ಸಿಎಂ ಹುದ್ದೆ ತಿಕ್ಕಾಟ ನಡುವೆಯೇ ಸಚಿವ ಸ್ಥಾನಕ್ಕಾಗಿ ಭರ್ಜರಿ ಲಾಬಿ: ಹೊಸ ಸಿಎಂಗೆ ಸಂಪುಟ ರಚನೆ ದೊಡ್ಡ ಸವಾಲ್
ಮುಖ್ಯಮಂತ್ರಿ ಆಯ್ಕೆ ಕಗ್ಗಂಟಿನ ನಡುವೆ ಸಚಿವ ಸ್ಥಾನದ ಆಕಾಂಕ್ಷಿಗಳು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಮನೆಗಳಿಗೆ ಪರೇಡ್ ನಡೆಸಿ ಸಚಿವ ಸ್ಥಾನಕ್ಕಾಗಿ ತೀವ್ರ ಲಾಬಿ ನಡೆಸಿದ್ದಾರೆ.
ಬೆಂಗಳೂರು: ಒಂದೆಡೆ ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದ್ದರೆ, ಇತ್ತ ನೂತನ ಸರ್ಕಾರದಲ್ಲಿ ಸಚಿವರಾಗಬೇಕೆಂದು ಶಾಸಕರು ಕ್ಯೂ ನಿಂತಿದ್ದಾರೆ. ಸಚಿವ ಸ್ಥಾನಕ್ಕಾಗಿ ಜಿಲ್ಲೆ ಜಿಲ್ಲೆಯಲ್ಲೂ ಪೈಪೋಟಿ ಶುರುವಾಗಿದ್ದು, ನಾಯಕರ ಮೂಲಕ ಲಾಬಿ ಆರಂಭಿಸಿದ್ದಾರೆ. ಹೌದು.. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಹಿಡಿಯುತ್ತಿದ್ದಂತೆ ಗೆದ್ದು ಬಂದಿರುವ ಶಾಸಕರೆಲ್ಲಾ ಸಂಪುಟ ಸೇರಲು ಕಸರತ್ತು ಆರಂಭಿಸಿದ್ದಾರೆ. ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಇದಕ್ಕೆ ಮುಖ್ಯ ಕಾರಣ ಸಚಿವ ಸಂಪುಟ ಸೇರಲು ಅರ್ಹತೆ ಹಾಗೂ ಲಾಬಿ ನಡೆಸಲು ಸಜ್ಜಾಗಿರುವ ಕಾಂಗ್ರೆಸ್‌ನ ಘಟಾನುಘಟಿ ನಾಯಕರು. ಕಾಂಗ್ರೆಸ್ ಹೈಕಮಾಂಡ್‌ನಲ್ಲಿ ಪ್ರಭಾವಶಾಲಿಯಾಗಿದ್ದ ಹಲವರು ಸೇರಿದಂತೆ ಹಲವು ಪ್ರಮುಖ ನಾಯಕರು ರಾಜ್ಯ ರಾಜಕಾರಣಕ್ಕೆ ಹಿಂತಿರುಗಿದ್ದಾರೆ. ಅಲ್ಲದೆ, ಹಿರಿತನ ಹಾಗೂ ಅನುಭವ ಇರುವ ಘಟಾನುಘಟಿಗಳು ಸಹ ಈ ಬಾರಿಯ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ, ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಹಾಗೂ ಸೇರ್ಪಡೆಯಾದ ನಂತರ ಅವರನ್ನು ನಿಭಾಯಿಸುವುದು ಹೊಸ ಮುಖ್ಯಮಂತ್ರಿಗೆ ದೊಡ್ಡ ಸವಾಲಾಗಲಿದೆ.
