ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಬೇಸಿಕ್​ ಮೊಬೈಲ್ ಕೂಡಾ ಇಲ್ಲ; ಶೇ.40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ಸಂಪೂರ್ಣ ವಿಮುಖ

| Updated By: Skanda

Updated on: Jul 02, 2021 | 9:28 AM

ಸ್ಮಾರ್ಟ್​ಫೋನ್​ನಿಂದ ಕಲಿಯುವುದರ ಹೊರತಾಗಿ 81,14,097 ವಿದ್ಯಾರ್ಥಿಗಳು ದೂರದರ್ಶನದ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ. ಅಂತೆಯೇ 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಪಾಠ, ಪ್ರವಚನಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಸುಮಾರು 8,65,259 ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ ಸೌಲಭ್ಯ ಕೂಡಾ ಲಭ್ಯವಿಲ್ಲ.

ರಾಜ್ಯದಲ್ಲಿ 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಬೇಸಿಕ್​ ಮೊಬೈಲ್ ಕೂಡಾ ಇಲ್ಲ; ಶೇ.40ರಷ್ಟು ವಿದ್ಯಾರ್ಥಿಗಳು ಶಿಕ್ಷಣದಿಂದ ಸಂಪೂರ್ಣ ವಿಮುಖ
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕೊರೊನಾ ಹಿನ್ನೆಲೆಯಲ್ಲಿ ಕಳೆದ ಒಂದೂವರೆ ವರ್ಷದಿಂದಲೂ ಶೈಕ್ಷಣಿಕ ಚಟುವಟಿಕೆಗಳು ಸಮರ್ಪಕವಾಗಿ ನಡೆಯುತ್ತಿಲ್ಲ. ಉಳಿದೆಲ್ಲಾ ಕ್ಷೇತ್ರಗಳು ಸ್ತಬ್ಧಗೊಂಡಂತೆಯೇ ಶಿಕ್ಷಣಕ್ಕೂ ತೊಡಕುಂಟಾಗಿದೆ. ಕೊವಿಡ್‌ ಹಿನ್ನೆಲೆ 15 ತಿಂಗಳಿಂದ ಶಾಲೆಗಳು ಬಂದ್‌ ಆಗಿರುವ ಕಾರಣ ಶಿಕ್ಷಣ ವಂಚಿತ ಮಕ್ಕಳ ಪ್ರಮಾಣ ಆತಂಕಕಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. 2020-21ನೇ ಶೈಕ್ಷಣಿಕ ಸಾಲಿನ 1-10ನೇ ತರಗತಿವರೆಗಿನ ಮಕ್ಕಳಿಗೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ನಡೆಸಿದ ಸರ್ವೆಯಲ್ಲಿ ಈ ವಿಚಾರ ಬಹಿರಂಗವಾಗಿದ್ದು, ಮಕ್ಕಳ ಕಲಿಕೆಯ ಮೇಲೆ ಕೊರೊನಾ ಬೀರಿರುವ ಪರಿಣಾಮ ಆಘಾತಕಾರಿಯಾಗಿದೆ.

ಶಾಲೆಗಳಿಗೆ ಮಕ್ಕಳನ್ನು ಕರೆತರಲಾಗದ ಕಾರಣ ಆನ್​ಲೈನ್​ ಶಿಕ್ಷಣ ವ್ಯವಸ್ಥೆ ಮಾಡಿದರೂ ಅದು ಶೇ.60ರಷ್ಟು ವಿದ್ಯಾರ್ಥಿಗಳನ್ನು ಮಾತ್ರ ತಲುಪಿದೆ ಎನ್ನುವುದು ವರದಿಯಲ್ಲಿ ಬಹಿರಂಗವಾಗಿದೆ. ಇನ್ನುಳಿದ ಶೇ.40ರಷ್ಟು ವಿದ್ಯಾರ್ಥಿಗಳು ಶಾಲೆಗೆ ದಾಖಲಾಗಿದ್ದರೂ ಶಿಕ್ಷಣದಿಂದ ವಂಚಿತರಾಗಿದ್ದಾರೆ. ರಾಜ್ಯದಲ್ಲಿರುವ ವಿದ್ಯಾರ್ಥಿಗಳ ಪೈಕಿ ಎಷ್ಟು ಮಂದಿ ಸ್ಮಾರ್ಟ್​ಫೋನ್ ಹೊಂದಿದ್ದಾರೆ? ಸ್ಮಾರ್ಟ್​ಫೋನ್​ ಇದ್ದರೂ ಇಂಟರ್​ನೆಟ್​ ಸೌಲಭ್ಯ ಎಷ್ಟು ಮಕ್ಕಳಿಗೆ ಸಿಗುತ್ತದೆ ಎನ್ನುವುದನ್ನು ಅಂಕಿ ಅಂಶಗಳ ಮೂಲಕ ನೋಡಿದರೆ ಒಂದು ಸ್ಪಷ್ಟ ಚಿತ್ರಣ ಸಿಗುತ್ತದೆ.

