ಎದುರು ಮನೆ ವ್ಯಕ್ತಿ ಜತೆ ಲವ್ವಿಡವ್ವಿ: ಗೋಣಿಕೊಪ್ಪದ ಲಾಂಗ್..ಹಾಸನದ ಮೊಳೆ..ಆಂಟಿ ಆಟವೇ ಭೀಕರ..!
ಮಹಿಳೆಯೋರ್ವಳಿಗೆ ಮದುವೆಯಾಗಿ ಇಬ್ಬರು ಮಕ್ಕಳು ಇದ್ದರೂ ಸಹ ಎದುರು ಮನೆ ವ್ಯಕ್ತಿ ಜೊತೆ ಲವ್ವಿಡವ್ವಿ ಇಟ್ಟುಕೊಂಡಿದ್ದಳು. ಆದ್ರೆ, ಇದನ್ನು ಮಾಡಬೇಡ. ಬದಲಾಗು. ಮಕ್ಕಳಿಗಾದರೂ ಬದಲಾಗು ಎಂದು ಗಂಡ ಹಲವು ಬಾರಿ ಬುದ್ಧಿವಾದ ಹೇಳಿದ್ದ. ಆದರೂ ಬದಲಾಗದ ಮಹಿಳೆ, ಪ್ರಿಯಕರನಿಗೆ ಸುಪಾರಿ ಕೊಟ್ಟು ತಾಳಿ ಕಟ್ಟಿದ ಗಂಡನಿಗೆ ಚಟ್ಟಕಟ್ಟಿದ್ದಾಳೆ. ಹೆಂಡ್ತಿ ನಡೆತೆಗೆ ಬೇಸತ್ತು ಮನೆ ತೊರೆದಿದ್ದ ಲೋಕೇಶ್, ಮಕ್ಕಳನ್ನು ನೋಡಲು ಬಂದು ಬರ್ಬರವಾಗಿ ಹತ್ಯೆಯಾಗಿದ್ದಾನೆ.

ಹಾಸನ, (ಜನವರಿ 30): ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಯನ್ನು, ಪತ್ನಿಯೇ ಪ್ರಿಯಕರನಿಗೆ ಸುಪಾರಿಕೊಟ್ಟು ಬರ್ಬರವಾಗಿ ಕೊಲೆ ಮಾಡಿಸಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಕುಂಬಾರಹಳ್ಳಿ ಬಳಿ ನಡೆದಿದೆ. ಗ್ರಾಮದ ನಂಜುಂಡೇಗೌಡ ಅಲಿಯಾಸ್ ಲೋಕೇಶ್(44) ಕೊಲೆಯಾದ ವ್ಯಕ್ತಿ. ಪತ್ನಿ ಸವಿತಾ ಎದುರು ಮನೆ ವ್ಯಕ್ತಿ ಅರಣ್ ಎನ್ನುವಾತ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಇದನ್ನು ಮಾಡಬೇಡ ಇಲ್ಲಿಗೆ ಬಿಟ್ಟು ಬಿಡು ಎಂದು ಪತಿ ಹಲವು ಬಾರಿ ಬುದ್ಧಿವಾದ ಹೇಳಿದ್ದ. ಆದ್ರೆ, ಸವಿತಾ ಮಾತ್ರ ತನ್ನ ಚಾಳಿ ಮುಂದುವರಿಸಿದ್ದು, ಕೊನೆಗೆ ತಮ್ಮ ಸಂಬಂಧಕ್ಕೆ ಅಡ್ಡಿಯಾಗಿದ್ದಾನೆಂದು ಪ್ರಿಯಕರನಿಗೆ ಸುಪಾರಿ ಕೊಟ್ಟು ಕೊಲ್ಲಿಸಿದ್ದಾಳೆ. ಹೆಂಡ್ತಿಯ ನಡೆತೆಯಿಂದ ಬೇಸತ್ತು. ಲೋಕೇಶ್, ಊರು ತೊರೆದು ಹೋಗಿದ್ದ. ಆದ್ರೆ, ಮಕ್ಕಳನ್ನು ನೋಡಲು ಬಂದು ಹೆಂಡ್ತಿ ಕೊಟ್ಟಿದ್ದ ಸುಪಾರಿಗೆ ಬಲಿಯಾಗಿದ್ದಾನೆ. ತನ್ನ ಇಬ್ಬರು ಹೆಣ್ಣು ಮಕ್ಕಳೇ ಸರ್ವಸ್ವ ಎಂದು ಬದುಕಿದ್ದ ಲೋಕೇಶನ ಕೊಲೆಗೆ ಇಡೀ ಊರೇ ಮಮ್ಮಲ ಮರುಗುತ್ತಿದೆ.
