ಚಿತ್ರರಂಗದ ಮಂದಿಗೆ ಈಗ ‘ಪ್ಯಾನ್ ಇಂಡಿಯಾ’ (Pan India) ಎಂಬ ಪದ ಸಿಕ್ಕಾಪಟ್ಟೆ ಆಕರ್ಷಕವಾಗಿ ಕಾಣುತ್ತಿದೆ. ದಕ್ಷಿಣ ಭಾರತದ ಸಿನಿಮಾಗಳು ಉತ್ತರ ಭಾರತದಲ್ಲಿ ಧೂಳೆಬ್ಬಿಸಲು ಆರಂಭಿಸಿದ ಬಳಿಕ ಈ ಪ್ಯಾನ್ ಇಂಡಿಯಾ ಎಂಬ ಪದ ಹೆಚ್ಚು ಚಾಲ್ತಿಗೆ ಬಂತು. ದಕ್ಷಿಣ ಭಾರತದ ನಟರಾದ ಯಶ್, ಪ್ರಭಾಸ್, ಅಲ್ಲು ಅರ್ಜುನ್ ಸೇರಿದಂತೆ ಕೆಲವೇ ಕೆಲವರಿಗೆ ಪ್ಯಾನ್ ಇಂಡಿಯಾ ಸ್ಟಾರ್ ಎಂಬ ಪಟ್ಟ ಸಿಕ್ಕಿದೆ. ಅದೇ ರೀತಿ ಕೆಲವು ನಟಿಯರಿಗೆ ಈ ಬಗೆಯ ಚಾರ್ಮ್ ಇದೆ. ಈಗ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಕೂಡ ಪ್ಯಾನ್ ಇಂಡಿಯಾ ನಟಿ ಆಗಬೇಕು ಎಂದು ಆಸೆ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ, ರಶ್ಮಿಕಾ ಅವರಿಗೆ ಈಗಾಗಲೇ ಅಂಥ ಒಂದು ಸ್ಥಾನ ಸಿಕ್ಕಿದೆ ಎನ್ನಬಹುದು. ಕಳೆದ ವರ್ಷ ಬಿಡುಗಡೆಯಾದ ‘ಪುಷ್ಪ’ ಚಿತ್ರ ಕೂಡ ಪ್ಯಾನ್ ಇಂಡಿಯಾ ಸಿನಿಮಾ (Pan India Movie) ಎಂದರೆ ತಪ್ಪಿಲ್ಲ. ಯಾಕೆಂದರೆ ಹಿಂದಿಗೆ ಡಬ್ ಆಗಿದ್ದ ಆ ಚಿತ್ರವು ಬಾಲಿವುಡ್ ಸಿನಿಮಾಗಳಿಗೆ ಪೈಪೋಟಿ ನೀಡಿ ನೂರಾರು ಕೋಟಿ ರೂಪಾಯಿ ಕಮಾಯಿ ಮಾಡಿತು. ‘ಪುಷ್ಪ’ ಚಿತ್ರದ ಗೆಲುವಿನಿಂದಾಗಿ ಉತ್ತರ ಭಾರತದಲ್ಲಿ ರಶ್ಮಿಕಾ ಅವರ ಖ್ಯಾತಿ ಹೆಚ್ಚಿದೆ.
ರಶ್ಮಿಕಾ ಮಂದಣ್ಣ ಅವರು ಮೊದಲು ವೃತ್ತಿ ಜೀವನ ಆರಂಭಿಸಿದ್ದು ಕನ್ನಡದಿಂದ. ರಕ್ಷಿತ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಚಿತ್ರದಿಂದ ರಶ್ಮಿಕಾ ಅವರ ಜೀವನ ಬದಲಾಯಿತು. ಬಳಿಕ ಅವರು ಟಾಲಿವುಡ್ಗೆ ಕಾಲಿಟ್ಟು ಬ್ಯಾಕ್ ಟು ಬ್ಯಾಕ್ ಹಿಟ್ ಸಿನಿಮಾಗಳನ್ನು ನೀಡಿದರು. ಈಗ ಹಿಂದಿ ಚಿತ್ರರಂಗಕ್ಕೂ ಅವರು ಎಂಟ್ರಿ ನೀಡಿದ್ದಾರೆ. ಅಮಿತಾಭ್ ಬಚ್ಚನ್ ಜೊತೆ ‘ಗುಡ್ ಬೈ’, ಸಿದ್ದಾರ್ಥ್ ಮಲ್ಹೋತ್ರಾ ಜೊತೆ ‘ವಿಷನ್ ಮಜ್ನು’ ರೀತಿಯ ಬಹುನಿರೀಕ್ಷಿತ ಚಿತ್ರಗಳಲ್ಲಿ ಅವರು ಅಭಿನಯಿಸುತ್ತಿದ್ದಾರೆ.