ಕರ್ನಾಟಕ ರಾಜ್ಯದಲ್ಲಿ ಇರುವ 1-10ನೇ ತರಗತಿವರೆಗಿನ ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 1,05,09,367. ಇದರಲ್ಲಿ ಅಧಿಕೃತವಾಗಿ ಶಾಲೆಗೆ ದಾಖಲಾದ ವಿದ್ಯಾರ್ಥಿಗಳ ಸಂಖ್ಯೆ 93,01,805. ಈ ಮಕ್ಕಳಲ್ಲಿ ಮೊಬೈಲ್ ಬಳಸುವ ವಿದ್ಯಾರ್ಥಿಗಳ ಸಂಖ್ಯೆ 79,03,329. ಆದರೆ, ಅದರಲ್ಲಿ ಸ್ಮಾರ್ಟ್​ಫೋನ್​ ಹೊಂದಿದ ಮಕ್ಕಳ ಸಂಖ್ಯೆ 58,59,907. ಸ್ಮಾರ್ಟ್​ಫೋನ್​ ಹೊಂದಿದ್ದು, ಇಂಟರ್​ನೆಟ್ ಸೌಲಭ್ಯವುಳ್ಳ ಮಕ್ಕಳ ಸಂಖ್ಯೆ 37,79,965.

ಇನ್ನು ಸ್ಮಾರ್ಟ್​ಫೋನ್​ನಿಂದ ಕಲಿಯುವುದರ ಹೊರತಾಗಿ 81,14,097 ವಿದ್ಯಾರ್ಥಿಗಳು ದೂರದರ್ಶನದ ಮೂಲಕ ವ್ಯಾಸಂಗ ಮಾಡುತ್ತಿದ್ದಾರೆ. ಅಂತೆಯೇ 10,45,288 ವಿದ್ಯಾರ್ಥಿಗಳು ರೇಡಿಯೋ ಮೂಲಕ ಪಾಠ, ಪ್ರವಚನಗಳನ್ನು ಕೇಳಿಸಿಕೊಳ್ಳುತ್ತಿದ್ದಾರೆ. ದುರಂತವೆಂದರೆ ಸುಮಾರು 8,65,259 ವಿದ್ಯಾರ್ಥಿಗಳಿಗೆ ಟಿವಿ, ರೇಡಿಯೋ ಸೌಲಭ್ಯ ಕೂಡಾ ಲಭ್ಯವಿಲ್ಲ. ಅಂದರೆ, ಈ ಮಕ್ಕಳಿಗೆ ಶಾಲೆಗೆ ತೆರಳಿ ಶಿಕ್ಷಣ ಕಲಿಯುವ ಹೊರತಾಗಿ ಅಥವಾ ಶಿಕ್ಷಕರೊಂದಿಗೆ ನೇರ ಸಂವಹನ ನಡೆಸಿ ಪಾಠ ಕಲಿಯುವುದರ ಹೊರತಾಗಿ ಬೇರೆ ಯಾವ ಮಾರ್ಗಗಳೂ ಲಭ್ಯವಿಲ್ಲ.

