AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Anil Lad: 30,000ಕ್ಕಿಂತ ಕಡಿಮೆ ಮತ ಬಂದರೆ ರಾಜಕೀಯಕ್ಕೆ ಅನರ್ಹ ಎಂದಿದ್ದ ಅನಿಲ್ ಲಾಡ್ ಪಡೆದ ಮತ ಎಷ್ಟು ಗೊತ್ತಾ? ನೋಟಾ ಕೂಡ ನಾಚಿ ನೀರಾಗಿದೆ

Bellary City Assembly Election Result: ಬಳ್ಳಾರಿ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್​ನಿಂದ ಟಿಕೆಟ್ ಸಿಗದೇ ಜೆಡಿಎಸ್​ಗೆ ಹೋಗಿ ಚುನಾವಣೆ ಎದುರಿಸಿದ್ದ ಮಾಜಿ ರಾಜ್ಯಸಭಾ ಸಂಸದ ಅನಿಲ್ ಲಾಡ್ 6ನೇ ಸ್ಥಾನ ಪಡೆದಿದ್ದಾರೆ. ಅವರ ಮುಂದಿನ ಹೆಜ್ಜೆ ಏನು?

Anil Lad: 30,000ಕ್ಕಿಂತ ಕಡಿಮೆ ಮತ ಬಂದರೆ ರಾಜಕೀಯಕ್ಕೆ ಅನರ್ಹ ಎಂದಿದ್ದ ಅನಿಲ್ ಲಾಡ್ ಪಡೆದ ಮತ ಎಷ್ಟು ಗೊತ್ತಾ? ನೋಟಾ ಕೂಡ ನಾಚಿ ನೀರಾಗಿದೆ
ಅನಿಲ್ ಲಾಡ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: May 14, 2023 | 5:13 PM

Share

ರಾಜ್ಯ ವಿಧಾನಸಭಾ ಚುನಾವಣೆ ಹಲವು ಶಾಕ್​ಗಳನ್ನು ಕೊಟ್ಟಿದೆ. ಈ ರೀತಿ ಹೊಡೆತ ತಿಂದವರಲ್ಲಿ ಅನಿಲ್ ಲಾಡ್ (Anil H Lad) ಒಬ್ಬರು. ಬಳ್ಳಾರಿ ಗಣಿಗಣಿಗಳಲ್ಲೊಬ್ಬರೆಂದು ಹೆಸರುವಾಸಿಯಾದ ಮತ್ತು ಮಾಜಿ ರಾಜ್ಯಸಭಾ ಸಂಸದರೂ ಹಾಗೂ ಭವಿಷ್ಯದ ಸಚಿವರೂ ಎಂದೇ ಪರಿಗಣಿಸಲಾದ ಅನಿಲ್ ಲಾಡ್ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಸೋತಿದ್ದು ಮಾತ್ರವಲ್ಲ, ನೋಟಾಗಿಂತಲೂ (NOTA) ಕಡಿಮೆ ಮತಗಳನ್ನು ಪಡೆದಿದ್ದಾರೆ. ಮತದಾನಕ್ಕೆ ಮುನ್ನವೇ ತಾವು ಸೋಲಬಹುದು ಎಂಬ ಸುಳಿವು ಅವರಿಗೆ ಸ್ಪಷ್ಟವಾಗಿ ಸಿಕ್ಕಿತ್ತಾದರೂ ನೋಟಾ ಗಿಂತಲೂ ಕಡಿಮೆ ಮತ ಪಡೆಯುತ್ತೇನೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಲ್ಲ ಅನಿಲ್ ಲಾಡ್. ಶನಿವಾರ ಪ್ರಕಟವಾದ ಫಲಿತಾಂಶದಲ್ಲಿ ಬಳ್ಳಾರಿ ನಗರ ಕ್ಷೇತ್ರದಲ್ಲಿ ಅನಿಲ್ ಲಾಡ್ ಪಡೆದ ಮತ ಕೇವಲ 610. ಅದೂ ಜೆಡಿಎಸ್ ಪಕ್ಷದ ಟಿಕೆಟ್​ನಲ್ಲಿ ಸ್ಪರ್ಧಿಸಿದ್ದ ಅವರು 6ನೇ ಸ್ಥಾನ ಪಡೆದಿದ್ದಾರೆ. ಆಮ್ ಆದ್ಮಿ ಅಭ್ಯರ್ಥಿ ಮತ್ತು ನೋಟಾಗಿಂತಲೂ ಕಡಿಮೆ ಮತ ಪಡೆದಿದ್ದಾರೆ.