ಹಿಂದಿ ಚಿತ್ರರಂಗದಿಂದ ರಶ್ಮಿಕಾ ಮಂದಣ್ಣ ಅವರಿಗೆ ಹಲವು ಆಫರ್ಗಳು ಬರುತ್ತಿವೆ. ಆದರೂ ಅವರನ್ನು ದಕ್ಷಿಣ ಭಾರತದ ನಟಿ ಎಂದು ಉತ್ತರ ಭಾರತದ ಪ್ರೇಕ್ಷಕರು ಗುರುತಿಸುತ್ತಾರೆ. ಆದರೆ ಆ ರೀತಿ ಕರೆಸಿಕೊಳ್ಳುವುದು ರಶ್ಮಿಕಾ ಅವರಿಗೆ ಇಷ್ಟ ಇಲ್ಲ. ಉತ್ತರ-ದಕ್ಷಿಣ ಎನ್ನುವ ಬದಲು ತಮ್ಮನ್ನು ಓರ್ವ ಪ್ಯಾನ್ ಇಂಡಿಯಾ ನಟಿ ಎನ್ನಬೇಕು ಎಂಬುದು ಅವರ ಆಸೆ. ಡೆಕನ್ ಕ್ರೋನಿಕಲ್ಗೆ ನೀಡಿದ ಸಂದರ್ಶನದಲ್ಲಿ ರಶ್ಮಿಕಾ ಅವರು ಈ ಬಗ್ಗೆ ಮಾತನಾಡಿದ್ದಾರೆ.
ಹಿಂದಿ ಚಿತ್ರದಲ್ಲಿ ಅವಕಾಶ ಸಿಗುತ್ತಿರುವುದರ ಬಗ್ಗೆ ರಶ್ಮಿಕಾ ಅವರಿಗೆ ಖುಷಿ ಇದೆ. ಅನೇಕ ನಟಿಯರು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಮಿಂಚಿದ ಬಳಿಕ ಬಾಲಿವುಡ್ಗೆ ಕಾಲಿಟ್ಟ ಉದಾಹರಣೆ ಸಾಕಷ್ಟು ಇದೆ. ಆದರೆ ಹಿಂದಿಗೆ ಹೋಗಿ ಯಶಸ್ಸು ಪಡೆದವರ ಸಂಖ್ಯೆ ಕಡಿಮೆ. ‘ಬೇರೆ ಎಲ್ಲ ಭಾಷೆಯ ಚಿತ್ರರಂಗದ ರೀತಿಯೇ ಬಾಲಿವುಡ್ ಕೂಡ ಇದೆ. ಪರಿಣಾಮಕಾರಿ ಆದಂತಹ ಪಾತ್ರಗಳನ್ನು ಮಾಡಬೇಕು ಎಂದುಕೊಂಡಿದ್ದೇನೆ. ಭಾಷೆ ಎಂಬುದು ನನಗೆ ಯಾವತ್ತೂ ಅಡ್ಡಿ ಆಗಿಲ್ಲ. ಯಾಕೆಂದರೆ ಬೇರೆ ಬೇರೆ ಭಾಷೆಯಲ್ಲಿ ವಿಭಿನ್ನ ಪಾತ್ರಗಳನ್ನು ಮಾಡುವುದನ್ನು ನಾನು ಎಂಜಾಯ್ ಮಾಡಿದ್ದೇನೆ’ ಎಂದು ರಶ್ಮಿಕಾ ಮಂದಣ್ಣ ಹೇಳಿದ್ದಾರೆ.
‘ಹೈದರಾಬಾದ್ನಲ್ಲಿ ಇದ್ದಾಗ ತೆಲುಗು ಮಾತನಾಡುತ್ತೇನೆ. ಮರುದಿನ ಕರ್ನಾಟಕಕ್ಕೆ ಬಂದರೆ ಕನ್ನಡದಲ್ಲಿ ಮಾತನಾಡುತ್ತೇನೆ. ಮುಂಬೈಗೆ ಬಂದರೆ ಹಿಂದಿ. ಸ್ಥಳೀಯ ಜನರ ಬೆಂಬಲದಿಂದ ಇದೆಲ್ಲ ಸಾಧ್ಯವಾಗುತ್ತಿದೆ. ಹಿಂದಿ ಸಿನಿಮಾಗಳಿಗೆ ನಾನೇ ಡಬ್ ಮಾಡಬೇಕು ಎಂದುಕೊಂಡಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದಾರೆ. ಅವರು ನಟಿಸಿರುವ ತೆಲುಗಿನ ‘ಆಡುವಾಳ್ಳು ಮೀಕು ಜೋಹಾರ್ಲು’ ಸಿನಿಮಾ ಮಾ.4ರಂದು ಬಿಡುಗಡೆ ಆಗುತ್ತಿದೆ.
ಇದನ್ನೂ ಓದಿ:
ರಶ್ಮಿಕಾ ಎಕ್ಸ್ಪ್ರೆಷನ್ ಕ್ವೀನ್ ಎನ್ನಲು ಇದಕ್ಕಿಂತ ಸಾಕ್ಷಿ ಬೇಕಿಲ್ಲ
‘ಮದುವೆ ಆಗಲು ನಾನಿನ್ನೂ ಚಿಕ್ಕವಳು’: ಪ್ರೀತಿ-ಶಾದಿ ಬಗ್ಗೆ ವಿವರವಾಗಿ ಮಾತಾಡಿದ ರಶ್ಮಿಕಾ ಮಂದಣ್ಣ