ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ: ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!

ಫೆಬ್ರವರಿ 28ರ ದ್ವಿತೀಯ ಪಿಯುಸಿ ಪರೀಕ್ಷೆಗೂ ಮುನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಪೋಸ್ಟ್ ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ. 'ಡಾ. ಕನ್ನಡಿಗ' ಎಂಬ ಖಾತೆಯಿಂದ ಹಣಕ್ಕಾಗಿ ಪೇಪರ್ ಮಾರಾಟದ ಸುಳಿವು ನೀಡಲಾಗಿದೆ. ಇಂತಹ ಪೋಸ್ಟ್‌ಗಳು ನಕಲಿ ಅಥವಾ ಹಳೆಯ ಪತ್ರಿಕೆಗಳಾಗಿರಬಹುದು ಎಂದು ಇಲಾಖೆ ಎಚ್ಚರಿಕೆ ನೀಡಿದೆ. ಶಿವಮೊಗ್ಗದಲ್ಲಿ ಗಣಿತ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಘಟನೆ ನಡೆದಿದ್ದು, ವಿದ್ಯಾರ್ಥಿಗಳು ಇಂತಹ ವಂಚನೆಗಳಿಂದ ದೂರವಿರುವಂತೆ ಸೂಚಿಸಲಾಗಿದೆ.

ದ್ವಿತೀಯ ಪಿಯು ಪರೀಕ್ಷೆಗೂ ಮುನ್ನ ವಿದ್ಯಾರ್ಥಿಗಳಿಗೆ ಆತಂಕ: ಪ್ರಶ್ನೆ ಪತ್ರಿಕೆ ಬೇಕಾದರೆ ಮೆಸೇಜ್ ಮಾಡಿ ಎಂಬ ಪೋಸ್ಟ್ ವೈರಲ್!
ಸಾಂದರ್ಭಿಕ ಚಿತ್ರ
Edited By:

Updated on: Feb 26, 2026 | 8:25 AM

ಬೆಂಗಳೂರು, ಫೆ.26: ಫೆಬ್ರವರಿ 28ರಿಂದ ರಾಜ್ಯಾದ್ಯಂತ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗಳು (PUC exam 2026) ಆರಂಭವಾಗಲಿವೆ. ಆದರೆ, ಪರೀಕ್ಷೆಗೆ ಕೇವಲ ಎರಡು ದಿನ ಬಾಕಿ ಇರುವಾಗ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರಶ್ನೆ ಪತ್ರಿಕೆ ಮಾರಾಟದ ಬಗ್ಗೆ ಪೋಸ್ಟ್ ಒಂದು ಹರಿದಾಡುತ್ತಿರುವುದು ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ತೀವ್ರ ಆತಂಕ ಮೂಡಿಸಿದೆ. ‘ಡಾ. ಕನ್ನಡಿಗ’ ಎಂಬ ಹೆಸರಿನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಕಿಡಿಗೇಡಿಯೊಬ್ಬ ಪ್ರಶ್ನೆ ಪತ್ರಿಕೆಗಳನ್ನು ಮಾರಾಟ ಮಾಡುವುದಾಗಿ ಪೋಸ್ಟ್ ಮಾಡಿದ್ದಾನೆ. “ಯಾವುದಾದರೂ ಪ್ರಶ್ನೆ ಪತ್ರಿಕೆ ಬೇಕು ಅಂದ್ರೆ ಮೆಸೇಜ್ ಮಾಡಿ. ಅಮೌಂಟ್ ಎಷ್ಟು ಅಂತ ಆಮೇಲೆ ಹೇಳ್ತಿನಿ” ಎಂದು ಈ ಕಿಡಿಗೇಡಿ ಬರೆದುಕೊಂಡಿದ್ದಾನೆ. ಇದೀಗ ಘಟನೆ ವಿದ್ಯಾರ್ಥಿಗಳಿಗೆ ಭಯ ಹುಟ್ಟಿಸಿದೆ. ಹಾಗೂ ಪರೀಕ್ಷಾ ಮಂಡಳಿಯ ಕೂಡ ಆತಂಕಕ್ಕೆ ಕಾರಣವಾಗಿದೆ.

