ಚಿಕ್ಕಬಳ್ಳಾಪುರ: ತಂಗಿಯ ಮಗನನ್ನು ಕೊಲೆ ಮಾಡಿ ಬೆಂಗಳೂರಿಗೆ ಬಂದಿದ್ದ ಅಕ್ಕ ಆಟೋ ಚಾಲಕನ ಜಾಣ್ಮೆಯಿಂದ ಸಿಕ್ಕಬಿದ್ದಳು
ಅಷ್ಟಕ್ಕೂ ಅಕ್ಕ-ತಂಗಿಯರ ಮದ್ಯೆ ಅದೇನಾಯ್ತು? ಇಲ್ಲಿದೆ ಓದಿ... ಮುತ್ತಕದಹಳ್ಳಿ ಗ್ರಾಮದ ನಾಗರಾಜ ಆಂಜಿನಮ್ಮ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ಅಕ್ಕ-ತಂಗಿಯರು ಬಾಲ್ಯದಿಂದ ಅನ್ಯೊನ್ಯವಾಗಿ ಬೆಳಿದ್ದಿದ್ದರು. ಆದರೆ ಮದುವೆಯಾದ ನಂತರ ಅಕ್ಕ ಅಂಬಿಕಾಳಿಗೆ ತಂಗಿ ಅನಿತಾಳ ಮೇಲೆ ದ್ವೇಷ ಬೆಳೆದಿದೆ. ಅನಿತಾಳ ಮೇಲಿನ ದ್ವೇಷಕ್ಕೆ ಅಂಬಿಕಾ ಎಸಗಿದಳು ಹೇಯ ಕೃತ್ಯ. ಅದೇನು ಅಂತಿರಾ ಇಲ್ಲಿದೆ ಓದಿ...
ಚಿಕ್ಕಬಳ್ಳಾಪುರ ಡಿ. 03: ಚಿಕ್ಕಬಳ್ಳಾಪುರ (Chikkaballapur) ತಾಲ್ಲೂಕಿನ ಮುತ್ತಕದಹಳ್ಳಿ ಗ್ರಾಮದಲ್ಲಿ ಶನಿವಾರ ಮಾನವಿಯ ಘಟನೆಯೊಂದು ನಡೆದಿತ್ತು. ಅಕ್ಕ ಒಡಹುಟ್ಟಿದ ತಂಗಿ ಮಗನನ್ನೇ ಕೊಲೆ ಮಾಡಿ, ಹೂತು ಹಾಕಿದ್ದಾಳೆ. ಆಶ್ಚರ್ಯವೆನಿಸಿದರು ಸತ್ಯ. ಅಷ್ಟಕ್ಕೂ ಅಕ್ಕ-ತಂಗಿಯರ ಮದ್ಯೆ ಅದೇನಾಯ್ತು? ಇಲ್ಲಿದೆ ಓದಿ… ಮುತ್ತಕದಹಳ್ಳಿ ಗ್ರಾಮದ ನಾಗರಾಜ ಆಂಜಿನಮ್ಮ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು. ದೊಡ್ಡ ಮಗಳು ಅಂಬಿಕ, ಚಿಕ್ಕ ಮಗಳು ಅನಿತಾ. ಇಬ್ಬರಿಗೂ ಮದುವೆಯಾಗಿ 14-15 ವರ್ಷಗಳೇ ಕಳೆದಿವೆ. ಅಂಬಿಕಾ ಅವರನ್ನು ಚಿಕ್ಕಬಳ್ಳಾಪುರ ತಾಲೂಕಿನ ಮಾವಳ್ಳಿ ಗ್ರಾಮಕ್ಕೆ, ಅನಿತಾ ಅವರನ್ನು ಶಿಡ್ಲಘಟ್ಟ ತಾಲೂಕಿನ ದಿಬ್ಬೂರಹಳ್ಳಿ ಗ್ರಾಮಕ್ಕೆ ಕೊಟ್ಟು ಮದುವೆ (Marriage) ಮಾಡಿಕೊಡಲಾಗಿತ್ತು. ಇಬ್ಬರ ಸಂಸಾರ ಸುಂದರವಾಗಿಯೇ ನಡೆದಿತ್ತು.
