ಚುನಾವಣೆ ಸೋಲಿನ ಆತ್ಮಾವಲೋಕನ ಸಭೆಯಲ್ಲಿ ಕಣ್ಣೀರಿಟ್ಟ ಮಾಜಿ ಸಚಿವ ಮುರುಗೇಶ್ ನಿರಾಣಿ
2023ರ ಚುನಾವಣೆ ಮುಗಿದು ಹೋಗಿದೆ. ಸೋತವರ ಮನೆಯಲ್ಲಿ ಇದೀಗ ಸೂತಕದ ಛಾಯೆ ಆವರಿಸಿದೆ. ಅದೊಂದು ಜಿಲ್ಲೆಯಲ್ಲಿದ್ದ ಏಳು ಕ್ಷೇತ್ರದಲ್ಲಿ ಐದು ಕ್ಷೇತ್ರದಲ್ಲಿ ಹಸ್ತ ಮೇಲೆದ್ದಿದೆ. ಅದರಲ್ಲೂ ಇಬ್ಬರು ಪ್ರಭಾವಿ ಸಚಿವರು ಸೋತು ಮುಖಭಂಗ ಅನುಭವಿಸಿದ್ದಾರೆ. ಅದರಲ್ಲೊಬ್ಬ ಪ್ರಭಾವಿ ಸಚಿವ ನಿನ್ನೆ(ಮೇ.15) ಆತ್ಮಾವಲೋಕನ ಸಭೆ ನಡೆಸಿದ್ದು, ಕಾರ್ಯಕರ್ತರ ಜೊತೆ ಕಣ್ಣೀರು ಹಾಕಿದ್ದಾರೆ.
ಬಾಗಲಕೋಟೆ: ರಾಜ್ಯ ವಿಧಾನಸಭೆ ಚುನಾವಣೆ(Karnataka Assembly Election 2023) ಮುಗಿದಿದ್ದು, ಸಂಪೂರ್ಣ ಬಹುಮತದಿಂದ ಕಾಂಗ್ರೆಸ್(Congress) ಆಡಳಿತ ಚುಕ್ಕಾಣಿ ಹಿಡಿದಿದೆ. ಅದರಂತೆ ಹಲವಾರು ಬಿಜೆಪಿಯ ಘಟಾನುಘಟಿ ನಾಯಕರುಗಳು ಸೋತಿದ್ದಾರೆ. ಇದೀಗ ಬಿಜೆಪಿ ಕಚೇರಿಯಲ್ಲಿ ಆತ್ಮಾವಲೋಕನ ಸಭೆ ಮಾಡಿದ್ದು, ಸಭೆಯಲ್ಲಿ ತಮಗಾದ ಸೋಲಿನ ಬಗ್ಗೆ ಪರಾಮರ್ಶೆ ಮಾಡಿದ್ದಾರೆ. ಹೌದು ಸಭೆಯಲ್ಲಿ ಕಾರ್ಯಕರ್ತರ ಕಣ್ಣೀರು, ಕಾರ್ಯಕರ್ತರ ಮಾತಿಗೆ ಕಣ್ಣೀರಾಕಿದ ಮಾಜಿ ಸಚಿವ ಮುರುಗೇಶ್ ನಿರಾಣಿ( Murugesh Nirani). ಅಂದ ಹಾಗೆ ಈ ದೃಶ್ಯ ಕಂಡು ಬಂದಿದ್ದು ಜಿಲ್ಲೆಯ ಬೀಳಗಿ ಪಟ್ಟಣದ ಬಿಜೆಪಿ ಕಚೇರಿಯಲ್ಲಿ. ಜಿಲ್ಲೆಯಲ್ಲಿ ಐದು ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿಗಳು ಆತ್ಮಾವಲೋಕನ ಸಭೆ ನಡೆಸಿದ್ದಾರೆ. ನಿನ್ನೆ(ಮೇ.15) ಬೀಳಗಿ ಕ್ಷೇತ್ರದ ಅಭ್ಯರ್ಥಿ ಮಾಜಿ ಸಚಿವ, ಪ್ರಬಲ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ಬೀಳಗಿ ಬಿಜೆಪಿ ಕಚೇರಿಯಲ್ಲಿ ಪಕ್ಷದ ಕಾರ್ಯಕರ್ತರು, ಮುಖಂಡರ ಜೊತೆ ಆತ್ಮಾವಲೋಕನ ಸಭೆ ನಡೆಸಿದರು. ಸೋಲಿನ ಬಗ್ಗೆ ಪರಾಮರ್ಶೆ ನಡೆಸುವ ವೇಳೆ ಕಾರ್ಯಕರ್ತರು ತಮಗಾದ ಸೋಲಿನ ಬಗ್ಗೆ ಮಾತಾಡುತ್ತಾ ಕಣ್ಣೀರು ಹಾಕಿದರು. ಇದೇ ವೇಳೆ ಕಾರ್ಯಕರ್ತರ ಮಾತು ಕೇಳಿ ಗದ್ಗತೀತರಾದ ನಿರಾಣಿ ಕೂಡ ಕಣ್ಣೀರು ಹಾಕಿದರು.