ಭಾರಿ ಬಹುಮತದೊಂದಿಗೆ ಅಧಿಕಾರಕ್ಕೇರುತ್ತಿರುವ ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿ ಫೈಟ್ ಶುರುವಾಗಿದೆ. ಮುಖ್ಯಮಂತ್ರಿ ಸ್ಥಾನಕ್ಕಾಗಿ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ. ಮುಖ್ಯಮಂತ್ರಿ ಆಯ್ಕೆ ಕುರಿತು ಭಾನುವಾರ ಕಾಂಗ್ರೆಸ್ ಪಕ್ಷ ನಡೆಸಿದ್ದ ಶಾಸಕಾಂಗ ಸಭೆ (CLP meeting) ಅಂತ್ಯಗೊಂಡಿದ್ದು, ಶಾಸಕ ಅಭಿಪ್ರಾಯ ಸಹ ಸಂಗ್ರಹಿಸಲಾಗಿದೆ. ಅಲ್ಲದೇ ನಿಮ್ಮ ಬೆಂಬಲ ಯಾರಿಗೆ ಎನ್ನುವ ಅಭಿಪ್ರಾಯವನ್ನು ಶಾಸಕರ ಬಳಿ ಕೇಳಲಾಗಿದೆ. ಶಾಸಕರು ಗುಪ್ತವಾಗಿ ಚೀಟಿಯಲ್ಲಿ ಸಿಎಂ ಯಾರಾಗಬೇಕೆಂದು ಗುಪ್ತ ಮತದಾನ ಮಾಡಿದ್ದಾರೆ. ಇನ್ನು ಈ ಬಗ್ಗೆ ಶಾಸಕ ಕೆಎನ್ ರಾಜಣ್ಣ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಸಿಎಂ ಆಗಬೇಕು. ಅವರಿಗೆ ನಾನು ಮತ ಹಾಕಿದ್ದೇನೆ ಎಂದು ಬಹಿರಂಗವಾಗಿಯೇ ಕೇಳಿಕೊಂಡಿದ್ದಾರೆ.
ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಅತ್ಯಂತ ಪ್ರಭಾವಶಾಲಿಗಳೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಸಮುದಾಯವಾರು-ಜಿಲ್ಲಾವಾರು ಸಚಿವ ಸ್ಥಾನ ಹಂಚಿಕೆ ಮಾಡಬೇಕಿದೆ. ಹೀಗಾಗಿ ಯಾರೇ ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಏಕೆಂದರೆ, ಪರಿಶಿಷ್ಟರು, ಒಕ್ಕಲಿಗರು, ಲಿಂಗಾಯತರು, ಹಿಂದುಳಿದವರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ಸಮಾಜಗಳಲ್ಲೂ ಅತ್ಯಂತ ಪ್ರಭಾವಶಾಲಿಗಳೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉದಾಹರಣೆಗೆ ಪರಿಶಿಷ್ಟರ ಕೋಟಾದಲ್ಲಿ ಸಚಿವರಾಗ ಬಯಸುವವರಲ್ಲಿ ಡಾ. ಜಿ.ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಎಚ್.ಸಿ. ಮಹದೇವಪ್ಪ, ಪ್ರಿಯಾಂಕ ಖರ್ಗೆ ಹಾಗೂ ಆರ್.ಬಿ. ತಿಮ್ಮಾಪುರ ಅವರಿದ್ದಾರೆ. ಪರಿಶಿಷ್ಟಪಂಗಡದಲ್ಲಿ ಸತೀಶ್ ಜಾರಕಿಹೊಳಿ, ನಾಗೇಂದ್ರ, ತುಕಾರಾಂ, ರಾಜಾ ವೆಂಕಟಪ್ಪ ನಾಯಕ್ ಇದ್ದಾರೆ.
ಅದರಲ್ಲೂ ಬಾಗಲಕೋಟೆಯ 7 ಸ್ಥಾನಗಳ ಪೈಕಿ ಐದರಲ್ಲಿ ಕಾಂಗ್ರೆಸ್ ಗೆದ್ದಿದ್ದು , ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್, ಬಾಗಲಕೋಟೆ ಶಾಸಕ ಹೆಚ್.ವೈ ಮೇಟಿ, ಮುಧೋಳ ಶಾಸಕ ಆರ್.ಬಿ.ತಿಮ್ಮಾಪುರ ಪೈಪೋಟಿ ಆರಂಭಿಸಿದ್ದಾರೆ. ಇನ್ನು ಬಳ್ಳಾರಿಯಲ್ಲಿ ಈ ಬಾರಿ ಕಾಂಗ್ರೆಸ್ ಕ್ಲೀನ್ ಸ್ವೀಪ್ ಮಾಡಿಕೊಂಡಿದ್ದು, ಐದಕ್ಕೆ ಐದು ಸ್ಥಾನ ಕಾಂಗ್ರೆಸ್ ಪಾಲಾಗಿವೆ. ಹೀಗಾಗಿ ಇಲ್ಲಿಯೂ ಪೈಪೋಟಿ ಹೆಚ್ಚಿದೆ. ಶ್ರೀರಾಮುಲು ಸೋಲಿಸಿರೋ ನಾಗೇಂದ್ರ, ನಾಲ್ಕು ಬಾರಿ ಗೆದ್ದಿರೋ ಈ ತುಕಾರಾಂ ನಡುವೆ ಸಚಿವ ಸ್ಥಾನಕ್ಕಾಗಿ ರೇಸ್ ಶುರುವಾಗಿದೆ.
