ಭಾರತ್ ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಜತೆ ರಾಹುಲ್ ನಡಿಗೆ; ಟೀಕಾ ಪ್ರಹಾರ ಮಾಡಿದ ಮೋದಿ

ನರ್ಮದಾ ಅಣೆಕಟ್ಟಿನ ವಿರುದ್ಧ ಹೋರಾಡಿದವರ ಹೆಗಲ ಮೇಲೆ ಕೈಯಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದೀರಾ ಎಂದು ನಿಮ್ಮ ಮತ ಕೇಳಲು ಬಂದಾಗ ಕಾಂಗ್ರೆಸ್‌ಗೆ ಕೇಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಭಾರತ್ ಜೋಡೊ ಯಾತ್ರೆಯಲ್ಲಿ ಮೇಧಾ ಪಾಟ್ಕರ್ ಜತೆ ರಾಹುಲ್ ನಡಿಗೆ; ಟೀಕಾ ಪ್ರಹಾರ ಮಾಡಿದ ಮೋದಿ
ಗುಜರಾತಿನಲ್ಲಿ ನರೇಂದ್ರ ಮೋದಿ
Follow us
| Updated By: ರಶ್ಮಿ ಕಲ್ಲಕಟ್ಟ

Updated on: Nov 20, 2022 | 10:07 PM

ರಾಜ್‌ಕೋಟ್: ಗುಜರಾತ್‌ನ  ನರ್ಮದಾ ಅಣೆಕಟ್ಟು ಯೋಜನೆ ವಿರುದ್ಧದ ಅಭಿಯಾನ ನಡೆಸಿದ್ದ ಕಾರ್ಯಕರ್ತೆ ಮೇಧಾ ಪಾಟ್ಕರ್ ‘ಭಾರತ್ ಜೋಡೋ ಯಾತ್ರೆ’ಯಲ್ಲಿ(Bharat Jodo Yatra) ರಾಹುಲ್ ಗಾಂಧಿಯೊಂದಿಗೆ(Rahul Gandhi) ಹೆಜ್ಜೆಹಾಕಿದ್ದಾರೆ. ಇತ್ತ ರಾಜ್ಯ ಚುನಾವಣೆಗೆ ಮುನ್ನ ಭಾನುವಾರ  ಗುಜರಾತ್‌ನ ರಾಜ್‌ಕೋಟ್ ಜಿಲ್ಲೆಯ ಧೋರಾಜಿಯಲ್ಲಿ ನಡೆದ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ (Narendra Modi) “ಮೂರು ದಶಕಗಳಿಂದ ನರ್ಮದಾ ಅಣೆಕಟ್ಟು ಯೋಜನೆಯನ್ನು ಸ್ಥಗಿತಗೊಳಿಸಿದ ಮಹಿಳೆಯೊಂದಿಗೆ ಕಾಂಗ್ರೆಸ್ ನಾಯಕರೊಬ್ಬರು ಪಾದಯಾತ್ರೆ ನಡೆಸುತ್ತಿರುವುದು ಕಂಡುಬಂದಿದೆ” ಎಂದು ಹೇಳುವ ಮೂಲಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮೇಧಾ ಪಾಟ್ಕರ್ ಸೇರಿದಂತೆ ಹೋರಾಟಗಾರರು ಸೃಷ್ಟಿಸಿದ ಕಾನೂನು ತೊಡಕುಗಳಿಂದಾಗಿ ನರ್ಮದಾ ನದಿಗೆ ಸರ್ದಾರ್ ಸರೋವರ ಅಣೆಕಟ್ಟು ನಿರ್ಮಿಸುವ ಯೋಜನೆ ಮೂರು ದಶಕಗಳಿಂದ ಸ್ಥಗಿತಗೊಂಡಿದೆ ಎಂದ ಪ್ರಧಾನಿ, ಮೇಧಾ ಪಾಟ್ಕರ್ ಅವರು ಗುಜರಾತ್‌ಗೆ ಮಾನಹಾನಿ ಮಾಡಿದ್ದಾರೆ ಎಂದು ಆರೋಪಿಸಿದರು.

