
ದೇಶದ ರಕ್ಷಣಾ ವಲಯದಲ್ಲಿ ಉದ್ಯೋಗ ಪಡೆಯುವ ಕನಸು ಕಾಣುತ್ತಿರುವ ಯುವಕ-ಯುವತಿಯರಿಗೆ ಕೇಂದ್ರ ಲೋಕಸೇವಾ ಆಯೋಗ (UPSC) ಭರ್ಜರಿ ಸಿಹಿಸುದ್ದಿ ನೀಡಿದೆ. ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) ಮತ್ತು ಭಾರತೀಯ ನೌಕಾ ಅಕಾಡೆಮಿ (INA) ಪ್ರವೇಶಕ್ಕಾಗಿ NDA 1 2027 ಕಿರು ಅಧಿಸೂಚನೆಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಈ ನೇಮಕಾತಿ ಮೂಲಕ ಸೇನೆ, ನೌಕಾಪಡೆ ಮತ್ತು ವಾಯುಪಡೆ ವಿಭಾಗಗಳಲ್ಲಿ ತರಬೇತಿ ಪಡೆಯಲು ಅವಕಾಶ ನೀಡಲಾಗುವುದು. ದ್ವಿತೀಯ ಪಿಯುಸಿ ವಿದ್ಯಾರ್ಹತೆ ಹೊಂದಿರುವ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.
NDA ಯ ಸೇನಾ ವಿಭಾಗಕ್ಕೆ (Army Wing) ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿ (10+2) ಉತ್ತೀರ್ಣರಾಗಿರಬೇಕು ಅಥವಾ ಪ್ರಸ್ತುತ ದ್ವಿತೀಯ ಪಿಯುಸಿಯ ಎರಡನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಅದೇ ರೀತಿ ನೌಕಾಪಡೆ, ವಾಯುಪಡೆ ಮತ್ತು ಭಾರತೀಯ ನೌಕಾ ಅಕಾಡೆಮಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ದ್ವಿತೀಯ ಪಿಯುಸಿಯಲ್ಲಿ ಭೌತಶಾಸ್ತ್ರ ಮತ್ತು ಗಣಿತ (Physics & Mathematics) ವಿಷಯಗಳನ್ನು ಕಡ್ಡಾಯವಾಗಿ ಅಧ್ಯಯನ ಮಾಡಿರಬೇಕು. ಈ ಎಲ್ಲಾ ವಿಭಾಗಗಳಿಗೆ ಅವಿವಾಹಿತ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ನೇಮಕಾತಿಗೆ ಅರ್ಜಿ ಸಲ್ಲಿಸುವ ಸಾಮಾನ್ಯ (General), ಒಬಿಸಿ (OBC) ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದ (EWS) ಅಭ್ಯರ್ಥಿಗಳು ರೂ. 100 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಆದರೆ ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ಎಲ್ಲಾ ವರ್ಗದ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕದಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ.
ಅಭ್ಯರ್ಥಿಗಳನ್ನು ಪ್ರಮುಖವಾಗಿ ಮೂರು ಹಂತಗಳ ಮೂಲಕ ಆಯ್ಕೆ ಮಾಡಲಾಗುತ್ತದೆ. ಮೊದಲ ಹಂತದಲ್ಲಿ ಒಟ್ಟು 900 ಅಂಕಗಳಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿಗಳಿಗೆ ಎರಡನೇ ಹಂತದಲ್ಲಿ ಸೇವಾ ಆಯ್ಕೆ ಮಂಡಳಿ (SSB) ವತಿಯಿಂದ 900 ಅಂಕಗಳಿಗೆ ಸಂದರ್ಶನವನ್ನು ನಡೆಸಲಾಗುತ್ತದೆ. ಅಂತಿಮವಾಗಿ ಸಂದರ್ಶನದಲ್ಲಿ ತೇರ್ಗಡೆಯಾದವರಿಗೆ ನಿಗದಿತ ವೈದ್ಯಕೀಯ ಪರೀಕ್ಷೆಗಳನ್ನು ನಡೆಸಿ, ಅರ್ಹತಾ ಪಟ್ಟಿಯ (Merit List) ಆಧಾರದ ಮೇಲೆ ಪ್ರವೇಶ ನೀಡಲಾಗುವುದು.
ಇದನ್ನೂ ಓದಿ: ಮೊದಲ ಉದ್ಯೋಗ ಪಡೆಯುವುದು ಹೇಗೆ? ಫ್ರೆಶರ್‌ಗಳು ತಿಳಿದುಕೊಳ್ಳಬೇಕಾದ ಪ್ರಮುಖ ವಿಚಾರಗಳಿವು
UPSC ಬಿಡುಗಡೆ ಮಾಡಿರುವ ಕಿರು ಅಧಿಸೂಚನೆಯ ಪ್ರಕಾರ, ನವೆಂಬರ್ 2026 ರಲ್ಲಿ ಕಿರು ಅಧಿಸೂಚನೆ ಪ್ರಕಟಗೊಂಡಿದ್ದು, ಡಿಸೆಂಬರ್ 2 ರಂದು ಪೂರ್ಣ ಪ್ರಮಾಣದ ಅಧಿಸೂಚನೆ ಬಿಡುಗಡೆಯಾಗಲಿದೆ. ಅಂದಿನಿಂದಲೇ ಆನ್‌ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ಆಸಕ್ತರು ಡಿಸೆಂಬರ್ 22, 2026 ರೊಳಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ನೇಮಕಾತಿಯ ಲಿಖಿತ ಪರೀಕ್ಷೆಯು ಏಪ್ರಿಲ್ 11, 2027 ರಂದು ನಡೆಯಲಿದೆ.
ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಡಿಸೆಂಬರ್ 2 ರಂದು ಪೂರ್ಣ ಅಧಿಸೂಚನೆ ಪ್ರಕಟವಾದ ನಂತರ ವಯೋಮಿತಿ, ಪರೀಕ್ಷಾ ಮಾದರಿ ಮತ್ತು ಇತರ ನಿಯಮಗಳನ್ನು ಸರಿಯಾಗಿ ಪರಿಶೀಲಿಸಬೇಕು. ಬಳಿಕ UPSC ಯ ಅಧಿಕೃತ ಆನ್‌ಲೈನ್ ಪೋರ್ಟಲ್ (upsconline.nic.in) ಮೂಲಕ ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬಹುದು. ರಕ್ಷಣಾ ಕ್ಷೇತ್ರದಲ್ಲಿ ಉನ್ನತ ವೃತ್ತಿಜೀವನವನ್ನು ಪ್ರಾರಂಭಿಸಲು ಬಯಸುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣಾವಕಾಶವಾಗಿದೆ.
ಉದ್ಯೋಗಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