ಆದರೆ ಮಕ್ಕಳಾದ ಮೇಲೆ ಶುರುವಾಗಿದೆ ವೈಷಮ್ಯ. ಅಂಬಿಕಾಗೆ ಇಬ್ಬರು ಗಂಡು ಮಕ್ಕಳು. ಅಂಬಿಕಾ ಚಿಕ್ಕಬಳ್ಳಾಪುರ ನಗರದ ಬಂಗಾರದ ಅಂಗಡಿ ಮಾಲೀಕನೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದರಂತೆ. ಈ ವಿಚಾರ ಗಂಡನ ಮನೆಯವರಿಗೆ ತಿಳಿಯುತ್ತಿದ್ದಂತೆ ಅಂಬಿಕಾ ತವರು ಸೇರಿದ್ದಾಳೆ. ಅತ್ತ ತಂಗಿ ಅನಿತಾಳ ಸಂಸಾರದಲ್ಲಿ ಕುಟುಂಬ ಕಲಹವಾಗಿ ಆಕೆಯು ತನ್ನ ಇಬ್ಬರು ಮಕ್ಕಳ ಜೊತೆ ತವರುಮನೆ ಸೇರಿದ್ದಾಳೆ.
ಮಕ್ಕಳ ಸಂಸಾರ ಹದೆಗೆಟ್ಟ ಕಾರಣ ತಂದೆ ನಾಗರಾಜ ಇದೇ ನೋವಿನಲ್ಲಿ ಹಾಸಿಗೆ ಹಿಡಿದು ಮೃತಪಟ್ಟಿದ್ದಾರೆ. ಅಕ್ಕ-ತಂಗಿ ತಮ್ಮ ಜೀವನ ನಿರ್ವಹಣೆಗೆ ತವರು ಮನೆಯಲ್ಲಿಯೇ ಕೂಲಿ ಕೆಲಸದ ಆಶ್ರಯಿಸಿದ್ದರು. ತಂಗಿ ಅನಿತಾ ಗ್ರಾಮದಲ್ಲೇ ಕೂಲಿ ಕೆಲಸ ಮಾಡಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದಳು. ಆದರೆ ಅಕ್ಕ ಅಂಬಿಕಾ ಅಷ್ಟೊತ್ತಿಗೆ ಮೊಬೈಲ್ ಕರೆಗಳ ಗೀಳು ಅಂಟಿಸಿಕೊಂಡು ದಿನಕ್ಕೊಂದು ಊರು, ದಿನಕ್ಕೊಂದು ಪೇಟೆ ಎಂದು ಸುತ್ತಲು ಆರಂಭಿಸಿದ್ದಳು. ಇದರಿಂದ ಅನಿತಾ ಆಕ್ರೋಶಗೊಂಡು ಬೈದು ಬುದ್ಧಿ ಹೇಳಿದ್ದಳು. ಅದೇ ಈಗ ಆಕೆಯ ಬಾಳಿಗೆ ಮುಳ್ಳಾಗಿದೆ.