ಎಷ್ಟು ಬುದ್ಧಿ ಹೇಳಿದರೂ ಬದಲಾಗಲಿಲ್ಲ ಸವಿತಾ
ಲೋಕೇಶ್ ರೈತನಾದರೂ ಸ್ವಾಭಿಮಾನದ ವ್ಯಕ್ತಿಯಾಗಿದ್ದ. 14 ವರ್ಷಗಳ ಹಿಂದೆ ಸವಿತಾ ಎಂಬಾಕೆಯನ್ನು ಮದುವೆಯಾಗಿದ್ದ. ಸದ್ಯ ಇಬ್ಬರು ಮುದ್ದಾದ ಹೆಣ್ಣು ಮಕ್ಕಳಿದ್ದಾರೆ. ತನ್ನ ಎರಡು ಎಕರೆ ಜಮೀನಿನಲ್ಲಿ ಬೇಕಾದ ಬೆಳೆ ಬೆಳೆಯುತ್ತಿದ್ದ. ಜೊತೆಗೆ ಮಹೀಂದ್ರ ಜಿತೋ ಆಟೋ ಇಟ್ಟುಕೊಂಡು ತನ್ನ ಹಾಗೂ ಅಕ್ಕಪಕ್ಕದ ಗ್ರಾಮಗಳಿಂದ ಹಾಲನ್ನು ಸಂಗ್ರಹಿಸಿ ಬ್ಯಾಡರಹಳ್ಳಿ ಡೇರಿಗೆ ಹಾಕುತ್ತಿದ್ದ.ಇದರಿಂದ ಬಂದ ಕಮಿಷನ್ ಹಣದಿಂದ ಸಂಸಾರ ಸಾಗಿಸುತ್ತಿದ್ದ, ಕುಟುಂಬ ಸಾಗಿಸಲು ಏನನ್ನು ಕಡಿಮೆ ಮಾಡಿರಲಿಲ್ಲ. ಆದ್ರೆ ಎಲ್ಲವನ್ನು ಕೊಡುತ್ತಿದ್ದ ಗಂಡನಿಗೆ ದೋಖಾ ಮಾಡಿದ್ದ ಪತ್ನಿ ಸವಿತಾ ಚಿಕ್ಕ-ಚೊಕ್ಕ ಸಂಸಾರ ಇದ್ದರೂ, ತನ್ನ ಎದುರು ಮನೆಯ ಅರುಣ್ ಎಂಬಾತನೊಂದಿಗೆ ಕಳೆದ 3 ವರ್ಷಗಳಿಂದ ಅಕ್ರಮ ಸಂಬಂಧ ಬೆಳೆಸಿದ್ದಾಳೆ. ಅರುಣ್ ಗೂ ಕೂಡ ಮದುವೆಯಾಗಿ ಇಬ್ಬರು ಮಕ್ಕಳಿದ್ದು, ಈತನ ದುರ್ನಡತೆಯಿಂದ ಮನನೊಂದು ಪತ್ನಿ ತವರು ಮನೆ ಸೇರಿದ್ದಳು. ಬಳಿಕ ಆತ ಸವಿತಾಳೊಂದಿಗೆ ಸಖ್ಯ ಬೆಳೆಸಿದ್ದ.
