AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rahul Gandhi: ನಿಮಗೂ ಟೆಂಪೋದಲ್ಲಿ ಹಣ ಬರುತ್ತಿತ್ತಾ?; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು

ಅಂಬಾನಿ-ಅದಾನಿ ಕುರಿತು ಇದ್ದಕ್ಕಿದ್ದಂತೆ ಮೌನ ತಳೆದಿರುವ ರಾಹುಲ್ ಗಾಂಧಿ ಎಷ್ಟು ಹಣ ಪಡೆದಿದ್ದೀರಿ? ಎಂದು ಪ್ರಶ್ನಿಸುವ ಮೂಲಕ ವಾಗ್ದಾಳಿ ನಡೆಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಇದೀಗ ರಾಹುಲ್ ಗಾಂಧಿ ವಿಡಿಯೋ ಸಂದೇಶ ಬಿಡುಗಡೆ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.

Rahul Gandhi: ನಿಮಗೂ ಟೆಂಪೋದಲ್ಲಿ ಹಣ ಬರುತ್ತಿತ್ತಾ?; ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ತಿರುಗೇಟು
ಪ್ರಧಾನಿ ಮೋದಿ- ರಾಹುಲ್ ಗಾಂಧಿ
ಸುಷ್ಮಾ ಚಕ್ರೆ
|

Updated on:May 08, 2024 | 8:32 PM

Share

ನವದೆಹಲಿ: ಅದಾನಿ- ಅಂಬಾನಿ ಬಗ್ಗೆ ದಿನ ಬೆಳಗಾದರೆ ಮಾತನಾಡುತ್ತಿದ್ದ ರಾಹುಲ್ ಗಾಂಧಿ (Rahul Gandhi) ಲೋಕಸಭೆ ಚುನಾವಣೆ (Lok Sabha Elections) ಘೋಷಣೆಯಾದ ನಂತರ ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಖೇಶ್ ಅಂಬಾನಿ ಹೆಸರನ್ನು ಪ್ರಸ್ತಾಪಿಸುವುದನ್ನು ಏಕೆ ನಿಲ್ಲಿಸಿದ್ದಾರೆ ಎಂದು ನನಗೆ ಆಶ್ಚರ್ಯವಾಗುತ್ತಿದೆ. ಟೆಂಪೋ ಲೋಡ್‌ಗಳ ನೋಟು ಕಾಂಗ್ರೆಸ್‌ಗೆ ತಲುಪಿದೆಯೇ? ಎಂದು ನನಗೆ ಕುತೂಹಲವಿದೆ ಎಂದು ಚುನಾವಣಾ ಭಾಷಣದ ವೇಳೆ ಪ್ರಧಾನಿ ಮೋದಿ (PM Narendra Modi) ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ನಮಸ್ಕಾರ ಮೋದೀಜಿ, ನಿಮಗೆ ಭಯವಾಗುತ್ತಿದೆಯೇ? ಎಂದು ಲೇವಡಿ ಮಾಡಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ವೀಡಿಯೋ ಸಂದೇಶದಲ್ಲಿ ಮಾತನಾಡಿರುವ ರಾಹುಲ್ ಗಾಂಧಿ, ನಮಸ್ಕಾರ್ ಮೋದಿಜಿ, ನೀವು ಭಯಪಡುತ್ತೀರಾ? ಸಾಮಾನ್ಯವಾಗಿ ನೀವು ಮುಚ್ಚಿದ ಬಾಗಿಲುಗಳ ಹಿಂದೆ ಅಂಬಾನಿ, ಅದಾನಿ ಬಗ್ಗೆ ಮಾತನಾಡುತ್ತೀರಿ. ಮೊದಲ ಬಾರಿಗೆ ನೀವು ಸಾರ್ವಜನಿಕವಾಗಿ ‘ಅಂಬಾನಿ’, ‘ಅದಾನಿ’ ಎಂಬ ಹೆಸರನ್ನು ಹೇಳಿದ್ದೀರಿ. ಇದಕ್ಕೆ ನಿಮಗೆ ಭಯವಾಗುತ್ತಿರಬಹುದು” ಎಂದು ರಾಹುಲ್ ಗಾಂಧಿ ಟೀಕಿಸಿದ್ದಾರೆ.

ಇದನ್ನೂ ಓದಿ: ರಾಹುಲ್ ವಿರುದ್ಧ ಹಣ ಪಡೆದ ಆರೋಪ ಮಾಡಿದ ಮೋದಿಗೆ ಪ್ರಿಯಾಂಕಾ ಗಾಂಧಿ ತಿರುಗೇಟು

ಕೆಲವು ಕೈಗಾರಿಕೋದ್ಯಮಿಗಳಿಗೆ ಬಿಜೆಪಿ ಒಲವು ತೋರುತ್ತಿದೆ ಎಂದು ಆರೋಪಿಸಿದ ಕಾಂಗ್ರೆಸ್ ವಿರುದ್ಧ ಮಾತನಾಡಿದ್ದ ಮೋದಿ, “ಅಂಬಾನಿ-ಅದಾನಿ ಜೊತೆ ಕಾಂಗ್ರೆಸ್ ಒಪ್ಪಂದ ಮಾಡಿಕೊಂಡಿದೆಯೇ? ಟೆಂಪೋಗಳಲ್ಲಿ ಹಣ ರಾಹುಲ್ ಗಾಂಧಿ ಅವರನ್ನು ತಲುಪಿದೆಯೇ?” ಎಂದು ಹೈದರಾಬಾದ್ ರ್ಯಾಲಿಯ ವೇಳೆ ಪ್ರಶ್ನಿಸಿದ್ದರು.