ಮಲ್ಲಿಕಾರ್ಜುನ್ ಖರ್ಗೆ ತವರು ಕಲಬುರಗಿಯಲ್ಲೂ ಕಾಂಗ್ರೆಸ್ ದೊಡ್ಡ ಗೆಲುವು ಸಾಧಿಸಿದೆ. 7 ಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆದ್ದಿದ್ದಾರೆ. ಇಲ್ಲಿ ಖರ್ಗೆ ಪುತ್ರ ಪ್ರಿಯಾಂಕ್ ಖರ್ಗೆ, ಮಾಜಿ ಮುಖ್ಯಮಂತ್ರಿ ದಿವಂಗತ ಧರ್ಮಸಿಂಗ್ ಪುತ್ರ ಡಾ. ಅಜಯಸಿಂಗ್, ಡಾ. ಶರಣಪ್ರಕಾಶ್ ಪಾಟೀಲ್, ಎಂ.ವೈ ಪಾಟೀಲ್ , ಸಿದ್ದರಾಮಯ್ಯ ಆಪ್ತ ಬಿ.ಆರ್ ಪಾಟೀಲ್ ನಡುವೆ ಮಂತ್ರಿ ಸ್ಥಾನಕ್ಕಾಗಿ ಪೈಪೋಟಿ ಶುರುವಾಗಿದೆ. ಇತ್ತ ಕೋಲಾರದಲ್ಲಿ ನಾಲ್ವರು ಶಾಸಕರು ಕಾಂಗ್ರೆಸ್‌ನಿಂದ ಗೆದ್ದಿದ್ದು, ಜಿಲ್ಲೆಯ ಮೂಲದ ಕೆಹೆಚ್ ಮುನಿಯಪ್ಪ, ಪುತರಿ ರೂಪಾಕಲಾ ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಮಿನಿಸ್ಟರ್ ರೇಸ್‌ನಲ್ಲಿ ನಿಂತಿದ್ದಾರೆ.
ಬೆಳಗಾವಿಯಲ್ಲಿ ಯಾರಿಗೆ ಸಿಗುತ್ತೆ ಸಚಿವ ಸ್ಥಾನ?
ಬೆಳಗಾವಿಯ 18 ಕ್ಷೇತ್ರಗಳ ಪೈಕಿ 11 ರಲ್ಲಿ ಕಾಂಗ್ರೆಸ್ ಗೆದ್ದಿದೆ. ಅದ್ರಲ್ಲೂ ಲಕ್ಷ್ಮೀ ಹೆಬ್ಬಾಳ್ಕರ್, ಲಕ್ಷ್ಮಣ ಸವದಿ, ಸತೀಶ್ ಜಾರಕಿಹೊಳಿ ಗೆದ್ದ ಪ್ರಮುಖರಾಗಿದ್ದು, ಮೂವರ ನಡುವೆ ಪೈಪೋಟಿ ಶುರುವಾಗಿದೆ. ಹೀಗೆ ಘಟಾನುಘಟಿಗಳನ್ನು ಸಂಪುಟಕ್ಕೆ ತೆಗೆದುಕೊಳ್ಳುವುದರ ಜತೆಗೆ ಯುವಕರು ಹಾಗೂ ಮಹಿಳೆಯರಿಗೂ ಅವಕಾಶವನ್ನು ನೀಡಬೇಕು. ಇದನ್ನು ಸಂಭಾಳಿಸುವುದು ಮುಖ್ಯಮಂತ್ರಿಯಾದವರಿಗೆ ದೊಡ್ಡ ತಲೆನೋವಾಗುವುದು ಸಹಜ.
ಒಟ್ಟಿನಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಸಿಗ್ತಿದ್ದಂತೆ ದೊಡ್ಡವರು ಸಿಎಂ ಕುರ್ಚಿಗಾಗಿ ಫೈಟ್ ಶುರು ಮಾಡಿದ್ರೆ, ಗೆದ್ದು ಬೀಗಿರೋ ಶಾಸಕರು ಸಚಿವ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದು, ಯಾರೇ ಮುಖ್ಯಮಂತ್ರಿಯಾದರೂ ಸಚಿವ ಸಂಪುಟ ರಚನೆ ಎಂಬುದು ಕಬ್ಬಿಣದ ಕಡಲೆಯಾಗಿ ಕಾಡುವುದರಲ್ಲಿ ಯಾವುದೇ ಸಂಶಯವಿಲ್ಲ.