ತಮಿಳಿನ ಸ್ಟಾರ್ ನಟನಿಂದ ಎರಡು ಸಿನಿಮಾ ಕಸಿದುಕೊಂಡ ಆಮಿರ್ ಖಾನ್

Aamir Khan: ಬಾಲಿವುಡ್ ಸ್ಟಾರ್ ನಟ ಆಮಿರ್ ಖಾನ್ ಕಳೆದ ಕೆಲ ವರ್ಷಗಳಿಂದ ಸತತ ಸೋಲು ಅನುಭವಿಸುತ್ತಿದ್ದಾರೆ. ಇದೀಗ ಆಮಿರ್ ಖಾನ್ ದಕ್ಷಿಣ ಭಾರತ ನಿರ್ದೇಶಕರ ಜೊತೆ ಕೈ ಜೋಡಿಸಿದ್ದು, ಆದರೆ ಇದರಿಂದ ಸ್ಟಾರ್ ನಟನೊಬ್ಬ ಎರೆಉ ಸಿನಿಮಾ ಅವಕಾಶ ಕಳೆದುಕೊಂಡಿದ್ದಾರೆ.

ತಮಿಳಿನ ಸ್ಟಾರ್ ನಟನಿಂದ ಎರಡು ಸಿನಿಮಾ ಕಸಿದುಕೊಂಡ ಆಮಿರ್ ಖಾನ್
Aamir Khan

Updated on: Feb 02, 2025 | 1:06 PM

ಆಮಿರ್ ಖಾನ್ ಬಾಲಿವುಡ್​ನ ಸ್ಟಾರ್ ನಟ. ಹಲವು ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಆಮಿರ್ ಖಾನ್ ನೀಡಿದ್ದಾರೆ. ‘ಲಗಾನ್’ ಸಿನಿಮಾ ಮೂಲಕ ಆಸ್ಕರ್ ಕದವನ್ನೂ ತಟ್ಟಿ ಬಂದಿದ್ದರು ಆಮಿರ್ ಖಾನ್. ಆದರೆ ಆಮಿರ್ ಖಾನ್​ಗೆ ಕಳೆದ ಕೆಲ ವರ್ಷಗಳಿಂದ ಸೋಲುಗಳೇ ಎದುರಾಗುತ್ತಿವೆ. ಅದೇ ಕಾರಣಕ್ಕೆ ಇದೀಗ ಆಮಿರ್ ಖಾನ್ ದಕ್ಷಿಣ ಭಾರತ ಸಿನಿಮಾ ನಿರ್ದೇಶಕರತ್ತ ಮುಖ ಮಾಡಿದ್ದಾರೆ. ಈ ಹಿಂದೆ ಶಾರುಖ್ ಖಾನ್ ಸಹ ಹೀಗೆಯೇ ಸತತ ಸೋಲುಗಳು ಎದುರಾದಾಗ ದಕ್ಷಿಣ ಭಾರತ ನಿರ್ದೇಶಕನೊಟ್ಟಿಗೆ ಕೈ ಜೋಡಿಸಿ ಭರ್ಜರಿ ಹಿಟ್ ಗಳಿಸಿದ್ದರು. ಈಗ ಆಮಿರ್ ಖಾನ್ ಸಹ ಇದೇ ಹಾದಿ ಹಿಡಿದಿದ್ದಾರೆ. ಆದರೆ ಇದರಿಂದ ನಷ್ಟವಾಗುತ್ತಿರುವುದು ತಮಿಳಿನ ಸ್ಟಾರ್ ನಟನಿಗೆ.

ಆಮಿರ್ ಖಾನ್ ಪ್ರಸ್ತುತ ಒಂದು ತಮಿಳು ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ರಜನೀಕಾಂತ್ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ಈ ಸಿನಿಮಾ ನಿರ್ದೇಶನ ಮಾಡುತ್ತಿರುವುದು ಲೋಕೇಶ್ ಕನಗರಾಜ್. ಇದೀಗ ಆಮಿರ್ ಖಾನ್ ಅವರಿಗಾಗಿ ಲೋಕೇಶ್ ಕನಗರಾಜ್ ಹೊಸ ಸಿನಿಮಾ ನಿರ್ದೇಶನ ಮಾಡಲು ತಯಾರಾಗಿದ್ದಾರೆ‌. ಈ ಸಿನಿಮಾ ತಮಿಳು ಹಾಗೂ ಹಿಂದೆ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆ ಆಗಲಿದೆ. ಇದೊಂದು ಫ್ಯಾಂಟಸಿ ಕತೆ ಒಳಗೊಂಡಿದೆ. ಅಸಲಿಗೆ ಈ ಕತೆಯನ್ನು ಲೋಕೇಶ್ ಕನಗರಾಜ್, ತಮಿಳಿನ ಸ್ಟಾರ್ ನಟ ಸೂರ್ಯಗೆ ಹೇಳಿದ್ದರಂತೆ.

