ಕಾಂಗ್ರೆಸ್ನತ್ತ ಮುಖ ಮಾಡಿದ ಬಿಜೆಪಿಯ ಪ್ರಮುಖ ನಾಯಕರು, ಬಿಎಸ್‌ವೈ ಜತೆ ಸಿಎಂ ಬೊಮ್ಮಾಯಿ ರಹಸ್ಯ ಸಭೆ
ರಾಜ್ಯ ವಿಧಾನಸಭಾ ಚುನಾವಣೆಗೆ ರಾಜ್ಯ ಬಿಜೆಪಿ ಭರ್ಜರಿ ತಯಾರಿ ನಡೆಸಿದ್ದು, ಈ ಬಾರಿ ಅಧಿಕಾರಕ್ಕೆ ಬರಬೇಕು ಎಂದು ಪಣ ತೊಟ್ಟಿರುವ ಬಿಜೆಪಿ ಕಲಿಗಳಿಗೆ ಸಚಿವ ವಿ ಸೋಮಣ್ಣ ಸೇರಿದಂತೆ ಕೆಲ ಬಿಜೆಪಿ ನಾಯಕರು ಕಾಂಗ್ರೆಸ್ನ್ತ ಮುಖ ಮಾಡಿದ್ದ ದೊಡ್ಡ ಟೆನ್ಶನ್ ತಂದಿಟ್ಟಿದೆ. ಈ ಹಿನ್ನೆಲೆಯಲ್ಲಿ ಸಿಎಂ ಬೊಮ್ಮಾಯಿ ಹಾಗೂ ಯಡಿಯೂರಪ್ಪ ರಹಸ್ಯ ಸಭೆ ಮಾಡಿದ್ದಾರೆ.
ಬೆಂಗಳೂರು: ವಿಧಾನಸಭೆ ಚುನಾವಣೆ (Karnataka Assembly Elections 2023) ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳ ತಂತ್ರ ಪ್ರತಿತಂತ್ರ ಜೋರಾಗಿದೆ. ಪಕ್ಷಾಂತರ ಪರ್ವವೂ ಬಿರುಸುಗೊಂಡಿದೆ. ಅದರಲ್ಲೂ ಪ್ರತಿಪಕ್ಷ ಕಾಂಗ್ರೆಸ್ ಬಿಜೆಪಿಯ(BJP) ಘಟಾನುಘಟಿ ನಾಯಕರುಗಳಿಗೆ ಗಾಳ ಹಾಕಿದೆ. ಸಚಿವ ನಾರಾಯಣ ಗೌಡ (Narayana Gowda) ಈಗಾಗಲೇ ಬಿಜೆಪಿಯಿಂದ ಒಂದು ಕಾಲು ಹೊರಗಿಟ್ಟಿದ್ದಾರೆ. ನಾರಾಯಣಗೌಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತ ಎಂದೇ ಹೇಳಲಾಗುತ್ತಿದೆ. ಇನ್ನು ಬಿಜೆಪಿಯ ಮತ್ತೊಬ್ಬ ಪ್ರಭಾವಿ ಸಚಿವ ವಿ.ಸೋಮಣ್ಣ(V Somanna) ಕೂಡ ಕಾಂಗ್ರೆಸ್‌ಗೆ ಜಿಗಿಯುತ್ತಾರೆ ಎನ್ನುವ ಸುದ್ದಿ ಹರಿದಾಡುತ್ತಿವೆ. ಇತ್ತೀಚೆಗಿನ ಸೋಮಣ್ಣರ ವರ್ತನೆಯೂ ಬಿಜೆಪಿ ತೊರೆಯುತ್ತಾರೆ ಎಂಬ ಊಹಾಪೋಹಗಳಿಗೆ ಪುಷ್ಟಿ ನೀಡುವಂತಿದೆ. ಈ ಇಬ್ಬರು ನಾಯಕರು ಪಕ್ಷ ತೊರೆಯುತ್ತಾರೆ ಎಂಬ ಸುಳಿವಿನ ಹಿನ್ನೆಲೆಯಲ್ಲೇ ಬಿಜೆಪಿಯಲ್ಲಿ ಸಂಧಾನ ಮಾತುಕತೆಗಳು ಜೋರಾಗಿವೆ. ಈ ಸಂಬಂಧ ಸಿಎಂ ಬೊಮ್ಮಾಯಿ ಅವರು ಯಡಿಯೂರಪ್ಪ ಅವರನ್ನು ಭೇಟಿ ಮಾಡಿ 40 ನಿಮಿಷ ರಹಸ್ಯ ಸಭೆ ಮಾಡಿದ್ದಾರೆ.
