ಹೊಸ ಧಾರಾವಾಹಿ ‘ಮದುಮಗಳು’ ಪ್ರಸಾರಕ್ಕೆ ಉದಯ ಟಿವಿ ಸಜ್ಜು; ಈ ಸೀರಿಯಲ್ ಕಥೆ ಏನು?
‘ಮದುಮಗಳು’ ಶೀರ್ಷಿಕೆಯ ಹೊಸ ಧಾರಾವಾಹಿಯು ಉದಯ ಟಿವಿಯಲ್ಲಿ ಮಾರ್ಚ್ 7ರಿಂದ ಪ್ರಸಾರ ಆರಂಭಿಸಲಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ಈ ಸೀರಿಯಲ್ ಬಿತ್ತರ ಆಗಲಿದೆ.
ಧಾರಾವಾಹಿಗಳ ವಿಚಾರದಲ್ಲಿ ಉದಯ ಟಿವಿ (Udaya TV) ಮೊದಲಿಂದಲೂ ಜನಮನ ಗೆದ್ದಿದೆ. ಈ ವಾಹಿನಿಯಲ್ಲಿ ಪ್ರಸಾರ ಆಗುವ ಸೀರಿಯಲ್ಗಳಿಗೆ ಅದರದ್ದೇ ಆದ ಪ್ರೇಕ್ಷಕ ವರ್ಗ ಇದೆ. ಹಲವಾರು ವರ್ಷಗಳಿಂದ ಬಗೆಬಗೆಯ ಧಾರಾವಾಹಿಗಳನ್ನು ಜನರಿಗೆ ಅರ್ಪಿಸಲಾಗಿದೆ. ಕಿರುತೆರೆ ಲೋಕದಲ್ಲಿ ನಿತ್ಯ ಹೊಸ ಹೊಸ ಪ್ರಯತ್ನಗಳು ಆಗುತ್ತಲೇ ಇವೆ. ‘ಗೌರಿಪುರದ ಗಯ್ಯಾಳಿಗಳು’, ‘ನೇತ್ರಾವತಿ’, ‘ಕನ್ಯಾದಾನ’, ‘ಕಾವ್ಯಾಂಜಲಿ’ ಮುಂತಾದ ಧಾರಾವಾಹಿಗಳ (Kannada Serial) ಪ್ರಸಾರದಿಂದ ಕೌಟುಂಬಿಕ ಪ್ರೇಕ್ಷಕರನ್ನು ಉದಯ ಟಿವಿ ರಂಜಿಸುತ್ತಿದೆ. ಈಗ ಹೊಸ ಸೀರಿಯಲ್ ಪ್ರಸಾರಕ್ಕೆ ಅಣಿಯಾಗಿದೆ. ‘ಮದುಮಗಳು’ ಶೀರ್ಷಿಕೆಯ ಈ ಹೊಸ ಧಾರಾವಾಹಿ ಮಾರ್ಚ್ 7ರಿಂದ ಪ್ರಸಾರ ಆರಂಭಿಸುತ್ತಿದೆ. ಭಿನ್ನವಾದಂತಹ ಒಂದು ಹೊಸ ಕಥೆಯನ್ನು ಪ್ರೇಕ್ಷಕರ ಮುಂದೆ ತರಲು ಸಜ್ಜಾಗುತ್ತಿದೆ. ಸೋಮವಾರದಿಂದ ಶನಿವಾರದವರೆಗೆ ಪ್ರತಿ ದಿನ ಸಂಜೆ 6 ಗಂಟೆಗೆ ‘ಮದುಮಗಳು’ (Madumagalu Kannada Serial) ಪ್ರಸಾರ ಆಗಲಿದೆ. ರಕ್ಷಿತಾ ಮತ್ತು ಭವಿಶ್ ಎಂಬಿಬ್ಬರು ಹೊಸ ಪ್ರತಿಭೆಗಳು ಈ ಧಾರಾವಾಹಿ ಮೂಲಕ ಪರಿಚಯಗೊಳ್ಳುತ್ತಿದ್ದಾರೆ. ಈ ಸೀರಿಯಲ್ ಕಥೆ ಏನು ಎಂಬ ಕೌತುಕ ಪ್ರೇಕ್ಷಕರಲ್ಲಿದೆ. ತನ್ನ ಮನೆಗೆ ಮಗಳಾಗುವ ಬದಲು ಸೊಸೆಯಾಗಿ ಮನೆ ಸೇರುವಂತಹ ಹುಡುಗಿಯ ಡಿಫರೆಂಟ್ ಕಥೆಯನ್ನು ‘ಮದುಮಗಳು’ ಒಳಗೊಂಡಿದೆ.