ಪ್ರಧಾನಿಯವರ ವ್ಯಂಗ್ಯಕ್ಕೆ ಪ್ರತಿಕ್ರಿಯಿಸಿದ ರಾಹುಲ್ ಗಾಂಧಿ, “ಹಾಗಾದರೆ, ಅದಾನಿ- ಅಂಬಾನಿ ಅವರು ಟೆಂಪೋಗಳಲ್ಲಿ ಹಣ ನೀಡುತ್ತಾರೆ ಎಂಬುದು ನಿಮಗೆ ತಿಳಿದಿದೆ. ಅದು ನಿಮ್ಮ ವೈಯಕ್ತಿಕ ಅನುಭವವೇ? ನಿಮಗೆ ಅನುಮಾನವಿದ್ದರೆ ಆ ಕೈಗಾರಿಕೋದ್ಯಮಿಗಳ ಮನೆಗೆ ಇಡಿ ಮತ್ತು ಸಿಬಿಐ ತಂಡವನ್ನು ಕಳುಹಿಸಿ, ಆದಷ್ಟು ಬೇಗ ವಿಚಾರಣೆ ನಡೆಸಿ” ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಅಂಬಾನಿ, ಅದಾನಿಯ ಬಯ್ಯೋದು ನಿಲ್ಲಿಸಿದ್ರಿ, ಎಷ್ಟು ಕಪ್ಪುಹಣ ಬಂತು?: ರಾಹುಲ್ ಗಾಂಧಿಗೆ ಕುಟುಕಿದ ನರೇಂದ್ರ ಮೋದಿ

ಈ ಹಿಂದೆ ಹೈದರಾಬಾದ್​ನ ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ಕೈಗಾರಿಕೋದ್ಯಮಿ ಅದಾನಿ ಮತ್ತು ಅದಾನಿಯ ಹೆಸರನ್ನು ಪ್ರಸ್ತಾಪಿಸಿದ್ದರು. ಕಳೆದ 5 ವರ್ಷಗಳಿಂದ ಕಾಂಗ್ರೆಸ್‌ನ ಯುವರಾಜ ರಾಹುಲ್ ಗಾಂಧಿ ಬೆಳಗ್ಗೆ ಎದ್ದ ತಕ್ಷಣ ಜಪಮಾಲೆ ಆರಂಭಿಸುತ್ತಿದ್ದರು. ಅವರ ರಫೇಲ್ ಪ್ರಕರಣವು ನೆಲಸಮವಾದಾಗಿನಿಂದ ಅವರು ಹೊಸ ಜಪಮಾಲೆಯನ್ನು ಪ್ರಾರ್ಥಿಸಲು ಪ್ರಾರಂಭಿಸಿದರು. ಐವರು ಕೈಗಾರಿಕೋದ್ಯಮಿಗಳ ಬಗ್ಗೆ ಮಾತನಾಡುತ್ತಿದ್ದರು. ಈಗ ನಿಧಾನವಾಗಿ ಅಂಬಾನಿ- ಅದಾನಿ ಎಂದು ಹೇಳತೊಡಗಿದ್ದಾರೆ. ಆದರೆ ಚುನಾವಣೆ ಘೋಷಣೆಯಾದಾಗಿನಿಂದ ಅವರು ಅಂಬಾನಿ-ಅದಾನಿಯನ್ನು ನಿಂದಿಸುವುದನ್ನು ನಿಲ್ಲಿಸಿದ್ದಾರೆ ಎಂದು ಮೋದಿ ಟೀಕಿಸಿದ್ದರು.

ಪ್ರಧಾನಿ ಮೋದಿಯವರ ಆರೋಪಕ್ಕೆ ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ತಿರುಗೇಟು ನೀಡಿದ್ದು, ಮೋದಿ ಹೇಳಿದ್ದು ಸತ್ಯ. ರಾಹುಲ್ ಗಾಂಧಿ ಪ್ರತಿದಿನ ಅದಾನಿ- ಅಂಬಾನಿ ಬಗ್ಗೆ ಮಾತನಾಡುತ್ತಲೇ ಇರುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಆ ಸ್ನೇಹಿತರ 16 ಲಕ್ಷ ಕೋಟಿ ರೂ. ಮನ್ನಾ ಮಾಡಿದ್ದಾರೆ. ಆದರೆ ರೈತರ ಒಂದು ರೂಪಾಯಿಯನ್ನೂ ಮನ್ನಾ ಮಾಡಿಲ್ಲ. ಇದಕ್ಕೆ ಕಾರಣವೇನೆಂದು ನರೇಂದ್ರ ಮೋದಿ ಉತ್ತರಿಸಬೇಕು. ಉತ್ತರ ಪ್ರದೇಶದಲ್ಲಿ ರೈತರು ಆತ್ಮಹತ್ಯೆಯಿಂದ ಸಾಯುತ್ತಿರುವಾಗ ಮೋದಿ ಸರ್ಕಾರ ಕೋಟ್ಯಾಧಿಪತಿಗಳ 16 ಲಕ್ಷ ಕೋಟಿ ರೂ. ಸಾಲವನ್ನು ಮನ್ನಾ ಮಾಡಿದೆ. ರಾಹುಲ್ ಗಾಂಧಿ ಪ್ರತಿದಿನ ಅದಾನಿ ಬಗ್ಗೆ ಮಾತನಾಡುತ್ತಾರೆ. ಅವರು ಪ್ರತಿದಿನ ಅದಾನಿ ಬಗ್ಗೆ ಸತ್ಯವನ್ನು ನಿಮ್ಮ ಮುಂದೆ ಇಡುತ್ತಾರೆ. ಆದರೆ, ಮೋದಿ ಆ ಕೆಲಸ ಮಾಡಿದ್ದಾರಾ? ಎಂದು ಟೀಕಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:31 pm, Wed, 8 May 24