Pushkar Singh Dhami Profile: ಬಿಜೆಪಿ ಗೆದ್ದರೂ ಸೋತ ಸಿಎಂ ಅಭ್ಯರ್ಥಿ; ಪುಷ್ಕರ್ ಸಿಂಗ್ ಧಾಮಿ ಯಾರು? ಇಲ್ಲಿದೆ ವಿವರ

Uttarakhand Assembly Election Results 2022: ಉತ್ತರಾಖಂಡ್​ನ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಯಾರು? ಅವರ ಹಿನ್ನಲೆ ಏನು? ಜೀವನ ಸಾಗಿ ಬಂದ ದಾರಿ ಹೇಗಿತ್ತು? ಇತ್ಯಾದಿ ವಿವರಗಳು ಇಲ್ಲಿ ನೀಡಲಾಗಿದೆ.

Pushkar Singh Dhami Profile: ಬಿಜೆಪಿ ಗೆದ್ದರೂ ಸೋತ ಸಿಎಂ ಅಭ್ಯರ್ಥಿ; ಪುಷ್ಕರ್ ಸಿಂಗ್ ಧಾಮಿ ಯಾರು? ಇಲ್ಲಿದೆ ವಿವರ
ಪುಷ್ಕರ್ ಸಿಂಗ್ ಧಾಮಿ
Follow us
ganapathi bhat
|

Updated on:Mar 10, 2022 | 4:44 PM

ಎಬಿವಿಪಿಯಿಂದ ತಮ್ಮ ಸಾಮಾಜಿಕ ಜೀವನ, ರಾಜಕೀಯ ಮತ್ತು ನಾಯಕತ್ವದ ಬೆಳವಣಿಗೆಗೆ ಭದ್ರ ಅಡಿಪಾಯ ಹಾಕಿಕೊಂಡು ಬಳಿಕ, 2021ರಲ್ಲಿ ಉತ್ತರಾಖಂಡ್​ನ 10ನೇ ಮುಖ್ಯಮಂತ್ರಿಯಾಗಿ ಗದ್ದುಗೆಗೆ ಏರಿದ ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಮತ್ತೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸುತ್ತಾರೆ ಎಂದೇ ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಉತ್ತರಾಖಂಡ್​ನಲ್ಲಿ ಬಿಜೆಪಿ ಜಯ ಒಲಿಸಿಕೊಂಡಿತ್ತು. ಆದರೆ, ಸ್ವತಃ ಸಿಎಂ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಚುನಾವಣೆಯಲ್ಲಿ ಸೋಲುಂಡಿದ್ದಾರೆ. ಪಂಚರಾಜ್ಯಗಳ ಚುನಾವಣೆ (Assembly Election Results 2022) ಫಲಿತಾಂಶ ಹೊರಬಿದ್ದಿದೆ. ಉತ್ತರ ಪ್ರದೇಶ ಹಾಗೂ ಉತ್ತರಾಖಂಡ್ (Uttarakhand Assembly Election Results 2022) ​ನಲ್ಲಿ ಬಿಜೆಪಿ ಸ್ಪಷ್ಟ ಬಹುಮತ ಸಾಧಿಸಿ ಮುನ್ನಡೆದಿದೆ. ಈ ಎರಡೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೇರುವುದು ಖಚಿತವಾಗಿದೆ. ಆದರೆ, ಉತ್ತರಾಖಂಡ್​ನ ಮುಖ್ಯಮಂತ್ರಿ ಅಭ್ಯರ್ಥಿ ಪುಷ್ಕರ್ ಸಿಂಗ್ ಧಾಮಿ ಮಾತ್ರ  ಕಾಂಗ್ರೆಸ್ ವಿರುದ್ಧ ಸೋಲುವಂತಾಗಿದೆ. ಹಾಗಾದರೆ, ಪುಷ್ಕರ್ ಸಿಂಗ್ ಧಾಮಿ (Pushkar Singh Dhami) ಯಾರು? ಅವರ ಹಿನ್ನಲೆ ಏನು? ಜೀವನ ಸಾಗಿ ಬಂದ ದಾರಿ ಹೇಗಿತ್ತು? ಇತ್ಯಾದಿ ವಿವರಗಳು ಇಲ್ಲಿ ನೀಡಲಾಗಿದೆ.

ಪುಷ್ಕರ್ ಸಿಂಗ್ ಧಾಮಿ ಪಿತೋರಘರ್ ಜಿಲ್ಲೆಯ ತುಂಡಿ ಎಂಬ ಹಳ್ಳಿಯಲ್ಲಿ 16 ಸಪ್ಟೆಂಬರ್, 1975 ರಲ್ಲಿ ಜನಿಸಿದರು. ಅಲ್ಲೇ ಅವರು ಬಾಲ್ಯದ ಶಿಕ್ಷಣ ಪಡೆದುಕೊಂಡರು. ಬಳಿಕ ಅವರ ಕುಟುಂಬ ನಾಗ್ಲ ತರಾಯ್ ಭಾಬರ್ ಎಂಬಲ್ಲಿಗೆ ಸ್ಥಳಾಂತರವಾಯಿತು. ಧಾಮಿ ಲಕ್ನೋ ಯುನಿವರ್ಸಿಟಿಯಿಂದ ಪದವಿ ಪಡೆದರು. ಬಳಿಕ ಅದೇ ವಿಶ್ವವಿದ್ಯಾಲಯದಿಂದ ಎಲ್​ಎಲ್​ಬಿ ಪೂರ್ಣಗೊಳಿಸಿದರು.