ಕೌತುಕಭರಿತ ಕಥೆಯನ್ನು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಉದಯ ಟಿವಿ ಈಗಾಗಲೇ ಅನೇಕ ಸೀರಿಯಲ್ಗಳನ್ನು ಪ್ರೇಕ್ಷಕರ ಮುಂದಿರಿಸಿದೆ. ‘ಕಾವ್ಯಾಂಜಲಿ’ ಧಾರಾವಾಹಿಗೆ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು. ಈಗ ಅದೇ ತಂಡದಿಂದ ‘ಮದುಮಗಳು’ ಸೀರಿಯಲ್ ಮೂಡಿಬರಲಿದೆ. ಈ ಮೂಲಕ ಫ್ರೆಷ್ ಆದಂತಹ ಕಥೆಯನ್ನು ಪ್ರೇಕ್ಷಕರಿಗೆ ನೀಡುವ ಭರವಸೆಯನ್ನು ವಾಹಿನಿ ನೀಡಿದೆ. ಕುಟುಂಬ ಸಮೇತ ನೋಡುವಂತಹ ಕಥೆ ‘ಮದುಮಗಳು’ ಧಾರಾವಾಹಿಯಲ್ಲಿದೆ ಎಂದು ತಂಡ ಹೇಳಿಕೊಂಡಿದೆ.
ಡಿಫರೆಂಟ್ ಕಥೆಯುಳ್ಳ ‘ಮದುಮಗಳು’
ಈ ಕಥೆಯಲ್ಲಿನ ದೊಡ್ಡ ಮನೆತನದ ಜವಾಬ್ದಾರಿಯುತ ಸೊಸೆ ಹೆಸರು ಮದುವಂತಿ. ಇವಳು ಜನ್ಮ ಕೊಟ್ಟಿದ್ದು ಹೆಣ್ಣು ಮಗುವಿಗೆ. ಆದರೆ ಕಾರಣಾಂತರಗಳಿಂದ ಆ ಹೆಣ್ಣು ಮಗುವಿನ ಬದಲಿಗೆ ಬೇರೆಯವರ ಗಂಡು ಮಗುವನ್ನು ತನ್ನ ಮಡಿಲಿನಲ್ಲಿ ಬೆಳೆಸುತ್ತಾಳೆ. ತಾನು ಜನ್ಮ ಕೊಟ್ಟ ಹೆಣ್ಣು ಮಗು 24 ವರ್ಷಗಳ ನಂತರ ಎದುರಾದಾಗ ಆಕೆಗೆ ಅಚ್ಚರಿ ಆಗುತ್ತದೆ. ತಪ್ಪನ್ನು ಎತ್ತಿ ತೋರಿಸುವ ಕಥಾನಾಯಕಿ ಗ್ರೀಷ್ಮಾ, ತನ್ನ ತಾಯಿ ಎಂಬ ಅರಿವಿಲ್ಲದೇ ಮದುವಂತಿಯನ್ನು ತರಾಟೆಗೆ ತೆಗೆದುಕೊಳ್ಳುವ ಸನ್ನಿವೇಶ ಬರುತ್ತದೆ. ಮದುವಂತಿಯ ಮಡಿಲ್ಲಿ ಬೆಳೆದ ಕಥೆಯ ನಾಯಕನ ಹೆಸರು ಶಿಶಿರ್. ಆತನಿಗೆ ಆಡಂಬರದ ಜೀವನ ಇಷ್ಟವಿಲ್ಲ. ಆದರೂ ಅಮ್ಮನ ಘನತೆಗೆ ತಕ್ಕಂತೆ ಬೆಳೆದಿರುತ್ತಾನೆ. ಹಾಗೆಯೇ ಮದುವಂತಿ ಕೂಡ ತನ್ನ ಮಗನ ಆಸೆಗೆ ಭಂಗ ಬರದಂತೆ ಬೆಳೆಸಿರುತ್ತಾಳೆ. ಹಾಗಾಗಿ ಈ ಕಥೆಯಲ್ಲಿ ಅಮ್ಮ-ಮಗನ ಬಾಂಧವ್ಯ ಕೂಡ ಬಿತ್ತರಗೊಳ್ಳುತ್ತದೆ. ಕ್ರಮೇಣ ನಾಯಕಿ ಹಾಗೂ ನಾಯಕ ಪ್ರೇಮ ಬಂಧಕ್ಕೆ ಸಿಲುಕುತ್ತಾರೆ. ತನ್ನನ್ನು ದ್ವೇಷಿಸುವ ಮದುವಂತಿಯನ್ನು ಎದುರಿಸಿ ತನ್ನದೇ ಮನೆಗೆ ಗ್ರೀಷ್ಮಾ ಹೇಗೆ ಸೊಸೆಯಾಗಿ ನೆಲೆಯೂರುತ್ತಾಳೆ ಎಂಬುದು ಕಥಾಕೌತುಕ.
