. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಹೊರ ರಾಜ್ಯಗಳಲ್ಲೂ ಟೊಮೆಟೊ ಕಳ್ಳತನ
ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೆ ಹೊರ ರಾಜ್ಯಗಳಲ್ಲೂ ಟೊಮೆಟೊ ಕಳ್ಳತನ ಪ್ರಕರಣಗಳು ನಡೆದಿವೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ 120 ರೂ. ಬೆಲೆಗೆ ಕೆಜಿ ಟೊಮೆಟೊವನ್ನು 10 ರೂಪಾಯಿಗೆ ನೀಡುವಂತೆ ಮಹಿಳಾ ವ್ಯಾಪಾರಿ ಮತ್ತು ಕುಟುಂಬಸ್ಥರಿಗೆ ಥಳಿಸಿ 4 ಕೆಜಿಯಷ್ಟು ಟೊಮೆಟೊಗಳನ್ನು ದೋಚಿದ್ದರು.
ಒಂದೆಡೆ ಟೊಮೆಟೊ ಬೆಲೆ ಏರುಮುಖವಾಗಿ ಸಾಗುತ್ತಿದೆ, ಇನ್ನೊಂದೆಡೆ ಕಳ್ಳತನ ಪ್ರಕರಣ ನಡೆಯಲು ಆರಂಭವಾಗಿದೆ. ಹೀಗಾಗಿ ವ್ಯಾಪಾರಿಯೊಬ್ಬರು ಟೊಮೆಟೊ ರಕ್ಷಣೆಗಾಗಿ ಉತ್ತರ ಪ್ರದೇಶದ ವಾರಣಾಸಿಯ ವ್ಯಾಪಾರಿಯೊಬ್ಬರು ಇಬ್ಬರು ಬೌನ್ಸರ್ಗಳನ್ನು ನಿಯೋಜಿಸಿದ್ದರು. ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಅದೇ ರೀತಿ, ಆಂಧ್ರದೇಶದಲ್ಲಿನ ಮಾರುಕಟ್ಟೆಯೊಂದಕ್ಕೆ ನುಗ್ಗಿದ ಕಳ್ಳರು ರಾತ್ರೋರಾತ್ರಿ ಟೊಮೆಟೊ ಕಳ್ಳತನ ಮಾಡಿದ್ದರು. ನೆರೆಯ ರಾಜ್ಯ ತೆಲಂಗಾಣದಲ್ಲೂ ವ್ಯಾಪಾರಿಯೊಬ್ಬರಿಂದ 20 ಕೆಜಿಯಷ್ಟು ಟೊಮೆಟೊ ದೋಚಿ ಪರಾರಿಯಾಗಿದ್ದರು.
ಜೈಪುರದಲ್ಲೂ ಟೊಮೆಟೊ ಕಳ್ಳತನ ಪ್ರಕರಣ ನಡೆದಿದ್ದು, ಮೋಹನ ಮಂಡಿಯ ಅಂಗಡಿಗೆ ನುಗ್ಗಿದ ಕಳ್ಳರು ಸುಮಾರು 150 ಕೆಜಿಯಷ್ಟು ಟೊಮೆಟೊ ಕಳವು ಮಾಡಿದ್ದರು. ಕಳ್ಳರು ಪಟ್ಟಿಗೆ ಸಹಿತ ಟೊಮೆಟೊ ಕದ್ದು ಪರಾರಿಯಾಗುತ್ತಿರುವ ದೃಶ್ಯಾವಳಿ ಅಂಗಡಿಯಲ್ಲಿನ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.
ಸ್ಮಾರ್ಟ್ ಫೋನ್ ಖರೀದಿಸಿದ ಗ್ರಾಹಕರಿಗೆ 2ಕೆಜಿ ಟೊಮೆಟೊ ಫ್ರೀ
ಮಧ್ಯಪ್ರದೇಶದ ಅಶೋಕ್ ನಗರದಲ್ಲಿ ಮೊಬೈಲ್ ಶಾಪ್ವೊಂದರ ಮಾಲೀಕರು ಗ್ರಾಹಕರನ್ನು ಸೆಳೆಯಲು ವಿನೂತನ ಪ್ರಯತ್ನ ಮಾಡಿದ್ದರು. ಅಂಗಡಿಯಿಂದ ಸ್ಮಾರ್ಟ್ ಫೋನ್ ಖರೀದಿಸಿದ ಗ್ರಾಹಕರಿಗೆ 2 ಕೆಜಿ ಟೊಮೆಟೊ ಉಚಿತವಾಗಿ ನೀಡುವ ಆಫರ್ ಮುಂದಿಟ್ಟಿದ್ದಾರೆ. ಅದರಂತೆ ಮೊಬೈಲ್ ಮಾರಾಟವೂ ಹೆಚ್ಚಾಗಿದೆ ಎಂದು ಮಾಲೀಕ ಅಭಿಷೇಕ್ ಅಗರ್ವಾಲ್ ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:41 pm, Tue, 11 July 23