ಈ ವರ್ಷ ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸುವುದಿಲ್ಲ: ಬಿಸಿ ನಾಗೇಶ್ ಹೇಳಿಕೆ
ನನಗೆ ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಬೆಂಗಳೂರು: ಕರ್ನಾಟಕದ ಪಠ್ಯದಲ್ಲಿ ಭಗವದ್ಗೀತೆ ಪರಿಚಯಿಸುವ ವಿಚಾರವಾಗಿ ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಸ್ಪಷ್ಟನೆ ನೀಡಿದ್ದಾರೆ. ಈ ವರ್ಷದ ಪಠ್ಯದಲ್ಲಿ ಭಗವದ್ಗೀತೆಯನ್ನ ಪರಿಚಯಿಸಲ್ಲ. ರಾಜ್ಯದ ಪಠ್ಯಪುಸ್ತಕದಲ್ಲಿ ಈ ವರ್ಷ ಭಗವದ್ಗೀತೆ ಸೇರಿಸಲ್ಲ. ಈಗ ಪುಸ್ತಕದಲ್ಲಿ ಜ್ಞಾನವಿದೆ, ಸಂಸ್ಕಾರವಿಲ್ಲ ಎನ್ನುತ್ತಿದ್ದಾರೆ. ಮಾರಲ್ ಸೈನ್ಸ್ ತರುವಂತೆ ಹಲವರು ಬೇಡಿಕೆ ಇಟ್ಟಿದ್ದಾರೆ. ಇಂತಹದೊಂದು ಬೇಡಿಕೆ ಬಗ್ಗೆ ನಾವು ಚರ್ಚೆ ಮಾಡುತ್ತೇವೆ. ಸಿಎಂ ಬಸವರಾಜ ಬೊಮ್ಮಾಯಿ, ಶಿಕ್ಷಣ ತಜ್ಞರ ಜೊತೆ ಚರ್ಚಿಸುತ್ತೇವೆ. ಅದನ್ನು ಹೇಗೆ ಜಾರಿ ಮಾಡಬೇಕೆಂದು ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.
ನನಗೆ ಗುಜರಾತ್ ಮಾದರಿ ಎಂಬುದು ನನಗೆ ಗೊತ್ತಿಲ್ಲ. ವಿದ್ಯಾರ್ಥಿಗಳಿಗೆ ಜ್ಞಾನದ ಜತೆ ಸಂಸ್ಕಾರ ಕಲಿಸಬೇಕಿದೆ. ಅದರ ಬಗ್ಗೆ ಈಗ ಚರ್ಚೆ ನಡೆಯುತ್ತಿದೆ. ಪಠ್ಯದಲ್ಲಿ ಮಾರೆಲ್ ಸೈನ್ಸ್ ಸೇರಿಸಲು ಬೇಡಿಕೆ ಇದೆ. ಬೈಬಲ್, ಕುರಾನ್, ಭಗವದ್ಗೀತೆಗಳಲ್ಲಿನ ಒಳ್ಳೆಯ ಅಂಶಗಳನ್ನು ಸೇರಿಸಿ ಅಂತ ಹೇಳಬಹುದು ಎಂದು ಬೆಂಗಳೂರಿನಲ್ಲಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.
ಗುಜರಾತ್ ಮಾದರಿಯಲ್ಲಿ ಪಠ್ಯದಲ್ಲಿ ಭಗವದ್ಗೀತೆ ಅಳವಡಿಕೆ ವಿಚಾರವಾಗಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯದಲ್ಲಿ ಶಿಕ್ಷಣ ವ್ಯವಸ್ಥೆ ಬದಲಾಯಿಸಲು ಹೋಗಬೇಡಿ. ಕೊರೊನಾದಿಂದ ಮಕ್ಕಳು ಶಿಕ್ಷಣದಿಂದ ವಂಚಿತರಾಗ್ತಿದ್ದಾರೆ. ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವ ಬಗ್ಗೆ ಗಮನಹರಿಸಿ. ಶಾಲಾಕಟ್ಟಡಗಳು, ಮೂಲಸೌಕರ್ಯಗಳ ಬಗ್ಗೆ ಗಮನ ಕೊಡಿ ಎಂದು ರಾಜ್ಯ ಸರ್ಕಾರಕ್ಕೆ ಶಾಸಕ ಪ್ರಿಯಾಂಕ್ ಖರ್ಗೆ ಮನವಿ ಮಾಡಿದ್ದಾರೆ.