ಇದನ್ನೂ ಓದಿ: ತಂದೆಯಿಂದ ಮಗನ ಕೊಲೆ ಕೇಸ್ಗೆ ಟ್ವಿಸ್ಟ್: ಉದ್ದೇಶಪೂರ್ವಕವಾಗಿ ಮಾಡಿಲ್ಲ ಎಂದ ಅಪ್ಪ
ನವೆಂಬರ್ 30 ರಂದು ಅಕ್ಕ-ತಂಗಿ ಹಾಗೂ ತಾಯಿ ಎಲ್ಲರೂ ಮನೆಯಲ್ಲಿಯೇ ಇದ್ದರು. ಅನಿತಾಳ 8 ವರ್ಷದ ಮಗಳು ಮನುಶ್ರೀ ಹಾಗೂ 6 ವರ್ಷದ ಮಗ ಮಧು ಮನೆಯಲ್ಲಿ ಇದ್ದರು. ಅಂದು ಕನಕ ಜಯಂತಿ ಹಿನ್ನೆಲೆಯಲ್ಲಿ ಅರ್ಧದಿನ ಶಾಲೆ ಮುಗಿಸಿ ಮಕ್ಕಳು ಮನೆಗೆ ಬಂದಿದ್ದರು. ಮನೆಗೆ ಬಂದ ಅನಿತಾ ಮಕ್ಕಳನ್ನು ಅಕ್ಕ ಅಂಬಿಕಾ ಚಾಕ್‍ಲೇಟ್ ಕೊಡಿಸುತ್ತೇನೆ ಎಂದು ಹೇಳಿ ಪೆರೇಸಂದ್ರದ ಬೇಕರಿಗೆ ಕರೆದುಕೊಂಡು ಹೋಗಿದ್ದಾಳೆ. ಸಂಜೆಯಾದರೂ ವಾಪಸ್ಸು ಮನೆಗೆ ಬಂದಿಲ್ಲ. ಇದರಿಂದ ಆತಂಕಗೊಂಡ ಅನಿತಾ ಗ್ರಾಮದ ಅಕ್ಕಪಕ್ಕದ ತೋಟಗಳಲ್ಲಿ ಹುಡುಕಾಡಿದ್ದಾರೆ. ಮಕ್ಕಳು ಪತ್ತೆಯಾಗಿಲ್ಲ.
ನಂತರ ಅಂಬಿಕಾಳಿಗೆ ಪೋನ್ ಮಾಡಿ ವಿಚಾರಿಸಿದಾಗ, ಮಕ್ಕಳು ಕಾಣೆಯಾಗಿರುವುದು ನನಗೆ ಗೊತ್ತಿಲ್ಲ. ನಾನು ಕರೆದುಕೊಂಡು ಹೋಗಿಲ್ಲ, ನಾನು ಎಲ್ಲೋ ಹೋಗಿರುವುದಾಗಿ ಹೇಳಿ ಪೋನ್ ಕಟ್ ಮಾಡಿದ್ದಾಳೆ. ಇದರಿಂದ ಅನುಮಾನ, ಆತಂಕ, ಭಯಗೊಂಡ ಅನಿತಾ ಮಕ್ಕಳನ್ನು ಕರೆದುಕೊಂಡ ಹೋದ ಅಂಬಿಕಾ ಏಕೆ ಸುಳ್ಳು ಹೇಳುತ್ತಿದ್ದಾಳೆಂದು ಪೆರೇಸಂದ್ರ ಪೊಲೀಸ್ ಠಾಣೆಗೆ ಹೋಗಿ ಮಕ್ಕಳು ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾಳೆ. ಅಷ್ಟೊತ್ತಿಗೆ ರಾತ್ರಿ 10 ಗಂಟೆಯಾಗಿತ್ತು.
ಪೊಲೀಸರು ಹಾಗೂ ಅನಿತಾ ಮಕ್ಕಳು ಕಾಣೆಯಾದ ಬಗ್ಗೆ ಮಾಹಿತಿ ಕಲೆ ಹಾಕುತ್ತಿರುವಾಗಲೇ ಅತ್ತ ಬೆಂಗಳೂರಿನ ಕಬ್ಬನ್‍ಪಾರ್ಕ್ ಪೊಲೀಸ್‍ಠಾಣೆಯಿಂದ ಕರೆ ಬಂದಿತ್ತು. ಓರ್ವ ಮಹಿಳೆ ಆಕೆಯ ಹೆಸರು ಅಂಬಿಕಾ, ಆಕೆಯ ಜೊತೆ 8 ವರ್ಷದ ಹೆಣ್ಣು ಮಗ ಮನುಶ್ರೀ ಇದ್ದು, ಆಟೋ ಚಾಲಕ ಅವರನ್ನು ಠಾಣೆಗೆ ಕರೆದುಕೊಂಡು ಬಂದಿದ್ದಾನೆ. ಮಹಿಳೆಯ ನಡತೆ ಅನುಮಾನದಿಂದ ಕೂಡಿದೆ ಬಂದು ವಿಚಾರಿಸಿ ಎಂದು ಸೂಚಿಸಿದ್ದಾರೆ. ಪೆರೇಸಂದ್ರ ಠಾಣೆ ಪೊಲೀಸರು ಹಾಗೂ ಅನಿತಾ ಕಬ್ಬನ್‍ಪಾರ್ಕ್‍ಗೆ ಹೋಗಿ ನೋಡಿದರೆ ಅಲ್ಲಿ ಇದ್ದಿದ್ದು ಅಂಬಿಕಾ ಹಾಗೂ ಮನುಶ್ರೀನೇ ಆಗಿದ್ದರು.
