ಅಂಬಾನಿ, ಅದಾನಿಯ ಬಯ್ಯೋದು ನಿಲ್ಲಿಸಿದ್ರಿ, ಎಷ್ಟು ಕಪ್ಪುಹಣ ಬಂತು?: ರಾಹುಲ್ ಗಾಂಧಿಗೆ ಕುಟುಕಿದ ನರೇಂದ್ರ ಮೋದಿ
Video of Narendra Modi's Ambani Adani Jibe at Rahul Gandhi: ಅಂಬಾನಿ ಮತ್ತು ಅದಾನಿ ಎಂಬಿಬ್ಬರು ಉದ್ಯಮಿಗಳಿಗಾಗಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಹಿಂದೆಲ್ಲಾ ಟೀಕಿಸುತ್ತಿದ್ದ ರಾಹುಲ್ ಗಾಂಧಿ ಇತ್ತೀಚೆಗೆ ಅವರಿಬ್ಬರ ಹೆಸರನ್ನು ಪ್ರಸ್ತಾಪಿಸುತ್ತಿಲ್ಲ. ಈ ವಿಚಾರವನ್ನು ನರೇಂದ್ರ ಮೋದಿ ತಮ್ಮ ಚುನಾವಣಾ ಪ್ರಚಾರಕ್ಕೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾರೆ. ಅಂಬಾನಿ ಮತ್ತು ಅದಾನಿಯಿಂದ ಇವರಿಗೆ ಕಪ್ಪು ಹಣ ಸಿಕ್ಕಿದೆಯಾ ಎಂದು ಪ್ರಶ್ನಿಸಿದ್ದಾರೆ.
ಹೈದರಾಬಾದ್, ಮೇ 8: ಕಾಂಗ್ರೆಸ್ನ ಶಹಜಾದೆ ಐದು ವರ್ಷದಿಂದ ಅಂಬಾನಿ ಮತ್ತು ಅದಾನಿಯನ್ನು ಜರಿಯುತ್ತಾ ಬಂದಿದ್ದರು. ಚುನಾವಣೆ ಘೋಷಣೆ ಆದ ಬಳಿಕ ಅವರಿಬ್ಬರನ್ನು ಬಯ್ಯೋದನ್ನೇ ನಿಲ್ಲಿಸಿಬಿಟ್ಟಿದ್ದಾರೆ. ಇದು ಯಾಕೆ ಎಂದು ಕಾಂಗ್ರೆಸ್ನ ರಾಹುಲ್ ಗಾಂಧಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಶ್ನೆ ಮಾಡಿದ್ದಾರೆ. ಮೊದಲಿಗೆ ರಫೇಲ್ ಎನ್ನುತ್ತಿದ್ದರು. ಅದು ಬಿದ್ದು ಹೋಯಿತು. ಬಳಿಕ ಐವರು ಉದ್ಯಮಿಗಳು ಎಂದು ಹೇಳಲು ಶುರು ಮಾಡಿದರು. ಜೊತೆ ಜೊತೆಗೆ ಅಂಬಾನಿ, ಅಡಾನಿ ಎಂದು ಜಪಿಸತೊಡಗಿದರು. ಆದರೆ, ರಾತ್ರೋರಾತ್ರಿ ಅವರಿಬ್ಬರನ್ನು ಬಯ್ಯೋದನ್ನೇ ನಿಲ್ಲಿಸಿಬಿಟ್ಟರು. ಇದರಲ್ಲಿ ಏನೋ ಅನುಮಾನದ ಹೊಗೆ ಇದೆ. ಇವರಿಗೆ ಅಂಬಾನಿ, ಅದಾನಿಯಿಂದ ಟೆಂಪೋದಲ್ಲಿ ಕಪ್ಪು ಹಣ ಹೋಗಿದೆಯಾ ಎಂದು ಕಾಂಗ್ರೆಸ್ ಪಕ್ಷವನ್ನು ಮೋದಿ ಕಿಚಾಯಿಸಿದ್ದಾರೆ. ಹೈದರಾಬಾದ್ ಸಮೀಪದ ರಾಜನ್ನ ಸಿರ್ಸಿಲ್ಲ ಜಿಲ್ಲೆಯಲ್ಲಿ ಚುನಾವಣಾ ಪ್ರಚಾರ ಸಭೆಯಲ್ಲಿ ಮೋದಿ ಈ ಮಾತುಗಳನ್ನು ಆಡಿದ್ದಾರೆ.
ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನರೇಂದ್ರ ಮೋದಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇಂದು ಆಂಧ್ರದ ವಿಜಯವಾಡ ಮತ್ತು ಅನ್ನಮಯ್ಯ ಜಿಲ್ಲೆಯಲ್ಲೂ ಚುನಾವಣಾ ಸಮಾವೇಶ ಉದ್ದೇಶಿಸಿ ಪ್ರಧಾನಿಗಳು ಭಾಷಣ ಮಾಡಲಿದ್ದಾರೆ.
ಇದನ್ನೂ ಓದಿ: ಭಾರತದ ಪೂರ್ವದಲ್ಲಿರುವವರು ಚೀನೀಯರಂತೆಯೂ ದಕ್ಷಿಣದವರು ಆಫ್ರಿಕನ್ನರಂತೆಯೂ ಕಾಣ್ತಾರೆ: ಸ್ಯಾಮ್ ಪಿತ್ರೋಡಾ
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