ಪಠ್ಯದಲ್ಲಿ ಭಗವದ್ಗೀತೆ ಬಗ್ಗೆ ನಿರಾಣಿ, ಕುಮಾರಸ್ವಾಮಿ ಪ್ರತಿಕ್ರಿಯೆ
ಭಗವದ್ಗೀತೆ ಪಠ್ಯಕ್ಕೆ ಸೇರಿಸುವ ಬಗ್ಗೆ ಮುರುಗೇಶ್ ನಿರಾಣಿ ಪ್ರತಿಕ್ರಿಯೆ ನೀಡಿದ್ದಾರೆ. ಭಗವದ್ಗೀತೆಯಲ್ಲಿ ಮಾನವೀಯ ಮೌಲ್ಯಗಳಿವೆ. ವಿದ್ಯಾರ್ಥಿಗಳು ಭಗವದ್ಗೀತೆ ಓದುವ ಅಗತ್ಯವಿದೆ. ಭಗವದ್ಗೀತೆ ಓದಿದರೆ ಮಕ್ಕಳಲ್ಲಿ ಜ್ಞಾನ ಬೆಳೆಯುತ್ತೆ. ಪಠ್ಯಪುಸ್ತಕದಲ್ಲಿ ಭಗವದ್ಗೀತೆ ಸೇರಿಸಲು ಮುಂದಾಗಿದ್ದಾರೆ. ಗುಜರಾತ್‌ನಂತೆ ರಾಜ್ಯದಲ್ಲಿಯೂ ಮುಂದಾಗಬೇಕು ಎಂದು ಅವರು ತಿಳಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಭಗವದ್ಗೀತೆ ಬೋಧನೆ ಬಗ್ಗೆ ಚರ್ಚೆ ವಿಚಾರವಾಗಿ ಟಿ.ಮಾಯಗೌಡನಹಳ್ಳಿಯಲ್ಲಿ ಹೆಚ್.ಡಿ. ಕುಮಾರಸ್ವಾಮಿ ಹೇಳಿಕೆ ನೀಡಿದ್ದಾರೆ. ಜನರಿಗೆ ಬದುಕು ಕಟ್ಟಿಕೊಡುವ ಕಾರ್ಯಕ್ರಮಗಳು ಬೇಕು. ಮಕ್ಕಳ ಬದುಕು ಕಟ್ಟಿಕೊಡೋದಕ್ಕೆ ಸರ್ಕಾರ ಇರುವುದು. ಮಕ್ಕಳ ಭವಿಷ್ಯ ನಿರ್ಮಿಸುವ ವಿಚಾರ ಶಾಲೆಗಳಲ್ಲಿ ಇರಬೇಕು. ಕೇವಲ ಮತ ಬ್ಯಾಂಕ್‌ಗಾಗಿ ಇಂತಹ ವಿಚಾರಗಳ ಚರ್ಚೆ ಮಾಡಲಾಗುತ್ತಿದೆ. ಇತರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಗಮನ ಹರಿಸಲಿ ಎಂದು ಹೇಳಿದ್ದಾರೆ.