ಈ ವೇಳೆ ಮಾತಾಡಿದ ಮುರುಗೇಶ್ ನಿರಾಣಿ ‘ಜನರ ಆಶೀರ್ವಾದಕ್ಕೆ ತಲೆ ಬಾಗುತ್ತೇನೆ, ನನಗೆ 85 ಸಾವಿರ ಮತ ನೀಡಿದ ಮತದಾರರಿಗೆ ದನ್ಯವಾದ ಹೇಳಿದರು. ಜೊತೆಗೆ ಕಾಂಗ್ರೆಸ್ನ ಬೋಗಸ್ ಗ್ಯಾರಂಟಿಗಳು ನಮ್ಮ ಸೋಲಿಗೆ ಕಾರಣವಾಯಿತು. ಇಂತಹ ಗ್ಯಾರಂಟಿಗಳ ಮೂಲಕ ಕಾಂಗ್ರೆಸ್ ಜನರ ಮೂಗಿಗೆ ತುಪ್ಪ ಹಚ್ಚುವ ಕೆಲಸ ಮಾಡಿದೆ. ಜನರಿಗೆ ಸುಳ್ಳು ಗ್ಯಾರಂಟಿ ನೀಡಿ ಬಿಜೆಪಿ ಬಗ್ಗೆ ಅಪಪ್ರಚಾರ ಮಾಡಿ ಆಯ್ಕೆಯಾಗಿದೆ. ಏನೇ ಇರಲಿ ಬಹುಮತ ಪಡೆದ ಕಾಂಗ್ರೆಸ್ಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಇನ್ನು ಲಿಂಗಾಯತರನ್ನು ಬಿಜೆಪಿ ಕಡೆಗಣಿಸುತ್ತಿದೆ ಅಂತಿರುವ ಕಾಂಗ್ರೆಸ್ನಲ್ಲಿ ಸಿಎಂ ಸ್ಥಾನ ನೀಡುತ್ತಿಲ್ಲ. ಕಾಂಗ್ರೆಸ್ನಲ್ಲಿ ಜಗದೀಶ್ ಶೆಟ್ಟರ್ ಸೇರಿದಂತೆ ಅನೇಕ ಲಿಂಗಾಯತ ಮುಖಂಡರಿದ್ದು, ಅವರು ಲಿಂಗಾಯತ ಸಿಎಂ ಮಾಡಬಹುದಿತ್ತಲ್ಲ ಎಂದು ಪ್ರಶ್ನೆ ಮಾಡಿದರು.
