Crime News: ಅಳುತ್ತಿದ್ದಾರೆಂದು ಸ್ವಂತ ಮಕ್ಕಳನ್ನೇ ಕೊಂದಳು ಪಾಪಿ..!
ಇದೀಗ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.

ತಾಯಿ ಕರುಣಾಮಯಿ…ಮಮತೆಯ ಪ್ರತಿರೂಪ…ಅಮ್ಮ ಅಂದರೆ ಆರೈಕೆ… ತಾಯಿಯ ಕುರಿತಾದ ಈ ಹಲವು ರೀತಿಯ ವರ್ಣನೆಗಳನ್ನು ನೀವು ಕೇಳಿರುತ್ತೀರಿ, ಇಲ್ಲ ಓದಿರುತ್ತೀರಿ. ಆದರೆ ಈ ಘಟನೆಯೂ ಇವೆಲ್ಲಕ್ಕೂ ತದ್ವಿರುದ್ಧ ಎಂಬುದೇ ಅಚ್ಚರಿ. ತಾನೇ ಹೊತ್ತು ಹೆತ್ತ ಮಕ್ಕಳನ್ನೇ ತಾಯಿಯೊಬ್ಬಳು ನಿಶ್ಕರುಣೆಯಿಂದ ಕೊಲ್ಲಲು ಸಾಧ್ಯವೇ? ಎಂಬ ಪ್ರಶ್ನೆಗೆ ಈ ಘಟನೆಯೇ ಉತ್ತರ. ಈ ಘಟನೆ ನಡೆದಿರುವುದು ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯ ಪಾಂಡುರ್ನಾ ಗ್ರಾಮದಲ್ಲಿ. ಕೆಲ ದಿನಗಳ ಹಿಂದೆ 30 ವರ್ಷದ ಧುರ್ಪಾದಾಬಾಯಿ ಗಣಪತ್ ನಿಮಲ್ವಾಡ್ ಎಂಬ ಮಹಿಳೆಯು ಮನೆಯಲ್ಲಿ ತಮ್ಮ ಇಬ್ಬರು ಮಕ್ಕಳೊಂದಿಗೆ ಇದ್ದರು.
ಈ ವೇಳೆ ತನ್ನ ನಾಲ್ಕು ತಿಂಗಳ ಮಗಳು ಅನಸೂಯ ನಿರಂತರವಾಗಿ ಅತ್ತಿದ್ದಾಳೆ. ಇದರಿಂದ ಕೋಪಗೊಂಡ ಧುರ್ಪಾದಾಬಾಯಿ ಪುಟ್ಟ ಪುಟಾಣಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ. ಈ ಘಟನೆ ಮೇ 31 ರಂದು ನಡೆದರೆ, ಜೂನ್ 1 ರಂದು ತನ್ನ 2ನೇ ಮಗನನ್ನು ಕೊಂದಿದ್ದಾಳೆ. ಮಗ ದತ್ತ ಹಸಿವಿನಿಂದ ಅಳುತ್ತಿದ್ದ ಕಾರಣ, ಧುರ್ಪಾದಾಬಾಯಿ ಆತನನ್ನು ಕೂಡ ಕತ್ತು ಹಿಸುಕಿ ಕೊಲೆ ಮಾಡಿದ್ದಳು.
ಇದಾದ ಬಳಿಕ ಧುರ್ಪಾದಾಬಾಯಿ ಮುಖೇಡ್ ತಾಲೂಕಿನ ನಿವಾಸಿಗಳಾದ ತನ್ನ ತಾಯಿ ಕೊಂಡಬಾಯಿ ರಾಜೇಮೋದ್ ಮತ್ತು ಸಹೋದರ ಮಾಧವ್ ರಾಜೇಮೋದ್ ಅವರ ಸಹಾಯದಿಂದ ಹೊಲದಲ್ಲಿ ಮಕ್ಕಳ ದೇಹವನ್ನು ಸುಟ್ಟು ಹಾಕಿದ್ದಾಳೆ. ಮಕ್ಕಳನ್ನು ಕೊಂದಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಪೊಲೀಸರಿಗೆ ಊರವರು ಮಾಹಿತಿ ನೀಡಿದ್ದಾರೆ.
ಅದರಂತೆ ಧುರ್ಪಾದಾಬಾಯಿಯನ್ನು ಬಂಧಿಸಿದ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಈ ವೇಳೆ ಇಬ್ಬರು ಮಕ್ಕಳನ್ನು ಅಳುತ್ತಿದ್ದ ಕಾರಣ ಕತ್ತು ಹಿಸುಕಿ ಕೊಂದಿರುವುದಾಗಿ ತಿಳಿಸಿದ್ದಾಳೆ. ಅಷ್ಟೇ ಅಲ್ಲದೆ ಮಕ್ಕಳನ್ನು ಸುಡಲು ತಾಯಿ ಹಾಗೂ ಸಹೋದರ ಸಾಥ್ ನೀಡಿರುವ ವಿಚಾರವನ್ನು ಕೂಡ ಬಾಯಿ ಬಿಟ್ಟಿದ್ದಾಳೆ. ಅದರಂತೆ ಇದೀಗ ಮೂವರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ ಎಂದು ಭೋಕರ್ ತಾಲೂಕಿನ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಅಪರಾಧ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.