NAS 2021 ಕರ್ನಾಟಕದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಭಾಷಾ ವಿಷಯ ಕಷ್ಟ: ಎನ್ಎಎಸ್ ಸಮೀಕ್ಷೆ
ಬೆಳಗಾವಿ ಚಿಕ್ಕೋಡಿ ಜಿಲ್ಲೆ ಮತ್ತೊಮ್ಮೆ ಎಲ್ಲಾ ವರ್ಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡುವ ಮೂಲಕ ಒಟ್ಟಾರೆ ಸಾಧನೆಯ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ.
ಬುಧವಾರ ಬಿಡುಗಡೆಯಾದ ರಾಷ್ಟ್ರೀಯ ಸಾಧನೆ ಸಮೀಕ್ಷೆ 2021 (NAS 2021) ವರದಿಯ ಪ್ರಕಾರ ಕರ್ನಾಟಕದ (Karnataka) ವಿದ್ಯಾರ್ಥಿಗಳು ಭಾಷಾ ವಿಷಯದಲ್ಲಿ(Language) ಹೆಚ್ಚಿನ ಅಂಕ ಪಡೆಯಲು ಕಷ್ಟಪಡುತ್ತಿದ್ದಾರೆ. ಪ್ರೌಢಶಾಲಾ ವಿದ್ಯಾರ್ಥಿಗಳು ಅದರಲ್ಲಿಯೂ ವಿಶೇಷವಾಗಿ 10 ನೇ ತರಗತಿಯ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿ 41 ಪ್ರತಿಶತಕ್ಕೆ ಹೋಲಿಸಿದರೆ ಆಧುನಿಕ ಭಾರತೀಯ ಭಾಷೆಯಲ್ಲಿ (MIS) ಕೇವಲ 35 ಪ್ರತಿಶತವನ್ನು ಸಾಧಿಸಿದ್ದಾರೆ. ಎಲ್ಲಾ ಜಿಲ್ಲೆಗಳಾದ್ಯಂತ 10 ನೇ ತರಗತಿಯ ವಿದ್ಯಾರ್ಥಿಗಳು ರಾಷ್ಟ್ರೀಯ ಸರಾಸರಿಗಿಂತ ಆಧುನಿಕ ಭಾರತೀಯ ಭಾಷಾ ವಿಷಯದಲ್ಲಿ ಕಡಿಮೆ ಸಾಧನೆ ಮಾಡಿದ್ದಾರೆ. ಇದರಲ್ಲಿ ಸುಮಾರು ಶೇ 69 ವಿದ್ಯಾರ್ಥಿಗಳು ಮೂಲಭೂತ ಕಾರ್ಯಕ್ಷಮತೆಯ ಕೆಟಗರಿಯ ಕೆಳಗಿದ್ದು, ಶೇ 30ರಷ್ಟು ವಿದ್ಯಾರ್ಥಿಗಳು ಮೂಲಭೂತ ಕಾರ್ಯಕ್ಷಮತೆ ಕೆಟಗರಿಯಲ್ಲಿದ್ದಾರೆ.ಯಾವುದೇ ವಿದ್ಯಾರ್ಥಿಗಳು ಅಡ್ವಾನ್ಸ್ಡ್ ಕೆಟಗರಿ ತಲುಪಿಲ್ಲ. ಪ್ರತಿ ಮೂರು ವರ್ಷಗಳಿಗೊಮ್ಮೆ ನಡೆಸಲಾಗುವ ಎನ್ಎಎಸ್ ಸಮೀಕ್ಷೆಯು ವಿದ್ಯಾರ್ಥಿಗಳಲ್ಲಿ ಕಲಿಕೆಯ ಮಟ್ಟವನ್ನು ನಿರ್ಣಯಿಸಲು ಮತ್ತು ವಿದ್ಯಾರ್ಥಿಗಳ ಮೇಲೆ ದೀರ್ಘಾವಧಿಯ ಶಾಲೆಗಳ ಮುಚ್ಚುವಿಕೆಯ ಪರಿಣಾಮವನ್ನು ಅಳೆಯಲು ದೃಢವಾದ ಚೌಕಟ್ಟನ್ನು ಮಾಡಲು ಸಹಾಯ ಮಾಡುತ್ತದೆ. ಕರ್ನಾಟಕದಲ್ಲಿ ಒಟ್ಟು 7,210 