ಧಾಮಿ ಅವರ ತಂದೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದರು. ಅವರು ಸುಬೇದಾರ್ ಆಗಿ ಕಾರ್ಯನಿರ್ವಹಿಸಿದ್ದರು. ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ಮುಖ್ಯಮಂತ್ರಿ ಅಧಿಕಾರಕ್ಕೆ ಏರುವ ಮೊದಲು ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ಅವರ ಸಲಹೆಗಾರರಾಗಿಯೂ ಕೆಲಸ ನಿರ್ವಹಿಸಿದ್ದರು.

ಎಬಿವಿಪಿಯಿಂದ ಉತ್ತರಾಖಂಡ್​ನ ಮುಖ್ಯಮಂತ್ರಿವರೆಗೆ

ಪುಷ್ಕರ್ ತಮ್ಮ1990 ರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ಗೆ ಸೇರ್ಪಡೆಗೊಂಡರು. ಆ ಮೂಲಕ ತಮ್ಮ ಸಾಮಾಜಿಕ ಹಾಗೂ ರಾಜಕೀಯ ಜೀವನವನ್ನು ಆರಂಭಿಸಿದರು. ಅವರು 2008ರ ವರೆಗೆ ಭಾರತೀಯ ಜನತಾ ಯುವ ಮೋರ್ಚಾದ ಅಧ್ಯಕ್ಷರೂ ಆಗಿದ್ದರು. ಆ ವೇಳೆ, ರಾಜ್ಯದ ಕೈಗಾರಿಕೆಗಳಲ್ಲಿ ಶೇಕಡಾ 70 ರಷ್ಟು ಉದ್ಯೋಗವನ್ನು ಸ್ಥಳೀಯ ಯುವಕರಿಗೆ ನೀಡಬೇಕು ಎಂದು ಜಾರಿ ಆಗುವಂತೆ ಕಾರ್ಯ ಸಾಧಿಸಿದ ಹೆಗ್ಗಳಿಕೆ ಧಾಮಿ ಅವರ ಪಾಲಿನದು.

ನಂತರ, ಜುಲೈ 3, 2021 ರಂದು ಉತ್ತರಾಖಂಡ್​ನ ಮುಖ್ಯಮಂತ್ರಿಯಾಗಿ ಪುಷ್ಕರ್ ಸಿಂಗ್ ಧಾಮಿ ಅಧಿಕಾರ ಸ್ವೀಕಾರ ಮಾಡಿದರು. ತೀರಥ್ ಸಿಂಗ್ ರಾವತ್ ಬಳಿಕ ತಮ್ಮ 45ನೇ ವರ್ಷ ವಯಸ್ಸಿನಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಏರುವ ಮೂಲಕ ಪುಷ್ಕರ್ ಸಿಂಗ್ ಧಾಮಿ ಉತ್ತರಾಖಂಡ್​ನ ಅತಿ ಕಿರಿಯ ಮುಖ್ಯಮಂತ್ರಿ ಎಂಬ ಕೀರ್ತಿಗೂ ಬಾಜನರಾಗಿದ್ದರು.

ಧಾಮಿಗೆ ಸೋಲು; ಮತ್ತೆ ಸುದ್ದಿಯಲ್ಲಿ ಈ ನಂಬಿಕೆ!

ಯಾರು ಮುಖ್ಯಮಂತ್ರಿ ಅಧಿಕೃತ ನಿವಾಸದಲ್ಲಿ ಉಳಿದುಕೊಳ್ಳುತ್ತಾರೋ ಅವರು ಮುಂದಿನ ಚುನಾವಣೆಯಲ್ಲಿ ಸೀಟು ಕಳೆದುಕೊಳ್ಳುತ್ತಾರೆ ಎಂಬುದು ಉತ್ತರಾಖಂಡ್​ನ ನಂಬಿಕೆ ಆಗಿದೆ. ಅದರಂತೆ ಈ ಬಾರಿಯೂ ಧಾಮಿ ಸೋಲುಂಡಿದ್ದಾರೆ. ಚುನಾವಣೆಗೆ ಪೂರ್ವಭಾವಿಯಾಗಿ ಪೂಜೆ, ಪುನಸ್ಕಾರ, ವಾಸ್ತು ಹೋಮ ಇತ್ಯಾದಿ ನಡೆಸಿದ ನಂತರವೂ ಧಾಮಿಗೆ ಸೋಲಾಗಿದೆ. ಪುಷ್ಕರ್ ಸಿಂಗ್ ಧಾಮಿ ಈ ಬಾರಿ ಸೋತಿರುವುದರಿಂದ ಪಕ್ಷ ಗೆದ್ದರೂ ಅವರು ಮುಖ್ಯಮಂತ್ರಿ ಆಗುವುದು ಸಾಧ್ಯವಿಲ್ಲದಂತಾಗಿದೆ. ಉತ್ತರಾಖಂಡ್ ಬಿಜೆಪಿ ಮತ್ತು ಪುಷ್ಕರ್ ಸಿಂಗ್ ಧಾಮಿ ಮುಂದಿನ ನಡೆ ಏನು ಎಂಬುದನ್ನು ಇನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: Yogi Adityanath Profile: ಅಜಯ್ ಸಿಂಗ್ ಬಿಷ್ತ್​​ನಿಂದ ಯೋಗಿ ಆದಿತ್ಯನಾಥ್ ವರೆಗೆ; ಪ್ರಭಾವಿ ನಾಯಕನ ಜೀವನ ಚಿತ್ರಣ ಇಲ್ಲಿದೆ

ಇದನ್ನೂ ಓದಿ: 5 State Election Results 2022 Live: ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಮತ್ತೆ ಬಿಜೆಪಿ, ಗೋವಾ, ಮಣಿಪುರದಲ್ಲಿಯೂ ಬಿಜೆಪಿ ಮುನ್ನಡೆ, ಆಪ್​ಗೆ ಒಲಿದ ಪಂಜಾಬ್

Published On - 4:41 pm, Thu, 10 March 22