NEET 2021 Exam: ನೀಟ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ನಾಳೆ ಕೊನೆಯ ದಿನ; ವೆಬ್ಸೈಟ್ ಲಿಂಕ್ ಇಲ್ಲಿದೆ
NTA NEET Entrance Exam | ನೀಟ್ ಯುಜಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ntaneet.nic.in ವೆಬ್ಸೈಟ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಅರ್ಜಿ ಸಲ್ಲಿಸಲು ನಾಳೆ (ಆ. 10) ಕೊನೆಯ ದಿನವಾಗಿದೆ.
ನವದೆಹಲಿ: ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (NTA) ನಡೆಸುವ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (NEET UG Exam 2021) ನೋಂದಣಿ ಪ್ರಕ್ರಿಯೆ ನಾಳೆಗೆ (ಆಗಸ್ಟ್ 10) ಮುಕ್ತಾಯಗೊಳ್ಳಲಿದೆ. ನೀಟ್ ಯುಜಿ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ನಾಳೆಯೊಳಗೆ ವೆಬ್ಸೈಟ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಸೆಪ್ಟೆಂಬರ್ 12ಕ್ಕೆ ನೀಟ್ ಪರೀಕ್ಷೆ ನಡೆಯಲಿದ್ದು, ಇಂಗ್ಲಿಷ್, ಕನ್ನಡ, ಹಿಂದಿ, ಅಸ್ಸಾಮೀಸ್, ಬೆಂಗಾಲಿ, ಗುಜರಾತಿ, ಮಲಯಾಳಂ, ಮರಾಠಿ, ಒಡಿಯಾ, ಪಂಜಾಬಿ, ತಮಿಳು, ತೆಲುಗು, ಉರ್ದು ಈ 13 ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.
ನೀಟ್ ಯುಜಿ ಪ್ರವೇಶ ಪರೀಕ್ಷೆ ಬರೆಯುವ ಅಭ್ಯರ್ಥಿಗಳು ntaneet.nic.in ವೆಬ್ಸೈಟ್ನಲ್ಲಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಇಲ್ಲಿರುವ ಫಾರ್ಮ್ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿಗಳನ್ನು ತುಂಬಬೇಕು. ಹಾಗೇ, ನೀಟ್ ಪರೀಕ್ಷೆಯ ಶುಲ್ಕವನ್ನು ಕಟ್ಟಿ, ಅಲ್ಲಿ ಕೇಳಲಾಗಿರುವ ದಾಖಲಾತಿಗಳನ್ನು ಅಪ್ಲೋಡ್ ಮಾಡಬೇಕು. ಬಳಿಕ ನೀವು ಶುಲ್ಕ ಪಾವತಿಸಿದ ದೃಢೀಕರಣ ಪತ್ರವನ್ನು ಡೌನ್ಲೋಡ್ ಮಾಡಿಕೊಳ್ಳಿ. ಈ ಬಾರಿ ನೀಟ್ ಪರೀಕ್ಷೆ ಪೇಪರ್ ಮತ್ತು ಪೆನ್ ಮೋಡ್ನಲ್ಲಿರಲಿದೆ.
ಎಂಬಿಬಿಎಸ್. ಬಿಡಿಎಸ್, ಬಿಎಎಂಎಸ್, ಬಿಯುಎಂಎಸ್, ಬಿಎಚ್ಎಂಎಸ್ ಕೋರ್ಸ್ಗಳ ಪ್ರವೇಶಾತಿಗೆ ನೀಟ್ ಪರೀಕ್ಷೆಯ ಫಲಿತಾಂಶವನ್ನು ಬಳಸಬಹುದು. ಭಾರತದಲ್ಲಿ ಮಾತ್ರವಲ್ಲದೆ ಮಧ್ಯಪ್ರಾಚ್ಯದಲ್ಲಿರುವ ಭಾರತೀಯ ಸಮುದಾಯಗಳಲ್ಲಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗಲೆಂದು ಈ ಬಾರಿ ಕುವೈತ್ ಹಾಗೂ ದುಬೈನಲ್ಲಿ ಕೂಡ ನೀಟ್ ಯುಜಿ ಪರೀಕ್ಷೆ ನಡೆಯಲಿದೆ. ಒಟ್ಟು 198 ಕೇಂದ್ರಗಳಲ್ಲಿ ಈ ಬಾರಿ ನೀಟ್ ಪರೀಕ್ಷೆಗಳು ನಡೆಯಲಿದೆ. ಬಿಎಸ್ಸಿ ನರ್ಸಿಂಗ್ ಕೋರ್ಸ್ಗಳಿಗೆ ನೀಟ್ ಪರೀಕ್ಷೆಯ ಮೂಲಕ ಸೇರಲಿಚ್ಛಿಸುವ ಅಭ್ಯರ್ಥಿಗಳಿಗೆ ಕೆಲವು ನಿರ್ಬಂಧಗಳನ್ನು ವಿಧಿಸಲಾಗಿದೆ. ಬಿಎಸ್ಸಿ ನರ್ಸಿಂಗ್ ಕೋರ್ಸ್ಗೆ ಸೇರಲು ಬಯಸುವ ಅಭ್ಯರ್ಥಿಗಳಿಗೆ ಡಿಸೆಂಬರ್ 31ರ ವೇಳೆಗೆ ಕನಿಷ್ಠ 17 ವರ್ಷ ಪೂರ್ತಿಯಾಗಬೇಕು. ದೇಶದ ನಾನಾ ಕಾಲೇಜುಗಳಲ್ಲಿ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಸ್ಸಿ ನರ್ಸಿಂಗ್ ಕೋರ್ಸ್ಗೆ ದಾಖಲಾತಿ ಪಡೆಯುವ ವಿದ್ಯಾರ್ಥಿಗಳು ಆ ಕಾಲೇಜು/ ವಿಶ್ವವಿದ್ಯಾಲಯ/ ಶಿಕ್ಷಣ ಸಂಸ್ಥೆಗಳಲ್ಲಿನ ಅರ್ಹತಾ ಮಾನದಂಡಗಳನ್ನು ಪರಿಶೀಲಿಸಿಕೊಳ್ಳಬೇಕು. ಬಿಎಸ್ಸಿ ನರ್ಸಿಂಗ್ಗೆ ಸೇರಲಿಚ್ಛಿಸುವ ಅಭ್ಯರ್ಥಿಗಳು ಪಿಸಿಬಿ (ಫಿಸಿಕ್ಸ್, ಕೆಮಿಸ್ಟ್ರಿ, ಬಯಾಲಜಿ) ಹಾಗೂ ಇಂಗ್ಲಿಷ್ನಲ್ಲಿ ಶೇ. 45 ಅಂಕಗಳನ್ನಾದರೂ ಪಡೆದಿರಬೇಕು. ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದಿರಬೇಕು ಎಂದು ಶೈಕ್ಷಣಿಕ ಅರ್ಹತೆಯ ಬಗ್ಗೆ ಎನ್ಟಿಎ ತಿಳಿಸಿದೆ.
ಹಾಗೇ, ಎಸ್ಸಿ/ ಎಸ್ಟಿ ಅಥವಾ ಒಬಿಸಿ ಸಮುದಾಯಕ್ಕೆ ಸೇರಿರುವ ಅಭ್ಯರ್ಥಿಗಳು ಪಿಯುಸಿಯಲ್ಲಿ ಪಿಸಿಬಿ ಕಾಂಬಿನೇಷನ್ ಪಡೆದು ಶೇ. 40ರಷ್ಟು ಅಂಕವನ್ನು ಗಳಿಸಿರಬೇಕು. ಜನರಲ್ ಕೆಟಗರಿಯವರಾದರೆ ಶೇ. 45ರಷ್ಟು ಅಂಕ ಪಡೆದಿರಬೇಕು. ಹಾಗೇ. ದಿವ್ಯಾಂಗರಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗುವುದು. ಅವರಿಗೂ ಶೈಕ್ಷಣಿಕ ಅರ್ಹತೆ ಹಾಗೂ ವಯಸ್ಸಿನ ನಿಯಮಗಳಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಎನ್ಟಿಎ ಮಾಹಿತಿ ನೀಡಿದೆ.
ಮಂಗಳವಾರ (ಆ. 10) ನೀಟ್ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಈ ಮೊದಲು ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಆ. 6ಕ್ಕೆ ನಿಗದಿ ಮಾಡಲಾಗಿತ್ತು. ಬಳಿಕ ಆ ದಿನಾಂಕವನ್ನು ಆ. 10ರವರೆಗೆ ವಿಸ್ತರಿಸಲಾಗಿತ್ತು.
ಇದನ್ನೂ ಓದಿ: NEET 2021: ನೀಟ್ ಮೂಲಕ BSc ನರ್ಸಿಂಗ್ ಕೋರ್ಸ್ ಸೇರಲಿಚ್ಛಿಸುವವರ ವಯಸ್ಸು, ಅರ್ಹತೆಯ ಮಾಹಿತಿ ಹೀಗಿದೆ
(NTA NEET Entrance Exam Application Process is here August 10 is Last Date for NEET 2021 Registration)