Bypolls 2023 Schedule: ಜಲಂಧರ್ ಲೋಕಸಭಾ ಕ್ಷೇತ್ರ ಮತ್ತು 4 ವಿಧಾನಸಭಾ ಕ್ಷೇತ್ರಗಳಿಗೆ ಮೇ 10ರಂದು ಉಪಚುನಾವಣೆ
ಒಡಿಶಾದ ಜರ್ಸುಗುಡ ವಿಧಾನಸಭಾ ಕ್ಷೇತ್ರದಲ್ಲಿ ನಭಾ ಕಿಶೋರ್ ದಾಸ್ ನಿಧನದಿಂದಾಗಿ ಮತ್ತು ಉತ್ತರ ಪ್ರದೇಶದ ಛನ್ಬೆ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಪ್ರಕಾಶ್ ಕೋಲ್ ನಿಧನದಿಂದ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ
ಭಾರತೀಯ ಚುನಾವಣಾ ಆಯೋಗವು (Election commission of India) ಒಂದು ಲೋಕಸಭಾ ಕ್ಷೇತ್ರ ಮತ್ತು 4 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ (By elections) ವೇಳಾಪಟ್ಟಿಯನ್ನು ಬುಧವಾರ ಪ್ರಕಟಿಸಿದೆ. ಜಲಂಧರ್, (ಪಂಜಾಬ್), ಜರ್ಸುಗುಡ (ಒಡಿಶಾ), ಛನ್ಬೆ (ಉತ್ತರ ಪ್ರದೇಶ), ಸುಯರ್ (ಉತ್ತರ ಪ್ರದೇಶ), ಸೊಹಿಯಾಂಗ್ (ಮೇಘಾಲಯ)ದಲ್ಲಿ ಉಪ ಚುನಾವಣೆ ನಡೆಯಲಿದೆ. ಎಲ್ಲಾ ಐದು ಸ್ಥಾನಗಳಿಗೆ ಮೇ 10 ರಂದು ಮತದಾನ ನಡೆಯಲಿದ್ದು ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ. ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳಲ್ಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಮಾದರಿ ನೀತಿ ಸಂಹಿತೆ (MCC) ಜಾರಿಗೆ ಬರುತ್ತದೆ.ಉಪಚುನಾವಣೆ ಸಮಯದಲ್ಲಿ ಎಲ್ಲಾ ಮತಗಟ್ಟೆಗಳಲ್ಲಿ, ಇವಿಎಂಗಳು ಮತ್ತು ವಿವಿಪ್ಯಾಟ್‌ಗಳನ್ನು ಬಳಸಲಾಗುವುದು. ಈ ಯಂತ್ರಗಳನ್ನು ಸಾಕಷ್ಟು ಪ್ರಮಾಣದಲ್ಲಿ ಖರೀದಿಸಲಾಗಿದೆ. ಚುನಾವಣಾ ಪ್ರಕ್ರಿಯೆಯು ಸುರಕ್ಷಿತ ಮತ್ತು ಸುಗಮವಾಗಿ ನಡೆಸಲು ಅಗತ್ಯವಿರುವ ಎಲ್ಲಾ ಕ್ರಮಗಳನ್ನು ಅಳವಡಿಸಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಪಂಜಾಬ್ನ ಜಲಂಧರ್ ಲೋಕಸಭಾ ಕ್ಷೇತ್ರದಲ್ಲಿ ಸಂತೋಕ್ ಸಿಂಗ್ ಚೌಧರಿ ನಿಧನದಿಂದ ತೆರವಾಗಿರುವ ಸೀಟಿಗೆ ಉಪ ಚುನಾವಣೆ ನಡೆಯಲಿದೆ. ಒಡಿಶಾದ ಜರ್ಸುಗುಡ ವಿಧಾನಸಭಾ ಕ್ಷೇತ್ರದಲ್ಲಿ ನಭಾ ಕಿಶೋರ್ ದಾಸ್ ನಿಧನದಿಂದಾಗಿ ಮತ್ತು ಉತ್ತರ ಪ್ರದೇಶದ ಛನ್ಬೆ ವಿಧಾನಸಭಾ ಕ್ಷೇತ್ರದಲ್ಲಿ ರಾಹುಲ್ ಪ್ರಕಾಶ್ ಕೋಲ್ ನಿಧನದಿಂದ ಖಾಲಿಯಾಗಿರುವ ಶಾಸಕ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಉತ್ತರ ಪ್ರದೇಶದ ಸುಯರ್ ವಿಧಾನಸಭಾ ಕ್ಷೇತ್ರದಲ್ಲಿ ಮೊಹಮ್ಮದ್ ಅಬ್ದುಲ್ ಆಜಂ ಖಾನ್ ಅನರ್ಹತೆಯಿಂದಾಗಿ ಮತ್ತು ಮೇಘಾಲಯದ ಸೊಹಿಯಾಂಗ್ ನಲ್ಲಿ ಯುನೈಟೆಡ್ ಡೆಮಾಕ್ರಟಿಕ್ ಪಾರ್ಟಿ (ಯುಡಿಪಿ) ಯ ಅಭ್ಯರ್ಥಿಯ ಮರಣದಿಂದಾಗಿ ಮುಂದೂಡಲಾಗಿದ್ದ ಮತದಾನವು ಈಗ ನಡೆಯಲಿದೆ.
ಉಪಚುನಾವಣೆಯ ವೇಳಾಪಟ್ಟಿ
ಗೆಜೆಟ್ ಅಧಿಸೂಚನೆ ಹೊರಡಿಸಿದ ದಿನಾಂಕ- 13.04.2023 (ಗುರುವಾರ)
ನಾಮನಿರ್ದೇಶನ ಸಲ್ಲಿಸಲು ಕೊನೆಯ ದಿನಾಂಕ-20.04.2023 (ಗುರುವಾರ)
ನಾಮನಿರ್ದೇಶನ ಪರಿಶೀಲನೆಯ ದಿನಾಂಕ-21.04.2023 (ಶುಕ್ರವಾರ)
ಉಮೇದುವಾರಿಕೆಗಳನ್ನು ಹಿಂಪಡೆಯಲು ಕೊನೆಯ ದಿನಾಂಕ-24.04.2023 (ಸೋಮವಾರ)
ಮತದಾನದ ದಿನಾಂಕ-10.05.2023 (ಬುಧವಾರ)
ಮತ ಎಣಿಕೆಯ ದಿನಾಂಕ-13.05.2023 (ಶನಿವಾರ)
ಮತ್ತಷ್ಟು ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