ಅಂಬಿಕಾ ಜೊತೆ ಗಂಡು ಮಗುವಿಲ್ಲ, ಹೆಣ್ಣು ಮಗು ಮಾತ್ರ ಇದೆ. ಇದರಿಂದ ಅನುಮಾನಗೊಂಡ ಅಂಬಿಕಾಳನ್ನು ವಿಚಾರಿಸಿದರೆ ಯಾವುದನ್ನೂ ಸ್ಪಷ್ಟವಾಗಿ ಹೇಳುತ್ತಿರಲಿಲ್ಲ. ಇವರನ್ನು ಠಾಣೆಗೆ ಕರೆತಂದ ಆಟೋಚಾಲಕನನ್ನು ವಿಚಾರಿಸಿದಾಗ ಅಂಬಿಕಾ ಕೆ.ಆರ್.ಮಾರುಕಟ್ಟೆಯಲ್ಲಿ ಆಟೋ ಹತ್ತಿದ್ದು, ಅನಾಥಾಶ್ರಮವೊಂದಕ್ಕೆ ಕರೆದುಕೊಂಡು ಹೋಗುವಂತೆ ಚಾಲಕನಿಗೆ ಹೇಳಿದ್ದಾಳೆ. ಅನಾಥಾಶ್ರಮದಲ್ಲಿ ಹೆಣ್ಣುಮಗುವನ್ನು ಬಿಡಲು ಹಾಗೂ ಹೆಣ್ಣು ಮಗುವಿಗೆ ತಂದೆ-ತಾಯಿ ಇಲ್ಲವೆಂದು ಯಾರೋ ಜೊತೆ ಪೋನಿನಲ್ಲಿ ಮಾತನಾಡುತ್ತಿದ್ದಳು. ಅನುಮಾನಗೊಂಡು ಠಾಣೆಗೆ ಕರೆ ತಂದಿರುವುದಾಗಿ ಚಾಲಕ ತಿಳಿಸಿದ್ದಾನೆ.
ಇದರಿಂದ ಅನುಮಾನಗೊಂಡ ಪೆರೇಸಂದ್ರ ಠಾಣೆಯ ಪೊಲೀಸರು ಮಹಿಳೆಯನ್ನು ಪೆರೇಸಂದ್ರ ಠಾಣೆಗೆ ಕರೆತಂದು ವಿಚಾರಣೆ ನಡೆಸಿದ್ದಾರೆ. ಆಗ ಮಹಿಳೆ ತಾನು ಮಾಡಿದ ಪಾಪ ಕೃತ್ಯವನ್ನು ಬಾಯ್ಬಿಟ್ಟಿದ್ದಾಳೆ. ಅದನ್ನು ಕೇಳಿ ಅನಿತಾ ಕುಸಿದು ಬಿದ್ದರೆ ಪೊಲೀಸರೇ ಕೆಲಕಾಲ ದಂಗಾಗಿದ್ದರು.