ಪಾತ್ರವರ್ಗದಲ್ಲಿ ಹಿರಿ-ಕಿರಿಯರ ಸಂಗಮ:
‘ಮದುಮಗಳು’ ಧಾರಾವಾಹಿಯಲ್ಲಿ ಕಿರುತೆರೆಯ ಖ್ಯಾತ ನಟಿ ಸಿರಿಜಾ ಅವರು ಪ್ರಮುಖವಾದ ಒಂದು ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬೆಳ್ಳಿತೆರೆಯಲ್ಲಿ ಫೇಮಸ್ ಆಗಿರುವ ನಟಿ ಸುಂದರ್ ವೀಣಾ ಅವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ಹೊಸ ಪ್ರತಿಭೆ ರಕ್ಷಿತಾ ಪರಿಚಯಗೊಳ್ಳುತ್ತಿದ್ದಾರೆ. ನಾಯಕನಾಗಿ ಹೊಸ ನಟ ಭವಿಶ್ ಅಭಿನಯಿಸುತ್ತಿದ್ದಾರೆ. ಉಳಿದಂತೆ ಹಲವು ಅನುಭವಿ ಕಲಾವಿದರು ನಟಿಸುತ್ತಿದ್ದಾರೆ.
‘ಕಾವ್ಯಾಂಜಲಿ’ ತಂತ್ರಜ್ಞರ ಇನ್ನೊಂದು ಪ್ರಯತ್ನ:
ಜನಮನ ಗೆದ್ದ ‘ಕಾವ್ಯಾಂಜಲಿ’ ಧಾರಾವಾಹಿಗೆ ಕೆಲಸ ಮಾಡಿದ ಹಲವು ತಂತ್ರಜ್ಞರು ಈಗ ‘ಮದುಮಗಳು’ ಸೀರಿಯಲ್ಗೆ ಕಾರ್ಯ ನಿರ್ವಹಿಸಲಿದ್ದಾರೆ. ಆದರ್ಶ್ ಹೆಗ್ಡೆ ನಿರ್ದೇಶನ ಮಾಡುತ್ತಿದ್ದಾರೆ. ಛಾಯಾಗ್ರಾಹಕರಾಗಿ ರುದ್ರಮುನಿ ಬೆಳೆಗೆರೆ, ಸಹ-ಛಾಯಗ್ರಾಹಕ ಬಾಲಾಜಿ ರಾವ್ ಅವರು ಈ ತಂಡದಲ್ಲಿ ಇದ್ದಾರೆ. ಶಂಕರ್ ವೆಂಕಟರಮಣ್ ಅವರು ಈ ಧಾರಾವಾಹಿ ನಿರ್ಮಾಣ ಮಾಡುತ್ತಿದ್ದಾರೆ. ನಿರ್ಮಾಪಕನಾಗಿ ಅವರಿಗೆ ಇದು 15ನೇ ಕಾರ್ಯಕ್ರಮ. ‘ರೇಖಾ ರಾವ್, ಸಿರಿಜಾ, ಸುಂದರ್ ವೀಣಾ ಅವರಂತಹ ಹಿರಿಯ ಕಲಾವಿದರೊಂದಿಗೆ ಕೆಲಸ ಮಾಡಲು ನನಗೆ ತುಂಬಾ ಸಂತೋಷವಾಗುತ್ತಿದೆ. ಜೊತೆಗೆ ಇಬ್ಬರು ಪ್ರತಿಭಾವಂತ ಹೊಸ ಕಲಾವಿದರನ್ನು ಮುಖ್ಯಭೂಮಿಕೆಯಲ್ಲಿ ಪರಿಚಯಿಸುತ್ತಿರುವುದಕ್ಕೆ ಖುಷಿ ಇದೆ. ಈ ಧಾರಾವಾಹಿ ಸಾಕಷ್ಟು ರೋಚಕ ತಿರುವುಗಳನ್ನು ಒಳಗೊಂಡಿದೆ’ ಎಂಬುದು ನಿರ್ಮಾಪಕ ಶಂಕರ್ ವೆಂಕಟರಮಣ್ ಅವರ ಮಾತುಗಳು.
ಇದನ್ನೂ ಓದಿ:
ಉಕ್ರೇನ್ನಲ್ಲಿ ಸಿಲುಕಿದ್ದಾರೆ ಕಿರುತೆರೆ ನಟಿ?; ಸ್ಪಷ್ಟನೆ ನೀಡಿದ ಪ್ರಿಯಾ ಮೋಹನ್
ಧಾರಾವಾಹಿ ಮುಗಿದು ಮೂರು ವರ್ಷವಾದರೂ ಬಂದಿಲ್ಲ ಸಂಭಾವನೆ; ಕಿರುತೆರೆ ನಟಿಯ ಅಸಮಾಧಾನ