ಶಿಕ್ಷಣ ಇಲಾಖೆ ಸರ್ವೆ ಪ್ರಕಾರ ಸುಮಾರು 21 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳ ಬಳಿ ಬೇಸಿಕ್ ಮೊಬೈಲ್ ಇದ್ದರೆ, ಸುಮಾರು 14 ಲಕ್ಷಕ್ಕೂ ಹೆಚ್ಚು ಮಕ್ಕಳ ಬಳಿ ಮೊಬೈಲ್ ಇಲ್ಲವೇ ಇಲ್ಲ. ಹೀಗಾಗಿ ದೊಡ್ಡ ಸಂಖ್ಯೆಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಟ್ಟಾರೆ ಎಲ್ಲಾ ಮೂಲಗಳಿಂದ ಲೆಕ್ಕ ಹಾಕಿದರೆ 60 ಲಕ್ಷ ಮಕ್ಕಳಿಗೆ ಮಾತ್ರ ಆನ್‌ಲೈನ್ ಶಿಕ್ಷಣ ಸಿಗುತ್ತಿದೆ. ಬಾಕಿ ಉಳಿದ 40 ಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಈ ಮಕ್ಕಳ ಬಳಿ ಟಿವಿ, ಇಂಟರ್ನೆಟ್, ಮೊಬೈಲ್, ಡಿಜಿಟಲ್ ತಂತ್ರಜ್ಞಾನದ ಸೌಲಭ್ಯವಿಲ್ಲದ ಕಾರಣ ಶಿಕ್ಷಣ ಅಲಭ್ಯವಾಗಿದೆ.

ಸದರಿ ಸರ್ವೆಯು ಸರ್ಕಾರಿ, ಅನುದಾನಿತ, ಖಾಸಗಿ ಶಾಲೆಗಳ ವಿದ್ಯಾರ್ಥಿಗಳನ್ನು ಒಳಗೊಂಡಿದ್ದು, ಶಿಕ್ಷಣ ಇಲಾಖೆಯ SATs ವೆಬ್‌ಸೈಟ್‌ನಲ್ಲಿ ಇರುವ ವಿದ್ಯಾರ್ಥಿಗಳ ಸಂಖ್ಯೆಯನ್ನು ಆಧರಿಸಿ ಪರಾಮರ್ಶೆ ನಡೆಸಿದಾಗ ಡಿಜಿಟಲ್ ಯುಗದಲ್ಲೂ ಅಂತರ್ಜಾಲ ಶಿಕ್ಷಣ ಕೈಗೆಟುಕುತ್ತಿಲ್ಲ ಎನ್ನುವ ವಾಸ್ತವ ಅಂಶ ಬಯಲಾಗಿದೆ. 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲೇ ಲಕ್ಷಾಂತರ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದು, ಈ ಬಾರಿಯೂ ಅದೇ ಪರಿಸ್ಥಿತಿ ಮುಂದುವರೆಯುತ್ತಿರುವುದರಿಂದ ಈ ಮಕ್ಕಳ ಭವಿಷ್ಯದ ಬಗ್ಗೆ ತೀರಾ ಗಂಭೀರವಾಗಿ ಆಲೋಚಿಸಲೇಬೇಕಿದೆ.

ಇದನ್ನೂ ಓದಿ:
ಕಾಡುಪ್ರಾಣಿಗಳ ಭಯಕ್ಕೆ ಶಿಕ್ಷಣದಿಂದ ದೂರವಾಗುತ್ತಿರುವ ಮಕ್ಕಳು; ಪರ್ಯಾಯ ವ್ಯವಸ್ಥೆ ಮಾಡುವಂತೆ ಸರ್ಕಾರಕ್ಕೆ ಮನವಿ 

ಗ್ರಾಮೀಣ ಮಕ್ಕಳು ಹೆಸರು ಬರೆಯುವುದನ್ನೂ ಮರೆತಿದ್ದಾರೆ: ಶಿಕ್ಷಣ ಸಚಿವ ಸುರೇಶ್ ಕುಮಾರ್ ಬೇಸರ