30,000ಕ್ಕಿಂತ ಕಡಿಮೆ ಮತ ಬಂದರೆ ರಾಜಕೀಯಕ್ಕೆ ಅನರ್ಹ ಎಂದಿದ್ದ ಅನಿಲ್ ಲಾಡ್

ಕಾಂಗ್ರೆಸ್​ನಿಂದ ಟಿಕೆಟ್ ಸಿಗದೆ ಜೆಡಿಎಸ್​ಗೆ ವಲಸೆ ಬಂದಿದ್ದ ಅನಿಲ್ ಲಾಡ್ ಮತದಾನಕ್ಕೆ ಮುನ್ನವೇ ಜನರ ನಾಡಿಮಿಡಿತದ ಅರಿವು ಅಲ್ಪಸ್ಪಲ್ಪ ಪಡೆದಂತಿತ್ತು. ತಾನು 30,000 ಕ್ಕೂ ಕಡಿಮೆ ಮತಗಳನ್ನು ಪಡೆದರೆ ರಾಜಕೀಯಕ್ಕೇ ಅನರ್ಹ ಎಂದು ಮತದಾನಕ್ಕೆ ಮೂರ್ನಾಲ್ಕು ದಿನ ಮುನ್ನ ಮಾಧ್ಯಮಗಳೆದುರು ಅನಿಲ್ ಲಾಡ್ ಹೇಳಿಕೊಂಡಿದ್ದರು. ಈಗ ಅವರು 30,000 ಇರಲಿ, ಅದರ ಶೇ. 10ರಷ್ಟು ಮತಗಳೂ ಅವರಿಗೆ ಸಿಕ್ಕಿಲ್ಲ.

ಇದನ್ನೂ ಓದಿಐವರು ಮುಸ್ಲಿಂ ಶಾಸಕರಿಗೆ ಮಂತ್ರಿ ಹಾಗೂ ಡಿಸಿಎಂ ಹುದ್ದೆಗೆ ಬೇಡಿಕೆ ಇಟ್ಟ ವಕ್ಫ್ ಬೋರ್ಡ್ ಅಧ್ಯಕ್ಷ ಶಾಫಿ ಸಅದಿ

ಅನಿಲ್ ಲಾಡ್ ಕಡೆಗಣಿಸಿ ಭರತ್ ರೆಡ್ಡಿಗೆ ಟಿಕೆಟ್ ಕೊಟ್ಟಿದ್ದ ಕಾಂಗ್ರೆಸ್

ಈ ಬಾರಿ ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರಕ್ಕೆ ಅನಿಲ್ ಲಾಡ್ ಪ್ರಬಲ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಈ ಹಿಂದೆ ಈ ಕ್ಷೇತ್ರದಲ್ಲಿ ಗೆದ್ದಿದ್ದ ಅನಿಲ್ ಲಾಡ್ ತನಗಿಂತ ಉತ್ತಮ ಅಭ್ಯರ್ಥಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್​ಗೆ ಸಿಕ್ಕೋದಿಲ್ಲ ಎನ್ನುತ್ತಿದ್ದರು. ಆದರೆ, ಕಾಂಗ್ರೆಸ್ ಪಕ್ಷ ಅಂತಿಮವಾಗಿ ನಾ.ರಾ. ಭರತ್ ರೆಡ್ಡಿಗೆ ಮಣೆಹಾಕಿತು.

ನಾನು ಬಳ್ಳಾರಿ ನಗರಕ್ಕೆ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇನೆ. ಭರತ್ ರೆಡ್ಡಿ ಏನು ಮಾಡಿದ್ದಾನೆ ಅಂತ ಪಕ್ಷ ಟಿಕೆಟ್ ಕೊಟ್ಟಿದೆ ಎಂದು ಕೇಳಿದ ಲಾಡ್, ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿ ಆ ಪಕ್ಷದಿಂದ ಸ್ಪರ್ಧಿಸಿದ್ದರು. ಈ ಮೂಲಕ ಬಳ್ಳಾರಿ ನಗರ ಕ್ಷೇತ್ರದ ಪ್ರಮುಖ ಸ್ಪರ್ಧಾಳುಗಳ ಸಂಖ್ಯೆ ಇನ್ನಷ್ಟು ಉಬ್ಬಿತ್ತು.