ಶಾಲೆಗಳು, 31,875 ಶಿಕ್ಷಕರು ಮತ್ತು 2,11,107 ವಿದ್ಯಾರ್ಥಿಗಳು ಸಮೀಕ್ಷೆಯಲ್ಲಿ ಭಾಗವಹಿಸಿದ್ದರು. ಎನ್ಎಎಸ್ 2021 ವರದಿಯು 2021ರಲ್ಲಿ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾನಿಲಯವು ಬಿಡುಗಡೆ ಮಾಡಿದ ‘Loss of Learning during the Pandemic’ ಸಮೀಕ್ಷೆಯನ್ನು ಮೌಲ್ಯೀಕರಿಸುತ್ತದೆ. ಶೇ92 ರಷ್ಟು ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಹಿಂದಿನ ವರ್ಷ ಕೊವಿಡ್ನಿಂದಾಗಿ ಶಾಲೆ ಮುಚ್ಚಲ್ಪಟ್ಟಿದ್ದರಿಂದಕೆಯಿಂದ ಕನಿಷ್ಠ ಒಂದು ಭಾಷಾ ಸಾಮರ್ಥ್ಯವನ್ನು ಕಳೆದುಕೊಂಡಿದ್ದಾರೆ ಎಂದು ಬಹಿರಂಗಪಡಿಸುತ್ತದೆ. ಆದಾಗ್ಯೂ 2017 ರಲ್ಲಿ ಸರಾಸರಿ ಶೇ 63ವಿದ್ಯಾರ್ಥಿಗಳು ಭಾಷೆಗೆ ಸರಿಯಾಗಿ ಪ್ರತಿಕ್ರಿಯಿಸಿದ್ದಾರೆ.
ವಿದ್ಯಾರ್ಥಿಗಳು ಮೇಲ್ದರ್ಜೆಗೆ ಹೋಗುತ್ತಿದ್ದಂತೆ ಎಲ್ಲಾ ವಿಷಯಗಳ ಕಲಿಕೆಯ ಫಲಿತಾಂಶವು ಕ್ರಮೇಣ ಕಡಿಮೆಯಾಗುವುದನ್ನು ತೋರಿಸುತ್ತದೆ. 8 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನದಂತಹ ವಿಷಯಗಳಲ್ಲಿ ಶೇಕಡಾ 50 ಕ್ಕಿಂತ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. 2017 ರ ಎನ್ಎಎಸ್ ವರದಿಗೆ ಹೋಲಿಸಿದರೆ 10 ನೇ ತರಗತಿ ವಿದ್ಯಾರ್ಥಿಗಳು ಬಹುತೇಕ ಎಲ್ಲಾ ವಿಷಯಗಳಲ್ಲಿ ಕಡಿಮೆ ಅಂಕಗಳನ್ನು ಗಳಿಸಿದ್ದಾರೆ. ಈ ಪೈಕಿ ವಿಜ್ಞಾನದಲ್ಲಿ ವಿದ್ಯಾರ್ಥಿಗಳು ಕಡಿಮೆ ಅಂಕಗಳನ್ನು ದಾಖಲಿಸಿದ್ದಾರೆ.
ವಿದ್ಯಾರ್ಥಿಗಳು 2017 ರಲ್ಲಿ 261 ಕ್ಕೆ ಹೋಲಿಸಿದರೆ 2021 ರಲ್ಲಿ 500 ರಲ್ಲಿ 207 ಅಂಕಗಳನ್ನು ಗಳಿಸಿದ್ದಾರೆ. ಅದೇ ವೇಳೆ 10 ನೇ ತರಗತಿಯ ವಿದ್ಯಾರ್ಥಿಗಳಲ್ಲಿ ಕೇವಲ ಶೇ 24 ವಿದ್ಯಾರ್ಥಿಗಳು ತಮ್ಮ ಕಲಿಕೆಯ ಭಾಗವಾದ ಸೂತ್ರಗಳು, ಸಮೀಕರಣಗಳು ಮತ್ತು ನಿಯಮಗಳ ಬಗ್ಗೆ ತಿಳಿದುಕೊಂಡಿದ್ದಾರೆ.