ಮುತ್ತಕದಹಳ್ಳಿ ಗ್ರಾಮದಿಂದ ಅನಿತಾಳ ಇಬ್ಬರು ಮಕ್ಕಳನ್ನು ಕರೆದುಕೊಂಡು ಹೋದ ಅಂಬಿಕಾ, ಪೆರೇಸಂದ್ರ ಬೇಕರಿಯೊಂದರಲ್ಲಿ ಚಿಪ್ಸ್ ಕೊಡಿಸಿ, ಮಕ್ಕಳನ್ನು ಎಂಎಲ್‍ಸಿ ತುಳಸಿ ಮುನಿರಾಜುಗೌಡ ಎನ್ನುವವರ ಮಾವಿನ ತೋಪಿಗೆ ಕರೆದುಕೊಂಡು ಹೋಗಿದ್ದಾಳೆ. ಅಲ್ಲಿ ಮಕ್ಕಳ ಕಣ್ಣಿಗೆ ಬಟ್ಟೆಕಟ್ಟಿ, ಕಣ್ಣು ಮುಚ್ಚಾಳೆ ಆಟ ಆಡೋಣವೆಂದು ಪ್ರೇರೇಪಿಸಿ, ಮನುಶ್ರೀ ಒಂದು ಕಡೆ, ಮಧು ಅನ್ನು ಒಂದು ಕಡೆ ಕಳುಹಿಸಿದ್ದಾಳೆ. ನಂತರ ಕೈಗೆ ಸಿಕ್ಕ ಸಲಾಕೆಯನ್ನು ತೆಗೆದುಕೊಂಡು ಬಾಲಕ ಮಧುಗೆ ಹೊಡೆದಿದ್ದಾಳೆ. ಆಗ ಮಗ ಮಧು ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾನೆ.
ಮೃತ ಬಾಲಕ ಮಧುವನ್ನು ಗುಂಡಿತೋಡಿ ಅಲ್ಲೇ ಮಣ್ಣುಮುಚ್ಚಿದ್ದಾಳೆ. ನಂತರ ಬಾಲಕಿ ಮನುಶ್ರೀಯನ್ನು ಕೊಲೆ ಮಾಡುವ ಬಗ್ಗೆ ಯೋಚಿಸಿದ್ದಾಳೆ. ಅಷ್ಟೊತ್ತಿಗೆ ಭಯ ಬಂದು ಗಾಬರಿಯಿಂದ ಮನುಶ್ರೀ ಜೊತೆ ಮಾವಿನತೋಪಿನಿಂದ ಆಚೆ ಬಂದಿದ್ದಾಳೆ. ಆಗ ಮಗಳು ತಮ್ಮ ಎಲ್ಲಿ, ತಮ್ಮನನ್ನು ಏಕೆ ಹೊಡೆದಿದ್ದು ಎಂದರೆ ಏನೂ ಹೇಳದೇ ಮಗಳನ್ನು ಕರೆದುಕೊಂಡು ಆಚೆ ಬಂದಿದ್ದಾಳೆ. ಇದನ್ನು ಸ್ವತಃ 8 ವರ್ಷದ ಮಗಳು ಕಣ್ಣಾರೆ ಕಂಡು ಅಘಾತಕ್ಕೊಳಗಾಗಿದ್ದಾಳೆ.
ಮಗನನ್ನು ಕೊಂದು, ಮಗಳನ್ನು ಕರೆದುಕೊಂಡು ಬೆಂಗಳೂರಿಗೆ ಬಂದಿದ್ದಾಳೆ. ಬೆಂಗಳೂರಿನಲ್ಲಿ ಮಗಳನ್ನು ಆಶ್ರಮಕ್ಕೆ ಸೇರಿಸಲೆಂದು ಇಲ್ಲವೇ ಮಾರಾಟ ಮಾಡಲೆಂದು ಬಾಯ್‍ಪ್ರೆಂಡ್‍ಗೆ ಕರೆ ಮಾಡಿದ್ದಾಳೆ. ಅದನ್ನು ಕೇಳಿಸಿಕೊಂಡ ಆಟೋ ಚಾಲಕ ಬೆಂಗಳೂರಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಗೆ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಅಸಲಿಗೆ ಸ್ವತಃ ತಂಗಿಯ ಮಗನನ್ನು ಕೊಂದು ಹೂತುಹಾಕುವ ಕೋಪವೇನಿತ್ತೆಂದು ಪೊಲೀಸರು ತನಿಖೆ ನಡೆಸಿದರೆ ಅಂಬಿಕಾ ಭಯಾನಕ ಸತ್ಯ ಬಾಯ್ಬಿಟ್ಟಿದ್ದಾಳೆ.