ಇದನ್ನೂ ಓದಿ: ಸಚಿವ ಸೋಮಣ್ಣ ಮುನಿಸು ಶಮನಕ್ಕೆ ಸಿಎಂ ಬೊಮ್ಮಾಯಿ ಯತ್ನ; ಸೋಮಣ್ಣ ನಡೆ ಇನ್ನೂ ನಿಗೂಢ
ಬಿಎಸ್‌ವೈ ಜತೆ ಸಿಎಂ ಬೊಮ್ಮಾಯಿ ರಹಸ್ಯ ಮೀಟಿಂಗ್
ಕರ್ನಾಟಕದಲ್ಲಿ ಮತ್ತೊಮ್ಮೆ ಕಮಲ ಅರಳಿಲು ಪ್ರಧಾನಿ ಮೋದಿ, ಅಮಿತ್ ಶಾ ಪಣ ತೊಟ್ಟಿದ್ದಾರೆ. ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ನೆಪದಲ್ಲಿ ಪದೇ ಪದೇ ಕರುನಾಡಿಗೆ ದಂಡಯಾತ್ರೆ ಕೈಗೊಂಡು ಮತಬೇಟೆ ನಡೆಸುತ್ತಿದ್ದಾರೆ. ಇದರ ನಡುವೆ ಬಿಜೆಪಿ ನಾಯಕರಿಗೆ ಕಾಂಗ್ರೆಸ್ ಗಾಳ ಹಾಕಿರುವ ವಿಚಾರ ಕಮಲ ಪಾಳಯದಲ್ಲಿ ತಳಮಳ ಸೃಷ್ಟಿಸಿದೆ. ಚುನಾವಣೆ ಹೊತ್ತಲ್ಲೇ ತನ್ನ ನಾಯಕರನ್ನು ಹಿಡಿದಿಟ್ಟುಕೊಳ್ಳಲು ಕಸರತ್ತು ನಡೆಸ್ತಿದೆ. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಸಿಎಂ ಫುಲ್ ಅಲರ್ಟ್ ಆಗಿದ್ದಾರೆ. ನಿನ್ನೆ(ಮಾ.13) ಯಡಿಯೂರಪ್ಪರನ್ನು ಭೇಟಿಯಾಗಿ ಮಹತ್ವದ ಮಾತುಕತೆ ನಡೆಸಿದ್ದಾರೆ.
40 ನಿಮಿಷಗಳ ಕಾಲ ನಡೆದ ಮಾತುಕತೆ
ಸಿಎಂ ಬಸವರಾಜ ಬೊಮ್ಮಾಯಿ ನಿನ್ನೆ ರಾತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದಾರೆ. ಬೆಂಗಳೂರಿನ ಕಾವೇರಿ ನಿವಾಸದಲ್ಲಿ 40 ನಿಮಿಷಗಳ ಕಾಲ ಯಡಿಯೂರಪ್ಪ ಜತೆ ರಹಸ್ಯವಾಗಿ ಮಾತುಕತೆ ನಡೆಸಿದ್ದಾರೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಬಿಎಸ್‌ವೈ ಜತೆ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ. ಅದ್ರಲ್ಲೂ ಪ್ರಮುಖವಾಗಿ ಮಾಡಾಳ್ ವಿರೂಪಾಕ್ಷಪ್ಪ ಪ್ರಕರಣ, ಸಚಿವ ವಿ.ಸೋಮಣ್ಣ ಮುನಿಸು, ವಿಜಯಸಂಕಲ್ಪ ಯಾತ್ರೆ, ಪ್ರಧಾನಿ ಮೋದಿ, ಹಾಗೂ ಅಮಿತ್ ಶಾ ಪ್ರವಾಸದ ಬಗ್ಗೆ ಚರ್ಚಿಸಿದ್ದಾರೆ ಎನ್ನಲಾಗಿದೆ. ಚುನಾವಣೆಗೆ ದಿನಾಂಕ ಸಮೀಪಿಸುತ್ತಿರುವ ಹಿನ್ನೆಲೆ ಅಭ್ಯರ್ಥಿಗಳಿಗೆ ಟಿಕೆಟ್ ವಿಚಾರ ಕುರಿತಂತೆಯೂ ಪ್ರತ್ಯೇಕವಾಗಿ ಮಾತುಕತೆ ನಡೆಸಿದ್ದಾರೆ ಎನ್ನಲಾಗಿದೆ.