ಬೆಳಗಾವಿ ಚಿಕ್ಕೋಡಿ ಜಿಲ್ಲೆ ಮತ್ತೊಮ್ಮೆ ಎಲ್ಲಾ ವರ್ಗಗಳಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಸರಾಸರಿಗಿಂತ ಹೆಚ್ಚಿನ ಸಾಧನೆ ಮಾಡುವ ಮೂಲಕ ಒಟ್ಟಾರೆ ಸಾಧನೆಯ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ. ಚಿಕ್ಕೋಡಿ ಜಿಲ್ಲೆ 3ನೇ ತರಗತಿಯಲ್ಲಿ ಶೇ.72.4, 5ನೇ ತರಗತಿಯಲ್ಲಿ ಶೇ.61.8, 8ನೇ ತರಗತಿಯಲ್ಲಿ ಶೇ.47.6 ಹಾಗೂ 10ನೇ ತರಗತಿಯಲ್ಲಿ ಶೇ.41.7 ಅಂಕ ಗಳಿಸಿದೆ. 10 ನೇ ತರಗತಿಯಲ್ಲಿ ಬೆಂಗಳೂರು ನಗರ ಉತ್ತರ ಮಾತ್ರ ಸರಾಸರಿ ಶೇಕಡಾ 42 ರಷ್ಟು ದಾಖಲಿಸುವ ಮೂಲಕ ಒಟ್ಟಾರೆ ಸಾಧನೆಯ ಅಂಕಗಳಲ್ಲಿ ಅಗ್ರಸ್ಥಾನದಲ್ಲಿದೆ. ಒಟ್ಟಾರೆಯಾಗಿ, ಕರ್ನಾಟಕವು ಎಲ್ಲಾ ವರ್ಗಗಳಲ್ಲಿ ರಾಷ್ಟ್ರೀಯ ಸರಾಸರಿಗೆ ಸಮನಾಗಿ ಒಟ್ಟಾರೆ ಸಾಧನೆಯ ಅಂಕವನ್ನು ದಾಖಲಿಸಿದೆ. ಬೆಳಗಾವಿ ಚಿಕ್ಕೋಡಿ 2017ರಲ್ಲಿ ಶೇ.81 (3ನೇ ತರಗತಿ), ಶೇ.77 (5ನೇ ತರಗತಿ) ಮತ್ತು ಶೇ.68 (10ನೇ ತರಗತಿ) ಅಂಕಗಳನ್ನು ಗಳಿಸುವ ಮೂಲಕ ಒಟ್ಟಾರೆ ಸಾಧನೆ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.
ಕರ್ನಾಟಕದಲ್ಲಿ ಶೇಕಡಾ 98 ರಷ್ಟು ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ಇಷ್ಟಪಡುತ್ತಾರೆ. ಶೇ 97 ವಿದ್ಯಾರ್ಥಿಗಳು ತರಗತಿಯಲ್ಲಿ ಶಿಕ್ಷಕರು ಏನು ಕಲಿಸುತ್ತಾರೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಾರೆ ಎಂದು ಸಮೀಕ್ಷೆಯು ತೋರಿಸಿದೆ. ಏತನ್ಮಧ್ಯೆ 2017 ರಲ್ಲಿ ತರಗತಿಯಲ್ಲಿ ಶಿಕ್ಷಕರು ಏನು ಕಲಿಸುತ್ತಾರೆ ಎಂಬುದನ್ನು ಕೇವಲ 88 ಪ್ರತಿಶತ ವಿದ್ಯಾರ್ಥಿಗಳು ಮಾತ್ರ ಅರ್ಥ ಮಾಡಿಕೊಂಡಿದ್ದರು. 8 ನೇ ತರಗತಿಯನ್ನು ಹೊರತುಪಡಿಸಿ 3, 5 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳು ಕೊವಿಡ್ ಸಾಂಕ್ರಾಮಿಕ ಸಮಯದಲ್ಲಿ ಮನೆಯಲ್ಲಿದ್ದು ಚೆನ್ನಾಗಿ ಕಲಿತಿದ್ದಾರೆ. ಈ ವಿದ್ಯಾರ್ಥಿಗಳು ಚಿತ್ರಕಲೆ, ಹಾಡುಗಾರಿಕೆ, ಯೋಗ ಮತ್ತು ಇತರ ಒಳಾಂಗಣ ಚಟುವಟಿಕೆಗಳಂತಹ ಚಟುವಟಿಕೆಗಳಲ್ಲಿ ತೊಡಗಿದ್ದರು ಎಂದು ಸಮೀಕ್ಷೆ ಹೇಳಿದೆ.
ದೇಶದ ಇತರ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ ಪ್ರಮುಖ ಸುದ್ದಿಗಳಿಗಾಗಿಇಲ್ಲಿ ಕ್ಲಿಕ್ ಮಾಡಿ