ಅಂಬಿಕಾ-ಅನಿತಾ ಒಡಹುಟ್ಟಿದ ಅಕ್ಕತಂಗಿಯರಾಗಿದ್ದರು, ಅಂಬಿಕಾ ಗಂಡ ಮಕ್ಕಳನ್ನು ಬಿಟ್ಟು ಚಿಕ್ಕಬಳ್ಳಾಪುರದಲ್ಲಿ ಬಂಗಾರದ ಅಂಗಡಿಯ ಮಾಲೀಕನೊಬ್ಬನ ಜೊತೆ ಅನೈತಿಕ ಸಂಬಂಧ ಹೊಂದಿದ್ದಳು. ಅದನ್ನು ಬಿಡಿಸಲು ಅನಿತಾ ಯತ್ನಿಸಿ, ಆ ಬಂಗಾರದ ಅಂಗಡಿ ಮಾಲೀಕನಿಗೆ ಬುದ್ಧಿವಾದ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ಬಂಗಾರದ ಅಂಗಡಿ ಮಾಲೀಕ ಅಂಬಿಕಾಳ ಗಂಡನ ಮನೆಗೆ ಹೋಗಿ ಗಲಾಟೆ ಮಾಡಿ ಛೀಮಾರಿ ಹಾಕಿ ಬಂದಿದ್ದರು. ಇದಕ್ಕೆಲ್ಲಾ ಕಾರಣ ತನ್ನ ತಂಗಿ ಅನಿತಾಳೇ ಎಂದು ಆಕ್ರೋಶಗೊಂಡ ಅಂಬಿಕಾ ಆಕೆಯ ಇಬ್ಬರೂ ಮಕ್ಕಳನ್ನು ಕೊಲ್ಲಲು ಸ್ಕೆಚ್ ಹಾಕಿ, ಮಗನನ್ನು ಕೊಂದಿರುವುದಾಗಿ ಬಾಯಿ ಬಿಟ್ಟಿದ್ದಾಳೆ.
ಇದೀಗ ಪೊಲೀಸರು ಚಿಕ್ಕಬಳ್ಳಾಪುರ ತಹಶೀಲ್ದಾರ್ ಅನಿಲ್ ಕುಮಾರ್ ಅವರನ್ನು ಸ್ಥಳಕ್ಕೆ ಕರೆಯಿಸಿ, ಅವರ ಸಮ್ಮುಖದಲ್ಲಿ ತಜ್ಞ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದರು. ಅಂಬಿಕಾ ಕರುಣೆ ಇಲ್ಲದೆ 6 ವರ್ಷದ ಮುದ್ದಾದ ಕಂದಮ್ಮನ ತಲೆಗೆ ಹೊಡೆದು ಮಣ್ಣಲ್ಲಿ ಮುಚ್ಚಿ ಹಾಕಿದ್ದು ಬಯಲಾಗಿದೆ. ಅಕ್ಕನ ಅನೈತಿಕ ಸಂಬಂಧಗಳಿಗೆ ಬುದ್ಧಿವಾದ ಹೇಳಿದ್ದಕ್ಕೆ ತಂಗಿಯ ಮಗನನ್ನು ಕೊಂದು ಹೂತುಹಾಕಿದ್ದಕ್ಕೆ ಇಡೀ ಗ್ರಾಮವೇ ಮರುಗುತ್ತಿದೆ. ಅಕ್ಕನಿಗೆ ಬುದ್ದಿ ಕಲಿಸಲು ಹೋಗಿ ತಂಗಿ ತನ್ನ ಮಗುವನ್ನು ಕಳೆದುಕೊಂಡು ಗೋಳಾಡುತ್ತಿದ್ದಾಳೆ. ತಾಯಿಯ ಮೇಲಿನ ಕೋಪಕ್ಕೆ ಮಗ ಬಲಿಯಾಗಿದ್ದು ದುರಂತವೇ ಸರಿ.
ಮತ್ತಷ್ಟು ಅಪರಾಧ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:07 am, Sun, 3 December 23