ಚತುಷ್ಕೋನ ಪೈಪೋಟಿಯ ಬಳ್ಳಾರಿ ನಗರ

ಬಳ್ಳಾರಿ ನಗರ ಕ್ಷೇತ್ರ ನಾನಾ ಕಾರಣಗಳಿಗೆ ಗಮನ ಸೆಳೆದಿತ್ತು. ಜನಾರ್ದನ ರೆಡ್ಡಿ ತನ್ನ ಸ್ವಂತ ಸೋಮಶೇಖರ್ ರೆಡ್ಡಿ ವಿರುದ್ಧ ತಮ್ಮ ಪತ್ನಿಯನ್ನೇ ಕಣಕ್ಕಿಳಿಸಿದ್ದರು. ಸೋಮಶೇಖರ್ ರೆಡ್ಡಿ ಹಾಲಿ ಶಾಸಕ. ಈ ಚುನಾವಣೆಯಲ್ಲಿ ಸೋಮಶೇಖರ್ ರೆಡ್ಡಿ 3ನೇ ಸ್ಥಾನ ಪಡೆದರು. ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮೀ ಅರುಣಾ ಅವರು ರನ್ನರ್ ಅಪ್ ಆದರು.

ಇದನ್ನೂ ಓದಿಸಿದ್ದರಾಮಯ್ಯ ಮತ್ತೆ ಸಿಎಂ ಆಗಲಿ ಎನ್ನುವವರಲ್ಲಿ ನಾನೂ ಒಬ್ಬ: ಮಾಜಿ ಶಾಸಕ ಬಸವರಾಜ ರಾಯರೆಡ್ಡಿ

ಇಬ್ಬರ ಜಗಳದಲ್ಲಿ ಮೂರನೆಯವರಿಗೆ ಲಾಭ ಎನ್ನುವತೆ ರೆಡ್ಡಿ ಬ್ರದರ್ಸ್ ಕಲಹದಲ್ಲಿ ನಾ.ರಾ. ಭರತ್ ರೆಡ್ಡಿಗೆ ಅದೃಷ್ಟ ಕೈಹಿಡಿದಿತ್ತು. ಈ ಮಧ್ಯೆ ಅನಿಲ್ ಲಾಡ್ ಹೇಳಹೆಸರಿಲ್ಲದಂತಾಗಿದ್ದಾರೆ. ಭರತ್ ರೆಡ್ಡಿ, ಲಕ್ಷ್ಮೀ ಅರುಣಾ ಮತ್ತು ಸೋಮಶೇಖರ್ ರೆಡ್ಡಿ ಮಧ್ಯೆ ಮಾತ್ರವೇ ಪೈಪೋಟಿ ಆಗಿದ್ದು. ಅನಿಲ್ ಲಾಡ್ ಕೇವಲ 602 ಮತ ಪಡೆದಿದ್ದಾರೆ. ಈ ಕ್ಷೇತ್ರದಲ್ಲಿ ನೋಟಾಗೆ ಬಿದ್ದ ಮತ 975. ಇನ್ನು ರಾಜ್ಯದ ಜನರಿಗೆ ಹೆಸರೇ ಪರಿಚಯವಾಗದ ಆಮ್ ಆದ್ಮಿ ಪಕ್ಷದ ಅಭ್ಯರ್ಥಿ ದೊಡ್ಡ ಕೇಶವರೆಡ್ಡಿ ಅನಿಲ್ ಲಾಡ್​ಗಿಂತ ಹೆಚ್ಚು ಮತ ಪಡೆದಿದ್ದಾರೆ.

30,000ಕ್ಕಿಂತ ಕಡಿಮೆ ಮತ ಪಡೆದರೆ ರಾಜಕೀಯಕ್ಕೆ ಅನರ್ಹ ಎಂದಿದ್ದ ಅನಿಲ್ ಲಾಡ್ ಈಗ ಏನು ಮಾಡುತ್ತಾರೆ? ಈ ಸೋಲು ಅನಿಲ್ ಲಾಡ್ ಅವರ ರಾಜಕೀಯ ಭವಿಷ್ಯಕ್ಕೆ ಮುಳುವಾಗುತ್ತಾ?

ಇನ್ನಷ್ಟು ರಾಜಕೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