
ಆಸ್ಕರ್ (ಅಕಾಡೆಮಿ ಅವಾರ್ಡ್ಸ್) ಪ್ರಶಸ್ತಿಯನ್ನು ಬಣ್ಣದ ಲೋಕದವರು ಕಣ್ಣರಳಿಸಿ ನೋಡುತ್ತಾರೆ. ಸಿನಿಮಾ ಜಗತ್ತಿನ ಪ್ರತಿಷ್ಠಿತ ಗೌರವ ಎಂದು ಪರಿಗಣಿಸಲಾಗುವ ಈ ಪ್ರಶಸ್ತಿಯನ್ನು ಪಡೆಯಬೇಕು ಎಂಬುದು ಎಲ್ಲರ ಕನಸು. ಆದರೆ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ಸಿಗುವುದು ಕೆಲವೇ ಕೆಲವು ಸಿನಿಮಾಗಳಿಗೆ ಮಾತ್ರ. ಮುಂಬರುವ 94ನೇ ಅಕಾಡೆಮಿ ಅವಾರ್ಡ್ಸ್ ಸ್ಪರ್ಧೆಗಾಗಿ ಎಲ್ಲ ದೇಶಗಳಿಂದಲೂ ಸಿನಿಮಾಗಳನ್ನು ಕಳಿಸಲಾಗುತ್ತಿದೆ. ಭಾರತದಿಂದ ಕೂಡ ಒಂದು ಚಿತ್ರವನ್ನು ಆಯ್ಕೆ ಮಾಡಿ ಕಳಿಸಲಾಗುವುದು. ಆ ಒಂದು ಸಿನಿಮಾ ಯಾವುದು ಎಂಬುದನ್ನು ಈಗ ಆಯ್ಕೆ ಮಾಡಬೇಕಿದೆ. ಸದ್ಯ ಭಾರತದ 14 ಸಿನಿಮಾಗಳು ಪರಸ್ಪರ ಹಣಾಹಣಿ ನಡೆಸುತ್ತಿವೆ.
94ನೇ ಅಕಾಡೆಮಿ ಅವಾರ್ಡ್ಸ್ (ಆಸ್ಕರ್) ಸ್ಪರ್ಧೆಯ ‘ಅತ್ಯುತ್ತಮ ಅಂತಾರಾಷ್ಟ್ರೀಯ ಫೀಚರ್ ಫಿಲ್ಸ್’ ಕೆಟಗರಿಯಲ್ಲಿ ಸ್ಪರ್ಧಿಸಲು ಭಾರತದಿಂದ ಒಂದು ಸಿನಿಮಾವನ್ನು ಆಯ್ಕೆ ಮಾಡಲಾಗುವುದು. ಮಲಯಾಳಂನ ‘ನಾಯಟ್ಟು’, ವಿದ್ಯಾ ಬಾಲನ್ ನಟನೆಯ ‘ಶೇರ್ನಿ’, ಯೋಗಿ ಬಾಬು ಅಭಿನಯದ ತಮಿಳಿನ ‘ಮಂಡೆಲಾ’, ವಿಕ್ಕಿ ಕೌಶಲ್ ನಟನೆಯ ‘ಉದ್ಧಮ್’, ಅಸ್ಸಾಮಿ ಭಾಷೆಯ ‘ಬ್ರಿಡ್ಜ್’, ಗುಜರಾತಿಯ ‘ಚೆಲ್ಲೋ ಶೋ’ ಸೇರಿದಂತೆ ಒಟ್ಟು 14 ಸಿನಿಮಾಗಳ ಪೈಕಿ ಒಂದನ್ನು ಆಯ್ಕೆ ಮಾಡಲಾಗುತ್ತದೆ.
ಜ್ಯೂರಿ ಸದಸ್ಯರ ತಂಡ ಕೊಲ್ಕತ್ತಾದಲ್ಲಿ ಈ 14 ಸಿನಿಮಾಗಳನ್ನು ವೀಕ್ಷಿಸಲಿದೆ. ಜ್ಯೂರಿ ತಂಡದ ಅಧ್ಯಕ್ಷರಾಗಿ ಖ್ಯಾತ ನಿರ್ದೇಶಕ ಶಾಜಿ ಎನ್. ಕರಣ್ ಕೆಲಸ ಮಾಡುತ್ತಿದ್ದಾರೆ. 15 ಸದಸ್ಯರು ಈ ತಂಡದಲ್ಲಿದ್ದಾರೆ. ಅಂತಿಮವಾಗಿ ಆಸ್ಕರ್ ಕಣದಲ್ಲಿ ಸ್ಪರ್ಧಿಸುವ ಅವಕಾಶ ಯಾವ ಚಿತ್ರಕ್ಕೆ ಸಿಗಲಿದೆ ಎಂಬುದು ಶೀಘ್ರದಲ್ಲೇ ಗೊತ್ತಾಗಲಿದೆ.
ಈವರೆಗೂ ಭಾರತದ ಯಾವುದೇ ಸಿನಿಮಾ ಕೂಡ ಆಸ್ಕರ್ ಪ್ರಶಸ್ತಿ ಗೆದ್ದಿಲ್ಲ. ಒಮ್ಮೆಯಾದರೂ ಭಾರತೀಯ ಚಿತ್ರಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ಸಿಗಬೇಕು ಎಂಬುದು ಸಿನಿಪ್ರಿಯರ ಬಯಕೆ. ಈ ಬಾರಿಯಾದರೂ ಅದು ಈಡೇರಲಿ ಎಂದು ಎಲ್ಲರೂ ಹಂಬಲಿಸುತ್ತಿದ್ದಾರೆ. ಮುಂಬರುವ ಆಸ್ಕರ್ ಸಮಾರಂಭವು 2022ರ ಮಾರ್ಚ್ ತಿಂಗಳಲ್ಲಿ ನಡೆಯಲಿದೆ.
ಇದನ್ನೂ ಓದಿ:
ಮನೆಯಲ್ಲಿದ್ದ ಆಸ್ಕರ್ ಟ್ರೋಫಿ ಕಳೆದುಹಾಕಿದ್ದ ಎ.ಆರ್. ರೆಹಮಾನ್; ಸಂಗೀತ ನಿರ್ದೇಶಕನ ಸಿನಿ ಪಯಣಕ್ಕೆ 29 ವರ್ಷ
Oscars 2021: ಆಸ್ಕರ್ ಪ್ರಶಸ್ತಿಯಲ್ಲಿ ಮಿಂಚಿದ ನೋಮಡ್ಲ್ಯಾಂಡ್; ಇಲ್ಲಿದೆ ವಿಜೇತರ ಫುಲ್ ಲಿಸ್ಟ್