ಸೂರ್ಯಗೆ ಲೋಕೇಶ್ ಕನಗರಾಜ್, ‘ಇರುಂಬು ಕೈ ಮಾಯಾವಿ’ ಹೆಸರಿನ ಕತೆ ಹೇಳಿದ್ದರು. ಸಿನಿಮಾದ ಪೋಸ್ಟರ್ ಸಹ ಬಿಡುಗಡೆ ಆಗಿದ್ದವು. ಸಿನಿಮಾದ ಚಿತ್ರೀಕರಣ ಶೀಘ್ರವೇ ಪ್ರಾರಂಭ ಆಗಲಿದೆ ಎನ್ನಲಾಗಿತ್ತು. ಆದರೆ ಈಗ ಆ ಸಿನಿಮಾ ಸೂರ್ಯ ಕೈ ತಪ್ಪಿ ಆಮಿರ್ ಖಾನ್ ಕೈ ಸೇರಿದೆ. ‘ಕಂಗುವ’ ಸಿನಿಮಾದ ಪ್ರಚಾರದ ಸಂದರ್ಭ ಸೂರ್ಯ ಈ ಬಗ್ಗೆ ಮಾತನಾಡಿ, ಆ ಸಿನಿಮಾ ನನ್ನ ಕೈ ತಪ್ಪಿರುವಂತೆ ತೋರುತ್ತಿದೆ ಎಂದಿದ್ದರು. ಈಗ ಮತ್ತೊಂದು ಸಿನಿಮಾ ಸಹ ಸೂರ್ಯ ಕೈತಪ್ಪಿ ಆಮಿರ್ ಖಾನ್ ಸೇರಿಕೊಂಡಿದೆ. ಸೂರ್ಯಗೆ ಇದು ಮತ್ತಷ್ಟು ಬೇಸರ ತರಿಸಲಿರುವುದು ಪಕ್ಕಾ.

ಇದನ್ನೂ ಓದಿ:ಆಮಿರ್ ಖಾನ್ ಈ ರೀತಿ ವೇಷ ಹಾಕಿದ್ದು ದುಡ್ಡಿಗಾಗಿ; ಅಸಲಿ ವಿಚಾರ ರಿವೀಲ್

ಸೂರ್ಯ ನಟನೆಯ ‘ಗಜಿನಿ’ ಸಿನಿಮಾ ಭಾರಿ ದೊಡ್ಡ ಹಿಟ್ ಆಗಿತ್ತು, ಅಲ್ಲು ಅರವಿಂದ್ ನಿರ್ಮಾಣ ಮಾಡಿದ್ದ ಈ ಸಿನಿಮಾವನ್ನು ಆ ನಂತರ ಹಿಂದಿಗೂ ರೀಮೇಕ್ ಮಾಡಲಾಗಿತ್ತು, ಹಿಂದಿಯಲ್ಲಿ ಆಮಿರ್ ಖಾನ್ ನಾಯಕನಾಗಿ ನಟಿಸಿದ್ದರು. ಆ ಸಿನಿಮಾವನ್ನೂ ಸಹ ಅಲ್ಲು ಅರವಿಂದ್ ಅವರೇ ನಿರ್ಮಾಣ ಮಾಡಿದ್ದರು. ಆ ಸಿನಿಮಾ ಸಹ ದೊಡ್ಡ ಹಿಟ್ ಆಯ್ತು. ಆದರೆ ಈಗ ಅಲ್ಲು ಅರವಿಂದ್ ‘ಗಜಿನಿ 2’ ನಿರ್ಮಾಣ ಮಾಡಲು ಬಯಸಿದ್ದು, ಆ ಸಿನಿಮಾವನ್ನು ಆಮಿರ್ ಖಾನ್ ಜೊತೆಗೆ ನಿರ್ಮಿಸಲು ಮುಂದಾಗಿದ್ದಾರೆ. ಇದಕ್ಕಾಗಿ 1000 ಕೋಟಿ ಬಂಡವಾಳ ಹೂಡಲು ತಯಾರು ಎಂದಿದ್ದಾರೆ. ಒಂದೊಮ್ಮೆ ‘ಗಜಿನಿ 2’ ಸಿನಿಮಾ ನಿರ್ಮಾಣಗೊಂಡರೆ ಅದಕ್ಕೆ ನೇರವಾಗಿ ಆಮಿರ್ ಖಾನ್ ಅವರೇ ನಾಯಕ ಆಗಿರುತ್ತಾರೆ. ಆ ಮೂಲಕ ಸೂರ್ಯಗೆ ಅವಕಾಶ ಕೈತಪ್ಪುತ್ತದೆ ಎನ್ನಲಾಗುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