ಸೋಲಿನ ಬಗ್ಗೆ ಮಾತನಾಡುತ್ತ ಕಣೀರಾಕಿದ ಸಚಿವರು
ಸಭೆಯಲ್ಲಿ ಬೀಳಗಿ ಕ್ಷೇತ್ರದ ನೂರಾರು ಕಾರ್ಯಕರ್ತರು, ಮುಖಂಡರು ಭಾಗಿಯಾಗಿದ್ದರು. ಎಲ್ಲರೂ ನಾವು ಎಡವಿದ್ದೆಲ್ಲಿ, ಸೋಲಿಗೆ ಏನು ಕಾರಣ ಎಂಬ ಬಗ್ಗೆ ಚರ್ಚೆ ನಡೆಸಿದರು. ಇದೆ ವೇಳೆ ಕೆಲ ಕಾರ್ಯಕರ್ತರು ಮಾತನಾಡುತ್ತಾ ಕಣ್ಣೀರು ಹಾಕಿದರು .ಆಗ ಭಾವುಕರಾದ ಮುರುಗೇಶ್ ನಿರಾಣಿ ಕೂಡ ಕಣ್ಣೀರು ಹಾಕಿದರು. ಸಭೆಯಲ್ಲಿ ಎಮ್ಎಲ್ಸಿ ಪಿ.ಹೆಚ್ ಪೂಜಾರ ಕೂಡ ಭಾಗಿಯಾಗಿದ್ದರು. ಸಭೆ ಬಳಿಕ ಮಾತಾಡಿದ ಪಿಹೆಚ್ ಪೂಜಾರ, ಕಾರ್ಯಕರ್ತರು ಯಾರು ದೃತಿಗೇಡಬಾರದು. ಸೋಲು ಗೆಲುವು ಸಹಜ ಮುಂದಿನ ಚುನಾವಣೆಯಲ್ಲಿ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಮತ್ತೆ ವಿಜಯೋತ್ಸವ ಆಚರಿಸೋಣ ಎಂದು ಉತ್ತೇಜನ ನೀಡಿದರು.
ಇದೆ ವೇಳೆ ಕೆಲ ಸಮುದಾಯದ ಮತ ಕಾಂಗ್ರೆಸ್ ಪರ ಬೀಳುವಂತೆ ಸ್ವಪಕ್ಷೀಯರೇ ಆಟವಾಡಿ ಸೋಲಿಗೆ ಕಾರಣವಾದರು ಎಂಬ ಪ್ರಶ್ನೆಗೆ ಉತ್ತರಿಸಿದ ಪಿಹೆಚ್ ಪೂಜಾರ ‘ಅದು ಸುಳ್ಳು ವದಂತಿ, ಯಾರು ಸ್ವಪಕ್ಷದ ಮುಖಂಡರಾಗಲಿ, ಕಾರ್ಯಕರ್ತರಾಗಲಿ ಅಂತಹ ಕೆಲಸ ಮಾಡಿಲ್ಲ. ಆಡಳಿತ ವಿರೋಧಿ ಅಲೆ ಹಾಗೂ ಕಾಂಗ್ರೆಸ್ನ ಗ್ಯಾರಂಟಿ ಭರವಸೆಗಳು ಸೋಲಿಗೆ ಕಾರಣವಾಗಿವೆ ಎಂದು ಸಮರ್ಥನೆ ಮಾಡಿಕೊಂಡರು. ಬಾಗಲಕೋಟೆ ಜಿಲ್ಲೆಯಲ್ಲಿ ಏಳು ಕ್ಷೇತ್ರದಲ್ಲಿ ಎರಡು ಕ್ಷೇತ್ರ ಮಾತ್ರ ಬಿಜೆಪಿ ಪಾಲಾಗಿವೆ. ನಿರಾಣಿ ಜೊತೆಗೆ ಮುಧೋಳ ಕ್ಷೇತ್ರದ ಪ್ರಭಲ ಬಿಜೆಪಿ ಅಭ್ಯರ್ಥಿ ಮಾಜಿ ಸಚಿವ ಗೋವಿಂದ ಕಾರಜೋಳ ಕೂಡ ಸೋತು ಸುಣ್ಣವಾಗಿದ್ದಾರೆ. ಈ ನಿಟ್ಟಿನಲ್ಲಿ ಇದೀಗ ಆತ್ಮಾವಲೋಕನ ಸಭೆ ಸಮಾಧಾನಕ್ಕೆ ಮುಂದಾಗಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