ಇದನ್ನೂ ಓದಿ: ಯಾದಗಿರಿ: ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಪತಿಯನ್ನೇ ಹತ್ಯೆಗೈದ ಪತ್ನಿ
ಸವಿತಾ ಹಾಗೂ ಅರುಣ್ ಗುಟ್ಟು ರಟ್ಟಾಗಿ ನೆರೆಹೊರೆಯವರು ಮಾತ್ರವಲ್ಲದೆ ಗ್ರಾಮಕ್ಕೆ ಗೊತ್ತಾಗಿದೆ. ಅನೇಕ ಸಲ ರಾಜಿ ಪಂಚಾಯ್ತಿ ನಡೆದರೂ, ಸವಿತಾ ಬದಲಾಗಲಿಲ್ಲ, ತನ್ನ ಮನೆಯಲ್ಲಿ ಏನೇ ನಡೆದರೂ ಎಲ್ಲವನ್ನೂ ಪ್ರಿಯಕರನ ಕಿವಿಗೆ ಊದುತ್ತಿದ್ದಳು. ತನಗೆ ಯಾರೂ ಅಡ್ಡಿ ಬರಬಾರದು ಎಂದು ಪತಿಯನ್ನು ಅವರ ಸಂಬಂಧಿಕರಿಂದ ದೂರ ಮಾಡಿಸಿದ್ದಳು. ಆದರೂ ದೊಡ್ಡವರಾಗಿರುವ ಮಕ್ಕಳಿಗಾಗಿಯಾದರೂ ಪತ್ನಿ ಇಂದು ಸರಿ ಹೋಗುತ್ತಾಳೆ, ನಾಳೆ ಸರಿಹೋಗುತ್ತಾಳೆ ಎಂದು ಲೋಕೇಶ್ ಸಹಿಸಿಕೊಂಡಿದ್ದ. ತಾನು ಮಾಡುತ್ತಿರುವುದು ತಪ್ಪು ಎಂದು ತಿಳಿದು ಬದಲಾಗಬೇಕಿದ್ದ ಸವಿತಾ, ಗಂಡನನ್ನೇ ಮುಗಿಸುವಂತೆ ಪ್ರಿಯಕರಿಗೆ ಸುಪಾರಿ ಕೊಟ್ಟಿದ್ದಾಳೆ.
ಹೆಂಡ್ತಿ ನಡತೆಗೆ ಬೇಸತ್ತು ಮನೆ ತೊರೆದಿದ್ದ ಲೋಕೇಶ್
ಆರು ತಿಂಗಳ ಹಿಂದೆ ಪತ್ನಿಯ ಆಟಕ್ಕೆ ಬೇಸತ್ತ ಲೋಕೇಶ್ ಮನೆ ಬಿಟ್ಟು ಹೋಗಿದ್ದ, ಆತಂಕಗೊಂಡ ಕುಟುಂಬ ಸದಸ್ಯರು ಎಲ್ಲೆಡೆ ಹುಡುಕಾಡಿ ಮಿಸ್ಸಿಂಗ್ ಕೇಸ್ ಕೊಟ್ಟಿದ್ದರು, ಆಗ ಬೆಂಗಳೂರಿನ ಬೇಕರಿಯೊಂದರಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ ಲೋಕೇಶ್ ನನ್ನ ಮರಳಿ ಕರೆಸಿ ವಿಚಾರಣೆ ನಡೆಸಿದಾಗ ಪತ್ನಿಯ ಅಕ್ರಮ ಸಂಬಂಧ ಗುಟ್ಟು ಬಯಲಿಗೆ ಬಂದಿದೆ. ಆಗ ರಾಜಿ ಸಂದಾನ ನಡೆಸಿ ಮಕ್ಕಳಿಗಾಗಿಯಾದ್ರು ಬದಲಾಗು ಎಂದು ಪತ್ನಿಗೆ ಬುದ್ದಿ ಹೇಳಿದ್ದ ಲೋಕೇಶ್ ಮತ್ತೆ ಹೊಸದಾಗಿ ಜೀವನ ಶುರುಮಾಡಿದ್ದ. ಆದ್ರೆ ಏನೇ ಹೇಳಿದ್ರು ಬದಲಾಗದ ಪಾಪಿ ಪತ್ನಿ ಈ ಕೃತ್ಯ ಮಾಡಿದ್ದಾಳೆ.