ನರ್ಮದಾ ಅಣೆಕಟ್ಟಿನ ವಿರುದ್ಧ ಹೋರಾಡಿದವರ ಹೆಗಲ ಮೇಲೆ ಕೈಯಿಟ್ಟುಕೊಂಡು ಪಾದಯಾತ್ರೆ ನಡೆಸುತ್ತಿದ್ದೀರಾ ಎಂದು ನಿಮ್ಮ ಮತ ಕೇಳಲು ಬಂದಾಗ ಕಾಂಗ್ರೆಸ್‌ಗೆ ಕೇಳಿ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಪ್ರಸ್ತುತ ಮಹಾರಾಷ್ಟ್ರದ ಮೂಲಕ ಹಾದು ಹೋಗುತ್ತಿರುವ ಪಾದಯಾತ್ರೆಯಲ್ಲಿ ರಾಹುಲ್ ಗಾಂಧಿಯವರ ಜತೆ ಮೇಧಾ ಪಾಟ್ಕರ್ ಹೆಜ್ಜೆ ಹಾಕಿದ್ದಾರೆ.

2017 ರಲ್ಲಿ ಉದ್ಘಾಟನೆಗೊಂಡ ಗುಜರಾತ್‌ನ ‘ಸರ್ದಾರ್ ಸರೋವರ್ ಅಣೆಕಟ್ಟು’ ವಿರುದ್ಧ ಮೇಧಾ ಪಾಟ್ಕರ್ ಅವರ ಅಭಿಯಾನವನ್ನು ಬಿಜೆಪಿ ಟೀಕಿಸಿದೆ. ಅಣೆಕಟ್ಟಿನ ನೀರು ಸಾವಿರಾರು ಬುಡಕಟ್ಟು ಕುಟುಂಬಗಳನ್ನು ಸ್ಥಳಾಂತರಿಸುತ್ತದೆ ಎಂದು ಹೇಳಿ ಪಾಟ್ಕರ್ ಅವರು ‘ನರ್ಮದಾ ಬಚಾವೋ ಆಂದೋಲನ’ವನ್ನು ಮುನ್ನಡೆಸಿದ್ದಾರೆ. ಶನಿವಾರ ಪಕ್ಷದ ಅಧ್ಯಕ್ಷ ಜೆಪಿ ನಡ್ಡಾ ಅವರು ಮೇಧಾ ಪಾಟ್ಕರ್ ಅವರು “ನರ್ಮದಾ ವಿರೋಧಿ, ಗುಜರಾತ್ ವಿರೋಧಿ ಮತ್ತು ಸೌರಾಷ್ಟ್ರ ವಿರೋಧಿ” ಎಂದು ಹೇಳಿದರು. ಅವರು ನರ್ಮದಾ ಅಣೆಕಟ್ಟು ನಿರ್ಮಾಣವನ್ನು ನಿಲ್ಲಿಸಲು ಪ್ರಯತ್ನಿಸಿದರು ಮತ್ತು ಸೌರಾಷ್ಟ್ರದ ಜನರಿಗೆ ನೀರಿನ ಬಳಕೆಯನ್ನು ವಿರೋಧಿಸಿದರು. ಅಂಥವರು ರಾಹುಲ್ ಗಾಂಧಿ ಜತೆ ಸೇರಿಕೊಂಡರೆ ಅದು ಅವರ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ನಡ್ಡಾ ಹೇಳಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಕೂಡ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಕಾಂಗ್ರೆಸ್ ಸಂಸದ ಗುಜರಾತಿಗಳಿಗೆ ನೀರು ನಿರಾಕರಿಸಿದವರ ಪರವಾಗಿ ನಿಂತಿದ್ದಾರೆ ಎಂದು ಹೇಳಿದರು. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರು ಗುಜರಾತ್ ಮತ್ತು ಗುಜರಾತಿಗಳ ಮೇಲೆ ತಮ್ಮ ಹಗೆತನವನ್ನು ಪದೇ ಪದೇ ತೋರಿಸುತ್ತಿದ್ದಾರೆ. ಮೇಧಾ ಪಾಟ್ಕರ್‌ಗೆ ತಮ್ಮ ಯಾತ್ರೆಯಲ್ಲಿ ಪ್ರಮುಖ ಸ್ಥಾನ ನೀಡುವ ಮೂಲಕ ರಾಹುಲ್ ಗಾಂಧಿ ಅವರು ದಶಕಗಳಿಂದ ಗುಜರಾತಿಗಳಿಗೆ ನೀರು ನಿರಾಕರಿಸಿದವರ ಜೊತೆ ನಿಲ್ಲುವುದಾಗಿ ತೋರಿಸಿದ್ದಾರೆ. ಇದನ್ನು ಗುಜರಾತ್ ಸಹಿಸುವುದಿಲ್ಲ ಎಂದು ಪಟೇಲ್ ಟ್ವೀಟ್ ಮಾಡಿದ್ದಾರೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಮತ ಎಣಿಕೆ ನಡೆಯಲಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಗಾಗಿ ಇಲ್ಲಿ ಕ್ಲಿಕ್ ಮಾಡಿ