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಕಷ್ಟಪಟ್ಟು ಓದುತ್ತಿರುವ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಸೋರಿಕೆಯಾಗಬಹುದೇ ಎಂಬ ಭಯದಲ್ಲಿದ್ದಾರೆ. ಆದರೆ, ಈ ಕಿಡಿಗೇಡಿ ಯಾವ ವಿಷಯದ ಪ್ರಶ್ನೆ ಪತ್ರಿಕೆ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಪರೀಕ್ಷೆಯ ಸಮಯದಲ್ಲಿ ಇಂತಹ ಕಿಡಿಗೇಡಿಗಳು ಹಣ ಮಾಡುವ ಉದ್ದೇಶದಿಂದ ಹಳೆಯ ಪ್ರಶ್ನೆ ಪತ್ರಿಕೆಗಳನ್ನು ಅಥವಾ ನಕಲಿ ಪತ್ರಿಕೆಗಳನ್ನು ನೀಡಿ ವಿದ್ಯಾರ್ಥಿಗಳನ್ನು ದಾರಿ ತಪ್ಪಿಸುವ ಸಾಧ್ಯತೆ ಹೆಚ್ಚು. ಇಂತಹ ಜಾಲಗಳಿಗೆ ಸಿಲುಕಿ ಹಣ ಕಳೆದುಕೊಳ್ಳಬೇಡಿ ಮತ್ತು ನಿಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳಬೇಡಿ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: GST ಆಫೀಸರ್ ಹೆಸರಲ್ಲಿ ಲಕ್ಷ ಲಕ್ಷ ದೋಚಿದ ಹೌಸ್ ಕೀಪಿಂಗ್ ಸಿಬ್ಬಂದಿ! ಗುಟ್ಕಾ ವ್ಯಾಪಾರಿಗೆ ಬೆದರಿಸಿ ವಂಚನೆ

ಇನ್ನು ಇಂತಹ ಅನೇಕ ಘಟನೆಗಳು ರಾಜ್ಯದಲ್ಲಿ ಕಂಡು ಬರುತ್ತಿದೆ. ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆಯುತ್ತಿದ್ದ ದ್ವಿತೀಯ ಪಿಯುಸಿ ಪೂರ್ವಸಿದ್ಧತಾ ಪರೀಕ್ಷೆಯ ಗಣಿತ ವಿಷಯದ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಅಧಿಕಾರಿಗಳಿಗೆ ದೊಡ್ಡ ಆಘಾತ ನೀಡಿತ್ತು. ಜನವರಿ 6, 2026 ರಂದು ಗಣಿತ ಪರೀಕ್ಷೆ ನಡೆಯುತ್ತಿದ್ದಾಗ ಈ ವಿಷಯ ಬೆಳಕಿಗೆ ಬಂದಿದೆ. ಶಿವಮೊಗ್ಗದ ಕಾಲೇಜುಗಳಿಗೆ ನೀಡಲಾಗಿದ್ದ ಪ್ರಶ್ನೆ ಪತ್ರಿಕೆಯ ಪ್ರತಿಯು ಪರೀಕ್ಷೆ ಆರಂಭವಾಗುವ ಮೊದಲೇ ವಾಟ್ಸಾಪ್ ಮೂಲಕ ಹರಿದಾಡಿತ್ತು. ಶಿವಮೊಗ್ಗದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರು (DDPUE) ಕಾಲೇಜುಗಳಿಗೆ ಭೇಟಿ ನೀಡಿದಾಗ ಈ ವಿಚಾರ ಗೊತ್ತಾಗಿದೆ. ಶಿವಮೊಗ್ಗ ಜಿಲ್ಲೆಯ ಕೋಡ್ ಹೊಂದಿದ್ದ ಪ್ರಶ್ನೆ ಪತ್ರಿಕೆಯು ತುಮಕೂರು ಜಿಲ್ಲೆಯಲ್ಲೂ ಚಲಾವಣೆಯಲ್ಲಿರುವುದು ಕಂಡುಬಂದಿದೆ. ಹಿರಿಯ ಅಧಿಕಾರಿಗಳ ಸೂಚನೆಯ ಮೇರೆಗೆ ಶಿವಮೊಗ್ಗದ ಕೋಟೆ ಪೊಲೀಸ್ ಠಾಣೆಯಲ್ಲಿ ಅಧಿಕೃತ ದೂರು ದಾಖಲಿಸಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಶಿವಪ್ರಸಾದ್​ ಬಿ.

2015 ರಲ್ಲಿ ಸಮಯ ವಾಹಿನಿ ಮೂಲಕ ಎಲೆಕ್ಟ್ರಾನಿಕ್ ಮಾಧ್ಯಮದಲ್ಲಿ ವರದಿಗಾರನಾಗಿ ವೃತ್ತಿ ಆರಂಭಿಸಿದೆ. ಕಳೆದ 10 ವರ್ಷಗಳಿಂದ ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಹಿರಿಯ ಕ್ರೈಮ್ ವರದಿಗಾರನಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ . ಬೆಂಗಳೂರು ನಗರದಲ್ಲಿ ನಡೆಯುವ ಅಪರಾಧ ಕೃತ್ಯಗಳ ಬಗ್ಗೆ ನಿರಂತರ ವರದಿಗಳನ್ನು ಮಾಡುತ್ತಿದ್ದೇನೆ. ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನವನಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂಎಸ್ (ಕಮ್ಯೂನಿಕೇಷನ್) ಸ್ನಾತಕೋತ್ತರ ಪದವಿ ಹಾಗೂ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದಲ್ಲಿ ಕಾನೂನು ಪದವೀಧರನಾಗಿದ್ದೇನೆ.

Read More
Loading...
Unable to load recommendations.
Follow Us