ಎರಡು ಬಾರಿ ಯತ್ನ, 3ನೇ ಬಾರಿಗೆ ಬರ್ಬರ ಹತ್ಯೆ
ಲೊಕೇಶ್ ಹತ್ಯೆಗಾಗಿ ಅರುಣ್ ಅಂಡ್ ಗ್ಯಾಂಗ್ ಎರಡು ಬಾರಿ ಕೊಲೆಗೆ ಪ್ರಯತ್ನ ಮಾಡಿ ವಿಫಲ ಆಗಿತ್ತು. ಅದೃಷ್ಟವಶಾತ್ ಲೋಕೇಶ ಬಚಾವಾಗಿದ್ದ. ಆದರೆ ಮೂರನೇ ಸಲ ಮಿಸ್ ಆಗಬಾರದು ಎಂದು ಲೋಕೇಶ ಹಾಲು ಸಾಗಿಸುತ್ತಿದ್ದ ಮರುವನಹಳ್ಳಿ-ಬ್ಯಾಡರಹಳ್ಳಿ ಮಾರ್ಗ ಮಧ್ಯೆ ಮುಗಿಸಲು ಪ್ಲಾನ್ ಮಾಡಿದ್ದರು. ಇದಕ್ಕಾಗಿ ಒಂದಲ್ಲ, ಮೂರು ಕಡೆ ಸ್ಥಳ ಗುರುತು ಮಾಡಿದ್ದರು. ಬ್ಯಾಡರಹಳ್ಳಿಗೆ ಹೋಗುವ ರಸ್ತೆ ಮಧ್ಯೆ ಇರುವ ಬಾರೆ ಬಳಿಯ ಮೋಹನ ಎಂಬುವರ ಜಮೀನಿನ ಬಳಿ ಮರದಪಟ್ಟಿಗೆ ಉದ್ದವಾದ 25 ಕ್ಕೂ ಹೆಚ್ಚು ಮೊಳೆ ಚುಚ್ಚಿ, ರಸ್ತೆ ಅಗೆದು ಹೂತು ಭತ್ತದ ಹುಲ್ಲು ಮುಚ್ಚಿದ್ದರು.
ಮತ್ತೊಂದು ಕಡೆ ಹಾರೆ ಇಟ್ಟಿದ್ದರು. ಆದ್ರೆ ಈ ಬಗ್ಗೆ ಸಣ್ಣ ಸುಳಿವು ಇಲ್ಲದ ಲೋಕೇಶ ಎಂದಿನಂತೆ ಹಾಲು ಸಂಗ್ರಹ ಮಾಡಿಕೊಂಡು ಗುರುವಾರ ರಾತ್ರಿ 8.25 ರ ಸುಮಾರಿಗೆ ಆಟೋದಲ್ಲಿ ಡೇರಿಗೆ ಹೋಗುತ್ತಿದ್ದ. ಹಂತಕರು ಅಂದುಕೊಂಡಂತೆ ಆಟೋ ಚಕ್ರಕ್ಕೆ ಮೊಳೆ ಚುಚ್ಚಿ ಪಂಕ್ಚರ್ ಆಯಿತು. ಕೂಡಲೇ ತಮ್ಮೂರಿನ ತಮ್ಮಯ್ಯ ಎಂಬುವರಿಗೆ ಕರೆ ಮಾಡಿ, ಯಾರೋ ರಿಪೀಸ್ ಪಟ್ಟಿಗೆ ಮೊಳೆ ಹೊಡೆದು ಅದರ ಮೇಲೆ ಹುಲ್ಲು ಹಾಕಿ ಮುಚ್ಚಿದ್ದರು. ಇದು ತಿಳಿಯದೇ ಚಕ್ರ ಹತ್ತಿ ಪಂಕ್ಚರ್ ಆಗಿದೆ. ಯಾರನ್ನಾದರೂ ಕರೆದುಕೊಂಡು ಬೇಗ ಬಾ ಎಂದು ಹೇಳಿ ಹಾಗೆಯೇ ಆಟೋದ ಮುಂದಿನ ಸೀಟಲ್ಲಿ ಕುಳಿತು ಫೋನಲ್ಲಿ ಲೋಕೇಶ್ ಮಾತನಾಡುತ್ತಿದ್ದ. ಇದಕ್ಕಾಗಿಯೇ ಕಾದಿದ್ದ ಹಂತಕರ ತಂಡ, ಏಕಾಏಕಿ ಅಟ್ಯಾಕ್ ಮಾಡಿ ಲೋಕೇಶನ ಕಣ್ಣಿಗೆ ಖಾರದಪುಡಿ ಎರಚಿ ಮೊದಲೇ ಹೊಂದಿಸಿಕೊಂಡು ತಂದಿದ್ದ ಮಚ್ಚು, ಲಾಂಗುಗಳಿಂದ ಸಾಯುವವರೆಗೂ ಮನಬಂದಂತೆ ಕೊಚ್ಚಿ, ಲಾಂಗನ್ನು ಅಲ್ಲೇ ಬಿಟ್ಟು ಎಸ್ಕೇಪ್ ಆಗಿದ್ದಾರೆ.
ಇತ್ತ ಲೋಕೇಶ್ ಕರೆ ಮಾಡಿದ್ದ ಮಾಹಿತಿಯನ್ನು ತಮ್ಮಯ್ಯನಿಂದ ತಿಳಿದ ನಂಜುಂಡೇಗೌಡನ ಭಾವ ಸುರೇಶ್, ಶ್ರೀನಿವಾಸ, ಬಾಗೂರು ಮಂಜು ಮೊದಲಾದವರು ಆತಂಕದಿಂದಲೇ ಬೈಕ್‌ಗಳಲ್ಲಿ ಮರುವನಹಳ್ಳಿ-ಬ್ಯಾಡರಹಳ್ಳಿ ನಡುವಿನ ಮೋಹನ ಎಂಬುವರ ಜಮೀನಿನ ಬಳಿಗೆ ದೌಡಾಯಿಸಿದ್ದಾರೆ. ಲೋಕೇಶ ಚಲಾಯಿಸುತ್ತಿದ್ದ ಹಾಲಿನ ವಾಹನ ಅಲ್ಲೇ ನಿಂತಿತ್ತು. ಹತ್ತಿರ ಹೋಗಿ ನೋಡಿದಾಗ ಲೋಕೇಶ ರಕ್ತಸಿಕ್ತವಾಗಿ ಬಿದ್ದಿದ್ದ. ಕೈಗೆ, ತಲೆಯ ಹಿಂಭಾಗಕ್ಕೆ ಮತ್ತು ಕುತ್ತಿಗೆ ಹಿಂಭಾಗವನ್ನು ಹರಿತವಾದ ಆಯುಧದಿಂದ ಕತ್ತರಿಸಿ ದುರುಳರು ಜೀವ ತೆಗೆದಿದ್ದರು. ಇದಕ್ಕೆ ಅರುಣ ಮತ್ತವನ ತಂಡ ಕಾರಣ ಎಂದು ಸುರೇಶ್ ಹಾಗೂ ಇತರರು ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು, ಈ ದೂರಿನ ಮೇರೆಗೆ ಪೊಲೀಸರು, ಸವಿತಾ ಹಾಗೂ ಆಕೆಯ ಪ್ರಿಯಕರ ಅರುಣ್ನನ್ನು ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Thu, 30 January 25