ಹಿಜಾಬ್ ಧರಿಸಿ ಪರೀಕ್ಷೆಗೆ ಅಥವಾ ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ: ಬಿಸಿ ನಾಗೇಶ್ ಸ್ಪಷ್ಟನೆ
ಹಿಜಾಬ್ ವಿಚಾರವಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿನಿಯರಿಗೆ ಶಿಕ್ಷಣ ಇಲಾಖೆ ಮತ್ತೆ ಸ್ಪಷ್ಟನೆ ನೀಡಿದ್ದು ಅದರಂತೆ ಸದ್ಯ ಹೈಕೋರ್ಟ್ ತೀರ್ಪಿನ ಅನುಸಾರ ಹಿಜಾಬ್ ಧರಿಸಿ ಶಾಲೆಗೆ ಹಾಕರಾಗಲು ಅಥವಾ ಪರೀಕ್ಷೆಗೆ ಹಾಜರಾಗಲು ಅವಕಾಶ ಇಲ್ಲ ಎಂದು ಹೇಳಲಾಗಿದೆ. ದ್ವಿತೀಯ ಪಿಯುಸಿ ಪರೀಕ್ಷೆಗೆ ತಿಂಗಳು ಮಾತ್ರ ಬಾಕಿ ಇದೆ. ಈ ನಡುವೆಯೇ ಸುಪ್ರೀಂ ಕೋರ್ಟ್ ಮೊರೆ ಹೋದರೆ, ಅಲ್ಲಿಯ ತೀರ್ಪು ಬರುವವರೆಗೂ ಹಿಜಾಬ್ ದರಿಸಲು ಅವಕಾಶ ನೀಡಿ ಎಂದು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಬೇಡಿಕೆ ಇಟ್ಟಿದ್ದರು. ಪರೀಕ್ಷೆಯಲ್ಲಿ ಆದರೂ ಹಿಜಾಬ್ ಧರಿಸಿ ಎಕ್ಸಾಂ ಬರೆಯಲು ಅವಕಾಶ ನೀಡಿ ಎಂದು ಕೇಳಿದ್ದರು. ಆದರೆ, ಅದಕ್ಕೆ ಅವಕಾಶ ಇರುವುದಿಲ್ಲ ಎಂದು ತಿಳಿಸಲಾಗಿದೆ.
ತರಗತಿಯಲ್ಲಿ ಇನ್ನು ಹಿಜಾಬ್ ಧರಿಸಲು ಅವಕಾಶ ಇಲ್ಲ. ಹೈಕೋರ್ಟ್ ತೀರ್ಪು ನೀಡಿದೆ ಹೀಗಾಗಿ ಸುಪ್ರೀಂ ಕೋರ್ಟ್ ಮೊರೆ ಹೋಗುವ ವಿದ್ಯಾರ್ಥಿಗಳಿಗೆ ಯಾವುದೇ ಕಾರಣಕ್ಕೂ ಮತ್ತೆ ಅವಕಾಶ ಸಡಿಲಿಕೆ ಇರುವುದಿಲ್ಲ. ಇನ್ನು ಮುಂದೆ ಪರೀಕ್ಷೆಯ ವಿಚಾರದಲ್ಲಿ ವಿಶೇಷ ಅವಕಾಶವನ್ನು ನೀಡಲ್ಲ. ಇಷ್ಟು ದಿನ ಕೋರ್ಟ್ ತೀರ್ಪು ಬಂದಿರಲಿಲ್ಲ. ಹೀಗಾಗಿ ಶಿಕ್ಷಣ ಇಲಾಖೆ ಕೊಂಚ ಸಡಿಲಿಕೆ ನೀಡಿತ್ತು. ಇನ್ನುಮುಂದೆ ಮತ್ತೆ ಯಾವುದೇ ಕಾರಣಕ್ಕೂ ಹಿಜಾಬ್ ಅವಕಾಶ ಇಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಸ್ಪಷ್ಟವಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: Hijab Verdict: ಹಿಜಾಬ್ ಧರಿಸಿ ಪರೀಕ್ಷೆಗೆ ಅಥವಾ ತರಗತಿಗೆ ಹಾಜರಾಗಲು ನಿಯಮ ಸಡಿಲಿಕೆ ಇಲ್ಲ: ಬಿಸಿ ನಾಗೇಶ್ ಸ್ಪಷ್ಟನೆ
ಇದನ್ನೂ ಓದಿ: Hijab Verdict: ಹಿಜಾಬ್ ಪ್ರಕರಣದ ಹೈಕೋರ್ಟ್ ಆದೇಶ ಯಾವ ಶಿಕ್ಷಣ ಸಂಸ್ಥೆಗಳಿಗೆ ಅನ್ವಯವಾಗುತ್ತದೆ?
Published On - 11:51 am, Fri, 18 March 22