ಈ ಇಬ್ಬರು ನಾಯಕರು ಪಕ್ಷ ತೊರೆಯುತ್ತಾರೆ ಎಂಬ ಸುಳಿವಿನ ಹಿನ್ನೆಲೆಯಲ್ಲೇ ಬಿಜೆಪಿ ನಾಯಕರು ಮೊನ್ನೆ ಮಂಡ್ಯದಲ್ಲಿ ಮೋದಿ ಅವರಿಗೆ ಸಚಿವ ನಾರಾಯಣಗೌಡ ಮೂಲಕವೇ ಸನ್ಮಾನ ಮಾಡಿಸಿದ್ದರು. ಇನ್ನು ಧಾರವಾಡದಲ್ಲಿ ಸಚಿವ ವಿ.ಸೋಮಣ್ಣರಿಂದ ಮೋದಿಗೆ ಉಡುಗೊರೆ ಕೊಡಿಸಿದ್ದರು. ಈ ಮೂಲಕ ಇಬ್ಬರು ನಾಯಕರು ಉಭಯ ಸಂಕಟಕ್ಕೆ ಸಿಲುಕುವಂತೆ ಮಾಡಿದ್ದರು.
ಗೋವಿಂದರಾಜ ನಗರ ಹಾಗೂ ಪುತ್ರ ಅರುಣ್ ಸೋಮಣ್ಣಗೆ ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಟಿಕೆಟ್ ನೀಡಬೇಕೆಂದು ಬೇಡಿಕೆ ಇಟ್ಟಿದ್ದಾರೆ ಎಂದು ತಿಳಿದುಬಂದಿದೆ. ಆದ್ರೆ, ಹೈಕಮಾಂಡ್ ಒಂದೇ ಕುಟುಂಬಕ್ಕೆ ಎರಡು ಟಿಕೆಟ್ ಕಷ್ಟ ಸಾಧ್ಯ ಎಂದು ಹೇಳಿದೆ. ಇದರಿಂದ ಮುನಿಸಿಕೊಂಡಿರುವ ಸೋಮಣ್ಣ ತಮ್ಮ ಪುತ್ರನ ರಾಜಕೀಯ ಭವಿಷ್ಯದ ಕುರಿತು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿದ್ದಾರೆ. ಆದ್ರೆ, ಸದ್ಯಕ್ಕೆ ಸೋಮಣ್ಣ ಜೊತೆ ಸಿಎಂ ಬಸವರಾಜ ಬೊಮ್ಮಾಯಿ, ಸೇರಿದಂತೆ ಹಲವು ಸಚಿವರು ಮಾತುಕತೆ ಮೂಲಕ ಸಮಧಾನಪಡಿಸಲು ಪಯತ್ನಿಸಿದ್ದಾರೆ. ಆದ್ರೆ, ಸೋಮಣ್ಣ ಬಿಜೆಪಿ ಬಿಡುವುದು, ಕಾಂಗ್ರೆಸ್ ಸೇರುವುದರ ಬಗ್ಗೆ ಸ್ಪಷ್ಟನೆ ನೀಡುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸೋಮಣ್ಣ ನಡೆ ದಿನದಿಂದ ದಿನಕ್ಕೆ ನಿಗೂಢವಾಗಿದೆ.
ಕಾಂಗ್ರೆಸ್ನಲ್ಲಿ ವಿರೋಧ
ಒಂದೆಡೆ ಸೋಮಣ್ಣ ಅವರನ್ನು ಪಕ್ಷ ಸೇರಿಸಿಕೊಳ್ಳು ಡಿಕೆ ಶಿವಕುಮಾರ್ ಶತಪ್ರಯತ್ನ ಮಾಡುತ್ತಿದ್ದಾರೆ. ಮತ್ತೊಂದೆಡೆ ಸೋಮಣ್ಣ ಸೇರ್ಪಡೆಗೆ ಕಾಂಗ್ರೆಸ್ನಲ್ಲಿ ವಿರೋಧ ವ್ಯಕ್ತವಾಗಿವೆ. ಯಾವುದೇ ಕಾರಣಕ್ಕೂ ಸೋಮಣ್ಣ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಳ್ಳುವುದು ಬೇಡ ಎಂದು ಸ್ವತಃ ಕೆಪಿಸಿಸಿ ಕಾರ್ಯಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಇನ್ನಿತರ ಲಿಂಗಾಯತ ನಾಯಕರು ವಿರೋಧಿಸಿದ್ದಾರೆ.
ಒಟ್ಟಿನಲ್ಲಿ ವಿಧಾನಸಭೆ ಚುನಾವಣೆ ದಿನದಿಂದ ದಿನಕ್ಕೆ ರಂಗೇರುತ್ತಿದ್ದರೆ ಇತ್ತ ಸಚಿವ ಸೋಮಣ್ಣ ರಾಜಕೀಯ ನಡೆ ಕೂಡ ಕುತೂಹಲ ಮೂಡಿಸಿದ್ದಯ, ಅಂತಿಮವಾಗಿ ಯಾವ ಪಕ್ಷಕ್ಕೆ ಜೈ ಎನ್ನುತ್ತಾರೆ ಎಂದು ಕಾದುನೋಡಬೇಕಿದೆ.
ಇನ್ನಷ್ಟು ರಾಜಕೀಯ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